ಲೊಂಬಾರ್ಡ್ ಆಸ್ಪತ್ರೆ ಶತಮಾನೋತ್ಸವ

ಉಡುಪಿ: ರಾಜ್ಯದಲ್ಲೇ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲೊಂದಾಗಿರುವ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಶತಮಾನೋತ್ಸವ ಗುರುವಾರ ನಡೆಯಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸುಶಿಲ್ ಜತನ್ನಾ ತಿಳಿಸಿದರು.

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 1923ರ ಜೂನ್ 15ರಂದು ಡಾ. ಇವಾ ಲೊಂಬಾರ್ಡ್ ಎಂಬ ವೈದ್ಯೆ ಕೇವಲ 6 ಹಾಸಿಗೆಗಳೊಂದಿಗೆ ಆರಂಭಿಸಿದ ಆಸ್ಪತ್ರೆ ಇದೀಗ ಸುಮಾರು 125 ಹಾಸಿಗೆಗಳುಳ್ಳ ದೊಡ್ಡ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿದೆ.

ಶತಮಾನೋತ್ಸವ ಸಂದರ್ಭದಲ್ಲಿ ಸುಮಾರು 1.65 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಿಟಿ ಸ್ಕ್ಯಾನ್ ಘಟಕವನ್ನು ಉದ್ಘಾಟಿಸಲಾಗುವುದು ಎಂದರು.

ಕಾರ್ಯಕ್ರಮದಂಗವಾಗಿ ಅಪರಾಹ್ನ 2 ಗಂಟೆಗೆ ಸಿಎಸ್.ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ ಉಪಾಧ್ಯಕ್ಷ ರೆ. ವಿಕ್ಟರ್ ನೇತೃತ್ವದಲ್ಲಿ ಕೃತಜ್ಞತಾ ಪ್ರಾರ್ಥನೆ ನಡೆಯಲಿದೆ. ಸಂಜೆ 4ರಿಂದ ಕ್ರಿಶ್ಚಿಯನ್ ಹೈಸ್ಕೂಲ್ ನಿಂದ ಆರಂಭಗೊಂಡು ಆಸ್ಪತ್ರೆಯಲ್ಲಿ ಸಮಾಪನಗೊಳ್ಳುವ ಮೆರವಣಿಗೆ ನಡೆಯಲಿದೆ. 5 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಸಿಎಸ್.ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯ ಬಿಷಪ್ ರೆ| ಹೇಮಚಂದ್ರ ಕುಮಾರ್ ನೂತನ ಸ್ಕ್ಯಾನಿಂಗ್ ಘಟಕ ಉದ್ಘಾಟಿಸುವರು.

ಬೆಂಗಳೂರು ಎನ್. ಎಚ್. ಶಾ ಮುಜುಂದಾರ್ ವೈದ್ಯಕೀಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪೌಲ್ ಸಿ. ಸಾಲಿನ್ಸ್, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಿಎಸ್.ಐ ಕರ್ನಾಟಕ ದಕ್ಷಿಣ ಪ್ರಾಂತ್ಯ ಖಜಾಂಜಿ ವಿನ್ಸೆಂಟ್ ಪಾಲಣ್ಣ, ಯುಬಿಎಂಸಿ ಅಧ್ಯಕ್ಷ ವಿಶಾಲ ಶಿರಿ, ವೈಎಂಸಿಎ ರಾಷ್ಟ್ರೀಯ ಮಂಡಳಿ ಉಪಾಧ್ಯಕ್ಷ ನೋಯಲ್ ಅಮ್ಮಣ್ಣ, ಸಿಎಸ್.ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯ ಕಾರ್ಯದರ್ಶಿ ವಿಲಿಯಂ ಕೇರಿ, ಉಡುಪಿ ನಗರಸಭಾ ಸದಸ್ಯ ರಮೇಶ ಕಾಂಚನ್ ಅಭ್ಯಾಗತರಾಗಿ ಆಗಮಿಸುವರು. ಡಾ. ಸುಶಿಲ್ ಜತನ್ನಾ ಅಧ್ಯಕ್ಷತೆ ವಹಿಸುವರು.

ಆಸ್ಪತ್ರೆ ವೈದ್ಯಕೀಯ ಸೇವೆಯೊಂದಿಗೆ ಶಿಕ್ಷಣ ಹಾಗೂ ಸಾಮಾಜಿಕ ಸೇವೆಗೂ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳಿಲ್ಲದೇ ಮುಚ್ಚಿಹೋಗಿರುವ ಯುಬಿಎಂಸಿ ಶಾಲೆಯನ್ನು ನವೀಕರಿಸಿ ಪ್ಯಾರಾಮೆಡಿಕಲ್ ಕಾಲೇಜಾಗಿ ಪರಿವರ್ತಿಸಲಾಗುವುದು. ಹಸಿರು ಆಸ್ಪತ್ರೆ ಕಾರ್ಯಕ್ರಮದಂಗವಾಗಿ ಸೋಲಾರ್ ಅಳವಡಿಕೆ, ಆಯುರ್ವೇದ ಸಸ್ಯಗಳ ಉದ್ಯಾನ, ಮಳೆ ನೀರು ಕೊಯ್ಲು ಇತ್ಯಾದಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

2022ರ ಜೂ. 15ರಂದು ಶತಮಾನೋತ್ಸವ ವರ್ಷಾಚರಣೆಗೆ ಚಾಲನೆ ನೀಡಲಾಗಿದ್ದು ಕಳೆದ ಒಂದು ವರ್ಷದಲ್ಲಿ ನರ್ಸಿಂಗ್ ಬ್ಲಾಕ್, ಅಡ್ಬಾನ್ಸ್ಡ್ ಲ್ಯಾಪ್ರೊಸ್ಕೊಪಿಕ್ ಮತ್ತು ಲೇಸರ್ ಸರ್ಜರಿ ಸೆಂಟರ್, ವಾತ್ಸಲ್ಯ ಉಪಶಾಮಕ ಆರೈಕೆ ಕೇಂದ್ರ, ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ಹೊಸ ಅಗ್ನಿ ಸುರಕ್ಷತಾ ಸಾಧನಗಳನ್ನು ಸೇರಿಸುವ ಮೂಲಕ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ವೈದ್ಯಕೀಯ ಶಿಬಿರಗಳು, ಕಾಪು ಅಪಲ್ ಪಲಾಹ್ ಸಮುದಾಯ ಚಿಕಿತ್ಸಾಲಯದಲ್ಲಿ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಪ್ರಾರ್ಥನಾ ಶಿಬಿರ, ಅಂತರ ಚರ್ಚ್ ಸಂಗೀತ ಸ್ಪರ್ಧೆ, ಮಹಿಳೆಯರಿಗಾಗಿ ಅಂತರ ಚರ್ಚ್ ಥ್ರೋ ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು ಎಂದು ಡಾ. ಸುಶಿಲ್ ಜತನ್ನಾ ವಿವರಿಸಿದರು.
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ ಕಾಮತ್, ಆಡಳಿತಾಧಿಕಾರಿ ಡೀನಾ ಪ್ರಭಾವತಿ, ಡಾ. ಸುಜಾ ಕರ್ಕಡ, ಪಿಆರ್.ಓ ರೋಹಿ ರತ್ನಾಕರ್ ಇದ್ದರು.

 
 
 
 
 
 
 
 
 
 
 

Leave a Reply