ಸಮಾಜದಲ್ಲಿ ಕರುಣೆ, ಮಾನವೀಯತೆ ಹೆಚ್ಚಾಗಬೇಕು: ಸಚಿವ ಎಸ್.ಅಂಗಾರ

ಉಡುಪಿ, ಮೇ 9 (ಕವಾ):ಸಮಾಜದಲ್ಲಿ ಕರುಣೆ ಮತ್ತು ಮಾನವೀಯ ವ್ಯಕ್ತಿತ್ವ ಹೆಚ್ಚು ಇರಬೇಕು, ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ. ಮಾನವರಲ್ಲಿ ಕರುಣೆ ಕಳೆದುಕೊಂಡಾಗ ಸ್ವಾರ್ಥ ಭಾವನೆ ಅಧಿಕವಾಗುತ್ತದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಅವರು ಇಂದು ನಗರದ ಭಾರತೀಯ ರೆಡ್ ಕ್ರಾಸ್ ಭವನದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಹೆಚ್ಚಿನ ಮಾನವೀಯ ಮತ್ತು ಕರುಣೆಯ ಗುಣಗಳನ್ನು ಹೊಂದಿದ್ದು, ಹಲವು ಜನಪರ ಕಾರ್ಯಗಳು ಮಾಡಿ, ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವುಗಳನ್ನು ಮುಂದುವರೆಸುವುದು ನಮ್ಮ ಕರ್ತವ್ಯವಾಗಬೇಕು. ಮನುಷ್ಯ ಕರುಣೆ ಮತ್ತು ಮಾನವೀಯ ಗುಣಗಳನ್ನು ಕಳೆದುಕೊಂಡಾಗ ಸ್ವಾರ್ಥ ಮೂಡಿ, ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಮಾನವೀಯ ಗುಣಗಳಿಂದ ಕಾರ್ಯನಿರ್ವಹಿಸಬೇಕು ಎಂದರು.

ನಮ್ಮ ದೇಶದ ಮಣ್ಣಿನಲ್ಲಿ ಮಾನವೀಯ ಗುಣಗಳು ಇದ್ದು, ಜಗತ್ತಿನ ಎಲ್ಲಾ ಜಾತಿಗಳನ್ನು ನಾವು ಪ್ರೀತಿಸುತ್ತೇವೆ. ದೇಶದಲ್ಲಿ ಜಾತಿಗಳ ನಡುವೆ ಯಾವುದೇ ದ್ವೇಷದ ಭಾವನೆ ಮೂಡದಂತೆ ಮತ್ತು ದ್ವೇಷವನ್ನು ವಿರೋಧಿಸುವ ಶಕ್ತಿ ಈ ಮಣ್ಣಿನಲ್ಲಿ ಇದೆ. ಇಂತಹುದೇ ಮಾನವೀಯ ಗುಣಗಳಿಂದ ವಿಶ್ವದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

ಅಪರ ಜಿಲ್ಲಾಧಿಕಾರಿ ವೀಣಾ ಎಸ್ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯು ಸ್ವತಂತ್ರವಾಗಿರಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗ ಬಾರದು. ಇದು ಎಲ್ಲಾ ಜನರಿಗೆ ಸಮಾಜ ಸೇವೆಯನ್ನು ಕಲ್ಪಿಸಬೇಕು. ಮಾನವೀಯ ಮೌಲ್ಯಗಳನ್ನು ಒಳಗೊಂಡು ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಅಂಬಲಪಾಡಿ ದೇವಾಲಯದ ಧರ್ಮದರ್ಶಿ ವಿಜಯ ಬಲ್ಲಾಳ್, ಡಾ. ಗಣನಾಥ್ ಎಕ್ಕಾರ್, ಡಾ.ಮಾಧವಿ ಭಂಡಾರಿ, ಮುರುಳಿ ಕಡೆಕಾರ್, ಸುಧಾಕರ ಶೆಟ್ಟಿ, ಭುಜಂಗ ಶೆಟ್ಟಿ, ಶರಾವತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೋವಿಡ್-19 ಸಂತ್ರಸ್ಥ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಾಗೂ ಶ್ರವಣ ಸಾಧನ ಉಪಕರಣ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಖಜಾಂಚಿ ರಮಾದೇವಿ, ಕರ್ನಾಟಕ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ ಶಾಖೆಯ ಆಡಳಿತ ಮಂಡಳಿ ಸದಸ್ಯ ವಿ.ಜಿ.ಶೆಟ್ಟಿ, ಚಂದ್ರಶೇಖರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಿ.ಡಿ.ಆರ್.ಸಿ ನೂಡೆಲ್ ಅಧಿಕಾರಿ ಜಯಶ್ರೀ ನಿರೂಪಿಸಿದರು, ರತ್ನಾಕರ ಶೆಟ್ಟಿ ವಂದಿಸಿದರು.

 
 
 
 
 
 
 
 
 
 
 

Leave a Reply