ಸೂರ್ಯ ಚಂದ್ರರ ಸಮಾಗಮ ಈ ಯೋಗ~ರಾಜೇಶ್ ಭಟ್ ಪಣಿಯಾಡಿ .

ಸನಾತನ ಭಾರತೀಯ ಋಷಿಮುನಿಗಳಿಂದ ಸಂಯೋಜಿಸಲ್ಪಟ್ಟ ಒಂದು ದಿವ್ಯ ಅಸ್ತ್ರ ಈ ಯೋಗ. ಇದೊಂದು ಭಾರತೀಯರ ರಕ್ತದಲ್ಲಿ ಕರಗತವಾಗಿರುವ ಮಹಾ ವಿದ್ಯೆ ಎನ್ನಬಹುದು.

ಸಂಸ್ಕೃತದ ‘ಯುಜ್ ‘ ಎಂಬ ಪದದಿಂದ ಈ ಯೋಗ ಎಂಬ ಶಬ್ಧ ಕೋಶವು ಜನ್ಮ ತಳೆದಿದ್ದು ಅದರ ಮೂಲ ಮಂತ್ರ “ಅ- ಒ- ಮ” ಬೀಜಾಕ್ಷರಗಳ ಸಂಗಮದ ಓಂಕಾರವೆಂಬ ಧೀಶಕ್ತಿಯಾಗಿ ರುತ್ತದೆ. ಇಲ್ಲಿ ಯುಜ್ ಎಂದರೆ ಜೋಡಿಸುವುದು, ಹೊಂದಿಸುವುದು ಎಂದರ್ಥ.

ದೇಹ ಪ್ರಕೃತಿ ಮತ್ತು ಬಾಹ್ಯ ಪ್ರಕೃತಿಯನ್ನು ಒಗ್ಗೂಡಿಸುವ, ಜ್ಞಾನ – ಭಕ್ತಿ- ಕರ್ಮ ಶಕ್ತಿಗಳನ್ನು ಹೊಂದಾಣಿಕೆ ಮಾಡುವ ಜಾಣ್ಮೆಯೇ ಈ ಯೋಗ. ಈ ಯೋಗಕ್ಕೆ ವಿಶೇಷ ಭಾಷ್ಯವನ್ನು ಬರೆದು ಶ್ರೀ ಸಾಮಾನ್ಯರಿಗೆ ಎಟಕುವಂತೆ ಮಾಡಿದವರು ಪತಂಜಲಿ ಮಹರ್ಷಿಗಳು.

“ಯೋಗೇನ ಚಿತ್ತಸ್ಯ ಪದೇನ ವಾಚಾಂ” ಅಂದರೆ ಯೋಗದ ಮೂಲಕ ಚಿತ್ತ ಶುದ್ಧಿಯನ್ನು ಮಾಡಲು ಸಾಧ್ಯ ಎಂಬುದು ಇದರ ಒಳ ಅರ್ಥ. ಸೂರ್ಯ ಚಂದ್ರರ ಸಮಾಗಮ ಈ ಯೋಗ ಎನ್ನುತ್ತಾರೆ. ಅಂದರೆ ಇಲ್ಲಿ ಸೂರ್ಯ ಎಂದರೆ ದೇಹ ಮತ್ತು ಚಂದ್ರ ಎಂದರೆ ಮನಸ್ಸು.

ಹಾಗಾಗಿ ತನು ಮನಗಳ ಸಮನ್ವಯವೇ ಯೋಗ ಎನಿಸಿಕೊಳ್ಳುತ್ತದೆ. ಪ್ರಕೃತಿಯೊಳಗಿನ ಶಕ್ತಿಯನ್ನು ದೇಹದೊಳಗೆ ಆವಾಹನೆ ಮಾಡಿಕೊಂಡು ಆರೋಗ್ಯ ಮತ್ತು ಶಕ್ತಿವಂತ ಕಾಯ ಮತ್ತು ಮನಸ್ಸನ್ನು ಪಡೆಯಲು ಇದರಿಂದ ಸಾಧ್ಯ.

ದುಗುಡ ದುಮ್ಮಾನ ಜಡತೆಯನ್ನು ಹೋಗಲಾಡಿಸುವ ಮಹಾತಂತ್ರ. ದೇಹ ಮತ್ತು ಮನಸ್ಸನ್ನು ತಾನು ಬಯಸಿದಂತೆ, ಬಳಸಿಕೊಳ್ಳುವುದು ಈ ಯೋಗದ ಅಂತರ್ ಶಕ್ತಿ. ಇಂದ್ರಿಯ ನಿಗ್ರಹವೇ ಇದರ ಮೂಲಮಂತ್ರ.

ಈ ಯೋಗ ಕಲೆ ಪ್ರತಿಯೊಬ್ಬ ಭಾರತೀಯನ ಜೀವನ ಕಲೆಯ ಅವಿಭಾಜ್ಯ ಅಂಗವಾಗಿ ಆತ ರಾಷ್ಟ್ರಕ್ಕೆ ಹೊನ್ನ ಕಲಶವಾಗಲಿ ಎಂಬ ಹಾರೈಕೆಯೊಂದಿಗೆ ವಿಶ್ವ ಯೋಗ ದಿನದ ಶುಭಾಶಯಗಳು.

 
 
 
 
 
 
 
 
 
 
 

Leave a Reply