ಗುರುತಿಸದಾದೆ..ಕಿರು ಕತೆ~ ರಾಘವೇಂದ್ರ ಜಿ.ಜಿ

ಅಂದು ಎಂದಿನಂತೆ ಗಡಿಬಿಡಿ ಮಾಡಿಕೊಂಡು ಬೆಳಿಗ್ಗೆ ಬೇಗ ಎದ್ದರೂ ಅದೂ ಇದೂ ಅಂತ ಕಾಲಹರಣವಾಗಿ ಗಬಗಬನೇ ತಿಂಡಿ ಮಾಡಿ ಕಾಲೇಜಿಗೆ ಹೊರಟಿದ್ದೇ, ಅದೇ ಸಮಯಕ್ಕೆ ಯಾವುದೋ ಅಪರಿಚಿತ ನಂಬರ್ ನ ಕಾಲ್ ನನ್ನ ಮೊಬೈಲ್ ಗೆ ಬಂದಾಗ ಇನ್ನು ಯಾರಿದು ಮೊದಲೇ ಕಾಲೇಜಿಗೆ ತಡವಾಗ್ತಾ ಇದೆ ಅದರ ಮಧ್ಯೆ ಕಾಲ್ ಬೇರೆ ಎಂದೆ ಸ್ವಲ್ಪ ದಪ್ಪ ಧನಿಯಲ್ಲಿಯೇ ಎತ್ತಿದೆ ಯಾರು ಎಂದು, ಆಗ ನಾನು ಸರ್ ಜಾಹ್ನವಿಯವರ ಅಮ್ಮ ಮಾತಾಡೋದು ನನ್ನ ಮಗಳು ಟೆಸ್ಟ್ ಬರೆಯಲು ಬರ್ತಿಲ್ಲ ಕಾರಣ ಅವಳು ಮೊನ್ನೆ ಬಸ್ಸಿನಲ್ಲಿ ಬರುವಾಗ ತಲೆ ತಿರುಗಿ ಬಿದ್ದಳಂತೆ, ಯಾರೋ ಪುಣ್ಯಾತ್ಮರು ಉಪಚರಿಸಿ ಆಸ್ಪತ್ರೆಗೆ ಸೇರಿಸಿದರಂತೆ ಇವಾಗ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಳಿದ್ದಾಳೆ ಎಂದು ತಿಳಿಸಿದರು.

ಇದನ್ನು ಕೇಳಿದ ನನಗೆ ಪಾಪ ಜಾಹ್ನವಿ ಒಳ್ಳೆಯ ಸ್ಟೂಡೆಂಟ್ ಯಾರ ಸುದ್ದಿಗೂ ಹೋಗದ ಮುಗ್ಧಮನಸಿನ ಹುಡುಗಿ ಅವಳು, ಪಾಪ ಹೀಗೆ ಆಗಬಾರದಿತ್ತು, ಎಂದೆನಿಸಿ ಆಯ್ತು ಮೇಡಂ ಅವಳು ಸುಧಾರಿಸಿದ ಮೇಲೆ ಕಳಿಸಿಕೊಡಿ ಎಂದು ಹೇಳಿ ಕರೆ ಕಟ್ ಮಾಡಿದೆ. ಆದರೆ ನನ್ನ ಮನಸ್ಸಿನಲ್ಲಿ ಅದೇ ವಿಚಾರ ಓಡ್ತಾ ಇತ್ತು ಈಗಿನ ಮಕ್ಕಳು ರಾತ್ರಿ ಇಡೀ ಮೊಬೈಲ್ ನೋಡೋದು, ಅರೆನಿದ್ರೆ, ಪರೀಕ್ಷೆ ಭಯ ಮತ್ತು ಸಾಕಷ್ಟು ಬೆಳಿಗ್ಗೆ, ಮಧ್ಯಾಹ್ನ ಸರಿಯಾದ ರೀತಿಯಲ್ಲಿ ಆಹಾರ ಸೇವಿಸದೇ ಇರುವುದು ಇದಕ್ಕೆಲ್ಲ ಕಾರಣವಿರಬಹುದು ಎಂದು ಭಾವಿಸುತ್ತಾ ನನ್ನ ಬೈಕ್ ನ ಏರಿ ಕಾಲೇಜಿಗೆ ಬಂದೆ. ಅದಾಗಲೇ ಒಂದು ಬೆಲ್ ರಿಂಗಣಿಸಿ ಆಗಿತ್ತು, ಆದರೆ ನಾನು ಸರಸರನೇ ಸಹಿ ಮಾಡಿ ನನ್ನ ರೂಂ ಗೆ ಸಂಭಂದಿಸಿದ ಪರೀಕ್ಷೆ ಪತ್ರಿಕೆ ಹಿಡಿದು ಕೊಠಡಿ ಪ್ರವೇಶಿಸಿದೆ.

ಆದರೆ ಈ ನಡುವೆ ನಾನು ಏನನ್ನೋ ಮರೆತೆ ಅಲ್ವಾ ಎಂದೆಣಿಸಿತು ದಾರಿಯಲ್ಲಿ ಬರುವಾಗ ಒಂದು ಕೀ ನನ್ನ ಕಣ್ಣಿಗೆ ಬಿದ್ದಿತ್ತು ಆದರೆ ಅತ್ತ ಕಡೆ ಗಮನ ಹಾಯಿಸದೇ ನಾನು ನನ್ನ ಪಾಡಿಗೆ ನಾನು ಬಂದಿದ್ದೆ, ಆದರೂ ಆ ಕೀ ಯಾರದ್ದಾಗಿರ ಬಹುದು ಛೇ ಹಾಗೆಯೇ ಬಿಟ್ಟು ಬಂದೆನಲ್ಲಾ ಎಂದು ಊಟಕ್ಕೆಹೋಗುವಾಗ ಎತ್ತಿಟ್ಟರೆ ಆಯಿತು ಬಿಡು ಎಂದು ತೀರ್ಮಾನಿಸಿದೆ. ಆದರೆ ಮತ್ತೆ ಮರೆತೇ ಹೋಯಿತು. ಯಾವಾಗ ನಾನು ಕಾರ್ ಹೊರಗೆ ತೆಗೆಯಲು ಒಮ್ಮೆ ಗೇಟ್ ಗೆ ಹಾಕಿದ ಸೈಕಲ್ ಲಾಕ್ ನ ಬೀಗ ಹುಡುಕಿದೆನೋ ಆಗ ನಂಗೆ ಅರಿವಿಗೆ ಬಂತು ಅಯ್ಯೋ ಅಂದು ಗುರುತಿಸಲಸಾಧ್ಯ ವಾಗಿದ್ದ ಆ ಬೀಗದ ಕೀ ನನ್ನ ಗೇಟ್ ದೇ ಎಂದು. ಅಷ್ಟರಲ್ಲೇ ಅದೇ ಸ್ಥಳದಲ್ಲಿ ಹೋಗಿ ಹುಡುಕಿದೆ ಯಾರೋ ಅದನ್ನು ಅಲ್ಲಿಂದ ತೆಗೆದಿದ್ದರು.

ಅಯ್ಯೋ ಇನ್ನೇನು ಮಾಡಲಿ ಆ ಸೈಕಲ್ ಲಾಕ್ ನ ಮುರಿಯೋದೇ ಮುಂದಿನ ದಾರಿ ಎಂದಾಗ ನನಗೊಂದು ಆಶ್ಚರ್ಯ ಕಾದಿತ್ತು ಯಾವುದೋ ಒಬ್ಬ ಸ್ನೇಹಿತನ ಸ್ಟೇಟಸ್ ನಲ್ಲಿ ಎರಡು ದಿನಗಳ ನಂತರ ನನ್ನ ಕೀ ತರದ ಒಂದು ಕೀ ಯ ಫೋಟೋ ಕಂಡೆ, ಸರಿ ಅದು ಇರಬಹುದೇನು ಎಂದುಕೊಂಡೆ ಆದರೂ ಈಗಿನ ಕಾಲದಲ್ಲಿ ಬೈಕ್, ಕಾರ್, ಮನೆ ಕೀ ಸಿಕ್ರೆ ಈ ತರ ಹಾಕ್ತಾರೆ ಆದ್ರೆ ಈ ಸಣ್ಣ ಕೀ ಯೂ ಸ್ಟೇಟಸ್ ಲಿ ಹಾಕಿದ್ದಾರಲಾ ಎಂದುಕೊಂಡು ಅದೇ ಫ್ರೆಂಡ್ ಗೆ ವಿಚಾರಿಸಿದೆ, ಆಗ ಅವ ಹೇಳಿದ ಇದೊಂದು ಗ್ರೂಪ್ ಲಿ ಬಂದಿತ್ತು, ಅದರಿಂದ ತೆಗೆದು ಹಾಕಿದೆ ಆ ಗ್ರೂಪ್ ಹೆಸರು ‘ಪರರ ವಸ್ತು’ ಎಂದು ಇದರಲ್ಲಿ ಇರೋ ಸದಸ್ಯರು ಏನೇ ಈ ತರದ ವಸ್ತುಗಳು ಸಿಕ್ಕಾಗ ಅದರ ಫೋಟೋ, ಜಾಗ ಮತ್ತು ಸಮಯ ದಿನಾಂಕ ಹಾಕ್ತಾರೆ ಅಂದ, ಹಾಗೆಯೇ 85% ಇದರಿಂದ ಉಪಯೋಗ ಆಗಿದೆ ಎಂದ.

ನಾನೂ ಸ್ವಲ್ಪ ನಾಚಿಕಯಿಂದ ಕೇಳಿದೆ ಅಲ್ಲಾ ಮಾರಾಯ ಪ್ಲೀಸ್ ನೀನು ಹಾಕಿದ ಸ್ಟೇಟಸ್ ಲಿ ಇರೋ ಕೀ ಎಲ್ಲಿದು ಪ್ಲೀಸ್ ಹೇಳು ಎಂದಾಗ ಅವನು ಕಳಿಸಿದ ವಿವರ ನೋಡಿ ನಂಗೆ ನಿಬ್ಬೆರೆಗು ಮಾಡಿತು ಕಾರಣ ನಾನು ಅಂದು ನೋಡಿದ ಜಾಗವೇ ಆಗಿತ್ತು, ಸರಿ ಅದು ನಂದೇ ಕೀ ಎಂದು ಕೇಳಿದೆ ಕೊನೆಗೆ ಆ ವ್ಯಕ್ತಿ ಉಚಿತವಾಗಿ ನನಗೆ ಕೊರಿಯರ್ ಮುಖೇನ ಕೀ ಕಳುಹಿಸಿದರು. ಆಗ ತಿಳಿಯಿತು ಈ ತರದ ಒಳ್ಳೆಯ ಮನಸಿನ ಎಷ್ಟೋ ಜನರು ಇರೋದ್ರಿಂದ ಮಳೆ ಬೆಳೆ ಆಗ್ತಾ ಇರೋದು ಎಂದು.

ಮೇಲೆ ಜಾಹ್ನವಿಗೂ ಹಾಗೆ ಯಾರೋ ಉಪಚರಿಸಿದ್ರು ಬಚಾವ್ ಆದಳು, ನನ್ನ ಸಣ್ಣ ಕೀ ಕಳೆದಿದ್ರೂ ಮತ್ತೆ ಹಿಂಪಡೆಯುವಲ್ಲಿ ಸಹಕಾರವಾದ ಆ ವಾಟ್ಸ್ಯಾಪ್ ಗ್ರೂಪ್ ಗೆ ನಾನೂ ಸದಸ್ಯನಾಗಲು ಬಯಸಿದೆ. ಅಂದು ಗುರುತಿಸದಾದೆ ಎಂದಿದ್ದೆ, ಇಂದು ಗುರುತಿಸಲು ಕಲಿತೆ.

~ರಾಘವೇಂದ್ರ ಜಿ.ಜಿ
ವಾಣಿಜ್ಯ ಉಪನ್ಯಾಸಕರು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಕುಂಜಿಬೆಟ್ಟು , ಉಡುಪಿ .

 
 
 
 
 
 
 
 
 
 
 

Leave a Reply