ಶರನ್ನವರಾತ್ರಿ ಪುಣ್ಯಕಾಲ-ನಂದ್ಯೂರಮ್ಮ~ಕೆ.ಎಲ್.ಕುಂಡಂತಾಯ.

ಮಹರ್ಷಿ ಭಾರ್ಗವರಿಂದ ‘ದುರ್ಗಾ’ ಶಕ್ತಿ  ಸಂಕಲ್ಪಿತ ಪುಣ್ಯಭೂಮಿ‌ ನಂದಿಕೂರು. ದ್ವೈತ ಸಿದ್ಧಾಂತ ದ್ರಷ್ಟಾರ ಆಚಾರ್ಯ ಮಧ್ವರ ಆಧ್ಯಾತ್ಮಿಕ ಗುರು ಶ್ರೀ ಅಚ್ಯುತ ಪ್ರೇಕ್ಷಾಚಾರ್ಯರು ಮೂಲತಃ ನಂದಿಕೂರಿನವರು. ಎಲ್ಲೂರು ಕುಂದ ಹೆಗ್ಗಡೆಯ ಆಡಳಿತವಿದ್ದ  ಸಂಕೇತವಾಗಿ ಇರುವ ಅರಮನೆಯ ಅವಶೇಷಗಳು –  ವೃಷಭನಾಥ ಬಸದಿ.ಉಷ್ಣವಿದ್ಯುತ್ ಸ್ಥಾವರ ಸ್ಥಾಪ ನೆಯು ಕಾರಣವಾಗಿ  ವಿಶ್ವದಾದ್ಯಂತ ಪರಿಸರ ಪ್ರಿಯರ ಗಮನಸೆಳೆದ ಪ್ರದೇಶ ನಂದಿಕೂರು . ಜೀರ್ಣೋದ್ಧಾರಾನಂತ ರದಲ್ಲಿ ಸ್ಥಾಪನೆಯಾದ  ಚಿನ್ನದ ಧ್ವಜಸ್ತಂಭ. ಹೀಗೆ ಪುರಾಣ, ಇತಿಹಾಸ, ಜನಪದ ನಂಬಿಕೆಗಳ ಹಿನ್ನೆಲೆ ಇರುವ ನಂದಿ ಕೂರು “ನಂದ್ಯೂರು” ಎಂದೇ ಜನಜನಿತ .
ನದಿಯಿಂದಾಗಿ ಗುರುತಿಸಲ್ಪಟ್ಟ ಊರು. ನದಿ ದಡದಲ್ಲಿರುವ ಊರು . ಹೀಗೆ ನದಿ ಸಂಬಂಧವನ್ನು ಹೊಂದಿ ‘ನದಿಯೂರು’ ಆಗಿ ನಂದ್ಯೂರು ಆಯಿತೆಂಬುದು ಪೌರಾಣಿಕ ಉಲ್ಲೇಖ (ಆಧಾರ: ಎಲ್ಲೂರು ಮಹಾತ್ಮ್ಯಂ). ‘ನಂದ’ರೆಂಬ ಜನವರ್ಗ ವಾಸಿಸುತ್ತಿದ್ದ ಗುಡ್ಡ (ಮರಗಳಿಂದ ತುಂಬಿರುವ) ಪ್ರದೇಶವೇ ನಂದಿಕೂರು ಎಂದು ಕರೆಯಲ್ಪಟ್ಟಿತು ಎಂಬುದು ಸ್ಥಳನಾಮ ಸಂಶೋಧಕರ ಅಭಿಪ್ರಾಯ .’ಕುರ್’ ಎಂದರೆ ಬೆಟ್ಟ, ಗುಡ್ಡ ಎಂದು ವಿವರಿಸುವ ಸಂಶೋಧಕರು  ‘ನಂದ + ಕುರ್’ ಎಂಬುದೇ ನಂದಿಕೂರು ಎಂದಾಗಿರಬೇಕು ಎಂದು ವಿಶ್ಲೇಷಿಸುತ್ತಾರೆ .
ದೀರ್ಘ ಚತುರಸ್ರಾಕಾರವಾದ ಗರ್ಭಗುಡಿ .ದ್ವಿತಲದ ರಚನೆ, ಷಡ್ವರ್ಗ ಕ್ರಮದಲ್ಲಿದೆ. ಪುರಾತನ ರಚನೆಯನ್ನು ಆಧರಿಸಿ ಇತಿಹಾಸಕಾರ ಡಾ.ಗುರುರಾಜಭಟ್ಟರು 1200 ವರ್ಷದ ಪ್ರಾಚೀನತೆಯನ್ನು ಹೇಳಿದ್ದಾರೆ‌.

ಮಹಿಷಾಸುರ ಮರ್ದಿನಿ: ಮೂಲಸ್ಥಾನ ದುರ್ಗಾಪರಮೇಶ್ವರೀ ಮೂರ್ತಿಯನ್ನು ‘ಮಹಿಷಾಸುರ ಮರ್ದಿನಿ‌’ ( ಕೇವಲ ಕೋಣನ ರೂಪವಿದ್ದರೆ ಅದು ಮಹಿಷ ಮರ್ದಿನಿ , ಮಾನವ ದೇಹ ಕೋಣನ ತಲೆಯನ್ನು ಹೊಂದಿದ್ದರೆ ಅದು ಮಹಿಷಾಸುರ ಮರ್ದಿನಿ) ಎಂದು ಗುರುತಿಸಿರುವ ಗುರುರಾಜ ಭಟ್ಟರು ಕರಿ ಶಿಲೆಯಿಂದ ನಿರ್ಮಾಣಗೊಂಡ ಪ್ರತಿಮೆ ಮೂರು ಅಡಿ ಎತ್ತರವಿದೆ. ಚತುರ್ಭಾಹುವಾದ ವಿಗ್ರಹದ ಮೇಲಿನ‌ ಬಲಕೈಯಲ್ಲಿ ದೀರ್ಘ ತ್ರಿಶೂಲ, ಮೇಲಿನ ಎಡಕೈಯಲ್ಲಿ ಶಂಖ‌, ಕೆಳಗಿನ ಬಲ ಕೈಯಲ್ಲಿ ಪ್ರಯೋಗ ಚಕ್ರ, ಕೆಳಗಿನ ಎಡ ಕೈಯಲ್ಲಿ ಮಹಿಷಾಸುರನ ಮೂತಿಯನ್ನು ತಿರುಗಿಸಿ ಹಿಡಿದ ನಿರ್ದೇಶವಿದೆ .ದುರ್ಗೆಯು ತನ್ನ ಎಡಕಾಲಿನಿಂದ ಮಹಿಷಾಸುರನ ಬೆನ್ನನ್ನು‌ ಮೆಟ್ಟಿ, ತ್ರಿಶೂಲದ ಇನ್ನೊಂದು ತುದಿಯಿಂದ ಇರಿದಂತೆ ಕಾಣುವ ನೋಟವು ಮೂರ್ತಿಯಲ್ಲಿದೆ.

ಈ ಅಪೂರ್ವ ಶಿಲ್ಪದಲ್ಲಿ ಮಹಿಷಾಸುರನ ವಧೆಯ ಸಂದರ್ಭವನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಯುದ್ಧದಲ್ಲಿ ಭಾಗವಹಿಸಿರುವ ದುರ್ಗೆಯ ವಾಹನ ಸಿಂಹವು ಎಡಬದಿಯಲ್ಲಿ ತಟಸ್ಥವಾಗಿದೆ. ಮಹಿಷಾಸುರ ಮರ್ದಿನಿ ವಿಗ್ರಹವು ನೀಳವಾದ ದೇಹಸೌಷ್ಠವವನ್ನು ಹೊಂದಿದೆ. ಸಾಮಾನ್ಯ ಅಲಂಕಾರವಿದೆ.  ಅಂಡಾಕಾರದ ಚಿಕ್ಕ ಪ್ರಭಾವಳಿ ತಲೆಯ ಹಿಂದುಗಡೆ ಇದೆ. ಸೂಕ್ಷ್ಮ ಭಾಗಗಳು ಸವೆದಿದ್ದು ಪರಿಪೂರ್ಣ ಬಿಂಬದ ಲಕ್ಷಣವನ್ನು ಆಧರಿಸಿ ಈ ಶಿಲ್ಪವನ್ನು ಬಾದಾಮಿ ಚಾಲುಕ್ಯರ ಕಾಲಕ್ಕೆ ಡಾ.ಗುರುರಾಜ ಭಟ್ಟರು ಅನ್ವಯಿಸಿದ್ದಾರೆ .14 ನೇ ಶತಮಾನದ ನಿರ್ಮಿತಿಯಾದ ಬಲಿಮೂರ್ತಿಯೂ ಆಕರ್ಷಕವಾಗಿದೆ.
  ಸಮಗ್ರ ದೇವಾಲಯವನ್ನು ಪುನಾರಚಿಸಲಾಗಿದ್ದು ಪುರಾತನ ಸ್ವರೂಪವನ್ನು ಉಳಿಸಿಕೊಳ್ಳಲಾಗಿದೆ. ಉಪದೇವತೆಗಳಾಗಿ ದೇವಳದ ಹಿಂಬದಿಯ ನಾಗ ಸಾನ್ನಿಧ್ಯ , ನೂರು ಮೀಟರ್ ದೂರದಲ್ಲಿರುವ ರಕ್ತೇಶ್ವರೀ ಸಂಕಲ್ಪಗಳಿವೆ .ಈ ರಕ್ತೇಶ್ವರೀ ವಿಶೇಷ ಶಕ್ತಿ ಸಂಪನ್ನೆ ಎಂದು ನಂಬಲಾಗಿದೆ . ಜಾರಂದಾಯ , ಬಬ್ಬುಸ್ವಾಮಿ ದೈವಗಳು ಪರಿವಾರ ಶಕ್ತಿಗಳು. ರಥೋತ್ಸವದ  ರಾತ್ರಿ ರಥಾರೂಢಳಾದ ದುರ್ಗೆಯನ್ನು ನಂದಿಕೂರಿನ ನಾಲ್ಕು ಬೇರೆ ಬೇರೆ ಸ್ಥಾನಗಳಿಂದ ದರ್ಶನದಲ್ಲಿ  ಬರುವ ಬಬ್ಬುಸ್ವಾಮಿ ಭೇಟಿಯಾಗುವ ಸಂಪ್ರದಾಯವಿದೆ.
ಅವಭೃತದಿಂದ ಹಿಂದಿರುಗಿ ಬರುವ ವೇಳೆ ಜಾರಂದಾಯನು ಭಂಡಾರ ಸಮೇತ ಭೇಟಿಯಾಗಿ ದೇವರೊಂದಿಗೆ ದೇವಸ್ಥಾನಕ್ಕೆ ಬಂದು ಧ್ವಜಾವರೋಹಣದ ಆನಂತರದಲ್ಲಿ ಕೋಲ ಸೇವೆ ಸಲ್ಲಿಸಿ ಹಿಂದಿರುಗುವ ಪದ್ಧತಿ ಇದೆ. ನಾಗ ಸಂಕಲ್ಪ, ರಕ್ತೇಶ್ವರೀ, ನಂದಿಗೋಣ, ವ್ಯಾಘ್ರ ಚಾಮುಂಡಿ ಮುಂತಾದ ಪ್ರಾಚೀನ ಶಕ್ತಿಗಳಿರುವ ಈ ಕ್ಷೇತ್ರ ಪುರಾತನ ಆರಾಧನಾ ಸ್ಥಾನವಾಗಿತ್ತೆಂದು ಒಪ್ಪಬಹುದಾಗುತ್ತದೆ .
ಪುರಾಣ, ದಂತಕತೆ, ಚರಿತ್ರೆಗಳು ದೇವಾಲಯ ಸಂಬಂಧಿಯಾಗಿದೆ, ನಂದಿಕೂರಿನ ಪೇಟೆಯನ್ನು ‘ಅರಮನೆ ಕಾಡು’ ಎನ್ನಲಾಗುತ್ತದೆ. ಅರಮನೆ ಇತ್ತೆಂದು ಹೇಳಲಾಗುವ ಪ್ರದೇಶದಲ್ಲಿ ಇರುವ ಹೆಬ್ಬಂಡೆಯಲ್ಲಿ ಕ್ರಿ.ಶ. 15 ನೇ ಶತಮಾನದ  ಭೈರವನ‌ ಉಬ್ಬು ಶಿಲ್ಪವಿದೆ. ‘ಮುಗಿಲೆದ ಕಾಡು’ ಎಂಬಲ್ಲಿ ದುರ್ಗೆಯುವಿಹರಿಸುತ್ತಿದ್ದಳು ಎಂದು ನಂಬಲಾಗಿದೆ .ನಂದಿ ಕೂರಿನ ಪೂರ್ವಗಡಿಯಲ್ಲಿ ಎರಡು ವೀರಗಲ್ಲುಗಳಿವೆ. ಒಟ್ಡಿನಲ್ಲಿ ನಂದಿಕೂರು ಈಗ ಅವಗಾಹನೆಗೆ ಬಂದಿರುವು ದಕ್ಕಿಂತಲೂ ಹೆಚ್ಚಿನ ಇತಿಹಾಸ – ಪುರಾಣವನ್ನು ಗರ್ಭೀ ಕರಿಸಿಕೊಂಡಂತೆ ಭಾಸವಾಗುತ್ತದೆ .

ಅನುಗ್ರಹ – ಸೇವೆ: ಅವಿವಾಹಿತ ಗಂಡು ,ಹೆಣ್ಣುಗಳಿಗೆ ಮಾಂಗಲ್ಯ ಭಾಗ್ಯ ಅನುಗ್ರಹಿಸುವ ದುರ್ಗಾಪರಮೇಶ್ವರಿಯು ಸ್ವಯಂವರ ಪಾರ್ವತಿ ಪೂಜೆ – ಪ್ರದಕ್ಷಿಣೆ, ನಮಸ್ಕಾರಕ್ಕೆ ಒಲಿಯುತ್ತಾಳೆ, ಅನುಗ್ರಹಿಸುತ್ತಾಳೆ. ಗುಣವಾಗದ ಮಹಾ ವ್ಯಾಧಿಗಳನ್ನು  ಗುಣಪಡಿಸುವ ‘ಮಾತೃಶಕ್ತಿ’ ಎಂಬುದು ಜನಜನಿತ ಒಪ್ಪಿಗೆಗಳು . ಹೂ,ಸೀರೆ ,ಮಧುರಪಾಯಸ , ಹೂವಿನ ಪೂಜೆ, ದುರ್ಗಾನಮಸ್ಕಾರ, ದುರ್ಗಾ ಸಂಬಂಧಿ ಹೋಮ – ಹವನಗಳು, ಅನ್ನಸಂತರ್ಪಣೆಗಳು ನಿತ್ಯ ನಿರಂತರ ನಡೆಯುತ್ತಿರುತ್ತವೆ .ವಾರ್ಷಿಕ ಮಹೋತ್ಸವ , ನವ ರಾತ್ರಿ ಕಾಲ ಮುಂತಾದವುಗಳು  ವಿಜೃಂಭಣೆಯಿಂದ ನಡೆಯತ್ತವೆ. ಆದರೆ ಈ ವರ್ಷ ಕೊರೊನಾ ಕಾರಣವಾಗಿ ಸರಳ ಆಚರಣೆಗಳು ನಡೆಯುತ್ತವೆ , ಅನ್ನಸಂತರ್ಪಣೆ ಗಳಿರುವುದಿಲ್ಲ.  ಪಡುಬಿದ್ರಿಯಿಂದ ಕಾರ್ಕಳ ರಸ್ತೆಯಲ್ಲಿ ಬಂದು ನಂದಿಕೂರು ಪೇಟೆಯಲ್ಲಿ ದಕ್ಷಿಣಕ್ಕೆ ತಿರುಗಿ ಎರಡು ಕಿ.ಮೀ .ಸಾಗಿದರೆ ನಂದಿಕೂರು ದುರ್ಗಾಪರಮೇಶ್ವರಿ ದೇವಳವಿದೆ.

 
 
 
 
 
 
 
 
 
 
 

Leave a Reply