ಅಮ್ಮನಕ್ಷಯ ಪಾತ್ರೆ~ತಾರಾ ಆಚಾರ್ಯ.

ಬರಿಯ ಪಾತ್ರೆಯೆಂದೆಣಿಸದಿರಿ,
ಪಾತ್ರೆಯಲ್ಲವಿದು..
ನನ್ನವ್ವನ ಬಾಳ ಯಾತ್ರೆಯಲಿ,
ಇದರ ಪಾತ್ರವೆ ಹಿರಿದು.
ಒಲವೆಂಬ…ಒಲೆಯ  ಮೇಲೆ,
ಪ್ರೀತಿ ಪಾತ್ರೆಯನಿಟ್ಟು,
ಅಕ್ಕರೆಯಿಂದಾರಿಸಿದ …
ಅಕ್ಕಿ ಕಾಳನು ತೊಳೆದು,
ಕುದಿವ ನೀರಲಿ  ಸುರಿದ
ಆ ಕುಚ್ಚಲಕ್ಕಿಯ ನೆನಪು,
ಅಚ್ಚಳಿಯದೆ ಉಳಿದಿವೆ
ನನ್ನ ಮನದಲಿ  ಇಂದೂ.
ಹಸಿ ಸೌದೆಯಾದರೂ…
ತುಸು ಬೇಸರಿಸಿಕೊಳದೆ,
ಉಸಿರನೂದಿ,ಊದಿ ಅವಳು
ಒಲೆಯನುರಿಸುತ್ತಿದ್ದಳು.
ಬಿಸಿಗೆ ತಾನೇ ಬೆಂದರೂ …. ಆ…
ಧಗೆಗೆ ಬೆವತು ನೊಂದರೂ,
ಮಂದಹಾಸದಿ ಬಂದು ಬಡಿಸಿ,…
ನಾವುಂಡ ತೃಪ್ತಿಯ ಕಂಡು
ತಾನು ತೇಗುವಳು.
ಬಿಸಿಲೇ ಇರಲಿ,… ಮಳೆಯೇ ಇರಲಿ,
ಹಸಿದು…. ಮನೆಗೆ ಯಾರೇ ಬರಲಿ,
ಬಿಸಿಯಾಗಿ ಉಣ ಬಡಿಸಿ,
ಉಪಚರಿಸುತ್ತಿದ್ದಳು.
ಒಂದು ಹಿಡಿ ನುಚ್ಚಕ್ಕಿ
ಅವಳ ಈ ಪಾತ್ರೆಯಲಿ,
ಬೆಂದಾಗ ,ಹತ್ತೊಡಲ
ಹಸಿವ ನೀಗುತ್ತಿತ್ತು.
ಖಾಲಿಯಾಗದು  ಎಂದೂ,
ಅವಳ ಅನ್ನದಕ್ಷಯ ಪಾತ್ರೆ,
ಅದೆಷ್ಟು ಜನ ಉಂಡರೂ
ಮತ್ತಷ್ಟು ಮಿಗುತ್ತಿತ್ತು.
ಇಂದು ನಾ,ಬಗೆ ಬಗೆಯ
ಭಕ್ಷ್ಯ ಭೋಜ್ಯಂಗಳ,
ಬೆಳ್ಳಿ ತಟ್ಟೆಯಲೇ ..ತಿಂದು
ಬೀಗುತಿರಬಹುದು.
ಆದರೆ ಅಂದವಳು ಬಡಿಸಿದ
ಆ ಅಂಬಲಿಯ ರುಚಿಯು,
ಇಂದಾವ ಪರಮಾನ್ನದೊಳಗೂ ಸಿಗದು.
ಅನಿಸಿಹುದು ಇಂದೆನಗೆ
ಬರಿಯ ಪಾತ್ರೆಯಲ್ಲವಿದು,
ನನ್ನವ್ವನ ಕನಸುಗಳು
ಬೆಂದು ಕರಗಿದ ಪಾತ್ರೆಯಿದು……..

ತ್ಯಾಗಮೂರ್ತಿ ತಾಯಂದಿರಿಗೆ.. ​ನಮೋ ನಮ: ​

 
 
 
 
 
 
 
 
 
 
 

Leave a Reply