|ಮಹಾಶಿವರಾತ್ರಿ| ಮಂಗಲಕರ ‘ಮಹಾದೇವ’ನ ಉಪಾಸನಾ ಪರ್ವ

ವೇದವು ವಿದ್ಯೆಗಳಲ್ಲಿ ಶ್ರೇಷ್ಠವಾದುದು. ವೇದದಲ್ಲಿ ಹನ್ನೊಂದು ಅನುವಾಕಗಳಿರುವ ’ರುದ್ರ ನಮಕ’ವು ಉತ್ಕೃಷ್ಟವಾದದ್ದು. ಅದರಲ್ಲಿರುವ ಮಂತ್ರಗಳಲ್ಲಿ ’ನಮಃ ಶಿವಾಯ’ ಎಂಬ ಪಂಚಾಕ್ಷರೀ ಮತ್ತು ’ಶಿವ’ ಎರಡು ಅಕ್ಷರಗಳು ಸರ್ವಶ್ರೇಷ್ಠವಾದವು ಶ್ರೀ ರುದ್ರ ನಮಕದಲ್ಲಿ ’ನಮಃ ಶಿವಾಯಚ ಶಿವ ತರಾಯಚ’ ಎಂಬ ವಾಕ್ಯವಿದೆ. ಇದರಿಂದ ಆಯ್ದ ಮಂತ್ರ ಪಂಚಾಕ್ಷರೀ. ಆದುದರಿಂದ ಪಂಚಾಕ್ಷರೀ ವೇದೋಕ್ತ ಮಂತ್ರ ಎಂದು ವಿದ್ವಾಂಸರ ಅಭಿಪ್ರಾಯ. ‘ಶಿವ’ ಶಬ್ದವು ಶುಭ, ಕಲ್ಯಾಣ, ಮಂಗಳ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ. ’ಅಚ್’ ಪ್ರತ್ಯಯವು ಸೇರಿ ಕಲ್ಯಾಣ ಗುಣಗಳುಳ್ಳವ ಎಂಬ ಅರ್ಥದಲ್ಲಿ ನಿಷ್ಪನ್ನವಾಗಿದೆ.

ತ್ರಿಮೂರ್ತಿತ್ವ

ತ್ರಿಮೂರ್ತಿಗಳಲ್ಲಿ ಕಡೆಯವನೇ ಶಿವ. ಪ್ರಪಂಚದ ಲಯಕ್ಕೆ ಕರ್ತನು ಈತ. ತಮೋಗುಣ ಪ್ರತೀಕ, ಲಯ, ಸುಳಿಯ ಕೇಂದ್ರ, ವಿಕಿರಣ ಮತ್ತು ನಿಶ್ಯೇಷ ಲಯದ ಪ್ರತೀಕ ಶಿವ. ಪ್ರಳಯದ ಅನಂತರ ಪುನಃ ಸೃಷ್ಟಿ ಕಾರ್ಯಕ್ಕೆ ಮೊದಲು ಯಾರಲ್ಲಿ ಅನಂತ ವಿಶ್ವವು ನಿಕ್ಷೇಪಿಸಲ್ಪಡುವುದೋ ಆತನೇ ಶಿವ. ಅಂತ್ಯವಿಲ್ಲದ ಶೂನ್ಯದೊಳಗೆ ವಿಲೀನಗೊಳ್ಳುವುದೇ ಜಗತ್ತಿನ ಲಯ. ಈ ಮಹಾ ಶೂನ್ಯವೇ ಯಾವುದರಿಂದ ಮತ್ತೆ ಮತ್ತೆ ಪ್ರಪಂಚದ ಸೃಷ್ಟಿಯಾಗುವುದೋ ಅದೇ ಶಿವ. ಪ್ರಳಯಕಾರಕನಾದರೂ ಸೃಷ್ಟಿ, ಸ್ಥಿತಿಗಳಿಗೆ ಪೂರಕನು.
ಶಿವನ ವಾಸಸ್ಥಾನ ಶ್ವೇತಗಿರಿಯಾದ ಹಿಮಾಲಯ. ಇವನ ಮೈ ಬಣ್ಣ ಬಿಳಿ. ಇವು ಬೆಳಕಿನ ಸಂಕೇತ. ಅಜ್ಞಾನ ಅಳಿಸಿ ಸುಜ್ಞಾನ ಬೆಳಗುವ ಜ್ಞಾನದ ತದ್‌ರೂಪ. ಮಹಾದೇವನಿಗೆ ಮೂರು ಕಣ್ಣು. ಸೂರ್ಯ, ಚಂದ್ರ, ಅಗ್ನಿ ಸ್ವರೂಪವಾಗಿರುವ ಇವು ಬೆಳಕು, ಜೀವ, ಶಾಖಗಳಿಗೆ ಮೂಲ. ಮೂರನೇ ಕಣ್ಣು ಜ್ಞಾನ ನೇತ್ರ. ಇದು ವಿವೇಕದ ಸಂಕೇತ. ಶಿವನು ಆಸೆಯನ್ನು ಮೆಟ್ಟಿನಿಂತ ಮಹಾಕಾಲ. ಏಕೆಂದರೆ ಹುಲಿ ಅಸಹಾಯಕ ಸಾಧು ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ತಿನ್ನುವುದರಲ್ಲಿ ಆಸೆಯ ಹೋಲಿಕೆ ಇದೆ. ಹುಲಿಯ ಚರ್ಮ ಧರಿಸುವ ಶಿವನು ಈ ತತ್ತ್ವವನ್ನು ಪ್ರತಿಪಾದಿಸುತ್ತಾನೆ. ಆನೆಯ ಚರ್ಮಧರಿಸಿ ಪಶು ಭಾವಗಳನ್ನು ಜಯಿಸುವ ಪ್ರತಿನಿಧಿಯಾಗುತ್ತಾನೆ ಶಿವ.ರುಂಡಮಾಲಾ, ಭಸ್ಮಧಾರಿ ವಿನಾಶದ ಪ್ರಭುವೆಂದು ಶಿವನನ್ನು ಅನಾವರಣಗೊಳಿಸಿದರೆ ಮಾಲೆಯು ಕಾಲ ಪ್ರವಾಹದ ಪುನರಾವರ್ತನೆ ಮತ್ತು ಮನುಕುಲದ ವಿನಾಶ ಮತ್ತು ಪುನರ್ ಸೃಷ್ಟಿಯ ಪ್ರಕೃತಿ ಸಹಜ ಚಿತ್ರವನ್ನು ಸೂಚಿಸುತ್ತದೆ. ಗಂಗೆಯ ಧಾರೆ ಜ್ಞಾನ ಸಂಕೇತವಾಗಿದೆ. ಬಾಲಚಂದ್ರ (ಶಿರದಲ್ಲಿರುವ) ಕಾಲದ ಪ್ರತೀಕ, ಸರ್ಪವು ವಿಷ ಹಾಗೂ ಸಾವನ್ನು ಪ್ರತಿನಿಧಿಸುವ ಮೂಲಕ ಸರ್ಪಧರನಾದ ಶಿವ ಮೃತ್ಯುಂಜಯನಾಗುತ್ತಾನೆ. ಸೃಷ್ಟಿ, ಸ್ಥಿತಿ, ಲಯದ ಪ್ರತಿನಿಧಿಯಂತಿರುವ ತ್ರಿಶೂಲವು ರಕ್ಷಣೆ ಮತ್ತು ಆಕ್ರಮಣವನ್ನು ಪ್ರತಿನಿಧಿಸುತ್ತದೆ. ಡಮರು ಸ್ವರವನ್ನು, ಆ ಮೂಲಕ ವರ್ಣಗಳನ್ನು ಮತ್ತು ವ್ಯಾಕರಣದ ಅಥವಾ ಭಾಷೆಯ ಪ್ರತೀಕವೆನಿಸುತ್ತದೆ. ಶಿವನು ಆಧ್ಯಾತ್ಮ. ವಿಜ್ಞಾನದ ಆದಿಗುರು. ಆದುದರಿಂದ ಕೈಯಲ್ಲಿ ಅಕ್ಷಮಾಲೆ, ಖಟ್ವಾಂಗವು ಮಂತ್ರ ವಿದ್ಯಾ ಪ್ರಾವೀಣ್ಯವಾದರೆ. ರಕ್ತಪಾನ ಮಾಡುವ ಕಪಾಲವು ಸರ್ವ ವಿನಾಶಶಕ್ತಿಯ ಸಂಕೇತ. ದರ್ಪಣವು ಸೃಷ್ಟಿಯು ಶಿವನ ರೂಪದ ಪ್ರತಿಬಿಂಬವಾಗುತ್ತದೆ.

ಪಂಚಮುಖ

ಈಶಾನ, ತತ್ಪುರುಷ, ಅಘೋರ, ವಾಮದೇವ, ಸದ್ಯೋಜಾತ ಇವು ಭಗವಾನ್ ಭರ್ಗನ ಪಂಚಮುಖಗಳು.ಪೂರ್ವ ಮುಖವಾಗಿರುವ ‘ತತ್ಪುರುಷ’ ಮುಖವು ಗಾಳಿಯ ಮೇಲೆ ನಿಯಂತ್ರಣ, ಅಂಧಕಾರ ಮತ್ತು ಅಜ್ಞಾನ ತತ್ವವನ್ನು ಪ್ರತಿನಿಧಿಸುತ್ತದೆ. ಉತ್ತರಮುಖವಾಗಿರುವ ‘ಅಘೋರ’ ವದನವು ಅಗ್ನಿಯ ಮೇಲಿನ ಅಧಿಕಾರ. ವಿಶ್ವದ ಸ್ವೀಕಾರ್ಯ ಮತ್ತು ಸಂಸ್ಕಾರ ಶಕ್ತಿಯ ಪ್ರತಿನಿಧಿಯಾಗುತ್ತದೆ. ‘ವಾಮದೇವ’ ಮುಖವು ದಕ್ಷಿಣಾಭಿಮುಖವಾಗಿದ್ದು ಜಲದ ಮೇಲಿನ ಶಕ್ತಿ ಆ ಮೂಲಕ ಸಂರಕ್ಷಣಾ ಗುಣವನ್ನು ಪ್ರತಿಪಾದಿಸುತ್ತದೆ. ಸೃಷ್ಟಿಶಕ್ತಿಯ ಸಂಕೇತ, ಭೂಮಿಯ ಮೇಲಿನ ಅಧಿಕಾರವನ್ನು ಪಶ್ಚಿಮಾಭಿಮುಖವಾಗಿರುವ ‘ಸದ್ಯೋಜಾತ’ ಆನನವು ನಿರೂಪಿಸುತ್ತದೆ. ಕ್ಷಿತಿಜದತ್ತ ಮುಖ ಮಾಡುವ ಈಶಾನ ವದನಾರವಿಂದವು ಸದಾಶಿವ, ಆಕಾಶ, ಮೋಕ್ಷ ನೀಡುವ ಸ್ವರೂಪವಾಗಿದೆ.
ಸೌಮ್ಯ ಅಥವಾ ಅನುಗ್ರಹಮೂರ್ತಿ, ಉಗ್ರ, ರುದ್ರ ಅಥವಾ ಸಂಹಾರ ರುದ್ರ, ನೃತ್ಯ ಅಥವಾ ತಾಂಡವಮೂರ್ತಿ, ದಕ್ಷಿಣಾಮೂರ್ತಿ, ಲಿಂಗೋದ್ಭವ ಮೂರ್ತಿ, ಭಿಕ್ಷಾಟನಾ ಮೂರ್ತಿ, ಹರಿಹರಮೂರ್ತಿ, ಅರ್ಧನಾರೀಶ್ವರ ಮೂರ್ತಿ ಇವು ಶಿವನ ಅಷ್ಟ ಮೂರ್ತಿಗಳು.
ಲೀನವಾಗುತ್ತದೆ ಆದರೂ ಒಂದು ಆಕಾರ ತಿಳಿಯುತ್ತದೆ ಎಂದರೆ ’ಲೀಯತೆ, ಗಮ್ಯತೇ’, ಸಾಕಾರ-ನಿರಾಕಾರಗಳ ಮಧ್ಯವರ್ತಿಯಾಗಿ ’ಲಿಂಗ’, ಇದು ಶಿವ ಪ್ರತೀಕ.ಶಿವರಾತ್ರಿ ಪುಣ್ಯ ಕಾಲದಲ್ಲಿ ಶಿವನ ಕುರಿತಾದ ಸ್ವರೂಪ, ಗುಣ, ಕರ್ತೃತ್ವ, ಆಯುಧಗಳು, ಧಾರಣ ಮತ್ತು ವಿಶೇಷಗಳ ವಿವೇಚನೆಯೊಂದಿಗೆ ಪಂಚಮುಖ, ಲಿಂಗ ಪ್ರತೀಕಗಳ ಸ್ಥೂಲ ಅವಲೋಕನ ಮಾಡಿದಂತಾಯಿತು.

ಜಗತ್ತಿನ ತಂದೆ

ಅರ್ಧನಾರೀಶ್ವರನಾದ ಮಹಾದೇವನು ತಾಯಿ-ತಂದೆ, ಪ್ರಕೃತಿ-ಪುರುಷರ ಗಾಢವಾದ ಸಮಾಗಮವನ್ನು ವ್ಯಕ್ತಪಡಿಸುತ್ತಾನೆ. ಸತ್ಯಲೋಕ ಎಲ್ಲಿದೆ ಎಂದರೆ ಗೊತ್ತಿಲ್ಲ, ವೈಕುಂಠವೂ ಕಲ್ಪನೆಗೆ ನಿಲುಕದೇ ಇರುವಂತಹದು. ಸ್ವರ್ಗವಂತೂ ಕೇವಲ ಕಲ್ಪನಾಲೋಕ, ವಿಹಾರಕ್ಕೆ ಮಾತ್ರ. ಆದರೆ ಹಿಮಾಲಯ ನಮ್ಮ ಭೂಮಿಯ ಮೇಲಿದೆ. ಅಲ್ಲೇ ನಮ್ಮ ಶಿವದೇವರ ಸಾನ್ನಿಧ್ಯ. ಎಷ್ಟು ಸಮೀಪವಿದ್ದಾರೆ ನಮ್ಮ ದೇವರು!
ಕಾಲದ ವಿವಿಧ ಸ್ತರಗಳಲ್ಲಿ ಬೆಳೆದು ನಿಂತ ಶಿವನ ವ್ಯಕ್ತಿತ್ವ ಕುತೂಹಲ ಕೆರಳಿಸುವಂತಹದು. ವೇದಪೂರ್ವದ ಆದಿಮ ಸಂಸ್ಕೃತಿಯಲ್ಲೂ ಶಿವನ ಪರಿಕಲ್ಪನೆ ಇತ್ತು. ಪಶುಪತಿ ಎಂಬ ಶಿಲ್ಪ ಅವಶೇಷವೊಂದು ಸೈಂದವ ಸಂಸ್ಕೃತಿಯ ಪ್ರತೀಕವಾಗಿ ದೊರೆತಿದೆ. ಇದೇ ವೇದಪೂರ್ವದ ದೇವತಾ ಪರಿಕಲ್ಪನೆಯೊಂದು ವೇದಕಾಲದಲ್ಲಿ ನಿಚ್ಚಳಗೊಂಡು ಶಿವನಾಗಿ ಬೆಳೆದು ನಿಂತುದು ನಮ್ಮ ಸಂಸ್ಕೃತಿಗಳು ಒಂದು ಮತ್ತೊಂದರ ಮುಂದುವರಿದ ಭಾಗವಾಗಿ ಸಾಗಿಬಂತೆಂಬುದಕ್ಕೆ ಪುಷ್ಟಿ ನೀಡುತ್ತದೆ. 
ಶಿವ ವೃಷಭವಾಹನ, ಸರ್ಪಧರ, ಪಾರ್ವತಿ ಸಿಂಹವಾಹಿನಿ, ಗಣಪತಿಯ ವಾಹನ ಇಲಿ, ಷಣ್ಮುಖ ನವಿಲನ್ನೇರಿ ಸಂಚರಿಸುವವನು. ಈ ಸಂಸಾರದಲ್ಲಿ ಪರಸ್ಪರ ವೈರಿಗಳಾದ ಪ್ರಾಣಿಗಳ ಸಂಗಮವೇ ಇದೆ. ಆದರೆ ಇಲ್ಲಿ ಕಲಹ ಇಲ್ಲ. ಸೌಹಾರ್ದ ಇದೆ. ಏಕೆಂದರೆ ಎಲ್ಲವನ್ನೂ ಎಲ್ಲರನ್ನೂ ಸಮಭಾವದಿಂದ ಕಾಣುವ ಜಗದ ತಂದೆಯಾದ ಮಹಾದೇವ ದಿವ್ಯಸಾನ್ನಿಧ್ಯವಿದೆ.ಈ ಕೈಲಾಸದ ಒಂದು ಕುಟುಂಬ ಹಲವು ಗಣಗಳ, ಶಿವಭಕ್ತರ, ಯೋಗಿಗಳ ವೃಂದದಿಂದ ಪರಿವೇಷ್ಟಿತವಾಗಿದೆ. ಇಲ್ಲಿ ಇಡೀ ಒಂದು ಜಗತ್ತಿನ ಕಲ್ಪನೆಯೇ ಇದೆ. ಆದುದರಿಂದ ಜನಮಾನಸಕ್ಕೆ ಸಮೀಪದಲ್ಲಿದ್ದು ಮನುಕುಲದ ಪರಮಾಪ್ತನಾದ ಶಿವನು ಜನಪ್ರಿಯ ದೇವರು. ಪ್ರತಿ ಮನೆಗೆ, ದೇಶಕ್ಕೆ ಶಿವಪಾರ್ವತಿಯರ ಕುಟುಂಬ ಒಂದು ಆದರ್ಶ. ಲೋಕಕ್ಕೆ ಸುಭಿಕ್ಷೆಯಾಗಲಿ ಎಂಬ ಹಾರೈಕೆಯೊಂದಿಗೆ ಒಂದು ಬಿಲ್ವದಳ ಶಿವಪಾದಕ್ಕೆ.
– ಓಂ ನಮಃ ಶಿವಾಯ…..

ಕೆ.ಎಲ್.ಕುಂಡಂತಾಯ

 
 
 
 
 
 
 
 
 
 
 

Leave a Reply