ಪ್ರಾಣದೇವರ ಬೆಲ್ಲ ಮತ್ತು ವಾದಿಯಣ್ಣನ ಕಥೆ

ಸುಮಾರು ಅರುವತ್ತೇಳು ವರ್ಷಗಳ ಹಿಂದಿನ ಘಟನೆ. ಅಂದಿನ ಉಡುಪಿಯ ಕಡೆಕೊಪ್ಪಲ ಮಠದ ಮುಂಭಾಗದ ಮನೆಯಲ್ಲಿ (ಪೂರ್ಣಪ್ರಜ್ಞ ಕಾಲೇಜು ಸಮೀಪದ ಈಗಿನ ಕುಡ್ವರ ಮನೆ) ನಮ್ಮ ತಂದೆಶ್ರೀವಿಠಲಾಚಾರ್ಯರ ವಾಸ.ಮಡದಿ ಗಂಗಮ್ಮ,ತಾಯಿ ಭೂಮಿಯಕ್ಕ(ನಮ್ಮಅಜ್ಜಿ) ಸೇರಿದಂತೆ ಆರುಮಕ್ಕಳ ದೊಡ್ಡ ಕುಟುಂಬದ ಜೊತೆ ವಿಠಲಾಚಾರ್ಯರು ಸಿಹಿಕಹಿಯನ್ನೆಲ್ಲಾ ಸಮಾನವಾಗಿ ಸ್ವೀಕರಿಸುತ್ತಾ ಜೀವನರಥ ಸಾಗಿಸುತ್ತಿದ್ದರು.ಆರುಮಕ್ಕಳಲ್ಲಿ ವಾದಿಯಣ್ಣ ಆರನೆಯವರು.ಬಾಲ್ಯದಲ್ಲಿಬಿಳಿಗೊಂಬೆಯಂತೆ ಎಲ್ಲರನ್ನೂ ಸೆಳೆಯುತ್ತಿದ್ದ ವಾದಿಯಣ್ಣ ಮಹಾ ತುಂಟ,ಪೋಕರಿ ಎನಿಸಿದ್ದರು.ಮಾತ್ರವಲ್ಲ ಸದ್ದಿಲ್ಲದೆ ಕಿತಾಪತಿ ನಡೆಸುತ್ತಿದ್ದರಂತೆ.

ಶ್ರೀಶಿರೂರು ಮಠದ 28ನೇ ಯತಿಗಳಾದ ಕೀರ್ತಿಶೇಷ ಶ್ರೀಲಕ್ಷ್ಮೀಂದ್ರತೀರ್ಥ ಶ್ರೀಪಾದರ ಕಿರಿಯ ಸಹೋದರರಾಗಿದ್ದ ನಮ್ಮ ಅಪ್ಪಯ್ಯ ಶ್ರೀವಿಠಲಾಚಾರ್ಯರು ಉಡುಪಿ ಶ್ರೀಮುಖ್ಯಪ್ರಾಣ ದೇವರಿಗೆ 36 ವರ್ಷಗಳ ಕಾಲ ಪೂಜೆ ಸಲ್ಲಿಸಿದ ಮಹಾನ್ ಸಾಧಕರು. ಪ್ರತಿನಿತ್ಯ 4 ಗಂಟೆಗೆ ಸರಿಯಾಗಿ ಉಡುಪಿ ಶ್ರೀಕೃಷ್ಣಮಠದ ಮುಖ್ಯಪ್ರಾಣದೇವರ ಪೂಜೆಗೆ ತೆರಳುತ್ತಿದ್ದರು.

ಶ್ರೀಕೃಷ್ಣಮಠದಲ್ಲಿ ಮುಖ್ಯಪ್ರಾಣದೇವರ ಪಂಚಾಮೃತ ಅಭಿಷೇಕಕ್ಕಾಗಿ ನಿತ್ಯ ನೀಡುತ್ತಿದ್ದ ಎರಡು ಉಂಡೆಬೆಲ್ಲ,ಎರಡು ಬಾಳೆಹಣ್ಣುಗಳು ಹಾಗೂ ಪಂಚಾಮೃತದ ಸಾಹಿತ್ಯಗಳು ದೇವರಿಗೆ ನೈವೇದ್ಯವಾಗಿ ಪೂಜೆಯಾದ ನಂತರ ಅರ್ಚಕರಿಗೆ ಸಲ್ಲುತ್ತಿತ್ತು. ಹೀಗಾಗಿ ತಂದೆ ವಿಠಲಾಚಾರ್ಯರು ಬೆಳಗ್ಗಿನ ಪೂಜೆ ಮುಗಿಸಿ ಮನೆಗೆ ಮರಳುವಾಗ ತಪ್ಪದೆ ಇವೆಲ್ಲವನ್ನೂ ಮನೆಗೆ ತರುತ್ತಿದ್ದರು. ಅಪ್ಪಯ್ಯ ತರುತ್ತಿದ್ದ ಈ ಉಂಡೆಬೆಲ್ಲ,ಬಾಳೆಹಣ್ಣು ಹಾಗೂ ಪಂಚಾಮೃತದ ಸೇವನೆಗಾಗಿ ಮನೆಯಲ್ಲಿ ಯಾವಾಗಲೂ ಜಿದ್ದಾಜಿದ್ದಿ ಜರಗುತ್ತಿತ್ತು.ರುಕ್ಮಿಣೀ ಕರಾರ್ಚಿತ ಶ್ರೀಮಧ್ವಮುನಿ ಪ್ರತಿಷ್ಠಾಪಿತ ದ್ವಾರಕೆಯ
ಶ್ರೀಕೃಷ್ಣ ಹಾಗೂ ಅಯೋಧ್ಯೆಯ ಶ್ರೀಮುಖ್ಯಪ್ರಾಣದೇವರ ಪ್ರತಿಮೆಗಳ ಶಿರದಿಂದ ಪಾದಕಮಲಗಳವರೆಗೆ ನಿವೇದನೆಯಾಗಿ ಸ್ಪರ್ಶಿಸಿ ಹರಿದುಬರುವ ಈ ಪವಿತ್ರ ಪಂಚಾಮೃತ ಬೆಲ್ಲ, ಬಾಳೆಹಣ್ಣುಗಳು ತನುಮನಕ್ಕೆ ಅವ್ಯಕ್ತ ಆನಂದ ಕರುಣಿಸುತ್ತಿದ್ದವು. ಇವು ಅಮೃತ-ಸಂಜೀವಿನಿ ಹಾಗೂ ವೈವಿಧ್ಯಮಯ ರಸ-ಪಾಕಗಳಿಂದ ಆವೃತವಾಗಿರುತ್ತಿದ್ದವು.ಹೀಗಾಗಿಯೇ ಪಂಚಾಮೃತದ ಸೇವನೆಗಾಗಿ ಮಕ್ಕಳು ತುದಿಗಾಲಲ್ಲಿ ಕಾಯುತ್ತಿದ್ದರು. ಕಂಡೊಡನೆಯೇ ಮುಗಿಬೀಳುತ್ತಿದ್ದರು.ತಾಯಿ ಗಂಗಮ್ಮ ಬಹಳ ಸಮಾಧಾನಿ ಹಾಗೂ ನಿರಪೇಕ್ಷೀ.ಎಲ್ಲರಿಗೂ ಸಮಪಾಲು ನೀಡಿ ತಾನು ಪಂಚಾಮೃತದ ಸುವಾಸನೆ ಮಾತ್ರ ಸ್ವೀಕರಿಸಿ ಆನಂದ ಪಡುತ್ತಿದ್ದವರು.

ಅಪ್ಪಯ್ಯ ಶ್ರೀಕೃಷ್ಣಮಠದಿಂದ ಬರುವಾಗ ತಡವಾದರೆ ಅಣ್ಣಂದಿರು ಹಾಗೂ ಅಕ್ಕಂದಿರು ಪಂಚಾಮೃತ ದ ಬೆಲ್ಲ ಹಾಗೂ ಬಾಳೆಹಣ್ಣಿಗಾಗಿ ಕಾದುಕಾದು ನಿರಾಸೆಯಿಂದ ಶಾಲೆಗೆ ಹೊರಟು ಬಿಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಮೂರರ ಹರೆಯದ ವಾದಿಯಣ್ಣನದೇ ಕಾರುಬಾರು.ಸಂಜೆ ಅಣ್ಣಂದಿರು ಮತ್ತು ಅಕ್ಕಂದಿರು ಶಾಲೆ ಮುಗಿಸಿ ಬರುವುದರೊಳಗೆ ಬೆಲ್ಲ ಬಾಳೆಹಣ್ಣು ಪಂಚಾಮೃತ ಎಲ್ಲವೂ ಖಾಲಿಯಾಗಿರುತ್ತಿತ್ತು.ಸುಖಾಸುಮ್ಮನೆ ಇಲಿ,ಬೆಕ್ಕು ಹೆಗ್ಗಣದ ಮೇಲೆ ದೂರು ದಾಖಲಾಗುತ್ತಿತ್ತು.ಅಂತಹ ಪ್ರತಿಭೆಯನ್ನು ವಾದಿಯಣ್ಣ ಹೊಂದಿದ್ದರು.

ಒಂದುದಿನ ಮಧ್ಯಾಹ್ನ ಅಪ್ಪಯ್ಯ,ಅಮ್ಮ,ಅಜ್ಜಿ ಮಲಗಿದ್ದರು.ಅಣ್ಣಂದಿರು ಅಕ್ಕಂದಿರು
ಶಾಲೆಯಲ್ಲಿದ್ದರು.ಈ ಮೊದಲೇ ಹೇಳಿದಂತೆ ಪಂಚಾಮೃತದ ಬೆಲ್ಲವೆಂದರೆ ವಾದಿಯಣ್ಣನಿಗೆ ಅಚ್ಚುಮೆಚ್ಚು.ಹೆಚ್ಚಾಗಿ ಈ ಪಂಚಾಮೃತದ ಬೆಲ್ಲ ಹಾಗೂ ಬಾಳೆಹಣ್ಣನ್ನು ಅಪ್ಪಯ್ಯ ತನ್ನ ತಾಯಿ ಅಂದರೆ ಅಜ್ಜಿ ಭೂಮಿಯಕ್ಕನ ಕೋಣೆಯಲ್ಲೇ ಇರಿಸುತ್ತಿದ್ದರು.

ಅಂದು ಮಲಗಿದ್ದ ವಾದಿಯಣ್ಣನಿಗೆ ಭೂಮಿಯಕ್ಕನ ಕೋಣೆಯಿಂದ ಪಂಚಾಮೃತ ಬೆಲ್ಲದ ಸುವಾಸನೆ ಮೂಗಿನ ತುದಿಯತ್ತ ಸುತ್ತಲಾರಂಭಿಸಿತು.ನಾಲಿಗೆ ಚಪ್ಪರಿಸಲು ಆರಂಭಿಸಿದರು. ತಡಮಾಡಲಿಲ್ಲ.ಸದ್ದು ಮಾಡದೆ ಮೆಲ್ಲನೆ ಎದ್ದು ಬೆಲ್ಲವನ್ನು ಅರಸಿ ಅಜ್ಜಿಯ ಕೋಣೆಯತ್ತ ಹೆಜ್ಜೆಇಟ್ಟರು.ಅಜ್ಜಿಯ ಕೋಣೆಯ ಹಳೆಯ ದೊಡ್ಡ ಬಾಗಿಲನ್ನು ಸದ್ದು ಮಾಡದೆ ಮೆಲ್ಲನೆ ಸರಿಸಿ ಕೊಠಡಿಯ ಒಳಗೆ ಸಾಗಿದರು.ಕೋಣೆಯ ಒಳಗಿನ ದೊಡ್ಡಚಿಲಕವನ್ನು ಕಷ್ಟಪಟ್ಟು ಹಾಕಿ ಕತ್ತಲೆಯಲ್ಲಿ ಕುಳಿತು ಪಂಚಾಮೃತ ಬೆಲ್ಲದ ಸ್ವಾದಿಷ್ಟವನ್ನು ಏಕಾಂಗಿಯಾಗಿ ಸವಿಯಲು ಆರಂಭಿಸಿದರು.ಪಾತ್ರೆಯಲ್ಲಿದ್ದ ಬೆಲ್ಲದ ಕಣಕಣವನ್ನೆಲ್ಲಾ ತಿಕ್ಕಿತಿಕ್ಕಿ ಸ್ವಾಹಾ ಮಾಡಿದ ನಂತರ ಬಾಳೆಹಣ್ಣನ್ನು ಕೂಡಾ ಸ್ವೀಕರಿಸಿದರು.ಪಾತ್ರೆಯಲ್ಲಿದ್ದ ಪಂಚಾಮೃತವೂ ಖಾಲಿಯಾದ ನಂತರ ಮೆಲ್ಲನೆ ತೇಗುತ್ತಾ ಅಜ್ಜಿಯ ಕೋಣೆಯ ಬಾಗಿಲಿನ ಚಿಲಕವನ್ನು ತೆಗೆದು ಬಾಗಿಲು ತೆರೆಯಲು ಪ್ರಯತ್ನಿಸಿದರೆ ಚಿಲಕ ಸರಿಯುತ್ತಲೇ ಇಲ್ಲ. ಜಪ್ಪಯ್ಯ ಅಂದರೂ ಬಾಗಿಲು ಅಲುಗಾಡುತ್ತಿಲ್ಲ.ಬಾಲಕವಾದಿಯಣ್ಣನ ಭಗೀರಥ ಪ್ರಯತ್ನಗಳೆಲ್ಲಾ ವಿಫಲವಾಯಿತು.ಸುಮಾರು ಅರ್ಧ ತಾಸು ಹೀಗೆ ಕಳೆಯಿತು.ಅಜ್ಜಿಯ ಕೋಣೆಯ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಾದಿಯಣ್ಣ ಬೆದರಿ ಬಿಳುಚಿ ಹೋಗಿದ್ದರು.ಬೆವರಿ ಮೈಯೆಲ್ಲಾ ಒದ್ದೆಯಾಗಿತ್ತು.ಬೇರೆ ದಾರಿ ಕಾಣದೆ ಗಟ್ಟಿಯಾಗಿ ಅಪ್ಪಯ್ಯ ಮತ್ತು ಅಮ್ಮನನ್ನು ಕೂಗಲಾರಂಭಿಸಿದರು.

ಅಜ್ಜಿಯ ಕೋಣೆಯಿಂದ ಕೇಳಿ ಬಂದ ವಾದಿಯಣ್ಣನ ಕೂಗಿಗೆ ಅಪ್ಪಯ್ಯ,ಅಮ್ಮ, ಅಜ್ಜಿ ಮೂವರೂ ವಾದಿಯಣ್ಣನಿದ್ದ ಕೋಣೆಯತ್ತ ಧಾವಿಸಿದರು.ಇವರೂ ಕೂಡಾ ಬಾಗಿಲು ತೆಗೆಯಲು ಶತಾಯ ಗತಾಯ ಪ್ರಯತ್ನಿಸಿದರು ಅವರೆಲ್ಲರ ಪ್ರಯತ್ನ ವಿಫಲವಾಯಿತು.ಅಜ್ಜಿಯ ಕೋಣೆಯ ಗೋಡೆಯ ಮೇಲ್ಭಾಗದಲ್ಲಿದ್ದ ಪುಟ್ಟ ಕಿಟಕಿಗಳ ಚಿಲಕವನ್ನೂ ಕೂಡಾ ಒಳಬದಿಯಿಂದಲೆ ಹಾಕಲಾಗಿತ್ತು.ಹೀಗಾಗಿ ಗಾಳಿ ಸಂಚರಿಸಲು ಸೂಕ್ತ ವ್ಯವಸ್ಥೆಯೂ ಇರಲಿಲ್ಲ.ಸುದ್ದಿ ನೆರೆಕೆರೆಯವರಿಗೆಲ್ಲಾ ತಿಳಿಯಿತು.ಅಜ್ಜಿಯ ಕೋಣೆಯ ಹಳೆಯ ದಪ್ಪದ ಬಾಗಿಲನ್ನು ತೆರೆಯಲು ಅನೇಕರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ.ಕೋಣೆಯ ಕತ್ತಲೆಯಲ್ಲಿ ಬಂದಿಯಾಗಿದ್ದ ವಾದಿಯಣ್ಣ ಕಂಗಾಲಾಗಿ ಅಳುತ್ತಿದ್ದರು.ಪಕ್ಕದ ಮನೆಯ ಕೆಲಯುವಕರು ಕೊಠಡಿಯ ಹೊರಭಾಗದಲ್ಲಿದ್ದ ಮೇಲ್ಗಡೆಯ ಕಿಟಕಿಯ ಸಂದಿಯತ್ತ ಸಾಗಿ ವಾದಿಯಣ್ಣನಲ್ಲಿ ಮಾತನಾಡುತ್ತಾ ಧೈರ್ಯ ತುಂಬುತ್ತಿದ್ದರು.ತಂದೆಗೆ ಆತ್ಮೀಯರಾಗಿದ್ದ ನೆರೆಮನೆಯ ಪೈಲ್ವಾನ್ ಕುಡ್ವರು ಒಂದೊಂದೇ ಚಾಕಲೇಟಗಳನ್ನು ಗೋಡೆಯ ಸಂದಿಯ ಎಡೆಯಿಂದ ತೂರಿಸಿ ಅಳುತ್ತಿದ್ದ ವಾದಿಯಣ್ಣನನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದರು.ಅಜ್ಜಿ ಭೂಮಿಯಕ್ಕನವರು ಸಿಟ್ಟಲ್ಲಿ ಬುಸುಗುಡುತ್ತಿದ್ದರು. ಅಪ್ಪಯ್ಯ-ಅಮ್ಮನಿಗೆ ಪುಟ್ಟ ಕಂದನಿಗೆ ಏನಾಗುವುದೋ ಎಂಬ ಭಯ.ಮನೆಯ ಮುಂಭಾಗದಲ್ಲಿ ಜಾತ್ರೆಯಂತೆ ಜನ ಸೇರಿದ್ದರು.ಸಂಜೆ ಏಳು ಗಂಟೆಯ ಹೊತ್ತಿಗೆ ಮರಕೆಲಸದಲ್ಲಿ ನಿಪುಣರಾದ ಒಂದಿಬ್ಬರು ಸ್ಥಳೀಯರು ಆಗಮಿಸಿದರು.ಕೊಠಡಿಯ ಬಾಗಿಲನ್ನು ಭೂಮಿಯೊಳಗೆ ಮೊಳೆಗುತ್ತಿ ಮಾದರಿಯಲ್ಲಿ ಅಳವಡಿಸಲಾಗಿತ್ತು.ಹೀಗಾಗಿ ಬಾಗಿಲಿನಬುಡದಲ್ಲೆ ಒಂದುಅಡಿ ಭೂಮಿ ಅಗೆದು ಬಾಗಿಲನ್ನು ಭೂಮಿಯಿಂದ ಹೊರತೆಗೆದು ಪುಟ್ಟ ಬಾಲಕ ವಾದಿಯಣ್ಣನನ್ನು ಬಂಧಮುಕ್ತ ಗೊಳಿಸಲಾಯಿತು.ವಾದಿಯಣ್ಣ ಕೋಣೆಯಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಸಂತಸದಲ್ಲಿ ಜೈಕಾರ ಹಾಕಿದರು.ಎಲ್ಲರ ಮನಸ್ಸು ನಿರಾಳವಾಯಿತು.

ಅಜ್ಜಿಭೂಮಿಯಕ್ಕನಿಗೆ ವಾದಿಯಣ್ಣನ ಬೆಲ್ಲದ ಕಥೆ ಕೇಳಿ ನಗುವೋ ನಗು. ಅಣ್ಣಂದಿರು-ಅಕ್ಕಂದಿರಾದ ವ್ಯಾಸಣ್ಣ,ಆರ್ಯಣ್ಣ,ಅಪ್ಪಿಯಕ್ಕ,ಲಕ್ಷ್ಮೀಯಕ್ಕ,ಸಾವಿತ್ರಿಯಕ್ಕನವರಂತೂ ವಾದಿಯಣ್ಣನ ಏಕಾಂತವಾಸದ ಪರಿಸ್ಥಿತಿ ನೋಡಿ ಹೊಟ್ಟೆಹುಣ್ಣಾಗುವಂತೆ ನಕ್ಕಿದ್ದರಂತೆ.ಅಂತೂ ಇಂತೂ ವಾದಿಯಣ್ಣನ ಪಂಚಾಮೃತ ಮತ್ತು ಬೆಲ್ಲದ ಕಥೆಯು 6 ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಶ್ರೀಮುಖ್ಯಪ್ರಾಣದೇವರ ದಯೆಯಿಂದ ಬಹಳ ಯಶಸ್ವಿಯಾಗಿ ಸುಖಾಂತ್ಯ ಕಂಡಿತು.

ಏನೇಇರಲಿ ಆ ದಿನಗಳಲ್ಲಿ ಮೂಡಿ ಬರುತ್ತಿದ್ದ ಬಾಲ್ಯದ ಆಸೆ-ಆಕಾಂಕ್ಷೆಗಳು,ಮುಗ್ದ ಘಟನೆಗಳು,ಬದುಕಿನ ರೀತಿ-ನೀತಿ-ಕ್ರಮಗಳ ಸುಂದರ ಸರಣಿಯು ಇಂದಿನ ಬಿಡುವಿರದ ತಾಂತ್ರಿಕಯುಗದಲ್ಲಿ ಊಹಿಸಲೂ ಅಸಾಧ್ಯ. ಎಂದಿಗೂ ಮಾಸದ ಇಂತಹ ಹಳೆಯ ಸಿಹಿ-ಸವಿನೆನಪುಗಳು ಮನದಾಳದಿಂದ ಚಿಮ್ಮಿ ಅರಳಿದಾಗ ಮನಸ್ಸು ಭಾವುಕವಾಗಿ,ಹೃದಯ ತುಂಬಿ,ಮಾತು ಮೌನವಾಗುತ್ತದೆ.

ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ

 
 
 
 
 
 
 
 
 
 
 

Leave a Reply