ರಾಮ ಜನ್ಮಭೂಮಿಯ ಕಥೆ ~ಎ.ಎಸ್.ಎನ್.ಹೆಬ್ಬಾರ್

ಆತ ಸೂಫಿ ಸಂತನಂತೆ ಕಾಣುತ್ತಿದ್ದ. ಕಾಬೂಲ್ ದಾಟಿ ಭಾರತ ಪ್ರವೇಶಿಸಿದ್ದೇ, ಆತ ನಿಂತದ್ದು ಆಗಿನ ಅವಧ್ (ಅಯೋಧ್ಯೆ)ಯಲ್ಲಿ. ಈ ಫಕೀರ (ಖಲಂದರ್) ಭಾರತದ ಮಾಹಿತಿ ಸಂಗ್ರಹಿಸಲು ಬಂದದ್ದಿರಬೇಕು. ಅಯೋಧ್ಯೆಯಲ್ಲಿ ಆತ ಭೇಟಿಯಾದದ್ದು ಸೂಫಿ ಸಂತರುಗಳನ್ನು. ಶಾಜಲಾಲ್, ಸಯೀದ್ ಮೂಸಾ ಆಶಿಕ್‍ನ್‍ರನ್ನು ಕಂಡ. “ನನ್ನನ್ನು ಹರಸಿರಿ” ಎಂದ. “ನೀನು ಹಿಂದೂಸ್ಥಾನವನ್ನು ಗೆದ್ದು, ಜನ್ಮಸ್ಥಾನದ ದೇಗುಲ ಕೆಡವಿ ಮಸೀದಿ ಕಟ್ಟುವಿಯಾಗಿ ವಚನಕೊಟ್ಟರೆ ಮಾತ್ರ ಆಶೀರ್ವಾದ” ಎಂದ ಆಶಿಕನ್. “ಹಾಗೆಯೇ ಆಗಲಿ” ಎಂದ ಸಂದರ್ಶಕ. ಸೂಫಿ ಸಂತರ ಆಶೀರ್ವಾದ ಹೊತ್ತು ಹಿಂದೂಸ್ಥಾನ ಗೆದ್ದು, ಮಸೀದಿ ಕಟ್ಟುವ ದೀಕ್ಷೆ ಪಡೆದು ಹಿಂದಕ್ಕೆ ಹೋದವನೇ ಬಾಬರ್! ಇದು ಜರಗಿದ್ದು ಕ್ರಿ.ಶ.1525ರ ಹಾಗೆ. ಮೊಘಲರ ರಾಜ ಈ ಬಾಬರ್. ದಂಡುಕಟ್ಟಿಕೊಂಡು ಬಂದು ಭಾರತದ ಮೇಲೆ ದಾಳಿ ನಡೆಸಿದ. ಉತ್ತರ ಭಾರತದ ಹೆಚ್ಚಿನೆಲ್ಲ ಪ್ರದೇಶ ಗೆದ್ದು ಮಾತುಕೊಟ್ಟ ಹಾಗೆ ಹಿಂದೂಸ್ಥಾನವನ್ನೇ ಗೆದ್ದೆ ಎಂದು ಬೀಗಿದ. ಅವನ ಸೇನಾಪತಿ ಮೀರ್ ಬಖೀ 1528ರಲ್ಲಿ ಅಯೋಧ್ಯೆಗೆ ಬಂದ. ಜನ್ಮಸ್ಥಾನದಲ್ಲಿದ್ದ ದೇವಾಲಯವನ್ನು ಬಾಬರ್ ಆಣತಿ ಪ್ರಕಾರ ಕೆಡವಿ ಅಲ್ಲೊಂದು ಮಸೀದಿ ಕಟ್ಟಿಬಿಟ್ಟ. ಇದಕ್ಕೆ “ಮಸ್ಜದ್ – ಈ – ಜನ್ಮಸ್ಥಾನ್” ಎಂದು ಹೆಸರಾಯಿತು. ಅದೇ ಬಾಬ್ರಿ ಮಸೀದಿ ಎಂದು ಕರೆಸಿಕೊಂಡಿತು. ಸೂಫಿ ಸಂತರಿಗೆ ಕೊಟ್ಟ ವಚನವನ್ನು ಬಾಬರ್ ಪಾಲಿಸಿದ್ದ. ಗುರು ಸಯೀದ್ ಮೂಸಾ ಆಶಿಕನ್‍ನ ಗೋರಿ ಸಹ ಅಲ್ಲೇ ಪಕ್ಕದಲ್ಲೇ ಕಟ್ಟಿಬಿಟ್ಟ. ದೇಗುಲ ನಾಶವಾದರೂ ಹಿಂದೂ – ಮುಸ್ಲಿಮರು ಇಬ್ಬರೂ ಈ ಸ್ಥಳ ಸಂದರ್ಶಿಸಿ ಪೂಜೆ ಸಲ್ಲಿಸುತ್ತಲೇ ಇದ್ದರು. ಹಿಂದೂಗಳಿಗೆ ಇದು ರಾಮಜನ್ಮಸ್ಥಾನ – ಅತ್ಯಂತ ಪವಿತ್ರ. ಗರುಡ ಪುರಾಣದ ಪ್ರಕಾರ ಭಾರತದಲ್ಲಿ ಮೋಕ್ಷ ದೊರೆಯುವ ಸಪ್ತ ಕ್ಷೇತ್ರಗಳಲ್ಲಿ ಅಯೋಧ್ಯೆಯೂ ಒಂದು.

 

ಔರಂಗಜೇಬ ಕೆಡವಿದನೇ ?

ಇದು ಒಂದು ಐತಿಹ್ಯವಾದರೆ – ಇನ್ನೊಂದು ಐತಿಹ್ಯ ಪ್ರಕಾರ ಹಿಂದೂ ದೇಗುಲಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ ಔರಂಗಜೇಬನೇ ಅಯೋಧ್ಯೆಯ ದೇವಾಲಯ ಕೆಡವಿ ಅಲ್ಲಿ ಮಸೀದಿ ಕಟ್ಟಿದ್ದು! ಇವೆರಡರಲ್ಲಿ ಸತ್ಯ ಯಾವುದೋ ಶ್ರೀರಾಮನೇ ಬಲ್ಲ. ಆದರೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನಗಳಿಂದ ಕಂಡುಬಂದ ಖಚಿತ ಮಾಹಿತಿ – ಹಿಂದೊಮ್ಮೆ ದೇವಾಲಯವಿದ್ದ ಜಾಗದಲ್ಲೇ ಈ ಮಸೀದಿಯನ್ನು ಕಟ್ಟಲಾಗಿತ್ತು ಎಂತ. ರಾಮ ಹುಟ್ಟಿದ್ದೆಂಬ ಈ ಜಾಗದ ಎತ್ತರದ ದಿಣ್ಣೆಯ ಮೇಲೆ ಬಾಬ್ರಿ ಮಸೀದಿ ಇತ್ತು. ಅದಕ್ಕೆ ರಾಮದುರ್ಗ ಅಥವಾ ರಾಮ್‍ಕೋಟ್ (ರಾಮನ ಕೋಟೆ) ಎಂದೂ ಕರೆಯಲಾಗುತ್ತಿತ್ತು.

ಈ ಅಯೋಧ್ಯೆಗೆ ಕ್ರಿ.ಪೂ.ದಲ್ಲಿ ಬುದ್ಧನ ಕಾಲದಲ್ಲಿದ್ದ ಹೆಸರು ‘ಸಾಕೇತ”. ರಾಮನ ನಿರ್ಯಾಣದ ನಂತರ ಅಯೋಧ್ಯೆ ಹಾಳುಬಿತ್ತು. “ರಘುವಂಶ”ದ ಪ್ರಕಾರ ರಾಮನ ಪುತ್ರ ಕುಶ ಅದನ್ನು ಪುನರುಜ್ಜೀವನಗೊಳಿಸಿದ.

 

ರಾಮ, ಸೀತೆ ಮೂರ್ತಿ ಪ್ರತ್ಯಕ್ಷ

ಬಾಬ್ರಿ ಮಸೀದಿ ಕಟ್ಟಿದ ಮೇಲೂ ಮುಸ್ಲಿಮರು ಮಸೀದಿಯ ಒಳಗೆ, ಹಿಂದೂಗಳು ಮಸೀದಿಯ ಹೊರಗೆ ಆದರೆ ಕಂಪೌಂಡಿನೊಳಗೇ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಬ್ರಿಟಿಷರು ಉತ್ತರಪ್ರದೇಶದ ಆಳ್ವಿಕೆ ತಕ್ಕೊಂಡ ನಂತರ ಘರ್ಷಣೆ ತಪ್ಪಿಸಲು ಎರಡು ಜಾಗಗಳ ನಡುವೆ ಕಂಬಿ (ಬೇಲಿ)ಹಾಕಿಬಿಟ್ಟರು. ರಾಮ ಜನ್ಮಭೂಮಿ ಕುರಿತ ಪ್ರಥಮ ಘರ್ಷಣೆ 1850ರಲ್ಲಿ ಹನುಮಾನ್ ಘಾಟ್ ಬಳಿಯ ಮಸೀದಿಯ ಹತ್ತಿರ ನಡೆಯಿತು. ಆಗ ಬಾಬ್ರಿ ಮಸೀದಿಗೆ ದಾಳಿ ಮಾಡಿದ ಜನ, ಜನ್ಮಭೂಮಿಗೆ ಬೇಡಿಕೆಯಿಟ್ಟರು. ಆಂಗ್ಲ ಸರಕಾರ ಆಗದು ಎಂದಿತ್ತು. 1946ರಲ್ಲಿ ಹಿಂದೂ ಮಹಾಸಭಾದ ಅಂಗವಾದ ಅಖಿಲ ಭಾರತೀಯ ರಾಮಾಯಣ ಮಹಾಸಭಾ ಚಳವಳಿ ಆರಂಭಿಸಿತು. 1949ರಲ್ಲಿ ಗೋರಖನಾಥ ಮಠದ ಸಂತ ದಿಗ್ವಿಜಯನಾಥ ಈ ಆಂದೋಲನಕ್ಕೆ ಸೇರಿಕೊಂಡರು. (ಈಗ ಅದೇ ಪಂಥದ ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿ!) ಈ ಸಂತ 9 ದಿನಗಳ ಕಾಲ ರಾಮಚರಿತ ಮಾನಸ ಸಂಕೀರ್ತನ ಜರಗಿಸಿದ್ದ. ಅದರ ಅಂತ್ಯಕ್ಕೆ ಭಕ್ತಾಭಿಮಾನಿಗಳು ಮಸೀದಿ ಆವರಣ ಭೇದಿಸಿ ಹೊಕ್ಕು ರಾಮ, ಸೀತೆಯರ ಮೂರ್ತಿಗಳನ್ನು ಇಟ್ಟುಬಿಟ್ಟರು! ಅವು ಪವಾಡ ಸದೃಶವಾಗಿ ಅಲ್ಲಿ ಪ್ರತ್ಯಕ್ಷವಾಗಿವೆ ಎಂದು ಜನಕ್ಕೆ ಹೇಳಿದರು. ಇದು ನಡೆದದ್ದು 1949ರ ದಶಂಬರ 22ರಂದು.

 

ನೆಹರುಗೆ ಕೋಪ – ಕೆ.ಕೆ.ನಾಯರ್ ಪ್ರತಾಪ

ಪ್ರಧಾನಿ ಜವಾಹರಲಾಲ್ ನೆಹರು ಇದನ್ನು ಕೇಳಿ ಸಿಟ್ಟಾಗಿಬಿಟ್ಟರು. ರಾಮ, ಸೀತೆಯ ಮೂರ್ತಿಗಳನ್ನು ತೆಗೆಯಿರಿ ಎಂದು ಆದೇಶಿಸಿಬಿಟ್ಟರು. ಆದರೆ ಸ್ಥಳೀಯ ಅಧಿಕಾರಿಯಾಗಿದ್ದ ಕೆ.ಕೆ.ನಾಯರ್ ಒಪ್ಪಲೇ ಇಲ್ಲ. ಮೂರ್ತಿಗಳನ್ನು ತೆಗೆದರೆ ಮತೀಯ ಗಲಭೆಗಳಾಗುತ್ತವೆ ಎಂದು ದಿಟ್ಟತನ ಮೆರೆದು ಆದೇಶ ನಿರಾಕರಿಸಿಬಿಟ್ಟ. ಪರಿಣಾಮವಾಗಿ ಪೋಲೀಸರು ಇಡೀ ಆವರಣಕ್ಕೇ ಬೀಗ ಜಡಿದರು. ಹಾಗಾಗಿ ಹಿಂದೂಗಳಿಗೂ, ಮುಸ್ಲಿಮರಿಗೂ ಅಲ್ಲಿಗೆ ಪ್ರವೇಶವೇ ಇಲ್ಲದಂತಾಯಿತು. ಅರ್ಚಕರಿಗೆ ಮಾತ್ರ ರಾಮಪೂಜೆಗೆ ಅವಕಾಶ ಕೊಟ್ಟಿದ್ದರು. ಮಸೀದಿ ಹೀಗೆ ದೇವಾಲಯವಾಯಿತು. ಇದರಿಂದಾಗಿ ಸುನ್ನಿ ವಕ್ಫ್‍ಬೋರ್ಡ್, ಅಖಿಲಭಾರತೀಯ ರಾಮಾಯಣ ಮಹಾಸಭಾ ಸಿವಿಲ್ ದಾವೆಗಳನ್ನು ಸ್ಥಳೀಯ ಕೋರ್ಟಿನಲ್ಲಿ ಹೂಡಿದರು. ಅದು “ವಿವಾದಿತ ಜಾಗ” ಎಂದಾಯಿತು. ಬೀಗಮುದ್ರೆ ಮುಂದರಿಯಿತು. 

1964ರಲ್ಲಿ ವಿಶ್ವಹಿಂದೂ ಪರಿಷತ್ತು ಸ್ಥಾಪನೆಯಾಯಿತು. ಗೋರಖನಾಥ ಮಠ ಅದರೊಂದಿಗೆ ಕೈಜೋಡಿಸಿತು. ಬಾಬ್ರಿ ಮಸೀದಿ ಜಾಗಕ್ಕೆ ಬೇಡಿಕೆ ತೀವ್ರವಾಯಿತು. ದಿಟ್ಟತನ ತೋರಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಕೆ.ನಾಯರ್‍ರನ್ನು ಕೆಲಸದಿಂದ ವಜಾ ಮಾಡಿಬಿಟ್ಟರು. ಆದರೆ ಆತ ಸ್ಥಳೀಯ ಹೀರೋ ಆಗಿ ಮೆರೆದುಬಿಟ್ಟ. ನಂತರ ಭಾರತೀಯ ಜನಸಂಘ ಸೇರಿ ರಾಜಕಾರಣಿಯೂ ಆದ.

 

ಕರಸೇವಕರ ಮಾರಣಹೋಮ

1980ರಲ್ಲಿ ಜನಸಂಘ ಹೋಗಿ ಬಿಜೆಪಿಯಾಯಿತು. ವಿಶ್ವಹಿಂದೂಪರಿಷತ್ ಜತೆಗೂಡಿ ರಾಮಜನ್ಮಭೂಮಿ ಮುಕ್ತಿಗೆ ಆಂದೋಲನ ಶುರುಮಾಡಿತು. 1986ರಲ್ಲಿ ಓರ್ವ ಜಿಲ್ಲಾ ಮ್ಯಾಜೆಸ್ಟ್ರೇಟರು ಬೀಗ ತೆಗೆದುಹಾಕಿ ಗೇಟು ತೆರೆದು ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟರು. ಆಂದೋಲನಕ್ಕೆ ಇನ್ನಷ್ಟು ಬಲ ಬಂತು. 1990 ಸೆಪ್ಟೆಂಬರ್‍ದಲ್ಲಿ ಬಿಜೆಪಿ ಅಧ್ಯಕ್ಷ ಲಾಲ್‍ಕೃಷ್ಣ ಅಡ್ವಾಣಿ ದೇಶಾದ್ಯಂತ “ರಥಯಾತ್ರೆ” ಕೈಗೊಂಡರು. “ಮುಸ್ಲಿಮರಿಗೆ ಮಕ್ಕಾ, ಕ್ರಿಶ್ಚಿಯನ್ನರಿಗೆ ವ್ಯಾಟಿಕನ್ ಇದ್ದಂತೆ ಹಿಂದೂಗಳಿಗೆ ಅಯೋಧ್ಯಾ” ಎಂದರು. ಅವರು ಹೋದಲ್ಲೆಲ್ಲಾ ಮತೀಯ ಗಲಭೆಗಳಾದುವು. ಕರಸೇವಕರು ಅಯೋಧ್ಯೆಗೆ ನುಗ್ಗಿದರು. ಉ.ಪ್ರ. ಪೋಲೀಸರು ಅವರನ್ನು ತಡೆದು ಗುಂಡು ಹಾರಿಸಿದಾಗ ಕರಸೇವಕರು ನೂರಾರು ಸಂಖ್ಯೆಯಲ್ಲಿ ಹತರಾದರು. ಬಿಹಾರದಲ್ಲಿ ಆದ್ವಾನಿ ಬಂಧನವಾಯಿತು. ಆಗಿನ ಪ್ರಧಾನಿ ವಿ.ಪಿ.ಸಿಂಗ್ ದುರ್ಬಲರಾಗಿದ್ದೇ ಇದಕ್ಕೆ ಕಾರಣ ಎಂದ ಬಿಜೆಪಿ ಕೇಂದ್ರಕ್ಕೆ ಬೆಂಬಲ ಹಿಂದೆಗೆಯಿತು.

1991ರ ಚುನಾವಣೆಯಲ್ಲಿ ಉತ್ತರಪ್ರದೇಶ ಬಿಜೆಪಿ ತೆಕ್ಕೆಗೆ ಬಂತು. ಕಲ್ಯಾಣಸಿಂಗ್ ಮುಖ್ಯಮಂತ್ರಿಯಾದರು. ರಾಮದೇಗುಲ ನಿರ್ಮಿಸಲು 2.77 ಎಕ್ರೆ ಜಾಗ ರಾಮಜನ್ಮಭೂಮಿ ನ್ಯಾಸ ಟ್ರಸ್ಟ್‍ಗೆ ಗೇಣಿಗೆ ಕೊಟ್ಟರು. ಆದರೆ ಕಟ್ಟಡ ಕಟ್ಟದಂತೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿತು.

 

ನೋಡನೋಡುತ್ತಲೇ ಉರುಳಿದ ಮಸೀದಿ

1992ರಲ್ಲಿ ರಾಮಜನ್ಮಭೂಮಿ ವಿಮುಕ್ತಿಗೆ ಒತ್ತಡ ಹೆಚ್ಚಿತು. ಕರಸೇವಕರು ದೇಶಾದ್ಯಂತದಿಂದ ಅಯೋಧ್ಯೆಯತ್ತ ಹೆಜ್ಜೆ ಹಾಕಿದರು. ಸುಪ್ರೀಂಕೊರ್ಟಿನಲ್ಲಿ ಬಾಬ್ರಿ ಮಸೀದಿ ರಕ್ಷಣೆಗೆ ಅರ್ಜಿ ದಾಖಲಾಯಿತು. ಯಥಾಸ್ಥಿತಿ ಕಾಪಾಡುವುದಾಗಿ, ಬಾಬ್ರಿ ಮಸೀದಿ ಕೆಡವದಂತೆ ತಡೆಯುವುದಾಗಿ ಮುಖ್ಯಮಂತ್ರಿ ಕಲ್ಯಾಣಸಿಂಗ್ ಸುಪ್ರೀಂಕೋರ್ಟಿಗೆ ವಚನ ನೀಡಿದರು. ಹೆಚ್ಚುಕಮ್ಮಿಯಾದರೆ ನಿಮ್ಮನ್ನೇ ಹೊಣೆ ಮಾಡುತ್ತೇವೆ ಎಂದು ಗದರಿತು ಸುಪ್ರೀಂಕೋರ್ಟು. ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದದ್ದು ಕರ್ನಾಟಕದ ಎಮ್.ಎನ್.ವೆಂಕಟಾಚಲಯ್ಯ.

ಕರಸೇವಕರ ಸಂಖ್ಯೆ ಒಂದೂವರೆಲಕ್ಷದಷ್ಟಾಯಿತು. ಮುನ್ನುಗ್ಗುತ್ತಲೇ ಇದ್ದರು. ಬಿಜೆಪಿ, ಆರ್‍ಎಸ್‍ಎಸ್, ಶಿವಸೇನೆ, ವಿಹಿಂಪ ನಾಯಕರು ಹುರಿದುಂಬಿಸುತ್ತಲೇ ಇದ್ದರು. ಪಿ.ವಿ.ನರಸಿಂಹರಾಯರ ಕಾಂಗ್ರೆಸ್ ಸರಕಾರ ಸಂಧಾನ ಮಾತುಕತೆ ನಡೆಸುತ್ತಲೇ ಇತ್ತು. ಸುಪ್ರೀಂಕೋರ್ಟು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಲೇ ಇತ್ತು. ಆದರೂ 1992 ದಶಂಬರ್ 6ರಂದು ಕರಸೇವಕರು ಮುನ್ನುಗ್ಗಿದ ರಭಸಕ್ಕೆ ಉ.ಪ್ರ.ಪೋಲೀಸರ ಶಕ್ತಿ ಸಾಲದಾಯಿತು. ಅರೆ ಸೈನಿಕ ಪಡೆ ಕಳುಹಿಸುತ್ತೇವೆಂದ ನರಸಿಂಹರಾವ್ ಸರಕಾರ ಸೇನೆ ನಿಯೋಜನೆ ಮಾಡದೇ ಇರಲು ನಿರ್ಧರಿಸಿತು. ಪರಿಣಾಮವಾಗಿ ಎಲ್ಲ ಅಡತಡೆಗಳನ್ನೂ ಮೀರಿ ಕರಸೇವಕರು ಹಾರೆ, ಗುದ್ದಲಿ, ಪಿಕಾಸಿ ಹಿಡಿದು ಬಾಬ್ರಿ ಮಸೀದಿಯತ್ತ ಸಾಗಿದ್ದೇ ಸಾಗಿದ್ದು, ಮಸೀದಿ ಕೆಡವಿದ್ದೇ ಕೆಡವಿದ್ದು. ಸಮಸ್ತ ಮಾಧ್ಯಮದ ಮುಂದೆಯೇ ಬಾಬ್ರಿ ಮಸೀದಿ ಧ್ವಂಸ! ಮೂರು ಗುಮ್ಮಟಗಳ ಐತಿಹಾಸಿಕ ಮಸೀದಿ ನೆಲಕ್ಕುರುಳಿತು.

ಸುಪ್ರೀಂಕೋರ್ಟು ಕೋಪದಿಂದ ಹೂಂಕರಿಸಿತು. ನಂತರ ಕಲ್ಯಾಣ್‍ಸಿಂಗ್ ರಾಜೀನಾಮೆಕೊಟ್ಟರು. ಆಮೇಲೆ ನಡೆದ ಮತೀಯ ಗಲಬೆಗಳಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಜನ ಸತ್ತರು. ಉಗ್ರಗಾಮಿಗಳಿಗೆ ಭಾರತ ದ್ವೇಷಕ್ಕೆ ಇದೇ ಕಾರಣವಾಯಿತು. ನರಸಿಂಹರಾವ್ ಸರಕಾರ ಬಾಬ್ರಿ ಮಸೀದಿ ಧ್ವಂಸ ತನಿಖೆಗೆ 1992 ದಶಂಬರ್ 16ರಂದು ಲಿಬರ್ಹಾನ್ ಆಯೋಗ ನೇಮಿಸಿತು. ಬಿಜೆಪಿ, ಆರ್‍ಎಸ್‍ಎಸ್, ವಿಹಿಂಪ, ಶಿವಸೇನೆ ನಾಯಕರ ಪ್ರಚೋದನಕಾರಿ ಭಾಷಣಗಳೂ ಕಾರಣ ಎಂದಿತು ಆಯೋಗ. ಅವರುಗಳ ಮೇಲೆ ಕಾನೂನುಕ್ರಮ ಜರಗಿಸಲಾಯಿತು.

 

ದಾವೆಗಳು – ತೀರ್ಪು – ಅಪೀಲು

ಈ ಮಧ್ಯೆ 1950ರಲ್ಲಿ ಅಲ್ಲಹಾಬಾದ್ ಹೈಕೋರ್ಟಿನಲ್ಲಿ ಗೋಪಾಲಸಿಂಗ್ ಎಂಬವರ ದಾವೆ, 1959ರಲ್ಲಿ ನಿರ್ಮೋಹಿ ಅಖಾಡದ ದಾವೆ, ಮುಸ್ಲಿಂ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್ ದಾವೆಗಳು ಬಿದ್ದಿದ್ದುವು. 2002ರಲ್ಲಿ ತನಿಖೆ ಆರಂಭವಾಗಿತ್ತು. 1885ರಲ್ಲೇ ಫೈಜಾಬಾದ್ ಜಿಲ್ಲಾ ನ್ಯಾಯಾದೀಶರು ಜಾಗಕ್ಕೆ ಬೇಟಿ ನೀಡಿ “ಹಿಂದೂಗಳ ಪವಿತ್ರ ಜಾಗದ ಮೇಲೆ ಮಸೀದಿ ಕಟ್ಟಿದ್ದು ದುರದೃಷ್ಟಕರ. ಆದರೆ 356 ವರ್ಷ ಸಂದ ಕಾರಣ ತಡವಾಗಿದೆ” ಎಂದು ಮಹಾಂತ ರಘುವಿರರಾಮ್ ಅರ್ಜಿಯನ್ನು ವಜಾ ಮಾಡಿದ್ದರು.

2010 ಸೆಪ್ಟೆಂಬರ್ 30ರಂದು ಅಲ್ಲಹಾಬಾದ್ ಹೈಕೊರ್ಟಿನ ಮೂವರು ನ್ಯಾಯಮೂರ್ತಿಗಳ ಪೀಠ ಐತಿಹಾಸಿಕ ತೀರ್ಪು ನೀಡಿತು. ವಿವಾದಿತ ಜಾಗದಲ್ಲಿ 1/3 ಅಂಶ ರಾಮಲಲ್ಲಾ (ಹಿಂದೂ ಮಹಾ ಸಭಾ) ಗೆ, 1/3 ಇಸ್ಲಾಮಿಕ್ ಸುನ್ನಿ ವಕ್ಫ್ ಬೋರ್ಡಿಗೆ, 1/3 ನಿರ್ಮೋಹಿ ಅಖಾಡಕ್ಕೆ ಎಂದಿತು. ಅದರ ಮೇಲೆ ಸುಪ್ರೀಂ ಕೋರ್ಟಿಗೆ ಅಪೀಲಾಯಿತು.

ಪ್ರಕರಣ ಸುಪ್ರೀಂ ಕೋರ್ಟು ಮುಂದೆ ಬಂದಾಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ.ಎಸ್. ಖೇಹರ್ “ಇದು ಸೂಕ್ಷ್ಮ ಸಂಗತಿ, ಕೋರ್ಟಿನ ಹೊರಗೆ ರಾಜಿಯಿಂದ ಇತ್ಯರ್ಥ ಮಾಡುವ, ಬೇಕಾದರೆ ನಾನೂ ಬರುತ್ತೇನೆ” ಎಂದಿದ್ದರು. ಈ ಮಧ್ಯೆ ಯೋಗಿ ಆದಿತ್ಯನಾಥ್ ಅಯೋಧ್ಯೆಯ ರಾಮಾಯಣ ಮ್ಯೂಜಿಯಮ್‍ಗೆ ಜಾಗ ನೀಡಿದ್ದರು.

 

ಸುಖಾಂತವಾದ ಸಂಗ್ರಾಮ

ಅಂತೂ ಸುದೀರ್ಘವಾದ ವಾದ ವಿವಾದಗಳನ್ನು ಆಲಿಸಿದ ಭಾರತದ ಸರ್ವೋಚ್ಚ ನ್ಯಾಯಾಲಯದ ಪಂಚ ನ್ಯಾಯಮೂರ್ತಿಗಳ ಪೀಠ 2019ರ ನವಂಬರ್ 9ರಂದು ಐತಿಹಾಸಿಕ ತೀರ್ಪು ನೀಡಿ 500 ವರ್ಷಗಳ “ರಾಮ ಸಂಗ್ರಾಮ”ಕ್ಕೆ ಇತಿಶ್ರೀ ಹಾಕಿತು. ಮಂದಿರ ಇದ್ದಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು ಎಂದ ನ್ಯಾಯಾಲಯ 2.77 ಎಕ್ರೆ ಜಾಗದಲ್ಲಿ ಮತ್ತೆ ಶ್ರೀ ರಾಮ ಮಂದಿರ ಕಟ್ಟಲು 3 ತಿಂಗಳಲ್ಲಿ ಟ್ರಸ್ಟ್ ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿತು. ಮಸೀದಿಗಾಗಿ ಬೇರೆ 5 ಎಕ್ರೆ ಜಾಗ ನೀಡಲು ಉತ್ತರಪ್ರದೇಶ ಸರಕಾರಕ್ಕೆ ಆದೇಶಿಸಿತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಜತೆ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಡಿ.ವೈ.ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಝೀರ್ ಹೀಗೆ ಒಮ್ಮತದ ತೀರ್ಪು ನೀಡಿ ದೇಶಾದ್ಯಂತ ರಾಮಭಕ್ತರು ಹುಚ್ಚೆದ್ದು ಕುಣಿದಾಡುವಂತೆ ಮಾಡಿದರು. ಆಕ್ರೋಶಿತರು ಪುನರ್ ವಿಮರ್ಶೆಗಾಗಿ ಸಲ್ಲಿಸಿದ 18 ಅರ್ಜಿಗಳನ್ನೂ ನ್ಯಾಯಾಲಯ ದಶಂಬರ್ 12ರಂದು ವಜಾ ಮಾಡಿತು. ಟ್ರಸ್ಟ್ ಸ್ಥಾಪನೆ ಆಯಿತು. ರಾಮಮಂದಿರಕ್ಕೆ ಪ್ರಧಾನಿ ಮೋದಿ 2020ರ ಆಗಸ್ಟ್ 5ರಂದು ಶಿಲಾನ್ಯಾಸ ಮಾಡಿದರು. ಭರದಿಂದ ಕಾಮಗಾರಿಗಳು ನಡೆದುವು.

ಶ್ರೀರಾಮ ಜನಿಸಿದನೆಂದು ನಂಬಲಾದ ಮೃಗಶಿರಾ ನಕ್ಷತ್ರ, ಅಮೃತ ಸಿದ್ಧಿ ಯೋಗ ಮತ್ತು ಸರ್ವತ್ರ ಸಿದ್ಧಿ ಯೋಗ ಕೂಡುವ 2024ರ ಜನವರಿ 22ರ ಅಭಿಜಿತ್ ಮುಹೂರ್ತದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಿ ಪ್ರಾಣಪ್ರತಿಷ್ಠೆ ಸಹಾ ನಡೆಯಲಿದೆ. ಅಂದು ದೇಶಾದ್ಯಂತ ದೀಪಾವಳಿ ಆಚರಿಸಲು ಕರೆ ನೀಡಲಾಗಿದೆ.

ವಿಶೇಷ ಲೇಖನ : ಎ.ಎಸ್.ಎನ್.ಹೆಬ್ಬಾರ್, ವಕೀಲರು, ಕುಂದಾಪುರ. 

 
 
 
 
 
 
 
 
 
 
 

Leave a Reply