Janardhan Kodavoor/ Team KaravaliXpress
26.6 C
Udupi
Sunday, November 27, 2022
Sathyanatha Stores Brahmavara

ಜಾನಪದ’ ಮನಸ್ಸಿನ ‘ಜಗನ್ನಾಥ

ಚಾಂದ್ರ ಕೃಷ್ಣಾಷ್ಟಮಿ:ಕೃಷ್ಣ ಸ್ಮರಣೆ
ಮೋಹಕ ಮಹಿಮಾತಿಶಯದ ವಿಸ್ಮಯ ಪುರುಷ ಕೃಷ್ಣನ‌ ಬದುಕು‌ ಅದ್ಭುತವೆನಿಸಿದಾಗ , ಅಗಾಧ ಹರವನ್ನು ಪಡೆದು ಕೊಂಡಾಗ ಲೋಕ ಕ್ಷೇಮಾರ್ಥಕ್ಕೆ ತೊಡಗಿಕೊಂಡಾಗ ಸಹಜವೆಂಬಂತೆ ಸಜ್ಜನರು ಉದ್ಗರಿಸಿದ್ದು “ಕೃಷ್ಣಾವತಾರ ಪರಿಪೂರ್ಣ ಅವತಾರವೆಂದು” ಈ ಪರಿಪೂರ್ಣತೆಯು ಒಂದು ಸಾಧನೆಯಾಗಿ ,ಜಗನ್ಮೋಹಕವಾಗಿ‌ ಸ್ಥಾಪನೆಯಾಗುವುದು ಜನಸಾಮಾನ್ಯತೆಯ ಮುಗ್ಧ ಮನಸ್ಸು ಗಳೊಂದಿಗೆ – ಜನಪದರ ಸಾಂಗತ್ಯದಲ್ಲಿ. ಬಹುಶಃ ಪರಿಪೂರ್ಣತೆಯು ಪರಾಕಾಷ್ಠೆಯನ್ನು ತಲುಪಲು‌ ದೇಸಿ ಪರಿಸರವೇ ಪೂರಕ ವಾಗುತ್ತದೆ. ಈ ಮನಃಸ್ಥಿತಿಯ ವ್ಯಕ್ತಿತ್ವವೇ ಕೃಷ್ಣನಾಗಿ ಆಕರ್ಷಿಸಲ್ಪಡುತ್ತದೆ , ‘ಜಗನ್ನಾಥ’ ಎಂಬ ಎತ್ತರಕ್ಕೆ ಏರಿಬಿಡುತ್ತದೆ.
ಕೃಷ್ಣ ಬೆಳೆದದ್ದು ,ಆಟವಾಡಿದ್ದು , ಅಪೂರ್ವ ಸಾಧನೆಗಳನ್ನು ಮಾಡಿದ್ದು ಆ ಮೂಲಕ‌ ಜನಜನಿತನಾಗಿ ಜಗದೋದ್ದಾರನೆನ್ನಿಸಿದ್ದು ಗೋಪಾಲಕರ ನಡುವೆ, ಗೋ ಸಮೂಹದ ಸನ್ನಿಧಿಯಲ್ಲಿ, ಸೆಗಣಿ -ಗಂಜಳಗಳ ಸುವಾಸನೆಯಲ್ಲಿ. ನುಡಿಸಿದ್ದು ಬಿದಿರಿನ ಓಟೆಯನ್ನು, ಧರಿಸಿದ್ದು ನವಿಲುಗರಿಯನ್ನು. ಬಿದಿರ ಓಟೆ ಮುರಲಿಯಾಗಿ ಉಲಿದಾಗ ಆ ಅನುರಣನ‌ ಅಥವಾ ಸುಶ್ರಾವ್ಯ ನಾದ ಸಮ್ಮೋಹ ನವಾಯಿತು. ಗೋವುಗಳು – ಗೋಪಾಲಕರು – ಗೋಪಿಯರು ಮಂತ್ರಮುಗ್ಧರಾದರು, ಆತ್ಮೀಯ ಆನಂದ ಪರವಶರಾದರು. ಕೃಷ್ಣ ಗೋಕುಲವನ್ನು ತೊರೆದು ಮಧುರೆಗೆ ಹೊರಟಾಗ ತನ್ನ ನೆನಪಾಗಿ ಗೋಕುಲದಲ್ಲಿ ಉಳಿಸಿದ್ದು ಕೊಳಲನ್ನು.ತಾನು ಜೊತೆಗೆ ಒಯ್ದದದ್ದು  ನವಿಲುಗರಿಯನ್ನು ಮತ್ತು ‘ಜನಪದ’ ಮನಸ್ಸನ್ನು .
ಆದರೆ ಮುಂದಿನ ಕೃಷ್ಣಕಥೆಯ ಯಾವ ದೃಶ್ಯವನ್ನೆ ಕಲಾವಿದ ಚಿತ್ರಿಸಿದರೂ ಕೃಷ್ಣನ ಕೈಯಲ್ಲಿ ಕೊಳಲು ಅನಿವಾರ್ಯ. ಇದು ಮೂಲದ ಜನಪದರ ಮನಸ್ಸುಗಳು ಕೃಷ್ಣನನ್ನು ಅನುಸರಿಸಿದ ಸಂಕೇತವೇ?  ಅಥವಾ ಕೃಷ್ಣ ಅದನ್ನು ಒಪ್ಪಿದ್ದೇ  ಆಗಿರಬಹುದಲ್ಲ . ಅಂದರೆ ಕೃಷ್ಣ ಚಿತ್ರದ ಕಲಾವಿದ ಒಬ್ಬ ಜನಪದನೇ ತಾನೆ? ಗೋಕುಲವನ್ನು ಬಿಟ್ಟ ಬಳಿಕ ಕೃಷ್ಣ ಕೊಳಲು ಊದಿಲ್ಲ. ಆದರೆ ಮರೆತಿಲ್ಲ ಎಂದು ಕೃಷ್ಣಪ್ರೀತಿಯ ಮಂದಿಗೆ ಕೊಳಲು ಇಲ್ಲದ ಕೃಷ್ಣನನ್ನು ಕಲ್ಪಿಸಲಾಗಲೇ ಇಲ್ಲ. ಕೃಷ್ಣನ ಸಮ್ಮೋಹನ ಸಾಮರ್ಥ್ಯಕ್ಕೆ ಕೂಡಿ ಕೊಂಡದ್ದು ಜಾಣ್ಮೆ, ಚಾಣಾಕ್ಷತೆ, ದೃಢವಾದ ಧೀ ಶಕ್ತಿ, ಅತಿಶಯ ಆತ್ಮವಿಶ್ವಾಸ ಇವುಗಳೇ ಕಾರಣವಾಗಿ ಕೃಷ್ಣ ಯುಗಾಂತದಲ್ಲಿ  ಪೂರ್ಣಪುರುಷನಾಗಿ ವಿಜೃಂಭಿಸಿದ. ಆದರೆ ತಾನು ಜನಪದನಾಗಿಯೇ ಉಳಿದ. ಜನ ಸಾಮಾನ್ಯನನ್ನು ಬೆಂಬಲಿಸಿದ, ಅಗತ್ಯಗಳನ್ನು ಪೂರೈಸುತ್ತಾ ರಕ್ಷಣೆ ನೀಡಿದ. ಈ ಕಾರ್ಯಗಳೆಲ್ಲ ಧರ್ಮರಕ್ಷಣೆಯ ಕಾರ್ಯಗಳಾದುವು .ಕೃಷ್ಣ ಧರ್ಮ ಸಂಸ್ಥಾಪಕನಾದ. 
‘ಯಾದವರು ರಾಜತ್ವ ವಂಚಿತರು’ ಎಂಬ ಕಳಂಕವನ್ನು ನಿವಾರಿಸಲು ದ್ವಾರಾವತಿಯ ನಿರ್ಮಾಣ. ಬಳಿಕ ಬಲರಾಮನನ್ನೆ ಅರಸನನ್ನಾಗಿ ಮಾಡಿದ, ತಾನು ತಮ್ಮನಾಗಿಯೇ ಉಳಿದ, ಈ ಸಂದರ್ಭ ಒಂದು ವಿಶಿಷ್ಟ ಮನೋಧರ್ಮವನ್ನು ಪ್ರಕಟಿಸುತ್ತದೆ. ರಾಜಸೂಯಾಧ್ವರದ ಸಂದರ್ಭ ಚಂದ್ರ ವಂಶದ ಪಿತಾಮಹ ಭೀಷ್ಮರಿಂದಲೇ ಕೃಷ್ಣ ಸ್ತುತಿಸಲ್ಪಡುತ್ತಾನೆ, ದೇಶದಾದ್ಯಂತ ಸ್ಥಾಪಿಸ ಲ್ಪಡುತ್ತಾನೆ . ಇದೊಂದು ಕೃಷ್ಣನ ವ್ಯಕ್ತಿತ್ವಕ್ಕೆ ದೊರೆತ ಪ್ರಚಾರ ,ಅದೂ ಆಚಾರ್ಯ ಭೀಷ್ಮರಿಂದ. ಇದು ಒಬ್ಬ ಸಾಮಾನ್ಯ ಜನ ಪದನಿಗೆ ಪ್ರಾಪ್ತಿಯಾದ ಯೋಗ.  ಜನ ಸಮೂಹ ಬಯಸುವ ಸುಖದ ಜೀವನಕ್ಕೆ ದುಡಿಮೆಯೇ ಆಧಾರವೆಂಬ ಸೂತ್ರವನ್ನು ಪ್ರಚುರಪಡಿಸಿದ . ಕ್ಷತ್ರಿಯರಿಗೆ ಯುದ್ಧವೇ ಧರ್ಮ ಸಮ್ಮತವಾದ ಪರಮಗುರಿ ಎಂಬುದನ್ನು ಬೋಧಿಸಿದ. ಧರ್ಮ – ಅಧರ್ಮ, ಕರ್ಮ – ಅಕರ್ಮಗಳ ವಿವರ ವಿಸ್ತಾರವನ್ನು ಲೋಕಧರ್ಮಿಯಾಗಿ ಪ್ರತಿಪಾದಿಸಿ ಹಸ್ತಿನಾವತಿಯಲ್ಲಿ ಧರ್ಮರಾಯನನ್ನು ಚಕ್ರವರ್ತಿ ಎಂದು ಸ್ಥಿರಗೊಳಿಸಿದ. ಆದರೆ ತಾನು ಮಾತ್ರ ಯಾವ  ಅಧಿಕಾರವನ್ನಾಗಲಿ, ಸ್ಥಾನಮಾನವನ್ನಾಗಲಿ ಪಡೆಯದೆ ಅಸಾಮಾನ್ಯ ಹಂತವನ್ನು ಏರಿ‌ ಜಗದ್ವಂದ್ಯನಾದ. ಸಾಮಾನ್ಯ ಗೊಲ್ಲರವನೊಬ್ಬ ಚಂದ್ರವಂಶದ ಚಕ್ರವರ್ತಿ ಪೀಠದ ಮುಂದೆ ಸಂಧಾನಕಾರನಾಗಿ ಕೌರವನಿಗೆ ಬುದ್ಧಿಹೇಳುವ ಧೈರ್ಯ ತೋರು ತ್ತಾನೆ. ಭರತವರ್ಷ ನಿಬ್ಬೆರಗಾಗುತ್ತದೆ.
ನಾಗರಿಕತೆಯ ಪಾಠ~ ಆ ಕಾಲಕ್ಕೆ ನಾಗರಿಕತೆಯ ಪಾಠ ಅಗತ್ಯವಿದ್ದುದು ಗೋಪಾಲಕರಿಗೆ, ಅದೇ ಆತನ ಬಾಲ್ಯದ ಕಾಯಕ ವಾಯಿತು. ವಿಮೋಚನೆಯಿಂದ ರಕ್ಷಣೆಯನ್ನು ಕೊಡುತ್ತಾ ಸದೃಢ ‘ಯಾದವ ಸ್ತೋಮ’ವನ್ನು ರಚಿಸಲು ಕೃಷ್ಣ ಕಷ್ಟಪಟ್ಟ ,ಆ ಮೂಲಕ ಭರತವರ್ಷ ಪೂರ್ತಿ ಒಂದು ಆದರ್ಶವನ್ನು ಸಾರಿದ. ಆರ್ಥಿಕ ಸಬಲತೆ ನಾಗರಿಕತೆಯ ಸ್ಥಿರೀಕರಣಕ್ಕೆ ಹಾಗೂ ಮುಂದುವರಿಕೆಗೆ ಹೇತುವೆಂಬುದನ್ನು ಅರಿತ ಕೃಷ್ಣ ಹೈನುಗಾರಿಕೆಯಂತಹ ಗೋ ಪಾಲನೆ, ಗವ್ಯಗಳ ವಿನಿಮಯದಿಂದ ಅಗತ್ಯಗಳನ್ನು ಪೂರೈಸಿ ಕೊಳ್ಳುವ, ಸ್ವತಂತ್ರವಾಗಿ ಬದುಕುವ ವಿಧಾನವನ್ನು ಅನುಷ್ಠಾನಿಸುವ ಪಥ ನಿರ್ದೇಶಕನಾದ. ಅಣ್ಣ ಬಲರಾಮ ಕೃಷಿಯಿಂದ ಸುಭಿಕ್ಷೆ ಎಂದ. ಸಾಂಕೇತಿಕವಾಗಿ ಹಲಧರನಾದ. ಕೃಷ್ಣನಿಗೆ ಮುರಲಿ, ರಾಮನಿಗೆ ಹಲ-ಮುಸಲಗಳು ಭೂಷಣವಾದುವು. ವಿಫುಲವಾದ ಗೋ ಸಂಪತ್ತು‌ – ಅಕ್ಷಯ ಕೃಷಿ‌ ಲಾಭಗಳು ಗೋಪಾಲಕರ ಉತ್ಕರ್ಷಕ್ಕೆ ಕಾರಣವಾದುವು .ಇದೇ ಮುಂದೆ ಭರತವರ್ಷದಲ್ಲಿ‌ ಸ್ಥಾಯಿಯಾಯಿತು. ಸನಾತನವಾಗಿದ್ದ ಹೈನುಗಾರಿಕೆ ಮತ್ತು ಕೃಷಿ‌ ಮರಳಿ ನೆಲೆಯಾಯಿತು.
ಬಲರಾಮ – ಕೃಷ್ಣರಿಬ್ಬರೂ ಗೋ ಸಂಪತ್ತು ಮತ್ತು ಕೃಷಿ ಸಂಸ್ಕೃತಿಯನ್ನು‌ ಪ್ರೋತ್ಸಾಹಿಸಿದರು ,ಸಾಧಿಸಿ ತೋರಿಸಿದರು. ಇದು ಮಣ್ಣಿನೊಂದಿಗಿನ ಹೋರಾಟ ,ಈ ಸಂಬಂಧ ಜನಪದೀಯವಾದುದು. ಇದು ರಾಮ -ಕೃಷ್ಣರಿಬ್ಬರ ವ್ಯಕ್ತಿತ್ವದ ಒಂದು ಆಯಾಮವಲ್ಲ ಸಮಗ್ರ ಸ್ವರೂಪ. ಕೃಷ್ಣ ಮಹಾಭಾರತದ ಪ್ರಮುಖ ಪಾತ್ರಧಾರಿಯಾದರೂ,  ಗೀತಾಚಾರ್ಯನಾದರೂ ತನ್ನ ಮೂಲದ ಜನಪ ದೀಯ ಮನೋಧರ್ಮವನ್ನು ಸುಪ್ತವಾಗಿ ಇರಿಸಿಕೊಂಡಿದ್ದು ಸಂದರ್ಭಾನುಸಾರ ಪ್ರಕಟಿಸುತ್ತಿದ್ದ. ಎಷ್ಟು‌ ಅನುರಕ್ತನೋ ಅಷ್ಟೇ ವಿರಕ್ತನಾಗುತ್ತಿದ್ದ , ‘ಬಂಧಗಳಿಲ್ಲದ ಕರ್ಮ ನಿರತ’ ಎಂಬುದನ್ನು ಬದುಕಿನುದ್ದಕ್ಕೂ ಸಾಧಿಸಿ ತೋರಿಸುತ್ತಾನೆ. ಭಗವಂತನ ‘ಧರ್ಮಾವತಾರ’ ಎಂದೇ ಕೃಷ್ಣನ ಜನ್ಮವನ್ನು ಋಷಿಮುನಿಗಳು ಕೊಂಡಾಡಿದರು. 
(ಚಿಂತನೆ): ಕಿಷ್ಣ’ನೆಂಬ ಜನಪದ 
ತುಳು ಜನಪದ ಸಾಹಿತ್ಯಗಳಲ್ಲಿ ಕೃಷ್ಣ ಕತೆಗಳೂ ರೋಚಕವಾಗಿ ಮೂಡಿಬಂದಿದೆ .ಈ ಪಾಡ್ದನಗಳಲ್ಲಿ ಕೃಷ್ಣ ಅತಿಮಾನುಷನೆಂಬ ಗೌರವವಿದೆಯಾದರೂ ‘ಜನಪದ’ನೆಂಬ  ಸಲುಗೆಯೂ ಸ್ಪಷ್ಟವಾಗಿದೆ. ‘ಕಂಸಾಲ ಸುರಿಯಾ’ ಪಾಡ್ದನದಲ್ಲಿ‌ : ಕಂಸಾಲ ಸುರಿಯನು ತನ್ನ ತಂಗಿ ಚಿಕ್ಕಿಯಮ್ಮನಿಗೆ ಮದುವೆಗೆ ವರ ಸಿಕ್ಕದಿದ್ದಾಗ ಆನೆಯ ಸೊಂಡಿಲಲ್ಲಿ ಹೂಮಾಲೆ ಕೊಟ್ಟು, ಅದು ಯಾರಿಗೆ ಮಾಲೆ ಹಾಕುತ್ತದೋ ಅವನಿಗೆ ತನ್ನ ತಂಗಿಯನ್ನು‌ ಮದುವೆಮಾಡಿ ಕೊಡುತ್ತೇನೆ ಎಂದು ನಿರ್ಧರಿಸುತ್ತಾನೆ. ಆನೆ ಚಪ್ಪರದ ಮೂಲೆಯಲ್ಲಿ ಕುಳಿತಿದ್ದ ಮುದುಕನೊಬ್ಬನ‌ ಕೊರಳಿಗೆ ಮಾಲೆ ಹಾಕುತ್ತದೆ .’ಈ ಮುದುಕನಿಗೆ ನಿನ್ನನ್ನು ಮದುವೆಮಾಡಿ ಕೊಡಲಾರೆ’ ಎಂದು ಕಂಸಾಲಸುರಿಯನು ಕೋಪಮಾಡಿಕೊಂಡಾಗ ಚಿಕ್ಕಿಯಮ್ಮ ‘ತಲೆಯಲ್ಲಿ ಬರೆದುದನ್ನು‌ಎಲೆಯಿಂದ ಅಳಿಸಲಾಗುತ್ತದೆಯೇ,ನಾನು ಆ ಮುದುಕನನ್ನು ಮದುವೆಯಾಗುತ್ತೇನೆ . ದೇವರು‌ ಆತನನ್ನು ನನಗೋಸ್ಕರ ಕಳುಹಿಸಿದ್ದಾನೆ’ ಎನ್ನುತ್ತಾಳೆ. ಆ ಮುದುಕ ಕೃಷ್ಣನಾಗಿ ಮುಂದೆ ಬಂದು ಆಕೆಯ ಕೈ ಹಿಡಿಯುತ್ತಾನೆ .ಆ ಹುಡುಗಿಯು ಮನಸ್ಸಿನಲ್ಲಿ ಮಾಡಿಕೊಂಡ ನಿರ್ಧಾರವನ್ನು ತಿಳಿದು ಆಕೆಯನ್ನು ಅನುಗ್ರಹಿಸುವುದಕ್ಕಾಗಿಯೇ ಕೃಷ್ಣ ಈ ನಾಟಕವಾಡಿದ .  . 
‘ಗಾಳಿಮ ಬೊಳ್ಳಿಮ’ ಎಂಬ ಪಾಡ್ದನದಲ್ಲಿ‌ಅಣ್ಣಂದ್ರಾಯ ಎಂಬವನ ತಂಗಿಗೆ ಮಕ್ಕಳಾಗದಿದ್ದಾಗ ಕೃಷ್ಣನೇ ಗೋವಳನ ವೇಷ ಧರಿಸಿ ಬಂದು ಆಕೆಯ ಜೊತೆಗೂಡಿ ಆಕೆ ಗರ್ಭಿಣಿಯಾಗುವ ಹಾಗೆ ಮಾಡುತ್ತಾನೆ .ಆಕೆಯ ಹೆರಿಗೆಯಾಗುವಾಗಲೂ ಸೂಲಗಿತ್ತಿಯ ಕೆಲಸಮಾಡಿ ಆಕೆಯ ಸೇವೆ ಮಾಡುತ್ತಾನೆ. ಆದರೆ ನಾಗಸಿರಿ ಪಾಡ್ದನದಲ್ಲಿ ಶ್ರೀಕೃಷ್ಣ ಪತಿವ್ರತೆ ನಾಗಸಿರಿ ಎಂಬಾಕೆಯೊಬ್ಬಳ ಪಾತಿವ್ರತ್ಯ ಪರೀಕ್ಷೆ ಮಾಡಲು ಹೋಗಿ ಆಕೆಯ ಕೋಪಕ್ಕೆ ಪಾತ್ರನಾಗಿ ಶಾಪಕ್ಕೊಳಗಾಗುವ ವರ್ಣನೆ ಇದೆ .ದೇವರಾದರೂ ಪತಿವ್ರತಾ ಶಿರೋಮಣಿಗೆ ಕಿರುಕುಳ ಕೊಟ್ಟರೆ ಅದರ ಫಲ ಅನುಭವಿಸಬೇಕಾಗುತ್ತದೆ ಎಂಬುದು ಈ ಪಾಡ್ದನದ ಸಂದೇಶ .
ಗೋಪಿಕಾ ಸ್ತ್ರೀಯರ ವಸ್ತ್ರಕದ್ದ ಘಟನೆಯ ಕುರಿತಾದ ಪಾಡ್ದನವೊಂದು ದೇವರಿಗೆ ಸಂಪೂರ್ಣ ಶರಣಾಗತರಾಗಬೇಕೆಂಬ ಸಂಕೇತವನ್ನು ನೀಡುತ್ತಾ ದೇವರಿಗೆ ಸಂಪೂರ್ಣ  ಶರಣಾದರೆ ಮಾತ್ರ ದೇವರು ಕಾಪಾಡುತ್ತಾನೆ .ಅರ್ಧ ನನ್ನ ಪ್ರಯತ್ನ ,ಅರ್ಧ ನಿನ್ನದು ಎಂಬುದಿಲ್ಲ . ಇಂತಹ ಕೆಲವು ತತ್ತ್ವಗಳನ್ನು ಪಾಡ್ದನದ ಅಜ್ಞಾತ ಕವಿಗಳು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದ್ದಾರೆ .
ಯಶೋದೆಯ ಮುದ್ದುಮಗನನ್ನು ನೋಡಲು ಗೋಪಿಯರು ಬರುತ್ತಾರೆ. ಮಗುವನ್ನು ಹಿಡಿದು ಮುದ್ದಾಡಿದಾಗ ಮಗು ಮುಖನೋಡಿ ನಗುತ್ತದೆ ,ಎದೆಗೆ ಕೈ ಹಾಕಿ‌ ರವಕೆ ಹರಿಯುತ್ತದೆ .ಕುತ್ತಿಗೆಗೆ ಕೈ ಹಾಕಿ ಕರಿಮಣಿ ಎಳೆಯುತ್ತದೆ . ಆಗ ಗೋಪಿಯರು ‘ಮಗು ಮಗು ಎನ್ನುತ್ತೀರಲ್ಲ ,ಇವ ಮಗುವಲ್ಲ ಮದನಗೋಪಾಲ’ ಎಂದು ದೂರುತ್ತಾರೆ . ‘ಚಿಕ್ಕವನಲ್ಲಿ ತಪ್ಪು ಹುಡುಕಬೇಡಿರಿ.‌ ನಿಮ್ಮ 
ಮನಸ್ಸಿನಲ್ಲಿ‌‌ ಏನೋ ಕಳಂಕವಿದೆ .ಪುಟ್ಟ ಮಗುವಿನ ಮನಸ್ಸಿನಲ್ಲಿ‌ಕಳಂಕವಿಲ್ಲ’ ಎಂದು ಯಶೋದೆ ಅವರನ್ನು ಕಳುಹಿಸುತ್ತಾಳೆ .  
                  (ಡಾ.ಸುಶೀಲಾ ಉಪಾಧ್ಯಾಯರ  ಬರೆಹಗಳ ಸಂಗ್ರಹದಿಂದ )
ತುಳುನಾಡಿನ ‘ಕಂಗುಲು ಕುಣಿತ’ದ ಬಗ್ಗೆ ವಿವರಿಸುವ ಡಾ.ಅಶೋಕ ಆಳ್ವ ಅವರು ಕಾಂಗ್ + ಆಳ್ = ಕಾಂಗಾಳ್ ಆಗಿ ಅದೇ ‘ಕಂಗುಲು’ ಆಗಿರಬೇಕು . ಈ ಕಾಂಗ್ ಅಂದರೆ ಕಪ್ಪು ,ಆಳ್  ಎಂದರೆ ಮನುಷ್ಯ ,ಇವನೇ  ಕೃಷ್ಣ ಎನ್ನುತ್ತಾರೆ .ಕಂಗುಲು ಕುಣಿತದಲ್ಲಿ ನಡುವೆ ಕೊಳಲು ಹಿಡಿದುಕೊಂಡು  ಕುಣಿಯುವ ವ್ಯಕ್ತಿ ಕೃಷ್ಣ ,ಅತನ ಸುತ್ತ ತೆಂಗಿನಸಿರಿ ಕಟ್ಟಿಕೊಂಡು ಕುಣಿಯುವ ಸಿರಿಗಳೆ ಗೋಪಿಕೆಯರು ಎನ್ನುವುದು ಅವರ ಊಹೆ. ಅವತಾರ ಪುರುಷರಲ್ಲಿರುವ ಕೆಲವು ದೋಷಗಳನ್ನು ಆ ಅಜ್ಞಾತ ಜನಪದ ಕವಿಗಳು ಎತ್ತಿತೋರಿಸಿ ಹಾಡಿದರು, ಕುಣಿದರು. ಇದರೊಳಗೆ ಏನೋ ತತ್ತ್ವವಿದೆ ಎಂಬುದನ್ನು ತಿಳಿಸುವ ಪ್ರಯತ್ನಮಾಡಿದ್ದಾರೆ.
                                           
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!