ರಾಷ್ಟ್ರಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆಗೆ ವಂಶರಾಮ ಭಟ್ ಆಯ್ಕೆ

ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 61ನೇ ಅಖಿಲ ಕರ್ನಾಟಕ ಮಟ್ಟದ ಸಂಸ್ಕೃತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಹೊಳೆನರಸೀಪುರದ ವಿದ್ಯಾರ್ಥಿ ಮಹಿಷಿ ವಂಶರಾಮ ಭಟ್ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಅಯೋಧ್ಯೆಯಲ್ಲಿ ಮಾ. 18ರಂದು ಕೇಂದ್ರೀಯ ಸಂಸ್ಕೃತ ವಿವಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿದ್ದು ಈತ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ವಿಶೇಷ.

ಬಹುಮಾನದ ವಿವರ: ಹೊಳೆನರಸೀಪುರದ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಧರ್ಮ ವಿದ್ಯಾಪೀಠದ ವಿದ್ಯಾರ್ಥಿ ಮಹಿಷಿ ವಂಶರಾಮ ಭಟ್ (ಸಾಂಖ್ಯಯೋಗ ವಿಭಾಗ) ಪ್ರಥಮ ಸ್ಥಾನದೊಂದಿಗೆ 5, 000 ರೂ. ನಗದು ಮತ್ತು ಪ್ರಶಸ್ತಿ ಪತ್ರ ವಿಜೇತನಾಗಿದ್ದಾನೆ.

ಇದೇ ವಿದ್ಯಾಪೀಠದ ಹೃಷಿಕೇಶ ಭಟ್ (ನ್ಯಾಯ ಶಾಸ್ತ್ರ ವಿಭಾಗ) ದ್ವಿತೀಯ ಸ್ಥಾನ, ನೆಲಮಂಗಲ ಶ್ರುತ ಕೀರ್ತಿ (ಶಾಸ್ತ್ರಾರ್ಥ ವಿಚಾರ ವಿಭಾಗ) ದ್ವಿತೀಯ ಮತ್ತು ಕಲ್ಲಾಪುರ ಪ್ರಣವ (ಶಾಸ್ತ್ರೀಯ ಸ್ಫೂರ್ತಿ) ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು 2,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.

 ಸತ್ಯಧರ್ಮ ವಿದ್ಯಾಪೀಠದ ಗುರುಗಳಾದ ಪಂಡಿತ ವಿಜಯ ವಿಠಲಾಚಾರ್ಯರಲ್ಲಿ ನ್ಯಾಯ, ಮೀಮಾಂಸಾ, ವ್ಯಾಕರಣ, ವೇದಾಂತ ಶಾಸ್ತ್ರ ಪಾಠ ಕಲಿಯುತ್ತಿರುವ ಈ ವಿದ್ಯಾರ್ಥಿಗಳು ಹೊಳೆನರಸೀಪುರಕ್ಕೆ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದ 20 ಸಂಸ್ಕೃತ ಪಾಠಶಾಲೆ, ಗುರುಕುಲದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನೃಪತುಂಗ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ. ಅಹಲ್ಯಾ, ಕುಲಸಚಿವೆ ಡಾ. ರೂಪಶ್ರೀ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

 
 
 
 
 
 
 
 
 
 
 

Leave a Reply