ಇಂದು ಪುಷ್ಯಾರ್ಕ ಯೋಗ ಜತೆಗೆ ನಾಗನ-ಭೀಮನ ಅಮಾವಾಸ್ಯೆ ಯ ಪರ್ವಕಾಲ~ ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ಈ ಯೋಗ ಗುರುಗಳ ಸ್ಮರಣೆಗೆ‌ ಅತ್ಯಂತ ಪ್ರಶಸ್ತವಾದ ಕಾಲ. ಚಕ್ಕಡಿ(ಬಂಡಿ)ಗೆ ಎತ್ತುಗಳು ಎಷ್ಟು ಮುಖ್ಯವೋ, ಹಾಗೆಯೇ ಚಕ್ಕಡಿ ಓಡಿಸುವ ವ್ಯಕ್ತಿಯು ಬಹುಮುಖ್ಯ. ದೈವಾನುಗ್ರಹ ಎಷ್ಟೇ ಇರಲಿ, ಜತೆಗೆ ಗುರುಗಳ ಕರುಣಾಪೂರಿತ ಕಾರುಣ್ಯ ಇರಲೇ ಬೇಕು. ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಕಾಯುವರಾರೋ ಎಂಬ ಮಾತಿದೆ.

ಗುರುಬಲವಿದ್ದರೆ ದೈವಬಲ ತಾನಾಗಿಯೇ ಬರುತ್ತದೆ, ಇಲ್ಲವೇ ಗುರುಗಳು ಬರಿಸುತ್ತಾರೆ. ಅದಕ್ಕಾ ಗಿಯೇ ಯಾವುದೇ ಶುಭಕಾರ್ಯದ ಆರಂಭದಲ್ಲಿ, ವೇದ ಪಾರಾಯಣ ಮತ್ತಿತರ ಸಮಯದಲ್ಲಿ ಶ್ರೀಗುರುಭ್ಯೋ ನಮಃ ಎನ್ನುತ್ತೇವೆ. ನಂತರ ಹರಿಃ ಓಂ ಎನ್ನುತ್ತೇವೆ.

ವೀರಶೈವರು ಹರಹ ಓಂ ಎನ್ನುತ್ತಾರೆ. ಯಾವುದೇ ಧರ್ಮವಿರಲಿ, ಮತವಿರಲಿ, ಪಂಥವಿರಲಿ ಗುರು ವಿಗೆ ಅಗ್ರಸ್ಥಾನ. ಇಂತಹ ಗುರುವನ್ನು ಸದಾ ಸ್ಮರಿಸಬೇಕು. ಅದರಲ್ಲಿಯೂ ವಿಶೇಷವಾದ ಪರ್ವಕಾಲದಲ್ಲಿ ವಿಶೇಷವಾಗಿ ಸ್ಮರಣೆ ಮಾಡಬೇಕು.

ತಾಯಿ ತನ್ನ ಮಗುವಿಗೆ ಪ್ರೇಮ ನೀಡಬಲ್ಲಳು, ತಂದೆಯಂತೆ ಶಿಕ್ಷಿಸಿ ಸರಿದಾರಿಗೆ ತರಲಾರಳು. ತಂದೆ ಶಿಸ್ತು ಕಲಿಸಿ ಬೆಳೆಸಬಹುದು, ಆದರೆ ಮಾತೃ ಪ್ರೇಮ ನೀಡಲಾರ. ಉತ್ತಮ ಗುಣ ಸಂಪನ್ನ ರಾದ ಗುರುಗಳು ಮಾತೆಯಂತೆ ಮಾತೃ ಹೃದಯಿಯಾಗಿ ಪ್ರೀತಿಸುವುದರ ಜತೆ, ಪಿತೃವಿನಂತೆ ದಂಡಿಸಿ ತಿದ್ದಿ ತೀಡಿ ವಿದ್ಯೆ ಕಲಿಸಬಲ್ಲರು.

ಉನ್ನತವಾದ ಗುರಿ ಮುಟ್ಟಲು ಹೆಗಲಿಗೆ ಹೆಗಲಾಗುವರು. ಶಿಷ್ಯ ಸಾಧಕನಾದರೆ, ಗುರುಗಳ ಹರ್ಷಕ್ಕೆ ಮಿಗಿಲಿಲ್ಲ. ಹಾಗಾಗಿಯೇ ಮೂರು ರೀತಿಯ ಅನುಗ್ರಹ ತೋರುವ ಗುರುಗಳಿಗಿಂತ ಅಧಿಕ ಆಪ್ತರು ಇನ್ನಾರು ಎಮಗೆ ಎನ್ನುತ್ತೇವೆ.

ಅಂತಹ ಗುರುಗಳ ಹೃತ್ಕಮಲದಲ್ಲಿ ನಿಂತು ನಮ್ಮನ್ನು ಸರಿದಾರಿಯಲ್ಲಿ ನಡೆಸಿ ಸತ್ಕುಲ ಪ್ರಸೂತ ರನ್ನಾಗಿಸುವ ದೇವಗುರು ಬೃಹಸ್ಪತಿಯ ಜತೆ, ಪರಮಗುರುಗಳಾದ ಶ್ರೀವಾದಿರಾಜರು ಹಾಗೂ ಮಂತ್ರಾಲಯ ಪ್ರಭುಗಳನ್ನು ಈ ದಿನ ಸ್ಮರಿಸೋಣ.

ಗುರುವಾರದ ದಿನ ಪುಷ್ಯ ನಕ್ಷತ್ರವಿದ್ದರೆ ಆ ದಿನ, ಗುರುಪುಷ್ಯಯೋಗ ಎನ್ನಲಾಗುತ್ತದೆ. ಅದೇ ರೀತಿ ಭಾನುವಾರ ಪುಷ್ಯ ನಕ್ಷತ್ರ ಬಂದರೆ ಪುಷ್ಯಾರ್ಕ ಯೋಗ ಎನ್ನುತ್ತೇವೆ. ಈ ಎರಡೂ ದಿನ ದೇವ ಗುರುವಾದ ಶ್ರೀಬೃಹಸ್ಪತಿ ಯ ಜತೆ ಗುರುಗಳ ಸ್ಮರಣೆ ಅತ್ಯಂತ ಪುಣ್ಯದಾಯಕ. ಗುರುಗಳ ಜಪ, ಸ್ಮರಣೆ ಫಲದಾಯಕ. ಜತೆಗೆ ಈ ದಿನ ಆಷಾಢ ಅಮವಾಸ್ಯೆ, ಈ ಪರ್ವ ಕಾಲದಲ್ಲಿ ಗುರುಸ್ಮರಣೆ ಮಾಡೋಣ.

ದೇವ ಗುರುವಾದ ಬೃಹಸ್ಪತಿಯನ್ನು ನೆನೆಯೋಣ. ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ । ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ॥

ಜಗತ್ತಿಗೆ ಆನಂದ(ಭಕ್ತಿ) ಮಾರ್ಗ ತೋರಿದ ಶ್ರೀಮದಾನಂದತೀರ್ಥರನ್ನು ಸ್ಮರಿಸೋಣ.

ಅಭ್ರಮಂ ಭಂಗರಹಿತಮಜಡಂ ವಿಮಲಂ ಸದಾ| ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಂ|| ವಿಜಯನಗರ ಸಿಂಹಾಸನಾಧೀಶ್ವರರಾದ ಶ್ರೀವ್ಯಾಸರಾಜರನ್ನು ಸ್ಮರಿ ಸೋಣ.

ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿಗಜಕೇಸರಿ। ವ್ಯಾಸತೀರ್ಥ ಗುರುರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ॥

ಜಗದ್ಗುರು ಶ್ರೀಶಂಕರಾಚಾರ್ಯರ ಪೀಠದ ಪೀಠಾಧಿಪತಿ, ವಿಜಯನಗರ ನಿರ್ಮಾತೃ ಶ್ರೀವಿದ್ಯಾ ರಣ್ಯರ ಪ್ರೀತಿ ಪಾತ್ರರಾಗಿ, ಅವರಿಂದ ಮನ್ನಣೆ ಪಡೆದ ಗಜಗಹ್ವರ ನಿವಾಸಿಗಳಾದ ಟೀಕಾರಾಯ ರೆಂದೇ ಖ್ಯಾತಿವೆತ್ತ ಶ್ರೀಜಯತೀರ್ಥರನ್ನು ಸ್ಮರಿಸೋಣ.

ಚಿತ್ರೈಃ ಪದೈಶ್ಚ ಗಂಭೀರೈರ್ವಾಕ್ಯೈರ್ಮಾನೈರಖಂಡಿತೈಃ |
ಗುರುಭಾವಂ ವ್ಯಂಜಯಂತೀ ಭಾತಿ ಶ್ರೀ ಜಯತೀರ್ಥವಾಕ್ ||

ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ಪ್ರಯಚ್ಛತಿ|
ಸೇವೇ ತಂ ಜಯಯೋಗೀಂದ್ರಂ ಕಾಮಬಾಣಚ್ಛಿದಂ ಸದಾ||

ಕಲಿಯುಗದ ಕಾಮಧೇನು, ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರನ್ನ ಈ ಪರ್ವ ಕಾಲದಲ್ಲಿ ಸ್ಮರಿಸಿ ಧನ್ಯರಾಗೋಣ.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ|
ಶ್ರೀರಾಘವೇಂದ್ರಗುರುವೇ ನಮೋಅತ್ಯಂತ ದಯಾಲವೇ||

ಸರ್ವ ಗುರುಗಳನ್ನು ಸ್ಮರಿಸೋಣ.

ಆಪಾದಮೌಳಿ ಪರ್ಯಂತಂ ಗುರುಣಾಕೃತಿಂ ಸ್ಮರೇತ್|
ತೇನವಿಘ್ನಾಃಪ್ರಣಶ್ಯಂತಿ ಸಿದ್ಧಂತಿಚ ಮನೋರಥಾಃ||

ಶ್ರೀರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಜಪಿಸಿ ಪುನೀತರಾಗಿ…

ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀವೇದವ್ಯಾಸ ದೇವರು ಎಲ್ಲರನು ಕಾಯಲಿ ಶುಭಮಸ್ತು….

ಶ್ರೀಶ ಚರಣಾರಾಧಕ: ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

 
 
 
 
 
 
 
 
 
 
 

Leave a Reply