ಕಾಫಿಯ ಹಂಬಲ~ಮಲ್ಲಿಕಾ ಶ್ರೀಶ ಬಲ್ಲಾಳ್  

ಬಹುತೇಕ ಮಲೆನಾಡಿಗರಿಗೆ ಕಾಫಿ ಅವರ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿರುತ್ತದೆ. ಅದು ಬೇಸಿಗೆಯಾದರೂ ಸರಿ, ಮಳೆಗಾಲ ವಾದರೂ ಸರಿ, ಇನ್ನು ಚಳಿಗಾಲದಲ್ಲಂತೂ ಕೇಳುವುದೇ ಬೇಡ. ಅಜ್ಜಿಯ ಮನೆಯಲ್ಲಿ ಬಾಲ್ಯವನ್ನು ಕಳೆದ ನನಗೆ ಒಮ್ಮೆ ಕಾಫಿ ಕುಡಿಯ ಬೇಕೆಂಬ ಆಸೆಯಾಯಿತು. ಆದರೇನು ಮಾಡುವುದು ಸಾಮಾನ್ಯವಾಗಿ ಚಿಕ್ಕ-ಚಿಕ್ಕ ವಯಸ್ಸಿನ ಮಕ್ಕಳು ಕಾಫಿ ಕುಡಿಯಬಾರದೆಂಬ ಅಲಿಖಿತ ನಿಯಮ ಅಜ್ಜಿ ಮನೆಯಲ್ಲಿ ಜಾರಿಯಲ್ಲಿತ್ತು.
ಆದರೆ ನನಗಾದರೋ ಹೇಗಾದರೂ ಮಾಡಿ ಕಾಫಿಯ ರುಚಿ ಸವಿಯಬೇಕೆಂಬ ಹಂಬಲ. ಅದಕ್ಕೆ ಸರಿಯಾಗಿ ಆಗ ನಾಲ್ಕನೇಯ ತರಗತಿಯಲ್ಲಿ ಓದುತ್ತಿದ್ದ ನನ್ನ ದೊಡ್ಡಣ್ಣ ಕಾಫಿ ಕುಡಿಯಲು ಉಪಾಯ ಒಂದನ್ನು ಹುಡುಕಿಕೊಂಡಿದ್ದ. ಹಳ್ಳಿ ಮನೆಗಳಲ್ಲಿ ಸಾಮಾನ್ಯವಾಗಿ ಬೆಳಗಾಗುವುದು ಬೇಗ. ಹಾಗೇ ನನ್ನ ಅಜ್ಜಿಯ ಮನೆಯಲ್ಲಿ ಮುಂಜಾನೆ ಮೂರುವರೆ ಅಥವಾ ನಾಲ್ಕು ಗಂಟೆಗೆಲ್ಲಾ ಅಜ್ಜಿ, ಅಮ್ಮ ಎಲ್ಲರೂ ಎದ್ದಿರುತ್ತಿದ್ದರು. ಆಗ ನನ್ನಣ್ಣನೂ ಓದು-ಬರೆಯುವ ನೆಪ ಹೇಳಿಕೊಂಡು ಬೆಳಗ್ಗೆ ಐದು ಗಂಟೆಗೇ ಎದ್ದು ಕೂರುತ್ತಿದ್ದನು.
ಇವನ ಮರ್ಮವನ್ನರಿಯದ ಪಾಪದ ಮೃದು ಸ್ವಭಾವದ ನನ್ನಜ್ಜಿ (ನಾವೆಲ್ಲಾ ಅವರನ್ನು ದೊಡ್ಡಮ್ಮ ಎಂದು ಕರೆಯುತ್ತಿದ್ದೆವು.) ಒಂದು ಲೋಟ ಹಾಲು ಬಿಸಿ ಮಾಡಿ, ಎರಡೇ ಎರಡು ಹನಿ ಕಾಫಿ ಡಿಕಾಕ್ಷನ್ ಹಾಲಿಗೆ ಬಿಟ್ಟು ಸಕ್ಕರೆ ಬೆರೆಸಿ ಅಣ್ಣನಿಗೆ ಕುಡಿಯಲು ಕೊಡುತ್ತಿದ್ದರು. ಹೀಗೆ ಕಾಫಿ ರೂಪದ ಹಾಲನ್ನು ಕುಡಿದು ಅಣ್ಣ ಓದಿಕೊಳ್ಳುವ ಬದಲು ತೂಕಡಿಸುತ್ತಾ ಅಲ್ಲೇ ನಿದ್ದೆ ಮಾಡಿ ಬಿಡುತ್ತಿದ್ದನು. ಬೆಳಗ್ಗೆ ನಾನು ಮತ್ತು ನನ್ನ ಇನ್ನೊಬ್ಬ ಅಣ್ಣ ಎದ್ದಾಗ ಕಾಫಿ ಕುಡಿದ ಬಗ್ಗೆ ನಮಗೆ ರಸವತ್ತಾಗಿ ಹೇಳುತ್ತಿದ್ದ.
ಇದನ್ನು ಕೇಳಿ ನನಗಂತೂ ಕಾಫಿ ಕುಡಿಯುವ ಹಂಬಲ ಇನ್ನೂ ಹೆಚ್ಚಾಗುತ್ತಿತ್ತು. ಹೇಗಾದರೂ ಮಾಡಿ ನಾನೂ ಕಾಫಿ ಕುಡಿಯಬೇಕೆಂಬ ಆಸೆ ಹೆಮ್ಮರವಾಗಿ ಬೆಳೆಯತೊಡಗಿತು. ಆದರೆ ಅದಕ್ಕಾಗಿ ನಾನು ಮತ್ತೆರಡು ವರ್ಷ ಕಾಯಲೇ ಬೇಕಾಯಿತು. ನಾನೂ ಸಹ ನಾಲ್ಕನೇಯ ತರಗ ತಿಗೆ ಬಂದ ಸಮಯ. ಅಣ್ಣನ ಉಪಾಯವನ್ನು ಆಗ ನಾನು ಪ್ರಯೋಗ ಮಾಡಿದೆ. ಆದರೆ ನನ್ನ ದುರಾದೃಷ್ಟ ಅಣ್ಣನಿಗೆ ಒಲಿದ ಕಾಫಿ ನನಗೆ ಒಲಿಯಲೇ ಇಲ್ಲ. ಆದರೆ ನನ್ನ ಪ್ರಯತ್ನ ಮಾತ್ರ ನಾನು ಬಿಡಲೇ ಇಲ್ಲ. ಮರಳಿಯತ್ನವ ಮಾಡು, ಮರಳಿಯತ್ನವ ಮಾಡು ಎಂಬಂತೆ ಪ್ರಯತ್ನ ಮಾಡುತ್ತಲೇ ಇದ್ದೆ.
ನನ್ನ 6 ವರ್ಷದ ಮಗಳು ಈಗ ಕಾಫಿ ಬೇಡಿಕೆ ಇಟ್ಟಾಗ ನನಗೆ ನನ್ನ ಬಾಲ್ಯದ ಕಾಫಿ ಕುಡಿಯುವುದಕ್ಕೆ ಮಾಡುವ ನಾಟಕ ನೆನಪಾಯ್ತು. ಈ ಕಾಫಿಯ ಮಾಯೆ ಸವಿದವರೇ ಬಲ್ಲರು ಏನಂತೀರ….
_ ಮಲ್ಲಿಕಾ ಶ್ರೀಶ ಬಲ್ಲಾಳ್
 
 
 
 
 
 
 
 
 
 
 

Leave a Reply