ಕೆ.ವಿ. ತಿರುಮಲೇಶರು ನವ್ಯ ಕವಿ~ ಕಾತ್ಯಾಯಿನಿ ಕುಂಜಿಬೆಟ್ಟು

ಸುಡಲು ಇಷ್ಟೊಂದು ಬದುಕು ಬ್ರಹ್ಮಾಂಡ ತುಂಬೀತು ಎಷ್ಟು ಅನ್ನದ ಭಾಂಡ- ಕೆ.ವಿ.ತಿರುಮಲೇಶ್

ಈಕೆಯೇನು ಸಾಮಾನ್ಯ ಕುಂಬಾರಗಿತ್ತಿಯೆ?

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ಕಾಲವದು. ನನ್ನ ಸೋದರ ಮಾವ (ಅಮ್ಮನ ತಮ್ಮ ) ಗುರುರಾಜ ಮಾರ್ಪಳ್ಳಿಯವರ ಮನೆಯಲ್ಲಿದ್ದು ಓದುತ್ತಿದ್ದ ಐದು ವರುಷಗಳಲ್ಲಿ ಪ್ರತಿ ಆದಿತ್ಯವಾರ ಮನೆಯ ಪುಟ್ಟ ಗ್ರಂಥಾಲಯದ ಪುಸ್ತಕಗಳನ್ನು ಧೂಳು ಹೊಡೆದು ಜೋಡಿಸಿಡುವ ನೆಪದಲ್ಲಿ ನೆಲದಲ್ಲಿ ರಾಶಿ ಹಾಕಿ ಚಕ್ಕರಮುಟ್ಟ ಕುಳಿತು ಒಂದೊಂದಾಗಿ ಪುಟ ತಿರುವುತ್ತ ಓದುತ್ತ ಕೆಲಸ ಮರೆತು ಬಿಡುತ್ತಿದ್ದೆ.

ಮರಳಿ ಮಣ್ಣಿಗೆ, ವಂಶವೃಕ್ಷ, ಸುಬ್ಬಣ್ಣ, ಅವಧೇಶ್ವರಿ, ಸಂಸ್ಕಾರ, ಲೋಹಿಯಾ ಚಿಂತನೆ ಇತ್ಯಾದಿ ಕೃತಿಗಳನ್ನು ಈ ನೆಪದಲ್ಲೇ ಹಲವು ಬಾರಿ ಓದಿದ್ದೆ. ಆದರೆ ಕೆ.ವಿ.ತಿರುಮಲೇಶರ ‘ಪಾಪಿಯೂ ‘ ಕವನ ಸಂಕಲನ ನನಗೆ ಅರ್ಥವೇ ಆಗಿರಲಿಲ್ಲ. ಆದರೂ ತೆಗೆದಾಗೆಲ್ಲ ಮತ್ತೆ ಮತ್ತೆ ತಿರುವಿ ಓದುತ್ತಿದ್ದೆ, ಓದು ಮುಗಿಸಿ ಹಿಂತಿರುಗುವಾಗ ಅರ್ಥವಾಗದಿದ್ದರೂ ಆ ಪುಸ್ತಕದ ತಿಳಿಹಳದಿ ಬಣ್ಣದ ರಟ್ಟು, ಅದರ ಮೇಲಿನ ‘ಪಾಪಿಯೂ ‘ ಪದ ಎಷ್ಟು ವರುಷ ಕಳೆದರೂ ಮರೆಯಾಗದೆ ಕಣ್ಣ ಮುಂದೆ ಚಿತ್ರ ಉಳಿದುಬಿಟ್ಟಿದೆ.

(‘ಉಬ್ಬಸಕ್ಕಾದರೂ ಮದ್ದಿದೆ, ಅಭ್ಯಾಸಕ್ಕಿಲ್ಲ’ ಎಂಬ ಗಾದೆ ನನ್ನ ಮಟ್ಟಿಗಂತೂ ನಿಜವಾಗಿಬಿಟ್ಟು ಇಂದಿಗೂ ಪುಸ್ತಕ ಜೋಡಿಸಿಡುವ ನೆಪದಲ್ಲಿ ಕುಳಿತು ಓದಲ್ಲಿ ಆದಿತ್ಯವಾರ ಕಳೆಯುವುದು ನನ್ನ ಅಭ್ಯಾಸವಾಗಿ ಕೆ.ವಿ.ತಿರುಮಲೇಶರ ಪಾಪಿಯೂ, ಅವಧ, ‘ಅಕ್ಷಯ ಕಾವ್ಯ’, ಹಾಗೂ ಅವರ ಕತೆಗಳನ್ನು ಈ ನಡುವಯಸ್ಸಿನಲ್ಲಿ ಓದಿ ನನ್ನ ಜೀವನಾನುಭವ, ಅರಿವಿನ ಮಿತಿಯಲ್ಲಿ ಅರ್ಥಮಾಡಿಕೊಂಡಿದ್ದೇನೆ ಎಂಬ ಭ್ರಮೆಯಲ್ಲಿ ಹಿಗ್ಗಿದ್ದೇನೆ. )

ನನ್ನ ಮಾವ ವಚನಕಾರರ ಹಾಗೂ ಕೆ.ಎಸ್.ನ, ದ. ರಾ ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ, ಚೆನ್ನವೀರ ಕಣವಿ, ಸು.ರಂ.ಎಕ್ಕುಂಡಿ, ಕೆ.ವಿ.ತಿರುಮಲೇಶ್, ವೈ.ಎನ್.ಕೆ, ಡುಂಡಿರಾಜ್ ಮುಂತಾದ ಕವಿಗಳ ಹಲವು ಭಾವಗೀತಗಳನ್ನು ಹಾಗೂ ನವ್ಯ ಕವಿತೆಗಳನ್ನು ಆಯ್ದು ರಾಗ ಸಂಯೋಜಿಸಿ ‘ನಿನಾದ’ ತಂಡ ಮಾಡಿಕೊಂಡು ಕರ್ನಾಟಕದ ಬೇರೆ ಬೇರೆ ಊರುಗಳ ಶಾಲೆ, ಕಾಲೇಜು, ಸಂಸ್ಥೆಗಳಲ್ಲಿ ಕಾರ್ಯಕ್ರಮ ನೀಡಲು ಪ್ರಯಾಣ ಮಾಡುತ್ತಿದ್ದ ಕಾಲ, ಅವರ ‘ನಿನಾದ’ ತಂಡದಲ್ಲಿ ಮಾವ ಹಾಗೂ ನನ್ನ ಅಣ್ಣಂದಿರಾದ ರವಿಕಿರಣ – ಶಶಿಕಿರಣ ಮಣಿಪಾಲ, ಕವಿತಾ ಬನ್ನಂಜೆಯವರು ಗಾಯಕರು.

ದೇವದಾಸ್‌ ಮಾವ ತಬಲಾ ವಾದಕರು. ಒಂದನೇ ತರಗತಿಯಿಂದಲೇ ಶಿಶು ಪ್ರಾಸಗಳು, ಪಠ್ಯ ಪುಸ್ತಕದ ಮಕ್ಕಳ ಕವಿತೆಗಳು, ಅಮ್ಮ – ಅಜ್ಜಿ ಹಾಡುತ್ತಿದ್ದ ಅಸಂಖ್ಯಾತ ಕೀರ್ತನೆಗಳು, ಸಂಪ್ರದಾಯದ ಹಾಡುಗಳು ಏಕಕಾಲದಲ್ಲಿ ಕಾವ್ಯ ಹಾಗೂ ಸಂಗೀತದ ಒಲವು ನನ್ನಲ್ಲಿ ಮೊಳಕೆಯೊಡೆಯುವಂತೆ ಮಾಡಿತ್ತಾದರೂ ಕಾವ್ಯ ಎಂಬುವುದು ‘ಹುಚ್ಚು’ ಆದದ್ದು ಹತ್ತನೆ ಮುಗಿದ ಬಳಿಕ ನಾನು ಕೂಡ ಈ ತಂಡದಲ್ಲಿ ಗಾಯಕಿಯಾಗಿ ಸೇರಿಕೊಂಡದ್ದರಿಂದ.

ನನ್ನ ಮಾವ ಅಭಿನಯ ಮಾಡುತ್ತಲೇ ಲಯ ಗರಿಗೆದರಿ ಕುಣಿಯುವಂತೆ ಹಲವು ಕವಿಗಳ ಕೆಲವು ಹಾಡುಗಳನ್ನು ತಾವೇ ಹಾಡುತ್ತಿದ್ದರು. ನಾವು ದನಿಗೂಡಿಸುತ್ತಿದ್ದೆವು. ಅವುಗಳಲ್ಲಿ ಕೆ.ವಿ ತಿರುಮಲೇಶರ ‘ಯಾಕ ಫಿಕೃ ಮಾಡತೀ ಫಕೀರ’, ‘ಕುಣಿಕುಣಿವಳು ಕುಂಬಾರಗಿತ್ತಿ’, ‘ಯಾವುದಿಲ್ಲ ಯಾವುದುಂಟು’, ಎಲ್ಲಿಗೆ ಹೋಗೋಣ ಏನ ಮಾಡೋಣ’, ‘ ಹೆಸರು ಕುಟ್ಟಿಚಾತ್ತ ‘, ‘ ದಾರಿ ತಪ್ಪಿದನೊಬ್ಬ ಬ್ರಾಹ್ಮಣ’, ‘ಜನನಾಯಕ ನಡೆದಾಗ ” ರೊಟ್ಟಿ ಜಾರಿ ತುಪ್ಪದಲ್ಲಿ ‘, ‘ನೀ ಕೇಳಿದ್ದು ಕೊಡುವೆನು ಗೆಳತಿ’ … ಎಂತೆಂಥ ಕವಿತೆಗಳು! ಅಬ್ಬಾ! ನನ್ನ ಮನ ಪಟಲದಲ್ಲಿ ನಾಟಕದಂತೆ ಉಳಿದುಬಿಟ್ಟಿವೆ ಇಂದಿಗೂ.

ಬಾಲ್ಯದಲ್ಲಿ ಟೀಚರಾಟವನ್ನೇ ಆಡುತ್ತಿದ್ದ ನಾನು ಬಿ.ಎ ಪದವಿ ಮುಗಿಸಿ ನರ್ಸರಿ ಮಕ್ಕಳಿಗೆ ಬೋಧಕಿಯಾದವಳು ಹಂತ ಹಂತವಾಗಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಈಗ ಪದವಿ ವಿದ್ಯಾರ್ಥಿಗಳಿಗೆ ಉಪನ್ಯಾಸಕಿ. ಈ ವೃತ್ತಿಯಾನದಲ್ಲಿ ಕೆ.ವಿ.ತಿರುಮಲೇಶರ ‘ಕುಟ್ಟಿಚಾತ್ತ ‘, ‘ಫಿಕೃ ಮಾಡತಿ ಫಕೀರ’, ‘ಎಲ್ಲಿಗೆ ಹೋಗೋಣ’ … ಹಲವು ಕವಿತೆಗಳನ್ನು ಶಾಲೆ, ಕಾಲೇಜು, ರಂಗಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು, ಅವು ಹಾಡುತ್ತ ಸಂಭ್ರಮಿಸುವುದು ಅಭ್ಯಾಸವೇ ಆಗಿಬಿಟ್ಟಿದೆ.

ನವ್ಯಕವಿ ಕೆ. ವಿ. ತಿರುಮಲೇಶರ ‘ಬೆನ್ನುಡಿ’ಯ ಆ ಶೀರ್ವಾದ ಪಡೆಯುವ ಕನಸಿತ್ತು. “ನನಗೆ ಕಣ್ಣು ದೃಷ್ಟಿ ಮೊದಲಿನಂತಿಲ್ಲ, ಬರೆಯಲು ಕೈ ನಡುಗುತ್ತದೆ. ಮುನ್ನುಡಿ ಬರೆಯುವುದು ಕಷ್ಟ, ಬೆನ್ನುಡಿ ಬರೆದು ಕಳುಹಿಸುವೆ ಕಾತ್ಯಾಯಿನಿ ” ಎಂದವರೇ ನನ್ನ ‘ಅವನು ಹೆಣ್ಣಾಗಬೇಕು’ ಕವಿತೆಗಳನ್ನು ಓದಿ, ಸತ್ವಯುತವಾದ ನಕ್ಷತ್ರ ಸಾಲುಗಳನ್ನೇ ಕಳುಹಿಸಿದ್ದು ಮಾತ್ರವಲ್ಲ.. “ಕಾತ್ಯಾಯನೀ, ನಿಮಗೆ ಕೊನೆಯ ಸಾಲು ಅರ್ಥವಾಯ್ತ? ಸಂಜ್ಞಾ ದೇವಿ ಗೊತ್ತಾ? ಛಾಯಾ ಗೊತ್ತಾ?” ಎಂದು ಪ್ರಶ್ನೆ ಕೇಳಿದ್ದು ಮಾತ್ರವಲ್ಲ ಸೂರ್ಯನ ಇಡೀ ಕತೆಯನ್ನೇ ವಿವರಿಸಿದ್ದರು. ಆ ಇಳಿವಯಸ್ಸಿನಲ್ಲೂ ಅವರಲ್ಲಿ ಪುರಾಣ ಪ್ರಜ್ಞೆ, ಜೀವನೋತ್ಸಾಹ, ನೆನಪಿನ ಶಕ್ತಿ , ಜ್ಞಾನ, ಬರವಣಿಗೆ ಅಪ್ರತಿಮವಾಗಿತ್ತು.

ಅವರ ಈ ಭಾವಗೀತೆ ನೋಡಿ:

ಎಲ್ಲಿಗೆ ಹೋಗೋಣ ಏನ ಮಾಡೋಣ ಗೆಳತಿ ನನ್ನ ಗೆಳತಿ

ಎಲ್ಲಾರು ಹೋಗೋಣ ಏನಾರ ಮಾಡೋಣ ಗೆಳೆಯಾ ನನ್ನ ಗೆಳೆಯಾ.

ಎಡನಾಡಿನಲ್ಲೊಂದು ಮನೆಯನು ಮಾಡಿ ಎಣಿಸೋಣ ಮೋಡಗಳ
ಎಡಕುಮೇರಿಯಲ್ಲೊಂದು ಗುಡಿಸಲು ಹಾಕಿ ಏರೋಣ ಬೆಟ್ಟಗಳ.

ಮೈಸೂರಿನಲ್ಲೊಂದು ಮನೆಯನ್ನು ಮಾಡಿ ಮೆರೆಯೋಣ ದಸರೆಗಳ
ಮಡಿಕೇರಿಯಲ್ಲೊಂದು ಗುಡಿಸಲು ಹಾಕಿ ಮಾರೋಣ ಮಡಕೆಗಳ.

ಕಾರವಾರದಲ್ಲೊಂದು ಗುಡಿಸಲು ಹಾಕಿ ಕರೆಯೋಣ ಕಡಲುಗಳ
ಕಾರ್ಕಳದಲ್ಲೊಂದು ಗುಡಿಸಲು ಹಾಕಿ ಕಡೆಯೋಣ ಕಲ್ಲುಗಳ.

ತಿರುವನಂತಪುರದಲ್ಲೊಂದು ಗುಡಿಸಲು ಹಾಕಿ ತಿರುಗೋಣ ಬೀದಿಗಳ
ತಲಕಾವೇರಿಯಲ್ಲೊಂದು ಮನೆಯನು ಮಾಡಿ ತೇಲಿಸೋಣ ದೀಪಗಳ.

ಎಲ್ಲಿಯಾದರೂ ಜಡ ಚಿತ್ರ ಉಂಟ? ಚಲನೆ, ಚಲನೆ, ಚಲನೆ… ಜೀವಜೀವ. ಬುಗರಿಯಂತೆ ತಿರುಗುತ್ತ ಅನ್ನದ ಭಾಂಡವಾಗುವ ಭೂಮಿ ಕುಂಬಾರಗಿತ್ತಿಯಿರಲಿ; ಬೆಳಕು ಹುಡುಕುವ ಅಲೆಮಾರಿ ಫಕೀರನೇ ಇರಲಿ; ಬ್ರಾಹ್ಮಣನನ್ನು ತನ್ನ ಚೆಲುವಿಂದ ಏಮಾರಿಸಿ ತಿನ್ನುವ ಯಕ್ಷಿಯೇ ಇರಲಿ; ನಾ ಕೇಳಿದ್ದು ಕೊಡುವೆಯ ಗೆಳೆಯ? ಎಂದು ಕಾಡುವ ಗೆಳತಿಯೇ ಇರಲಿ; ಬಡಗಿಯನ್ನು ಹೆದರಿಸಿ ಚಂದದ ದೋಣಿ ಕೆತ್ತಿಸಿ, ಅದರ ಚಂದಕೆ ಮರುಳಾಗಿ ‘ಆಹಾ!’ ಎಂದು ಉದ್ಗರಿಸಿ ಅದರಲ್ಲಿ ಯಾನ ಹೊರಡುವ ಕುಟ್ಟಿಚಾತ್ತ ಭೂತವೇ ಇರಲಿ… ಈ ಕವಿತೆಗಳ ಕೇಂದ್ರ ಶಕ್ತಿ ಕಲಾತ್ಮಕವಾದ ದೃಷ್ಟಿ ಚಲನಶೀಲ ಸೃಷ್ಟಿ. ಎಲ್ಲೂ ಜಾಡ್ಯವೆಂಬುದೇ ಇಲ್ಲ.

ಕೆ.ವಿ. ತಿರುಮಲೇಶರು ನವ್ಯ ಕವಿ. ಆದರೆ ನನ್ನ ಹದಿಹರೆಯದ ಕಾಲದಲ್ಲಿ ನನ್ನ ಹೃದಯ ಕೊಳದಲ್ಲಿ ತೇಲಿದ ಈ ಕವಿತೆಗಳ ಭಾವದೀಪಗಳನ್ನು ಮರೆಯಲಾರೆ. ಈ ಕವಿತೆಗಳ ಒಳಗಿರುವ ಚಲನಶೀಲತೆ, ಜಂಗಮತ್ವ, ದಿವ್ಯ ಅನುಭಾವಗಳಿಗೆ ಮಿಡಿಯುತ್ತದೆ ಹೃದಯದ ಮಂದ್ರ ತಂತಿ.

ಗಾಳಿಗೇ ಮಿಡಿಯುತ್ತಿದ್ದ ತಾನ್ಪೂರ ಸುಮ್ಮನಾಗಿದೆ. ಕವಿತೆಗಳು ಮೂಕವಾಗಿವೆ. ಓಂ ಶಾಂತಿ.

🌳ಕಾತ್ಯಾಯಿನಿ ಕುಂಜಿಬೆಟ್ಟು

 
 
 
 
 
 
 
 
 
 
 

Leave a Reply