|ಕೃಷ್ಣಾವತಾರ : ಧರ್ಮಾವತಾರ|

“ಧರ್ಮವೇ ಭಗವಂತ – ಭಗವಂತನೇ ಧರ್ಮ – ಧರ್ಮವು ಭಗವಂತನಾಗುವುದು – ಧರ್ಮದಲ್ಲಿ ಭಗವಂತ ಸಂಭವಿಸುವುದು – ಭಗವಂತನಲ್ಲಿ ಅಂತರ್ಗತವಾಗಿ ಧರ್ಮ ಇದೆ – ಅದೇ ಪ್ರಕಟಗೊಳ್ಳಯವುದು – ದರ್ಶನ ಸಾಧ್ಯವಾಗುವುದು”.ಈ ನಿರೂಪಣೆಯಲ್ಲಿ ಮೂಡಿಬರುತ್ತದೆ ಒಂದು ‘ಬೆರಗು’, ತೆರೆದು ಕೊಳ್ಳುತ್ತದೆ ಒಂದು ದೃಶ್ಯಕಾವ್ಯ ,ಅದೇ “ಕೃಷ್ಣ”. ಧರ್ಮ – ಭಗವಂತ ಎರಡೂ ಒಂದೇ.
ಕೃಷ್ಣಾವತಾರವು ಭಗವಂತನ ಪರಿಪೂರ್ಣ ಅವತಾರ,ಅದೇ “ಧರ್ಮಾವತಾರ”.
ಲಾಲಿತ್ಯ ಲಾವಣ್ಯಗಳ ಆಕರ್ಷಕ ರೂಪದಿಂದ ಜಗತ್ತಿನ‌ ಗಮನಸೆಳೆದವನಾಗಿ,ಮನುಕುಲದ
ಪ್ರಿಯ ಬಂಧುವಾಗಿ ,ಚಾಣಾಕ್ಷ ಸೂತ್ರಧಾರನಾಗಿ ,
ಮಲ್ಲಯುದ್ಧ ಪ್ರವೀಣನಾಗಿ ರಾಜಕೀಯ ಮುತ್ಸದ್ಧಿಯಾಗಿ ,ಗೀತಾಚಾರ್ಯನಾಗಿ, ಭಾರತೀಯರ ಆರಾಧ್ಯ ಕೃಷ್ಣನ ಜನನ ಭೀತಿಯ ಪರಿಸರದಲ್ಲಿ,ಕಾಲದ ಅಗತ್ಯವಾಗಿ,ಸಜ್ಜನರ ನಿರೀಕ್ಷೆಯಾಗಿ ಸಂಭವಿಸಿತು.
ಋಷಿಮುನಿಗಳ ಶುಭಪ್ರತೀಕ್ಷೆ ಹುಸಿಯಾಗದೆ,ಭಗವಂತನು ತಾನೇ ಸ್ವತಃ “ಧರ್ಮ”ವಾಗಿ ಆವಿರ್ಭವಿಸುತ್ತಾನೆ,‌ಆದರೆ ಸೆರೆಮನೆಯ ಕತ್ತಲಲ್ಲಿ.ಅಂದರೆ ಆ ಕಾಲ – ಸಂದರ್ಭದಲ್ಲಿ ಧರ್ಮವೇ ಬಂಧನದಲ್ಲಿತ್ತು.
ಧರ್ಮದ ನೈಜಕಾಂತಿ ಕಳಾಹೀನವಾಗಿತ್ತು ಎಂದೇ ತಾತ್ಪರ್ಯ.ಅಪೇಕ್ಷೆಯ ಅಜೇಯ ವಿಶ್ವಾಸದೊಂದಿಗೆ ಜನಿಸಿದ ಈ ಕೃಷ್ಣ ಹೆತ್ತತಾಯಿ ದೇವಕಿಗೆ ಶಿಶುವಿರಹದ ವೇದನೆಯನ್ನು ಕರುಣಿಸುತ್ತಾನೆ.ಆದರೆ ಯಶೋದೆಯ ಮನಸ್ಸು ನಳನಳಿಸುವಂತೆ ಮಾಡುತ್ತಾನೆ.
“ಧರ್ಮ” ನಡುರಾತ್ರಿ ನದಿಯನ್ನು ಉತ್ತರಿಸಿ ಮಧುರೆಯಿಂದ ನಂದಗೋಕುಲಕ್ಕೆ ಸ್ಥಳಾಂತರಗೊಳ್ಳುತ್ತದೆ.ಅದು ಧರ್ಮವೇ ಆಗಿದ್ದರೂ ಗುಟ್ಟಿನಲ್ಲೇ ಸ್ಥಳಾಂತರದ ಕ್ರಿಯೆ ನೆರವೇರುತ್ತದೆ‌.
ಸಜ್ಜನರಿಗೆ,ಮಹರ್ಷಿಗಳಿಗೆ ಈ ಧರ್ಮರೂಪಿ ಶಿಶುವನ್ನು ಸಲಹುವ ಜವಾಬ್ದಾರಿ ಇತ್ತು. ಆದರೆ ‘ಧರ್ಮ’ ಅಂಬೆಗಾಲಿಡುತ್ತಾ ತುಂಟತನದ ಪರಮೋಚ್ಛ ಸ್ಥಿತಿಯಲ್ಲಿ ಹಟಮಾರಿಯಾಗಿ ಬೆಳೆಯಿತು. .
ಶ್ರೀ ರಾಮನ ಬಾಲ್ಯ ಬಾಲಕಾಂಡದಲ್ಲಿ ಮುಗಿದು ಹೋಗುತ್ತದೆ.ಬುದ್ಧ ಮುಂತಾದ ಮಹನೀಯರ ಬಾಲ್ಯ ಪ್ರೌಢತ್ವದಿಂದ ಗಮನಕ್ಕೆ ಬರುವುದೇ ಇಲ್ಲ.ಆದರೆ ಈ ತುಂಟನ ಬಾಲ್ಯ ಪ್ರತಿಮನೆಯಲ್ಲೂ ಇಂದಿಗೂ ಆಟವಾಡುತ್ತಿದೆ.ಇದು ಕೃಷ್ಣನ ಬಾಲ್ಯ. ಪ್ರತಿ‌ ತಾಯಂದಿರ ಅನುಭವದಲ್ಲಿ ಸ್ಥಿರವಾಗಿ ನಿಂತ ಮುಗ್ಧ ಪ್ರೀತಿಯ ಭಾವ.ಅದು ಅವರ್ಣನೀಯ. “ಚಿಣ್ಣರು ಅಂದರೆ ಕೃಷ್ಣ ಅಲ್ಲವೇ”.
ಚಿಕ್ಕ ಮಕ್ಕಳಿರುವ – ತುಂಬಿದ ಮನೆ,’ತುರುಹಟ್ಟಿ’
ಎಂಬುದು ‘ನಂದಗೋಕುಲ’ ಶಬ್ದಕ್ಕಿರುವ ಅರ್ಥ.ಅಂತೆಯೇ ತುಂಟ ಮಕ್ಕಳು,ವಿಫುಲವಾದ ಗೋಸಂಪತ್ತು ,ಮುಗ್ಧ ಗೋಪಾಲರಿರುವ ನಂದಗೋಪನ‌ ರಾಜ್ಯ ನಂದಗೋಕುಲಕ್ಕೆ ‘ಕೃಷ್ಣ’ ಎಂಬ ‘ಧರ್ಮ’ ಆಗಮಿಸುತ್ತದೆ.ಸೆಗಣಿ – ಗಂಜಳಗಳ ಗಂಧ. ಹಾಲು ಮೊಸರು ತುಪ್ಪದ ಪರಿಮಳ ಹೀಗೆ ಗವ್ಯಗಳ ಮಧುರ ಕಂಪಿನಲ್ಲಿ “ಧರ್ಮ – ಕೃಷ್ಣ”ನ ಬಾಲ್ಯ ಪಲ್ಲವಿಸುತ್ತದೆ.
ಗೋಕುಲ ಒಂದು ಪರಿಶುದ್ಧ – ಮುಗ್ಧ ಮನಸ್ಸಿನ ಜನಪದರ ಸಂದಣಿಯಂತೆ ಭಾಸವಾಗುವುದಿಲ್ಲವೇ ? ಹಾಗಾಗಿಯೇ ಸಹಜವಾಗಿ ಕೃಷ್ಣನ ಮನಸ್ಸು ಜನಪದರಿಂದ ಪ್ರೇರೇಪಿಸಲ್ಪಟ್ಟಿತು.ಬಾಲ್ಯದ ಬದುಕೇ ಪೂರ್ಣ ಜಾನಪದವಾಯಿತು.ಮುಂದೆ ಈ ಮನಃಸ್ಥಿತಿಯೇ ಜಗನ್ನಾಥನಾಗಲು ಮಾನಸಿಕ ಸಿದ್ಧತೆಯಾಯಿತು‌.ಗೋವುಗಳು,ಗೋಪಾಲರು,
ಗೋಪಿಯರ‌ ಒಡನಾಟದಲ್ಲಿಸರಳ ,ಮುಗ್ಧ,
ವಿಮರ್ಶೆಗಳಿಲ್ಲದ ಕೃಷ್ಣನ ಬಾಲ್ಯ ಬಲುಮೆಯಿಂದ ಬಲಿಯಿತು.
ಕೃಷ್ಣನ ಬಾಲ್ಯ ಆಕರ್ಷಣೀಯವಾಗಿತ್ತು.
ಅವನ ರೂಪ,ತುಂಟಾಟ,ಚುರುಕುಗಳೆಲ್ಲ ಗೋಕುಲದಲ್ಲಿ ಹೊಸ ಉತ್ಸಾಹ ಮೂಡಿಸಿತು.ಎಲ್ಲರ ಮನೆಯ ಮಗುವಾಗಿ ಬೆಳೆದ ಕೃಷ್ಣ ಒಬ್ಬ ದನಗಾಹಿ ಬಾಲಕನೇ ಆದ.ದನಗಳನ್ನು ಮೇಯಿಸುವ ಸಂದರ್ಭದಲ್ಲಿ ದನಗಳ ಗಮನಸೆಳೆಯಲು ಮತ್ತು ಸಮಯ ಕಳೆಯಲು ಮರವೇರಿ ಕುಳಿತು ಬಿದಿರ ಓಟೆಯಲ್ಲಿ ಸುಶ್ರಾವ್ಯ ನಾದವನ್ನು ಹೊಮ್ಮಿಸಿದ.
ಗೋವುಗಳು,ಗೋಪರು,ಗೋಪಿಯರು ಮಾತ್ರವಲ್ಲ ಇಡೀ ಗೋಕುಲವೇ ಈ ನಿನಾದಕ್ಕೆ
ಕಿವಿಯಾಯಿತು.ಈಗ ಕೃಷ್ಣ ಎಂದರೆ ಏನೋ ಸೆಳೆತ ,ಸಂಭ್ರಮ,ಗದ್ದಲ,ಸಂತೋಷ,
ಆತ್ಮೀಯತೆ,ಪ್ರೀತಿಯಾಗಿ ಗೋಕುಲವನ್ನು ಆವರಿಸಿತು.ಸುಸ್ವರ ಹೊರಹೊಮ್ಮಿದ
“ಬಿದಿರ ಓಟೆ” ‘ಮುರಲಿ’ಯಾಯಿತು.ಮುರಲಿ‌ ನುಡಿಸಿ ಮುರಲೀಧರನಾದ ಕೃಷ್ಣ.
ಆಟ ಪಾಠ ವಿನೋದಗಳು ಮಕ್ಕಳಿರುವಲ್ಲಿ‌ ಸಹಜ.
ಅದಕ್ಕೆ ಗೋಕುಲವೂ ಹೊರತಾಗಿರಲಿಲ್ಲ.ಆದರೆ ಕೃಷ್ಣನ ಬಾಲ್ಯವು ಒಡಗೂಡಿದಾಗ ಕಳ್ಳತನವೂ ಆಟವೇ ಆಯಿತು.ಇದು ಹಾಲು ಬೆಣ್ಣೆ ಮೊಸರು‌ ತುಪ್ಪಗಳ ಕಳವು‌ ಹೊರತು ಇತರ ಯಾವುದೇ ವಸ್ತುಗಳ ಕಳವು ಅಲ್ಲ.ಕಳವಿನೊಂದಿಗೆ ಒಂದಷ್ಟು ಹಾಳುಮಾಡುವ ತುಂಟಾಟವೂ ಜೊತೆಯಾಗಿತ್ತು.
ಆದರೆ ಯಾವ ಮನೆಯ ಗೋಪಿಯೂ‌‌‌ ಈ ತುಂಟಾಟದಿಂದ ಕೋಪಗೊಳ್ಳಲೇ ಇಲ್ಲ,ಬದಲಿಗೆ ಸಂತೋಷಪಡುತ್ತಿದ್ದಳು.ಕಾರಣ ಈ ಚೇಷ್ಟೆಗಳ ನಾಯಕ ಕೃಷ್ಣ ಎಂದು ಗೊತ್ತಿತ್ತು.ಆದರೆ ತೋರ್ಪಡಿಕೆಯ ಕೋಪ ಪ್ರದರ್ಶಿಸುತ್ತಿದ್ದರು,
ಯಶೋದೆಯಲ್ಲಿ ದೂರು ಕೊಡುತ್ತಿದ್ದರು.ಕೃಷ್ಣನ ತುಂಟ ಬಾಲಕರ ಸೈನ್ಯಕ್ಕೆ ಹಿಡಿಶಾಪ ಹಾಕುತ್ತಿದ್ದರು.
ಎಲ್ಲಾ ಮನೆಗಳ ಗೋಪಿಯರು ತಮ್ಮ ಮನೆಯಲ್ಲಿ ಇವತ್ತು ಕೃಷ್ಣ ಬೆಣ್ಣೆ – ಮೊಸರು ಕದಿಯಲು ಬರಬೇಕು,ಹೊಂಚುಹಾಕಿ ಅವನನ್ನು ಹಿಡಿಯಬೇಕು ,ಅಪ್ಪಿ ಮುದ್ದಾಡಬೇಕು ಎಂದೇ ಬಯಸುತ್ತಿದ್ದರು.ಮನೆಯಲ್ಲಿ ಗವ್ಯಗಳ ಕಳವು ಆಗುತ್ತಿದೆ ಎಂಬ ದೂರು ಯಾವ ಮನೆಯ ಯಜಮಾನ ಗೋಪನಲ್ಲಿಯವರೆಗೆ ಹೋಗಲೇ ಇಲ್ಲ.ಇದು ಕೃಷ್ಣನ ಆಕರ್ಷಣೆ.ಅವನ ಮುರಲಿಯ ನಿನಾದದಲ್ಲಿದ್ದ ಹರೆಯದ ಉದ್ದೀಪನ ಶಕ್ತಿ‌.
ಈ ರೀತಿಯಲ್ಲಿ ‘ಕೃಷ್ಣ ಎಂಬ ಧರ್ಮ:
ಬೆಳೆಯಿತು,ಭರತವರ್ಷದಾದ್ಯಂತ ವ್ಯಾಪಿಸಿತು. ಧರ್ಮ ಸಂಸ್ಥಾಪನೆಯೇ ಪರಮ ಲಕ್ಷ್ಯವಾಯಿತು. ಕೊನೆಗೆ ಯುಗಾಂತದ ಯುಗಪ್ರವರ್ತಕನಾಗಿ ವಿಜೃಂಭಿಸಿತು.ಗೀತಾಚಾರ್ಯನಾಗಿ ಧರ್ಮವನ್ನು ಬೋಧಿಸುವ ಮೂಲಕ ರಾರಾಜಿಸಿತು.
ರಾಜತ್ವವಿಲ್ಲದ ಯಾದವರಿಗೆ ದ್ವಾರಾವತಿ ನಿರ್ಮಾಣವು ಯದುವಂಶದ ಕೊರತೆಯನ್ನು ನಿವಾರಿಸಿತು.ಗೋವಳ ಕೃಷ್ಣನು ಹಸ್ತಿನಾವತಿಯಲ್ಲಿ ಚಕ್ರವರ್ತಿ ಪೀಠಕ್ಕೆ ಸಂಬಂಧಿಸಿದ ದಾಯಾದ್ಯ ಕಲಹದ ನಿರ್ಣಾಯಕ ಸಂದರ್ಭದಲ್ಲಿ ಸಂಧಿಗಾಗಿ ಮಹಾಸಂಗ್ರಾಮವನ್ನು ತಪ್ಪಿಸುವ ಯತ್ನವನ್ನೂ ಮಾಡುವ ಮೂಲಕ ಶ್ರೇಷ್ಠ ರಾಜಕೀಯ ಮುತ್ಸದ್ಧಿಯಾಗುತ್ತಾನೆ.ಜಗದಗಲದಲ್ಲಿ ಸಾಕ್ಷಾತ್ ಭಗವಂತನೇ ಆಗುತ್ತಾನೆ.ವಸುದೈವ ಕುಟುಂಬಕನಾಗಿಯೂ ವಾಸುದೇವನಾಗುತ್ತಾನೆ.
ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ಬಾಲ್ಯದ ಚಿಂತನೆಯಷ್ಟೇ ಮಾಡುತ್ತಾ ಅಷ್ಟಮಿ ,ವಿಟ್ಲಪಿಂಡಿ ಆಚರಿಸೋಣ.

| ಅಟ್ಟೆಮಿ – ಪೇರರ್ಘ್ಯೆ|

ಅಷ್ಟಮಿ ಪರ್ವದಿನದಂದು ಹಗಲು ಉಪವಾಸವಿದ್ದು ರಾತ್ರಿ ‘ತಿಂಗೊಲು ಮೂಡ್ನಗ’ ( ಚಂದ್ರೋದಯವಾಗುವ ವೇಳೆ) ಸ್ನಾನಮಾಡಿ ಮನೆಯ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಬಿಲ್ವಪತ್ರೆ ಅರ್ಪಿಸಿ ಹಾಲು ಎರೆಯುವ ( ಪೇರರ್ಘ್ಯೆ ಬುಡ್ಪುನಿ ) ಸರಳ – ಮುಗ್ಧ ಆಚರಣೆ ನಮ್ಮಲ್ಲಿ ಇದೆ .
ಚಂದ್ರೋದಯದ ವರೆಗೆ ಸಮಯ ಕಳೆಯಲು ” ಎಕ್ಕಡಿ ” ಆಡುವುದು ವಾಡಿಕೆಯಾಗಿತ್ತು . ಪೇರರ್ಘ್ಯೆಗೆ ” ಅಡಿಗೆ ಬುಡ್ಪುನಿ ” ಎಂದೂ ಹೇಳುವುದಿದೆ . ‘ಅಷ್ಟಮಿ ಉಡಾರಿಗೆ’ ಎಂಬುದು ವಿಶೇಷ ತಿಂಡಿ . ಇದನ್ನು ಅಷ್ಟಮಿ ಸಂದರ್ಭದಲ್ಲಿ ಮಾಡುವುದು . ಅಕ್ಕಿಯ ಹಿಟ್ಟನ್ನು ಬುಟ್ಟಿಯಲ್ಲಿ ಸುರಿದು ಪಾತ್ರೆಯಲ್ಲಿರಿಸಿ (ತೊಂದುರು) ಬೇಯಿಸುವುದು . ಇದು ‘ಉಡಾರಿಗೆ’ .

| ಅರ್ಘ್ಯ ಪ್ರದಾನ |

ಶ್ರೀ ಕೃಷ್ಣ ಜನ್ಮಾಷ್ಟಮಿ / ಶ್ರೀ ಕೃಷ್ಣ ಜಯಂತಿಯಂದು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯದ ವೇಳೆ ವಿವಿಧ ಭಕ್ಷ್ಯ , ಉಂಡೆ – ಚಕ್ಕುಲಿಗಳನ್ನು ಸಮರ್ಪಿಸಿ ಕೃಷ್ಣನಿಗೆ ಪೂಜೆ ಸಲ್ಲಿಸುವುದು ವಾಡಿಕೆ .ಇದರೊಂದಿಗೆ ‘ ಅರ್ಘ್ಯ ಪ್ರದಾನ ‘ ಅಷ್ಟಮಿ ಪರ್ವದ ವಿಶೇಷ .
ಮನೆ ದೇವರ ಮುಂಭಾಗದಲ್ಲಿ ಭಕ್ಷ್ಯಗಳನ್ನಿಟ್ಟು ಸಮರ್ಪಣೆ ಮಾಡಿ ಆರತಿ ಎತ್ತುವುದು . ಬಳಿಕ ದೇವರ ಸಂಪುಷ್ಟವನ್ನಿರಿಸಿ ಕೃಷ್ಣ , ಬಲರಾಮ , ವಸುದೇವ , ದೇವಕಿ , ನಂದಗೋಪ , ಯಶೋದಾ , ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆಯನ್ನು ಅರ್ಪಿಸಿ ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡುವುದು .
ಪುನಃ ತುಳಸಿಕಟ್ಟೆಯ ಮುಂಭಾಗದಲ್ಲಿ ಪೂಜೆಮಾಡಿ ಒಡೆದ ತೆಂಗಿನಕಾಯಿಯನ್ನು ಇರಿಸಿ ( ತೆಂಗಿನಕಾಯಿ ಒಡೆದಾಗ ಕಣ್ಣುಳ್ಳ ಭಾಗವನ್ನು ‘ಹೆಣ್ಣು’ ಎಂದು , ಉಳಿದ ಭಾಗವನ್ನು ‘ಗಂಡು’ ಎಂದು ಗುರುತಿಸುವುದು ವಾಡಿಕೆ . ಇದರಲ್ಲಿ ಗಂಡು ಭಾಗವನ್ನು ಮಾತ್ರ ಅರ್ಘ್ಯ ಪ್ರದಾನಕ್ಕೆ ಬಳಸುವ ಸಂಪ್ರದಾಯವೂ ಇದೆ . ಕೃಷ್ಣ ಗಂಡು ಮಗುವಲ್ಲವೆ , ಸಾಂಕೇತಿಕವಾಗಿ ಗಂಡು ಭಾಗವನ್ನು ಅರ್ಘ್ಯ ಪ್ರದಾನಕ್ಕೆ ಉಪಯೋಗಿಸಿಕೊಳ್ಳುವುದು .) ಬಿಲ್ವಪತ್ರೆಯನ್ನು ಅರ್ಪಿಸಿ , ಶಂಖದಲ್ಲಿ ಹಾಲು ತುಂಬಿ ಮಂತ್ರಹೇಳುತ್ತಾ ಚಂದ್ರನಿಗೆ ಅರ್ಘ್ಯ ಅರ್ಪಿಸುವುದು ವೈದಿಕ ಕ್ರಮ . ಕೆಲವೆಡೆ ನೀರಿನಲ್ಲೆ ಅರ್ಘ್ಯ ಪ್ರದಾನ ಮಾಡುವ ಸಂಪ್ರದಾಯವಿದೆ.

||ವಿಟ್ಲಪಿಂಡಿ||

ವಿಠಲನ ಪಿಂಡಿ “ವಿಟ್ಲಪಿಂಡಿ” . ಪಿಂಡಿ ಎಂದರೆ ಗಂಟು . ವಿಠಲನಲ್ಲಿ ಇದ್ದದ್ದು ,ವಿಠಲನಲ್ಲಿಗೆ ತಂದದ್ದು ಉಂಡೆ – ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು.ಈ ಗಂಟನ್ನು ಇಟ್ಟು ಕೊಂಡು ,ಅದನ್ನು ಪಡೆಯಲು ಬೇಕಾಗಿ ಆಡಿದ್ದ ಆಟವೇ ಪಿಂಡಿಯೇ ಮುಖ್ಯವಾದ ಆಟವಾಯಿತು,ಅದು ‘ವಿಟ್ಲ ಪಿಂಡಿ’ಯಾಯಿತು.
ವಿಠಲನಾದ ಕೃಷ್ಣನು ಗೋಪಾಲರೊಂದಿಗೆ – ಗೋಪಿಯರೊಂದಿಗೆ ಆಡಿದ ಆಟಗಳೇ ಕೃಷ್ಷ ಲೀಲೆ . ಇದನ್ನು ಉತ್ಸವ ಎಂಬ ನೆನಪಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ . ಗೋಪಿಯರ ಕಣ್ಣು ತಪ್ಪಿಸಿ ಗೋಪರ ಮನೆಗೆ ಹೊಕ್ಕು ಹಾಲು ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಬಿದ್ದ ಮಡಕೆಗಳು‌ ಪುಡಿಯಾದಾಗ “ಮೊಸರು ಕುಡಿಕೆ” ಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು – ಮೊಸರು ತುಂಬಿದ ಮಡಕೆ – ಕುಡಿಕೆಗಳಿಗೆ ಕಲ್ಲು ಎಸೆದು ಅಥವಾ ಕೋಲಿನಿಂದ ರಂಧ್ರಮಾಡಿ ಕೆಳಗೆ ನಿಂತು ಹಾಲಿನ ಧಾರೆಗೆ ಬಾಯಿಕೊಟ್ಟು ಕುಡಿಯುವ ಚೇಷ್ಠೆ ಕೃಷ್ಣನಾಡಿದ “ಮೊಸರು ಕುಡಿಕೆ”ಯ ಅಣಕನ್ನು‌ ಅಥವಾ ಪ್ರತಿಕೃತಿಯನ್ನು‌ ನಾವಿಂದು ಕಾಣುತ್ತೇವೆ .

• ಕೆ . ಎಲ್ . ಕುಂಡಂತಾಯ

 
 
 
 
 
 
 
 
 
 
 

Leave a Reply