“ಮತಂಗಾಶ್ರಮದ ರಾಮಭಕ್ತೆ “~ರಾರಾ. (ಡಾ.ರಾಘವೇಂದ್ರ ರಾವ್)

ಋಷ್ಯಮೂಕ ನಗದ ತಳದ
ಸೊಗದ ಪರ್ಣಕುಟಿಯದು/
ಋಷಿಯ ಕುಲದಿ ಘನತೆ ತಳೆದ
ಸುಮತಂಗನ ನೆಲೆಯದು//

ತಪದ ಬಲಕೆ ಹೂವುಹಣ್ಣು
ಅನವರತವು ತರುವಲಿ/
ಹಣ್ಣ ಮೇಲೆ ಹಕ್ಕಿ ಕಣ್ಣು
ಮಧುರ ಸರವು ವನದಲಿ//

ವಿಪಿನಮೃಗದಿ ವೈರವಿಲ್ಲ
ಧರ್ಮಸದನ ಆಶ್ರಮ/
ವಿಷಯಸುಖವ ಮರೆತರೆಲ್ಲ
ವೇದಶಾಸ್ತ್ರ ಸಂಗಮ//

ಚೆಲುವ ಕುಟಿಯ ದಿವ್ಯಶಕ್ತಿ
ಶಬರಿ ಎಂಬ ತಾಪಸಿ/
ಮನದ ತುಂಬ ರಾಮಭಕ್ತಿ
ಹೃದಯದಿಂದ ರೂಪಸಿ//

ರಾಮ ಬರಿಯ ಮನುಜನಲ್ಲ
ಧರೆಗೆ ಇಳಿದ ದೇವನು/
ದುಷ್ಟತನವ ಸಹಿಸಲೊಲ್ಲ
ಶಿಷ್ಟಜನರ ಕಾಯ್ವನು//

ಎದೆಯ ಭಕ್ತಿ ವ್ಯರ್ಥವಲ್ಲ
ರಾಮ ಬಳಿಗೆ ಬರುವನು/
ಋಷಿಯ ನುಡಿಗೆ ಲೋಪವಿಲ್ಲ
ವೃದ್ಧ ಇಳೆಯ ತೊರೆದನು//

ಗುರುವಚನಕೆ ತನುವು ಪುಲಕ
ಮನದ ತುಂಬ ಸಂಭ್ರಮ/
ಕುಸುಮದಲ್ಲೆ ರಾಮಫಲಕ
ವನದಿ ಶಬರಿ ವಿಭ್ರಮ//

ಹೀಗೆ ಬರುವ ಹಾಗೆ ಬರುವ
ಬಂದೆ ಬರುವ ರಾಮನು/
ದಿಬ್ಬವೇರಿ ಏರಿ ಮರವ
ಸಿಹಿಯ ಹಣ್ಣ ತರುವೆನು//

ನುಡಿಗೆ ನಡೆಗೆ ಧ್ಯಾನ ತಪಕೆ
ಶಬರಿಗುಂಟೆ ಹೋಲಿಕೆ!/
ವನದಿ ತಳೆದ ಸುರಭಿ ಸುಮಕೆ
ಸಾವಿರಾರು ಮಾಲಿಕೆ//

ಭಕುತಿ ದನಿಯು ತಲುಪಿತಾಗ
ರಾಘವೇಂದ್ರನೆದೆಯನು/
ಮಡದಿ ಸೀತೆ ಹುಡುಕುತಾಗ
ಅನುಜನೊಡನೆ ಬಂದನು//

ಆನಂದಕೆ ಪಾರವಿಲ್ಲ
ಎದುರಿನಲ್ಲೆ ರಾಮನು/
ಕಣ್ಣನೀರ್ಗೆ ಕೊನೆಯೆಯಿಲ್ಲ
ಪಾದಕೆರೆದ ಮುತ್ತದು//

ನೀನೆ ತಾಯಿ ನೀನೆ ತಂದೆ
ನೀನೆ ಎನ್ನ ಪ್ರಾಣವು/
ಎದೆಯ ಭಕ್ತಿಗೊಲಿದು ಬಂದೆ
ನೀನೆ ಕಾಮಧೇನುವು//

ದೀನಜನಕೆ ನೀನೆ ರಕ್ಷೆ
ಭೀತಿ ಕಳೆವ ರಾಮನೆ!/
ನಿನ್ನ ಮರೆತ ಕ್ಷಣವೆ ಶಿಕ್ಷೆ
ಎಂತು ನಿನ್ನ ಪೊಗಳ್ವೆನೆ!!//

ಕುಶಲ ನುಡಿಗೆ ಸಿಹಿಯ ಹಣ್ಗೆ
ರಾಮಚಂದ್ರ ತಣಿದನು/
ಮಮತೆ ತಳೆದ ಹೊಳೆವ ಕಣ್ಗೆ
ಹೃದಯದಲ್ಲೆ ಮಣಿದನು//

ರಾಮ ಕಂಡ ಘಳಿಗೆಯಲ್ಲೆ
ಧನ್ಯವಾಯ್ತು ಜೀವನ/
ಬಾಗಿ ಶಿರವು ಚರಣದಲ್ಲೆ
ತನುಮನವು ಪಾವನ//

ಸಾರವಿರದ ನೀರಗುಳ್ಳೆ
ಸಂಸಾರವ ಬಗೆದಳು/
ಜನುಮವಿರದ ಮುಕ್ತಿಮಾರ್ಗ
ತೋರುವಂತೆ ಒರೆದಳು//

ಶಬರಿ ಬಯಕೆ ಫಲಿಸಿತಾಗ
ರಾಮ ನುಡಿದ ‘ಆಗಲಿ’/
ದಿವ್ಯರೂಪ ಸೇರಿತಾಗ
ರಾಮನೊಲುಮೆ ಬೆಳಕಲಿ//

 
 
 
 
 
 
 
 
 
 
 

Leave a Reply