ಭಾರತೀಯ ಇತಿಹಾಸದಲ್ಲಿ ದೂರದರ್ಶನ ಹಾಗೂ ಅಂದಿನ ಜಾಹೀರಾತುಗಳು~ ಕಿರಣ್ ಪೈ, ಮಂಗಳೂರು

ಜಾಹಿರಾತು ಪ್ರಸ್ತುತ ದಿನಗಳಲ್ಲಿ ಬೃಹತ್ ಉದ್ಯಮ. ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ  ಉತ್ಪನ್ನ, ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಮಾರ್ಗವಿದು.

ಜಾಹೀರಾತುಗಳು ಬ್ರಾಂಡ್ ಇಮೇಜ್ ಮತ್ತು ಬ್ರಾಂಡ್ ಲಾಯಲ್ಟಿ ಸೃಷ್ಟಿಸಿ ಉತ್ಪನ್ನಗಳನ್ನು ಹೆಚ್ಚುಬಳಸುವಂತೆ ಪ್ರೇರೇಪಿಸುತ್ತವೆ. ಸಿಂಪಲ್ಲಾಗಿ ಹೇಳುವುದಾದರೆ ಪಿನ್ ಟು ಪ್ಲೇನ್ ಜಾಹೀರಾತಿಲ್ಲದೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಲು ಕಷ್ಟ.ಜಾಹಿರಾತು ಗಳು ಕೇವಲ ಮಾರ್ಕೆಟಿಂಗ್, ಪ್ರಚಾರದ ಮೂಲಕ ಲಾಭ ಮಾಡುತ್ತಾ ಬಂದಿಲ್ಲ, ದೇಶದ ಆರ್ಥಿಕ, ಸಾಮಾಜಿಕ ಮೌಲ್ಯಗಳಿಗೂ ಇದರ ಕೊಡುಗೆ ಇದೆ.

ರಾತು ‘ಹಾರ್ಲಿಕ್ಸ್’ 1883ರ ಬೆಂಗಾಲ್ ಸಾಪ್ತಾಹಿಕ ಪತ್ರಿಕೆಯಲ್ಲಿ ಪ್ರಕಟವಾಯಿತೆಂಬ ಉಲ್ಲೇಖವಿದೆ. 1905ರಲ್ಲಿ ಭಾರತೀಯ ಅಧಿಕೃತ ಜಾಹೀರಾತು ಸಂಸ್ಥೆ ಬಿ.ದತ್ತಾರಾಮ್  ಕಂಪನಿ ಬಾಂಬೆ ನಗರದಲ್ಲಿ ಸ್ಥಾಪನೆಯಾಯಿತು.1975-80ರ ತನಕ ಜಾಹಿರಾತುಗಳು ಬಹುತೇಕ ಮುದ್ರಣ ಹಾಗೂ ರೇಡಿಯೋವನ್ನೇ ಅವಲಂಬಿಸಿದ್ದವು. 1980ರ ಬಳಿಕ ಜಾಹಿರಾತು ಕಂಪನಿಗಳು ಮುದ್ರಣದ ಜೊತೆಗೆ ಟಿವಿ ಜಾಹಿರಾತಿಗೆ ಪ್ರಮುಖ್ಯತೆ ಕೊಡಲಾರಂಭಿಸಿತು. ಏಕಕಾಲಕ್ಕೆ ಲಕ್ಷಾಂತರ ಪ್ರೇಕ್ಷಕರನ್ನು ತಲುಪುವುದು ಇದಕ್ಕೆ ಮುಖ್ಯ ಕಾರಣ.

ಕ್ರಿಕೆಟ್ ತಾರೆಯರಿಗೆ ಬೇಡಿಕೆ: ಕೇವಲ ಸಿನೆಮಾ ತಾರೆಯರು ಕಂಡುಬರುತ್ತಿದ್ದ ಜಾಹಿರಾತಿನಲ್ಲಿ 1983ರ ಕ್ರಿಕೆಟ್ ವಿಶ್ವ ಕಪ್ ಭಾರತ ಗೆದ್ದ ಬಳಿಕ ಕ್ರಿಕೆಟ್ ಆಟಗಾರ ಬೇಡಿಕೆ ಹೆಚ್ಚಾಗುತ್ತದೆ. ಸುನಿಲ್ ಗವಾಸ್ಕರ್, ಕಪಿಲ್ ದೇವ್, ಶ್ರೀಕಾಂತ್, ಸಚಿನ್ ತೆಂಡೂಲ್ಕರ್ ಮೊದಲಾದವರಿಂದ ಆರಂಭವಾದ ಕ್ರಿಕೆಟ್ ಸಾರ್ ಸ್ಪರ್ಧೆ ವಿರಾಟ್ ಕೊಹ್ಲಿ, ರಿಷಬ್ ಪಂತ್‌ವರೆಗೆ ನಾಟ್ ಔಟ್.

ಧಾರವಾಹಿ ಮಧ್ಯೆ ಜಾಹಿರಾತು: ದೂರದರ್ಶನದಲ್ಲಿ ಹಮ್ ಲೋಗ್ ಧಾರಾವಾಹಿ 1984ರಲ್ಲಿ ತೆರೆಕಂಡಾಗ ಬಹುತೇಕ ಸಂಸ್ಥೆಗಳು ತಮ್ಮ ಉತ್ಪನ್ನಗಳ ಜಾಹೀರಾತು ಮೂಲಕ ಗಮನ ಸೆಳೆಯುವ  ಪ್ರಯತ್ನ ಮಾಡಿದವು.

ನಂತರ 1986ರ ಬುನಿಯಾದ್ ಹಾಗೂ ಪ್ರಸಿದ್ಧ ಧಾರಾವಾಹಿ ನಮ್ಮ ಕರ್ನಾಟಕದ ಹೆಮ್ಮೆ ಶಂಕರ್ ನಾಗ್ ನಿರ್ದೇಶನದ ಆರ್.ಕೆ. ನಾರಾಯಣರವರ ಕಥೆ ಆಧರಿತ ಮಾಲ್ಗುಡಿ ಡೇಸ್ ತೆರೆಕಂಡಾಗ ದಕ್ಷಿಣ ಭಾರತದ ವೀಕ್ಷಕರ ಮನಗೆದ್ದಿತು. ಮಲೆನಾಡು, ಆಗುಂಬೆ, ತೀರ್ಥಹಳ್ಳಿಯ ಸೊಬಗು ಉತ್ತರ ಭಾರತಕ್ಕೂ ಆ ಕಾಲದಲ್ಲಿ ತಲುಪುವಂತೆ ಮಾಡಿದ ಕೀರ್ತಿ ಆ ತಂಡಕ್ಕೆ ಸಲ್ಲುತ್ತದೆ.

ಇವತ್ತಿಗೂ 80-90 ರ ದಶಕದಲ್ಲಿ ಬಾಲ್ಯ ಕಂಡ ಜನರು 4ಜಿ ಯುಗದಲ್ಲೂ ಗ್ರೇಟ್ ಶಂಕರ್ ನಾಗರವರ ಮಾಲ್ಗುಡಿ ಡೇಯ್ಸ್ ರಿಂಗ್ ಟೋನ್, ಕಾಲರ್ ಟೋನ್ ಇಟ್ಟು ತಮ್ಮ ಬಾಲ್ಯವನ್ನು ನೆನೆಯುತ್ತಾರೆ. ದಕ್ಷಿಣದ ಹಿಂದಿ ತಿಳಿಯದ ಪ್ರೇಕ್ಷಕರು ಮಾಲ್ಗುಡಿಯನ್ನು ಪ್ರೀತಿಯಿಂದ ಸ್ವಾಗತಿಸಿದರು. ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಟಿ.ಆರ್.ಪಿ ಗಮನಿಸಿದ ಕಂಪನಿಗಳು ತಮ್ಮ ಜಾಹೀರಾತು ಹೆಚ್ಚಿನ ಸಂಖ್ಯೆಯಲ್ಲಿ ಕೊಡಲಾರಂಭಿಸಿದರು.

1988 ವಾಗ್ಲೆ ಕೀ ದುನಿಯಾ, ಚಿತ್ರಹಾರ್ ಸಂಗೀತ, 1989 ಶಾರುಖ್ ಖಾನ್ ಅಭಿನಯದ ಸರ್ಕಸ್, 1990ರ ದೇಶದ ವಿವಿಧ ಸಂಸ್ಕೃತಿ, ಆಚರಣೆ, ವಿವಿಧ ಸಂಪ್ರದಾಯಗಳ ಕನ್ನಡಿ ‘ಸುರಭಿ’ 1991ರ ಚಾಣಕ್ಯ ಧಾರಾವಾಹಿ ಅತ್ಯಂತ ಜನಪ್ರಿಯಗೊಂಡವು.

 ಟರ್ನಿಂಗ್ ಪಾಯಿಂಟ್:  1987 ದೂರದರ್ಶನದಲ್ಲಿ ತೆರೆಕಂಡ ರಮಾನಂದ ಸಾಗರ್ ನಿರ್ಮಾಣದ ರಾಮಾಯಣ ಧಾರಾವಾಹಿ ಅಂತರಾಷ್ಟ್ರೀಯ ಖ್ಯಾತಿ ಪಡೆಯಿತು. ಭಾರತೀಯ ಟಿವಿ ಜಗತ್ತಿನಲ್ಲಿ ಎಲ್ಲ ದಾಖಲೆಗಳನ್ನು ಮುರಿದ ಈ ಧಾರಾವಾಹಿಗೆ ‘ಟರ್ನಿಂಗ್  ಪಾಯಿಂಟ್ ಆಫ್ ಇಂಡಿಯನ್ ಸಿರಿಯಲ್ಸ್’ ಎಂಬ ಪ್ರಸಿದ್ಧಿ ಇದೆ.  

ಭಕ್ತಿ, ಶ್ರದ್ಧೆ ವಿಷಯಾಧರಿತ ತೆರೆಕಂಡ ರಾಮಾಯಣ, 1988ರ ಬಿ.ಆರ್. ಚೋಪ್ರಾ ನಿರ್ಮಾಣದ ಮಹಾಭಾರತ ಅಭೂತಪೂರ್ವ ಜನಮನ್ನಣೆಗೆ ಪಾತ್ರವಾಯಿತು. ಜಾಹೀರಾತು ಜಗತ್ತು ಈ ಅವಕಾಶವನ್ನು ಸಂಪೂರ್ಣ ಬಳಸಿಕೊಂಡಿತು. ಎಷ್ಟೆಂದರೆ  ಜಾಹಿರಾತು ಕೊಡದ ಕಂಪನಿಗಳು ತಮ್ಮ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ಜಾಹಿರಾತು ನೀಡಲಾರಂಭಿಸಿದವು.

ಖಾಸಗಿ ಟಿವಿ ಯುಗ: 1991-92ರ ಬಳಿಕ ಭಾಷಾವಾರು ಟಿವಿ ಜಾಹಿರಾತುಗಳು ತೆರೆಕಂಡವು ಕ್ರಮೇಣ ಕಂಪನಿಗಳ ಒಲವು ಖಾಸಗಿ ಚಾನಲ್ ಕಡೆಗೆ ಬದಲಾಯಿತು. 1991ರ ನಂತರ ದೇಶದಲ್ಲಿ ಖಾಸಗಿ ಚಾನಲ್ಗಳ ಕ್ರಾಂತಿ ಆರಂಭ. 1991 ದೇಶದಲ್ಲಿ ಟಿವಿ ಕ್ರಾಂತಿ ಆರಂಭ, 1992ರಲ್ಲಿ ಡಾ.ಸುಭಾಶ್‌ಚಂದ್ರ ಮಾಲೀಕತ್ವದ ಎಸ್ಸ್ ಸೆಲ್ ದೇಶದ ಮೊದಲ ಖಾಸಗಿ ಮನೋರಂಜನಾ ಚಾನಲ್ ಜೀ ಆರಂಭಿಸಿದರೆ, ಸನ್ ನೆಟರ್ಕ್ ಸಂಸ್ಥೆ ಮೊದಲ ಖಾಸಗಿ ನ್ಯೂಸ್ ಚಾನೆಲ್ ಆರಂಭಿಸಿತು. ಖಾಸಗಿ ಚಾನಲ್ಗಳ ಬೆಳವಣಿಗೆ ಕಂಡು ಕಂಪನಿಗಳು, ಜಾಹೀರಾತು ಸಂಸ್ಥೆ ಖಾಸಗಿ ಚಾನಲ್ ಕಡೆ ಒಲವು ತೋರಿಸಿದವು. 2000ರ ಬಳಿಕ ಆನ್‌ಲೈನ್ ಜಾಹಿರಾತುಗಳು ಹೆಚ್ಚಾದವು.

ಜಾಹೀರಾತು- ಮಾಧ್ಯಮ ಸಂಬಂಧ: ಪತ್ರಿಕೆ, ರೇಡಿಯೋ, ಖಂಡಿತ ಅತ್ಯುತ್ತಮ ಮಾಧ್ಯಮ. ಆದರೆ ಟಿವಿ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದು ಕೊಂಡದ್ದು ಅಷ್ಟೇ ಸತ್ಯ. ಈ ಕಾರಣಕ್ಕಾಗಿಯೇ ಭಾರತದಲ್ಲಿ 200 ಮಿಲಿಯನ್ ಟೆಲಿವಿಷನ್ ಇರುವ ಮನೆಗಳಿವೆ.

ಹಾಗೆಯೇ 886 ಮಿಲಿಯನ್ ಟಿವಿ ವೀಕ್ಷಕರಿದ್ದು, ಇದರಲ್ಲಿ ಸುಮಾರು 600 ಮಿಲಿಯನ್ ಜನರು ನಿತ್ಯ ಟಿವಿ ವೀಕ್ಷಿಸುತ್ತಾರೆ. ದೇಶದಲ್ಲಿ ಈವರೆಗೆ ಅಂದಾಜು 900ಕ್ಕೂ ಹೆಚ್ಚು ಪರವಾನಗಿ ಪಡೆದ ಉಪಗ್ರಹ ಟೆಲಿವಿಷನ್ ಚಾನೆಲ್‌ಗಳಿವೆ. ಅವುಗಳಲ್ಲಿ ಸುಮಾರು 600 ಚಾನೆಲ್‌ಗಳಲ್ಲಿ ವೀಕ್ಷಕರನ್ನು ಟಿಆರ್‌ಪಿಗಾಗಿ ಲೆಕ್ಕಹಾಕಲಾಗುತ್ತದೆ.

ಜಾಹೀರಾತು ಕಂಪನಿಗಳನ್ನು ಆಕರ್ಷಿಸಲು ಚಾನಲ್‌ಗಳಿಗೆ ಟಿ.ಆರ್.ಪಿ. ಬಹುಮುಖ್ಯ ಅಸ್ತ್ರ. ದೇಶದಲ್ಲಿ ನಿಜಕ್ಕೂ ಮಾಧ್ಯಮ ಮತ್ತು ಜಾಹೀರಾತಿನ ಸಂಬಂಧ ಅದ್ಭುತ. ವರ್ತಮಾನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮಗಳು ಹಾಗೂ ಜಾಹೀರಾತು ರೈಲ್ವೆ ಹಳಿಗಳಂತೆ ಒಂದಕ್ಕೊಂದು ಹೊಂದಿಕೊಂಡು ಮುನ್ನಡೆಯುವ ಅನಿವಾರ್ಯತೆ.

80-90 ರ ದಶಕಗಳ ಜಾಹೀರಾತಿನ ಟ್ಯಾಗ್ ಲೈನ್ಸ್ ಬಹಳ ಜನಪ್ರಿಯಗೊಂಡು ಜನರನ್ನು ಒಂದು ರೀತಿಯ ಬ್ರಾಂಡಿಗ್ ತರಹ ಆಕರ್ಷಿಸಿದವು. ಜನರೇಷನ್, ಸಮಯ ಬದಲಾದಂತೆ ಅದೆಷ್ಟೋ ಜಾಹಿರಾತು, ಬ್ರಾಂಡಿಂಗ್ ಬದಲಾದವು. ವಿನ್ಯಾಸ, ಟ್ರೆಂಡ್, ತಂತ್ರಜ್ಞಾನ, ಗುಣಮಟ್ಟ ಬದಲಾವಣೆ ಆದರೂ ಅನೇಕ ಸಂಸ್ಥೆಗಳು ತನ್ನ ಆರಂಭ ದಿನಗಳ ಟ್ಯಾಗ್‌ಲೈನ್ ಮಾತ್ರಬಿಟ್ಟಿಲ್ಲ. ಕೇವಲ ಟ್ಯಾಗ್‌ಲೈನ್ ಗಮನಿಸಿಯೇ ಗ್ರಾಹಕ ಉತ್ಪನ್ನ ಗುರುತಿಸುತ್ತಾನೆ.

ಉದಾಹರಣೆಗೆ ಫಿಟ್ ಹೇ ಬಾಸ್, ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಉಪ್ಪಿದೆಯೇ ?, ಪಿಯೋ ಗ್ಲಾಸ್ ಫೂಲ್ ದೂದ್,  ಪವರ್ ಆಫ್ ಮೈ ಎನರ್ಜಿ, ಅವರ್ ಎನರ್ಜಿ, ಯೇ ದಿಲ್ ಮಾಂಗೇ ಮೋರ್, ಅಂದಿನ ಆಡ್ ಗಳನ್ನು ಜನತೆ ಭಾವನಾತ್ಮಕವಾಗಿ ಒಪ್ಪಿಕೊಂಡಿತ್ತು. ಹಳೆಯ ಆಡ್ ಇವತ್ತಿಗೂ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ.

ಸಾಮಾಜಿಕ ಜಾಗೃತಿ: ಕಂಪನಿಗಳು ವಾಣಿಜ್ಯ ಉದ್ದೇಶಗಳಿಗೆ ಜಾಹಿರಾತು ನೀಡಿದರೆ ಸರ್ಕಾರ ಸಾಮಾಜಿಕ ಜಾಗೃತಿಗಾಗಿ ಜಾಹಿರಾತು ಬಳಸಿಕೊಂಡಿದೆ. ಶಿಕ್ಷಣ, ಆರೋಗ್ಯ ಸಂಬಂಧಿಸಿ ಹೆಚ್ಚು ಜಾಹಿರಾತನ್ನು ಬಳಸಿಕೊಂಡಿದೆ. ಕ್ಯಾನ್ಸರ್, ಏಡ್ಸ್ ವಿರುದ್ಧ ಜಾಗೃರಿ, ಪೋಲಿಯೋ ಅಭಿಯಾನ, ಅಂದಿನ ದೇಶದ ನೆಚ್ಚಿನ ಪ್ರಧಾನಮಂತ್ರಿ ವಾಜಪೇಯಿಯವರು ಸ್ವತಃ ಕಂಡು ಬಂದ ಸರ್ವ ಶಿಕ್ಷಣ ಅಭಿಯಾನ ಜಾಹಿರಾತನ್ನು ಮರೆಯಲು ಸಾಧ್ಯವೇ? ಕೋಟ್ಯಂತರ ಜನರನ್ನು ತಲುಪಿದೆ ಕೀರ್ತಿ ಸ್ಕೂಲ್ ಚಲೇ ಹಮ್ ಆಡ್ನದ್ದು.
 
ಭಾರತೀಯ ಮಾಧ್ಯಮಗಳ ಉದಯ: ಭಾರತದ ಮೊದಲ ಪತ್ರಿಕೆ ದಿ ಬೆಂಗಾಲ್ ಗೆಜೆಟ್ 1780ರಲ್ಲಿ ಆರಂಭವಾಯಿತು. ಜುಲೈ 1,1843ರಲ್ಲಿ ಮಂಗಳೂರ ಸಮಾಚಾರ ಕರ್ನಾಟಕದ ಮೊದಲ ಪತ್ರಿಕೆ ಮಂಗಳೂರಿನಲ್ಲಿ ಮುದ್ರಣವಾಯಿತು. 1923ರಲ್ಲಿ ಬ್ರಿಟಿಷ್ ಆಡಳಿತದ ಆಗಿನ ಬಾಂಬೆ ಪ್ರಾಂತ್ಯದಲ್ಲಿ ಮೊದಲ ರೇಡಿಯೋ ಪ್ರಸಾರವಾಯಿತು. ಭಾರತದಲ್ಲಿ ಬ್ರಿಟಿಷ್  ಮೂಲದ ರೇಡಿಯೋ 1927 ಜುಲೈ 23ರಲ್ಲಿ ಅಸ್ತಿತ್ವಕ್ಕೆ ಬಂತು. 1957ರಲ್ಲಿ ಆಕಾಶವಾಣಿ ಎಂದು ಮರುನಾಮಕರಣ ಮಾಡಲಾಯಿತು. ಆಲ್ ಇಂಡಿಯಾ ರೇಡಿಯೋ ಅಧಿಕೃತವಾಗಿ 1936ರಿಂದ ಪ್ರಸಾರ ಭಾರತಿಯ ವಿಭಾಗವಾಗಿದೆ.

ಭಾರತದಲ್ಲಿ ದೂರದರ್ಶನ ಉದಯ: 1959ರ ಸೆಪ್ಟೆಂಬರ್ 15ರಂದು ದೆಹಲಿ ಕೇಂದ್ರದಿಂದ ಮೊದಲ ದೂರದರ್ಶನ ಕಾರ್ಯಕ್ರಮ ಪ್ರಸಾರವಾಯಿತು. 2021 ದೂರದರ್ಶನಕ್ಕೆ 61 ವಸಂತ ಪೂರೈಸಿದ ಸಡಗರ. ಭಾರತದ ಸಂವಹನ ಕ್ಷೇತ್ರದಲ್ಲಿ ಸುವರ್ಣ ಅಧ್ಯಾಯ. ಅಂದು ದೆಹಲಿ ಕೇಂದ್ರದ ಪ್ರಸಾರ ವ್ಯಾಪ್ತಿ ನಲವತ್ತು ಕಿಲೋಮೀಟರ್ ಆಗಿತ್ತು.

ಶುರುವಿಗೆ ವಾರಕ್ಕೆ ಎರಡು ಬಾರಿ ಇಪ್ಪತ್ತು ನಿಮಿಷಗಳ ಅವಧಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿತ್ತು. 1965ರಲ್ಲಿ ದೂರದರ್ಶನದಲ್ಲಿ ಸುದ್ದಿ ಸಮಾಚಾರ ಮತ್ತು ಮನರಂಜನೆ ಒದಗಿಸುವ ಕಾರ್ಯಕ್ರಮ ಪ್ರಾರಂಭವಾಯಿತು. 1967ರಲ್ಲಿ ರೈತರಿಗಾಗಿ ಕೃಷಿ ದರ್ಶನ ವಿಶೇಷ ಕಾರ್ಯಕ್ರಮ ಪ್ರಸಾರ ಆರಂಭವಾಯಿತು.

1976ರ ಜನವರಿ 1ರಿಂದ ಭಾರತ ದೂರದರ್ಶನದಲ್ಲಿ ವಾಣಿಜ್ಯ ಜಾಹಿರಾತುಗಳು ಕಾಣಿಸಿಕೊಳ್ಳಲಾರಂಭಿಸಿದವು. 1976 ಗ್ವಾಲಿಯರ್ ಸೂಟಿಂಗ್ಸ್ ಮತ್ತು ಕೊಕಾಕೋಲಾ ಭಾರತೀಯ ಟಿ.ವಿ. ಇತಿಹಾಸದಲ್ಲಿ ಮೊದಲ ಜಾಹೀರಾತು ಎಂಬ ಹೆಗ್ಗಳಿಕೆ ಪಡೆದಿದೆ.

ಇದೇ ವರ್ಷ ಕೆಂದ್ರಸರ್ಕಾರ ದೂರದರ್ಶನವನ್ನು ‘ಆಲ್ ಇಂಡಿಯ ರೇಡಿಯೋ’ ಆಡಳಿತ ನಿರ್ವಹಣೆಯಿಂದ ಬೇರ್ಪಡಿಸಿತು. 1975-76ರಲ್ಲಿ ಉಪಗ್ರಹ ಶೈಕ್ಷಣಿಕ ಟೆಲಿವಿಷನ್ ಮೂಲಕ ಶೈಕ್ಷಣಿಕ ಪ್ರಸಾರ ಪ್ರಾರಂಭವಾಯಿತು. ಕರ್ನಾಟಕದ ಕೆಲವು ಹಳ್ಳಿಗಳಿಗೂ ಸೇರಿದಂತೆ ಭಾರತದ 2400 ಗ್ರಾಮಗಳಿಗೆ ಒಂದು ವರ್ಷಕಾಲ ಈ ಕಾರ್ಯಕ್ರಮ ಪ್ರಸಾರ ಮಾಡಲಾಯಿತು.

1977ರಲ್ಲಿ ಜಯಪುರ, ಹೈದರಾಬಾದ್, ಕಲಬುರಗಿ, ರಾಯಪುರ, ಸಂಬಾಲ್ಪುರ ದೂರದರ್ಶನ ಕೇಂದ್ರಗಳ ಆರಂಭಗೊಂಡವು. 1981ರ ಜನವರಿ 1ನೇ ತಾರೀಖು ದೂರದರ್ಶನ ಬೆಂಗಳೂರು ಮಹಾನಗರಕ್ಕೆ ಕಾಲಿಟ್ಟಿತು. 1983ರ ರಾಜ್ಯೋತ್ಸವ ದಿನದಂದು ಕನ್ನಡ ವಾರ್ತಾಪ್ರಸಾರ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಾರಂಭವಾಯಿತು.

ಕ್ರಮೇಣ ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮಗಳಲ್ಲಿ ವಸ್ತು ವೈವಿಧ್ಯತೆ ಕಂಡು ಬರಲಾರಂಭಿಸಿತು. ಕನ್ನಡದ ಜಾಹೀರಾತು ಟಿವಿಯಲ್ಲಿ ಬರಲಾರಂಭವಾಯಿತು. 1994ರ ಆಗಸ್ಟ್‌ನಲ್ಲಿ ಕರ್ನಾಟಕ ಪ್ರಾದೇಶಿಕ ಪ್ರಸಾರ ಸೇವೆ ಪ್ರಾರಂಭವಾಯಿತು. ಇದರಿಂದಾಗಿ ಸಂಪೂರ್ಣ ಕನ್ನಡ ಕಾರ್ಯಗಳು ಬಿತ್ತರಗೊಳ್ಳುವಂತಾಯಿತು. 2000ರಲ್ಲಿ ಕನ್ನಡ ವಾಹಿನಿಗೆ ಚಂದನ ಎಂದು ಹೆಸರಿಡಲಾಯಿತು. 

ಟಿವಿ ಆರಂಭದ ನೆನಪು:  ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಟಿವಿ ಇದ್ದ ಕಾಲವದು. ತಮ್ಮ ಮನೆಯಲ್ಲಿ ಟಿವಿ ಇಲ್ಲದಿದ್ದರೂ ಬೇರೆಯೊಬ್ಬರ ಮನೆಗೆ ಟಿವಿ ನೋಡಲು ಓಡಬೇಕಿತ್ತು. ಆಗ ಇದ್ದ ಆಯ್ಕೆ ಒಂದೇ ಚಾನೆಲ್ ದೂರದರ್ಶನ. ಆ ಕಾರ್ಯಕ್ರಮಗಳ ಬಗೆಗಿನ ಕುತೂಹಲ, ವಿದ್ಯುತ್ ಕೈಕೊಡದಿರಲಪ್ಪಾ ಎಂಬ ಪ್ರಾರ್ಥನೆ, ಶಾಲೆಯಿಂದ ಬಂದ ತಕ್ಷಣ ಬ್ಯಾಗ್ ಎಸೆದು ಗೆಳೆಯರೊಂದಿಗೆ ಟಿವಿ ಎದುರು ಕುಳಿತುಕೊಳ್ಳುತ್ತಿದ್ದ ನೆನಪು ಈಗಲೂ ಮರೆಯಲಸಾಧ್ಯ.

ಧಾರವಾಹಿಗಳ ಖುಷಿ, ವಿವಿಧ ಮಾಹಿತಿ ಕಾರ್ಯಕ್ರಮ, ಚಲನಚಿತ್ರ, ಹಾಡುಗಳು.. ಎಲ್ಲವೂ ಇಂದಿಗೂ ಮನದಲಿ ಹಚ್ಚಹಸಿರು. ದೂರದರ್ಶನದ ಟೈಟಲ್ ಮ್ಯೂಸಿಕ್ ಕೇಳಿದರೆ ಇಂದಿಗೂ ಮನಸ್ಸು ರೋಮಾಂಚನಗೊಳ್ಳುತ್ತದೆ.

ದೊಡ್ಡ ನಗರಗಳ ಶ್ರೀಮಂತರ ಮನೆಯಲ್ಲಿದ್ದ ಟಿವಿ 1982ರ ನಂತರ ಮನೆಮನೆಗೆ ತಲುಪಲು ಆರಂಭವಾಯಿತು. ಕೊನೆ ಪಕ್ಷ ಕಪ್ಪು ಬಿಳುಪು ಟಿವಿ ಇರಲಿ ಎಂಬ ಭಾವನೆ ಜನರಲ್ಲಿ. 82ರ ಏಷ್ಯನ್ ಗೇಮ್ಸ್ ಹಾಗೂ ನೆಹರು ಪುಟ್ಬಾಲ್ ಕಪ್ ಬಣ್ಣದಲ್ಲಿ ಪ್ರಸಾರಗೊಂಡವು. ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಆಶಯದಂತೆ ಸಣ್ಣ ನಗರಗಳಿಗೂ ಟಿವಿಗಳು ಲಗ್ಗೆ ಇಟ್ಟವು. ಜನರಿಗೆ ಕಲರ್ ಟಿವಿಗಳ ಕಡೆ ಆಕರ್ಷಣೆ ಜಾಸ್ತಿಯಾಯಿತು.

ಇಂದು ಆಯ್ಕೆ ಸಾವಿರಾರು, ಆದರೆ ಆ ಭಾವನೆ, ಒಡನಾಟ, ಕೂಡಿ ಸಂಭ್ರಮಿಸುವ ಖುಷಿ…‌‌‌‌..‌‌‌ ಮರೆತೇ ಹೋಗಿರುವುದು ಸತ್ಯ….!
 
 
 
 
 
 
 
 
 
 
 

Leave a Reply