ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. – ರಾಘವೇಂದ್ರ ಪ್ರಭು,ಕರ್ವಾಲು

ರಕ್ತಕ್ಕೆ ಪರ್ಯಾಯ ವಸ್ತು ಈ ಜಗತ್ತಿನಲ್ಲಿ ಇಲ್ಲಿಯವರೆಗೆ ಕಂಡುಹಿಡಿದಿಲ್ಲ. ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಬದಲಿ ಸಂಯೋಜನೆಯನ್ನು ನಿರ್ಮಿಸಲು ಅಸಾಧ್ಯ ಅಂತೆಯೇ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮನಷ್ಯನ ದೇಹವಿಡೀ ಸಂಚರಿಸಿ, ಜೀವವನ್ನೇ ಹಿಡಿಕೊಂಡಿರುವ ಕೆಂಪು ವರ್ಣದ ದ್ರವವೇ ರಕ್ತ.

ಈ ಭೂಮಿಯಲ್ಲಿ ಪ್ರತೀತಿಯಂತೆ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂಬ ಮಾತಿದೆ. ಯಾವ ವ್ಯಕ್ತಿಗೆ ರಕ್ತದ ಅವಶ್ಯ ವಿದೆಯೋ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ನಾವು ಕೊಡುವ ಒಂದು ಬಾಟಲ್‌ ರಕ್ತ ಒಂದು ಜೀವವನ್ನು ಉಳಿಸಲು ಸಾಧ್ಯ. ರಕ್ತದಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಬರುತ್ತವೆ ಎಂಬ ಮೂಢ ನಂಬಿಕೆ ಇಂದಿನ ಕಾಲದಲ್ಲೂ ಇದೆ. ಇದ ರೊಂದಿಗೆ ಗೊಂದಲ, ಆತಂಕ ಕೂಡ ಇದೆ. ಆದರೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಆರೋಗ್ಯ ಕೆಡುವುದಿಲ್ಲ. ರಕ್ತದಾನದ ಕುರಿತಾಗಿರುವ ಜನರಲ್ಲಿರುವ ಗೊಂದಲ, ಆತಂಕ ದೂರ ಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ವೈದ್ಯರ ಮಾಹಿತಿಯಂತೆ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನದಲ್ಲಿ ಕೇವಲ 350 ಮಿ.ಲೀ ರಕ್ತವನ್ನು ಸ್ವೀಕರಿಸ ಲಾಗು ತ್ತದೆ. ಇದರಿಂದ ದಾನಿಗಳಿಗೆ ಯಾವುದೇ ಅಪಾಯವಿಲ್ಲ.ಆಸ್ಪತ್ರೆಗಳಲ್ಲಿ ರಕ್ತಕ್ಕೆ ವರ್ಷ ವಿಡೀ ನಿರಂತರ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ ಸಂದರ್ಭಗಳು ಬರುತ್ತಲೇ ಇರುತ್ತವೆ. ಇದರೊಂದಿಗೆ ಕ್ಯಾನ್ಸರ್‌ ರೋಗಿಗಳಿಗೆ, ಗರ್ಭಿಣಿಯರಿಗೆ, ಥ್ಯಾಲಸೀಮಿಯ, ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನವನ್ನು ಅವಲಂಬಿಸಿದ್ದಾರೆ. 

ಒಂದು ಬಾರಿ ದಾನಿಗಳಿಂದ ಶೇಖರಿಸ್ಪಟ್ಟ ರಕ್ತದಲ್ಲಿ ಕೇವಲ 35 ದಿನಗಳ ವರೆಗೆ ಶಕ್ತಿ ಉಳಿಯುತ್ತದೆ. 35 ದಿನಗಳ ಅನಂತರ ರಕ್ತ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ನಿರಂತರ ರಕ್ತದಾನ ಮಾಡಿದ್ದಲ್ಲಿ ಮಾತ್ರ ಜೀವ ಉಳಿಸಲು ಸಾಧ್ಯ.ಪ್ರತಿ ವರ್ಷ ಜೂ. 14ರಂದು (ಇಂದು) ವಿಶ್ವ ದೆಲ್ಲೆಡೆ ವಿಶ್ವ ರಕ್ತದಾನಿಗಳ ದಿನವನ್ನು ಆಚ ರಿಸ ಲಾಗುತ್ತದೆ. 2004ರಲ್ಲಿ ಚಾಲ್ತಿಗೆ ಬಂದ ಈ ದಿನ ರಕ್ತ, ರಕ್ತದ ಉತ್ಪನ್ನಗಳ ಅಗತ್ಯದ ಕುರಿತು ಜಾಗೃತಿ ಮೂಡಿಸುತ್ತದೆ. ಇದರೊಂದಿಗೆ ಸ್ವಯಂಪ್ರೇರಿತರಾಗಿ ಜೀವ ಉಳಿಸುವ ಉಡುಗೊರೆ ರಕ್ತವನ್ನು ದಾನ ಮಾಡುವ ವ್ಯಕ್ತಿಗಳಿಗೆ ಧನ್ಯವಾದ ಈ ದಿನ ತಿಳಿಸಲಾಗುತ್ತದೆ. 

ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿ ರಕ್ತದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.ಪ್ರತಿ ವರ್ಷ ರಕ್ತ ಹಾಗೂ ರಕ್ತದ ಉತ್ಪನ್ನಗಳ ವರ್ಗಾವಣೆಯಿಂದಾಗಿ ಮಿಲಿಯನ್‌ಗಳಷ್ಟು ಜೀವಗಳು ಉಳಿಯುತ್ತವೆ. ರಕ್ತದಾನ ಜೀವ ಹೋಗುವ ಸ್ಥಿತಿಯಲ್ಲಿರುವ ರೋಗಿಯನ್ನು ಹೆಚ್ಚು ಕಾಲ ಬದುಕಲು ಮತ್ತು ಉನ್ನತ ಮಟ್ಟದ ಜೀವನ ಸಾಗಿಸಲು ನೆರವಾಗುತ್ತದೆ.

ಇತಿಹಾಸ :-

ಪ್ರತಿ ವರ್ಷ ಕಾರ್ಲ್ ಲ್ಯಾಂಡ್‌ಸ್ಟೆನರ್‌ ಎಂಬವರ ಜನ್ಮ ವಾರ್ಷಿಕೋತ್ಸದಂದು ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ (ಜೂನ್‌ 14 1868). ಕಾರ್ಲ್ ಆಸ್ಟ್ರಿಯಾದ ಜೀವಶಾಸ್ತ್ರಜ್ಞ. 1900ರಲ್ಲಿ ರಕ್ತದ ಗುಂಪುಗಳ ಸಮೂಹವನ್ನು ಗುರುತಿಸಿ ಆಧುನಿಕ ರಕ್ತದ ಗುಂಪುಗಳ ವರ್ಗೀಕರಣವನ್ನು ಅಭಿವೃದ್ದಿ ಪಡಿಸಿ ಪ್ರಮುಖ ರಕ್ತದ ಗುಂಪುಗಳನ್ನು ಪ್ರತ್ಯೇಕಿಸಿದರು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ಅವರ ನೊಬಲ್‌ ಪ್ರಶಸ್ತಿ ಪಡೆದ ವಿಜ್ಞಾನಿ. ಅವರು ರಕ್ತವನ್ನು ಎ, ಬಿ, ಒ ಎಂಬ ಗುಂಪುಗಳಾಗಿ ವಿಂಗಡಿಸಿದರು. ಹೀಗಾಗಿ ಇವರ ಜನ್ಮ ದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲ್ಪಡುತ್ತಿದೆ. ಭಾರತದಲ್ಲಿ ಪ್ರತಿವರ್ಷ ಅಕ್ಟೋಬರ್‌ ಒಂದರಂದು ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.

 ರಕ್ತದಾನದಿಂದ ದಾನಿಗೇನು ಲಾಭ?

• ಉತ್ತಮ ಆರೋಗ್ಯ ಕಾಪಾಡಬಹುದು.

• ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.

• ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಯಾಗುವುದರಿಂದ ಹೃದಯಾಘಾತ ಸಾಧ್ಯತೆ ಶೇ. 80 ರಷ್ಟು ಕಡಿಮೆ.

• ಮಧುಮೇಹ, ರಕ್ತದೊತ್ತಡ ತಡೆಯಲು ಸಹಕಾರಿ.

• ವ್ಯಕ್ತಿ ಚುರುಕಾಗಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡುತ್ತದೆ.

ವೈದ್ಯರ ಮಾಹಿತಿಯಂತೆ 

• 18ರಿಂದ 60 ವರ್ಷಗಳೊಳಗಿನ ಆರೋಗ್ಯವಂತ ಪುರುಷರು 3 ಮತ್ತು ಮಹಿಳೆಯರು 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

• ರಕ್ತದಾನಿಯು ಕನಿಷ್ಠ 45 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿರಬೇಕು. ಅಲ್ಲದೆ ರಕ್ತದಲ್ಲಿ 12.5 ಗ್ರಾಂಗಿಂತ ಅಧಿಕ ಪ್ರಮಾಣದ ಹಿಮೋಗ್ಲೊಬಿನ್‌ ಅಂಶ ಹೊಂದಿರುವುದು ಅಗತ್ಯ.

• ರಕ್ತದಾನ ಎಂಬುದು 10ರಿಂದ 15 ನಿಮಿಷಗಳ ಪ್ರಕ್ರಿಯೆ. ಅದರಿಂದ ಸುಧಾರಿಸಿಕೊಳ್ಳಲು ವ್ಯಕ್ತಿಗೆ ಸಾಮಾನ್ಯವಾಗಿ 20 ನಿಮಿಷ ಸಾಕು.

• ರಕ್ತದಲ್ಲಿ ನಾಲ್ಕು ಘಟಕಗಳಿರುತ್ತವೆ. ಅವುಗಳೆಂದರೆ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲೇಟ್ಲೆಟ್ಸ್‌, ಪ್ಲಾಸ್ಮಾ.

• ರಕ್ತಕಣಗಳು ಆರೋಗ್ಯವಂತ ಅಸ್ಥಿಮಜ್ಜೆಯಿಂದ ಉತ್ಪಾದಿಸಲ್ಪಡುತ್ತವೆ.

• ರಕ್ತದಿಂದ ಬೇರ್ಪಡಿಸಲ್ಪಟ್ಟ ಪ್ಲೇಟ್ಲೆಟ್ಸ್‌ಗಳನ್ನು 5 ದಿನಗಳೊಳಗೆ ಉಪಯೋಗಿಸಬೇಕಿದೆ.

• ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಾಗುವ ಪ್ರತಿ 10 ರೋಗಿಗಳಲ್ಲಿ ಓರ್ವರಿಗೆ ರಕ್ತದ ಆವಶ್ಯಕತೆ ಇರುತ್ತದೆ.

• ಭಾರತದಲ್ಲಿ ಪ್ರತಿ 2 ಸೆಕೆಂಡ್‌ಗಳಿಗೆ ಓರ್ವನಿಗೆ ರಕ್ತದ ಆವಶ್ಯಕತೆ ಇರುತ್ತದೆ.ಎಬಿ ಪಾಸಿಟಿವ್‌ ಪ್ಲಾಸ್ಮಾ ಗುಂಪಿನ ರಕ್ತವನ್ನು ಎಲ್ಲ ಗುಂಪಿನ ರಕ್ತಗಳೊಂದಿಗೆ ಹೊಂದಿಕೆ ಮಾಡಿಕೊಳ್ಳಬಹುದು.

ಯಾರೆಲ್ಲ ರಕ್ತದಾನ ಮಾಡಬಾರದು?

• ಅನಾರೋಗ್ಯ ಪೀಡಿತರು, ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು.

• ಮಧುಮೇಹ, ಅಧಿಕ ರಕ್ತದೊತ್ತಡ ಕಾಯಿಲೆ ಇರುವವರು.

• ಹಿಮೋಗ್ಲೋಬಿನ್‌ ಕೊರತೆ ಇರುವವರು.

• ಗರ್ಭಿಣಿಯರು, ಎದೆಹಾಲು ಉಣಿಸುತ್ತಿರುವವರು.

• ಋತುಸ್ರಾವದ ಸಮಯದಲ್ಲಿ ಮಹಿಳೆಯರು.

• ಮಾದಕ ವ್ಯಸನ, ಮದ್ಯಪಾನಗೈದಿರುವವರು.

• ಎಚ್‌ಐವಿ/ಸೋಂಕಿತರು.

• ಟೈಫಾಯ್ಡ, ರಕ್ತಹೀನತೆ, ಮಲೇರಿಯಾ, ರೇಬಿಸ್‌ ಲಸಿಕೆ ಹಾಕಿಸಿಕೊಂಡವರು.

• ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ 6 ಮತ್ತು ಚಿಕ್ಕ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ 3 ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.

• ಮೈ ಮೇಲೆ ಹಚ್ಚೆ ಹಾಕಿಸಿಕೊಂಡವರು, ಬದಲಿ ರಕ್ತ ಪಡೆದವರು 6 ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.

ನನ್ನ ಅನುಭವದಂತೆ ಹೇಳುದಾದರೆ ಒಮ್ಮೆ ರಕ್ತದಾನ ಮಾಡಿದರೆ ಮುಂದೆ ಅದನ್ನು ಮುಂದುವರೆಸುವ ಉತ್ಸಾಹ ಮೂಡುತ್ತದೆ. ಈ ಬಗ್ಗೆ ಯಾವುದೆ ಮೂಡನಂಬಿಕೆ ಯಿಡದೆ ರಕ್ತದಾನ ಮಾಡಿ ಜೀವ ಉಳಿಸುವ ದೊಡ್ದ ಕೆಲಸ ನಮ್ಮಿoದ ನಡೆಯಲು ಸಾದ್ಯ.ಉಡುಪಿ ಜಿಲ್ಲೆಯನ್ನು ಈಗಾಗಲೇ ಸಕಾ೯ರ ರಕ್ತದಾನಿಗಳ ಜಿಲ್ಲೆಯoದು ಘೋಷಣೆ ಮಾಡಿದೆ. ಇದು ಎಲ್ಲಾ ರಕ್ತದಾನಿಗಳಿಗೆ ನೀಡಿದ ದೊಡ್ಡ ಗೌರವವಾಗಿದೆ.ನಾವು ಕೂಡ ತಪ್ಪದೇ ರಕ್ತದಾನ ಮಾಡೋಣ ನಮ್ಮ ಆರೋಗ್ಯ ಮಾತ್ರವಲ್ಲದೆ ಮತ್ತೊಬ್ಬರ ಆರೋಗ್ಯ ಉಳಿಸುವ ಕೆಲಸ ಮಾಡೋಣ.

ಸಹಕಾರ: – ಕೆ.ಎಂ.ಸಿ ವೈದ್ಯ ವಿದ್ಯಾಥಿ೯ಗಳು 

 

 
 
 
 
 
 
 
 
 
 
 

Leave a Reply