“ಭೀಮ್ ಕುಂಡ್ ರಹಸ್ಯ”~ ಕಿರಣ್ ಪೈ ಮಂಗಳೂರು.

ಮಹಾಭಾರತದ ಭೀಮ ನಿರ್ಮಿಸಿದ ಅದ್ಭುತ ರಹಸ್ಯ ಕೆರೆ “ಭೀಮ್ ಕುಂಡ್” 
ಭಾರತ ಅಸಂಖ್ಯ ನಿಗೂಢ ವಿಶೇಷತೆಗಳನ್ನು ತನ್ನ ಗರ್ಭದಲ್ಲಿ ಇರಿಸಿದೆ. ವಿಜ್ಞಾನ, ಸರಕಾರಕ್ಕೆ ಇವತ್ತಿಗೂ ಅನೇಕ ಸ್ಥಳಗಳ ರಹಸ್ಯವನ್ನು ಭೇದಿಸಲಾಗಲಿಲ್ಲ ಅಲ್ಲದೆ ಇಂದಿಗೂ ಸವಾಲಾಗಿಯೇ ಉಳಿದಿದೆ. ಮಧ್ಯ ಪ್ರದೇಶದ ಚತರ್ಪುರ್ ಜಿಲ್ಲೆಯ ಬಾಜನಾ ಗ್ರಾಮದ ಭೀಮ್ ಕುಂಡ್ ಅತ್ಯಂತ ಪುರಾತನ ರಹಸ್ಯಮಯ ನೈಸರ್ಗಿಕ ಕೆರೆ. ಕಾರಣ, ಈ ಕೆರೆಯ ಆಳ ಯಾರಿಂದಲೂ ಅಳೆಯ ಲಾಗದೇ ಇರುವುದು. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಜ್ಞಾನಿಗಳು, ಮುಳುಗು ತಜ್ಞರು ಕೆರೆಯ ರಹಸ್ಯ ಅಧ್ಯಯನ ನಡೆಸಿದ ನಿದರ್ಶನಗಳಿವೆ.ಆದರೂ ಯಾರಿಗೂ ತಳ ತಲುಪಲಾಗಲಿಲ್ಲವಂತೆ. 
ದೊಡ್ಡದಾದ ಎರಡು ಬಂಡೆಗಳನ್ನು ಸೀಳಿ ನಡುವೆ ಗುಹೆಯಂತಹ ಪ್ರದೇಶದಲ್ಲಿ ಈ ನೈಸರ್ಗಿಕ ಕೆರೆ ಕಂಡು ಬರುತ್ತದೆ.ಭೀಮ್ ಕುಂಡಕ್ಕೆ ಪುರಾತನ ಇತಿಹಾಸ ಇದೆ ಎಂದು ಉಲ್ಲೇಖ ಇದೆ.ಇದು ಮಾನವ ನಿರ್ಮಿತ ಕೆರೆ ಅಲ್ಲ. ಹಿಂದೂ ಸಂಸ್ಕೃತಿಯ ಸಾಧು, ಋಷಿ-ಮುನಿಗಳು ಶ್ರಾವಣ ಸೋಮವಾರ, ಶಿವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ಇಂದಿಗೂ ಮಾಡುತ್ತಾರೆ.
ಇತರೆ ದಿನಗಳಲ್ಲಿ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ನೀರನ್ನು ತೀರ್ಥ ರೂಪದಲ್ಲಿ ಸ್ವೀಕರಿಸು ತ್ತಾರೆ.ಸ್ಥಳೀಯ ಯುವಕರು, ಈಜು ಗೊತ್ತಿರುವ ಪ್ರವಾಸಿಗರು ಕೆರೆಯಲ್ಲಿ ಪವಿತ್ರ ಸ್ನಾನ ಮಾಡುವುದನ್ನಾ ಕಾಣಬಹುದು. 
ಮಹಾಭಾರತದ ಇತಿಹಾಸ : ಪಾಂಡವರು ಅಜ್ಞಾತವಾಸದ ಸಮಯ ಇಲ್ಲಿನ ಗುಹೆಗಳ ಬಳಿ ಬಂದಾಗ ದ್ರೌಪದಿಗೆ ಬಹಳ ಬಾಯಾರಿಕೆ ಆಯಿತು, ಪಾಂಡವರಿಗೂ ದಣಿವಾಗಿತ್ತು, ನೀರಿನ ಸೆಲೆ ಹುಡುಕಿದರೂ ಸಿಗಲಿಲ್ಲ, ಸಿಟ್ಟಿನಿಂದ ಭೀಮ ಗದಾಪ್ರಹಾರ ಭೂಮಿ ಮೇಲೆ ಮಾಡಿದ ಸಂದರ್ಭ, ದೊಡ್ಡದಾದ ನೀರಿನ ಕೆರೆ ಮಾರ್ಪಟ್ಟಿತು.
ಈ ಕಾರಣ ಇದಕ್ಕೆ ಭೀಮ್ ಕುಂಡ್ ಎಂದು ಕರೆಯಲಾಗುತ್ತದೆ. ಇದೇ ಸ್ಥಳದಲ್ಲಿ ಪಾಂಡವರು ಅನೇಕ ದಿನ ತಂಗಿದ್ದರು,ಮಹಾದೇವ ಶಿವನ ಪೂಜೆ, ಆರಾಧನೆ ಮಾಡಿರುವ ಬಗ್ಗೆ ಐತಿಹ್ಯ ಇದೆ. ಕೆರೆಯ ನೀರು ನೀಲಿ ಬಣ್ಣ ಹೊಂದಿದೆ, ಸ್ವಲ್ಪ ಮೀಟರ್ ಒಳ ಭಾಗ ಸ್ಪಷ್ಟವಾಗಿ ಕಾಣುತ್ತದೆ. ಆ ಕಾರಣ ನೀಲ್ ಕುಂಡ್ ಎಂದು ಕರೆಯುತ್ತಾರೆ. ನೀರು ಎಂದಿಗೂ ಕಲುಷಿತಗೊಳ್ಳುವುದೇ ಇಲ್ಲ. ಕೆರೆಯಲ್ಲಿ ಆಯುರ್ವೇದದ ಸತ್ವ ಇರುವ ಗಿಡಗಳು, ಪಾಚಿಯ ಕಾರಣ ಬಹಳ ಪವಿತ್ರವಾದ ದೈವಿ ಶಕ್ತಿಯ ಕೆರೆ ಎಂಬುದು ಸ್ಥಳೀಯರ ಶ್ರದ್ಧೆ, ನಂಬಿಕೆ. 
ಆಳ ಕಂಡು ಹುಡುಕಲು ಅಸಾಧ್ಯ: ಭೀಮ್ ಕುಂಡ್ ಅತ್ಯಂತ ರಹಸ್ಯಮಯ ಕೆರೆ, ಇದರ ಸಂಪೂರ್ಣ ಆಳ ಇವತ್ತಿಗೂ ಯಾರಿಂದಲೂ ಅಳೆಯಲು ಆಗಲಿಲ್ಲ. ಭೀಮನೇ ನಿರ್ಮಾಣ ಮಾಡಿರುವುದಕ್ಕೆ ಇದು ಪುಷ್ಟಿ ನೀಡುತ್ತದೆ ಎಂಬುದು ಅನೇಕ ಪೌರಾಣಿಕ ಇತಿಹಾಸ ಪರಿಣಿತರ ಅಭಿಪ್ರಾಯ.
ಅದೆಷ್ಟೋ ಆಸಕ್ತ ವಿಜ್ಞಾನಿಗಳು ,ಮುಳುಗು ತಜ್ಞರ ತಂಡ, ಇಷ್ಟೇ ಯಾಕೆ ಪ್ರಸಿದ್ಧ ಅಂತಾ ರಾಷ್ಟ್ರೀಯ ಖ್ಯಾತಿಯ ಡಿಸ್ಕವರಿ ಚಾನೆಲ್ ತಂಡ ಸ್ಥಾನೀಯ ಜನರೊಂದಿಗೆ ಸುಮಾರು 80-90 ಮೀಟರ್ ಒಳಗಡೆ ತಲುಪಿದೆ ನಂತರ ಶೋಧ ಅಸಾಧ್ಯ, ಕಾರಣ ಏನೋ ವಿಚಿತ್ರ ಅನುಭವ, ಒತ್ತಡ, ಕತ್ತಲು, ನೀರಿನ ರಭಸವಾದ ಸೆಳೆತ, ಅಲ್ಲದೆ ಹೋದಷ್ಟು ಆಳ. ಅದಕ್ಕಾಗಿ ಅನ್ವೇಷಣೆ ಕಾರ್ಯ ಕೈಬಿಟ್ಟರು. 
ಅವಘಡ ನಡೆದಲ್ಲಿ ದೇಹ ಸಿಗೋದಿಲ್ಲ: ಶುದ್ಧ ನೀಲ ವರ್ಣದ ನೀರು, ಕೆರೆಯ ಎರಡು ಇಕ್ಕೆಲಗಳಲ್ಲಿ ಇರೋ ಬಂಡೆಗಳ ಮೇಲಿಂದ ಜಿಗಿಯುವ ಸಾಹಸ ಮಾಡಿ ಅನೇಕ ಅವಘಡಗಳು ನಡೆದಿದೆ. ಆದರೆ ವಿಚಿತ್ರ ಸಂಗತಿ ಅಂದ್ರೆ ಇಲ್ಲಿ ಮುಳುಗಿ ಸತ್ತಲ್ಲಿ ಬಹುತೇಕ ಮಂದಿಯ ಮೃತ ದೇಹ ಮೇಲೆ ಬರದೇ ಇರುವುದು.ಸಾಮಾನ್ಯವಾಗಿ ನೀರಲ್ಲಿ ಮೃತ ಶರೀರ 24-36 ಗಂಟೆಯೊಳಗೆ ತೇಲುವುದು. ಆದ್ರೆ ಈ ಕೆರೆಯಲ್ಲಿ ಅದಕ್ಕೆ ವ್ಯತಿರಿಕ್ತ ಸವಾಲು ಎಂಬುದು ಒಂದು ವಾದ.
 ಸುನಾಮಿ, ಪ್ರವಾಹ, ಭೂಕಂಪದ ವಾರ್ನಿಂಗ್ :  ನೈಸರ್ಗಿಕ ವಿಕೋಪಗಳ ವಾರ್ನಿಂಗ್ ನೀಡುತ್ತದೆ ಈ ಕೆರೆ.. ಹೌದು ಗೆಳೆಯರೇ, ಸುನಾಮಿ, ಭೂಕಂಪದಂತಹ ವಿಕೋಪಗಳು ಸಂಭವಿಸುತ್ತದೆ ಎಂದಾದರೆ ಈ ಭೀಮ ಕುಂಡದ ನೀರು ಇದ್ದಕ್ಕಿದ್ದಂತೆಯೇ ಹೆಚ್ಚಾಗುತ್ತದೆಯಂತೆ.
ಸಾಮಾನ್ಯವಾಗಿ ಈ ಕೆರೆಯ ನೀರು ಎಲ್ಲಾ ಸಂದರ್ಭದಲ್ಲೂ ಒಂದೇ ಮಟ್ಟದಲ್ಲಿ ಇರುವುದು ಆದರೆ, ಇಂತಹ ವಿಪತ್ತುಗಳು ಘಟಿಸೋ ಮೊದಲು ನೀರು ಮೇಲಕ್ಕೆ ಬರುತ್ತದೆ. ಭಾರತ, ಜಪಾನ್, ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿ ಸಂಭವಿಸಿದಾಗಲೂ ಇಲ್ಲಿನ ನೀರಿನ ಮಟ್ಟ ಏರಿಕೆ ಯಾಗಿತ್ತು, ಎಂದು ಸ್ಥಳೀಯರು ಖಾಸಗಿ ವಾಹಿನಿಗಳ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ವೈಜ್ಞಾನಿಕ ತರ್ಕ: ಈ ಭೀಮ ಕುಂಡದ ಆಳ ನೋಡುವ ಪ್ರಯತ್ನ ಈಗಲೂ ನಡೆಯುತ್ತಲೇ ಇದೆ. ಮುಳುಗು ತಜ್ಞರಿಂದ ತಳ ಹುಡುಕುವ ರಹಸ್ಯ ಭೇದಿಸಲು ಸಾಧ್ಯವಾಗದೇ ಇದ್ದಾಗ, ದೊಡ್ಡ ದೊಡ್ಡ ಸಬ್ಮರ್ಸಿಬಲ್ ಪಂಪ್ ಬಳಸಿ ನೀರು ಹೊರ ತೆಗೆದು, ಕೆರೆ ಖಾಲಿ ಮಾಡಿ ಆಳ ನೋಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಎಷ್ಟು ನೀರು ಹೊರತೆಗೆದರೂ ಅಷ್ಟೇ ನೀರು ಮತ್ತೆ ತುಂಬುತ್ತಿತ್ತು, ಈ ಪ್ರಯತ್ನವೂ, ವ್ಯರ್ಥವಾಗಿದೆ.
ಇನ್ನೊಂದೆಡೆ, ಜಿಯೋಗ್ರಫಿಕ್ ಎಕ್ಸ್ಪರ್ಟ್ ಗಳು ಈ ಕೆರೆ ಎಲ್ಲೋ ನೇರವಾಗಿ ಸಮುದ್ರದೊಂದಿಗೆ ಸಂಪರ್ಕ ಹೊಂದಿರಬಹುದೆನೋ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನೀರು ಬರಲು ಒಂದು ಮಾರ್ಗ ವಿದ್ದು, ಕೆರೆಯಿಂದ ನೀರು ಹೊರಹೋಗಲು ಇನ್ನೊಂದು ದಾರಿ ಇದೆಯಂತೆ.
ಹೀಗಾಗಿ, ಎಷ್ಟು ನೀರು ತೆಗೆದರೂ, ಅಷ್ಟೇ ನೀರು ಜಾಸ್ತಿಯಾಗುವ ಅವಕಾಶ ಇದೆ,ಎಂಬುವ ವಾದ. ಎಂತಹ ಕ್ಷಾಮ ಎದುರಾದರೂ ಭೀಮ ಕುಂಡದ ನೀರಿನ ಮಟ್ಟ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಒಂದೇ ಮಾತಲ್ಲಿ ಹೇಳೋದಾದದ್ರೆ ಇದೊಂದು ಭೇದಿಸಲಾಗದ ಪ್ರಶ್ನೆ. ಕೆರೆಯ ನೀಲ ವರ್ಣದ ಹೊಳೆಯುವ ಜಲ ಎಂತವರನ್ನೂ ಸೆಳೆದು ಬಿಡುತ್ತದೆ. 
ಮಿತ್ರರೇ..ಭೀಮ್ ಕುಂಡ್ದ ಬಗ್ಗೆ ಅನೇಕರು ಓದಿರಬಹುದು, ಕೇಳಿರಬಹುದು, ವಿಡಿಯೋಗಳನ್ನ ನೋಡಿರಲೂಬಹುದು. ಆದರೆ ಅಲ್ಲಿಯ ಪ್ರತ್ಯಕ್ಷ ಅನುಭವ ಪಡೆದವರು ಕಡಿಮೆ. ತರ್ಕ, ವಾದ, ವಿಜ್ಞಾನ, ನಂಬಿಕೆಗಳು ಏನೇ ಇರಲಿ, ಭಾರತದ ಇಂತಹ ಅಸಂಖ್ಯ ರಹಸ್ಯ,  ವಿಚಿತ್ರ, ಸ್ಥಳಗಳನ್ನು ಭೇಟಿ ಮಾಡಿ ಖುದ್ದು ಅನುಭವ ಪಡೆಯಬೇಕು.
ಆದರೆ ನಮ್ಮ ಪ್ರವಾಸಿಗರು ಹೊರದೇಶಗಳ ಇಂತಹ ಸ್ಥಳಗಳಿಗೆ ಮಹತ್ವ ಕೊಡುತ್ತಾರೆ.ಹೊಸ ಹೊಸ ಕೌತುಕದ ಪ್ರವಾಸ ಮಾಡೋರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಲಾಕ್ಡೌನ್ ನಂತರ ಸರ್ಕಾರದ ಗೈಡ್ ಲೈನ್ಸ್ ಪಾಲಿಸಿ ಭಾರತದಲ್ಲಿನ ಪ್ರವಾಸಿ ಸ್ಥಳಗಳನ್ನು ಹೆಚ್ಚು ಭೇಟಿ ಕೊಡಿ.
ಯಾಕೆಂದ್ರೆ ಎರಡು ವರ್ಷಗಳಿಂದ ಪ್ರವಾಸವನ್ನು ನಂಬಿಕೊಂಡಿರುವ ಉದ್ಯೋಗ, ಪ್ರವಾಸೋದ್ಯಮ ಇಲಾಖೆ, ಹೋಟೆಲ್, ಟ್ರಾನ್ಸ್ ಪೋರ್ಟ್ ಸಂಸ್ಥೆಗಳು ನಷ್ಟದಲ್ಲಿದೆ. ಎಲ್ಲಾದರೂ ಒಂದು ವೇಳೆ ಉತ್ತರ-ಮಧ್ಯ ಭಾರತ ಟೂರ್ ಪ್ಲಾನ್ ಮಾಡಿದಲ್ಲಿ ಭೀಮ್ ಕುಂಡ್ ನಿಮ್ಮ ಟೂರಿಂಗ್ ಲಿಸ್ಟ್ ನಲ್ಲಿ ಇರಲಿ…!
 
 
 
 
 
 
 
 
 
 
 

Leave a Reply