ಬಪ್ಪನಾಡಮ್ಮ ~ಕೆ.ಎಲ್.ಕುಂಡಂತಾಯ

ಸ್ವಯಂಭೂ – ಉದ್ಭವ ಎಂದು‌ ಹೇಳಲಾಗುವ ಸನ್ನಿಧಿಗಳೆಲ್ಲ ಪುರಾತನವೆಂದೇ‌ ಪ್ರತೀತಿ‌.ಲಿಂಗರೂಪದ ದೇವಿ ಆರಾಧನೆ ಯೂ ಅತ್ಯಂತ ಪ್ರಾಕ್ತನವೆಂದು ನಮ್ಮ ಉಭಯ ಜಿಲ್ಲೆಗಳಲ್ಲಿ ಇರುವ ಇತರ ಉದ್ಭವ ದುರ್ಗಾ ಕ್ಷೇತ್ರಗಳ ಅವ ಲೋಕನ ದಿಂದ ಸ್ಪಷ್ಟವಾಗುತ್ತದೆ. ಉದ್ಭವ ಸನ್ನಿಧಾನವೆಂಬ ಒಂದೇ ಕಾರಣದಿಂದ ಬಪ್ಪನಾಡಿನ‌  ಶ್ರೀದುರ್ಗಾ ಪರ ಮೇಶ್ವರೀ ಕ್ಷೇತ್ರದ ಪ್ರಾಚೀನತೆಯನ್ನು‌ ಗುರುತಿಸಲಾಗದು. ಆದಿಮ ಸಂಸ್ಕೃತಿಯಿಂದ ವೈದಿಕ ಸಂಸ್ಕೃತಿಯವರೆಗಿನ ನಮ್ಮ ನಂಬಿಕೆ – ನಡವಳಿಕೆ – ಉಪಾಸನಾ ವಿಧಾನಗಳ ವಿಕಾಸದ ಹಂತಗಳನ್ನು ಬಪ್ಪನಾಡಿನ ಪಂಚದುರ್ಗಾ ಕ್ಷೇತ್ರದಲ್ಲಿ ಗುರುತಿಸಲು ಅವಕಾಶವಿದೆ.
ಜಾನಪದ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಗಳೊಂದಿಗೆ ಪ್ರಚಲಿತ – ಜನಪ್ರಿಯ ಕತೆಗಳ ಅಧ್ಯಯನದಿಂದ ಬಪ್ಪನಾಡು ಕ್ಷೇತ್ರಕ್ಕಿರುವ ಬಹು ಆಯಾಮಗಳು, ಭಿನ್ನ ನಂಬಿಕೆಗಳು ,ವಿಶೇಷ ಒಪ್ಪಿಗೆಗಳ ತಿಳಿವಳಿಕೆ  ಸಾಧ್ಯವಾಗುತ್ತದೆ. ದೇವಾಲಯ ಎಂಬುದು ಸಮಷ್ಟಿಯದ್ದು. ಸರ್ವರ ಆಶೋತ್ತರ ಈಡೇರಿಕೆಗಾಗಿ ಸ್ಥಾಪಿಸಲಾದ ಅಥವಾ ನಂಬಲಾದ ಸಾಮಾಜಿಕ ಆರಾಧನಾ ಸ್ಥಾನ. ಜಾತಿ ವ್ಯವಸ್ಥೆ, ಮತ – ಧರ್ಮ ವಿಭಾಗವನ್ನು ಮೀರಿ‌ ನಿಲ್ಲಬಲ್ಲ ಬಪ್ಪನಾಡಿನ‌ ಅಮ್ಮನ ಸನ್ನಿಧಾನ ನಿಜವಾದ ತಾಯ್ತನದ ಭೇದ ಭಾವ ರಹಿತ ಮನಸ್ಸು, ಶರಣಾದವರನ್ನು ಪೊರೆಯುವ ಸ್ತ್ರೀ ಸಹಜ ಮನೋಭಾವ ಮುಂತಾದ ಅನೇಕ ಪ್ರತ್ಯಕ್ಷ ನಿದರ್ಶನಗಳನ್ನು ತೆರೆದಿಡುತ್ತಾ ಪ್ರಸ್ತುತ ಕಾಲಘಟ್ಟಕ್ಕೆ ಅತ್ಯಂತ ಸಮೀಪದಲ್ಲಿ‌ ಸಂವಾದಿ ಯಾಗುತ್ತದೆ, ಮಿಡಿಯುತ್ತದೆ, ಅಂತರ ರಹಿತ ಸಾಮೀಪ್ಯ ಒದಗಿಸುತ್ತದೆ.

ಪಂಚ ದುರ್ಗಾ:  ಮೂಲಸ್ಥಾನದಲ್ಲಿ ಪಂಚ ಲಿಂಗಳೆಂದು ಪ್ರತೀತಿ. ಅವುಗಳನ್ನು ಮೂಲದುರ್ಗಾ, ಅಗ್ನಿದುರ್ಗಾ, ಜಲ ದುರ್ಗಾ  ವನದುರ್ಗಾ, ಅಗ್ರದುರ್ಗಾ, ಎಂದು ಹೆಸರಿಸ ಲಾಗುತ್ತದೆ. ಈ ಮೂಲಸ್ಥಾನ ಸನ್ನಿಧಾನಕ್ಕೆ ಚತುರಸ್ರ ಆಕಾರದ ಗರ್ಭಗುಡಿ. ಸಮಗ್ರ ದೇವಾಲಯವು ಪಶ್ಚಿಮಾಭಿಮುಖವಾಗಿದೆ. ಗರ್ಭಗುಡಿಯ ಮುಂದುವರಿದ ಭಾಗವಾಗಿ ಮುಖ ಮಂಟಪ. ಗರ್ಭಗುಡಿಯು ದ್ವಿತಲದ ರಚನೆ, ಷಡ್ವರ್ಗ ಕ್ರಮದಲ್ಲಿದೆ. ಭಿತ್ತಿ ಹಾಗೂ ಕಪೋತ ಭಾಗದಲ್ಲಿದ್ದ ಪಟ್ಟಿಕೆ ಗಳನ್ನು ಆಧರಿಸಿ ಇತಿಹಾಸ ತಜ್ಞರು ಕ್ರಿ.ಶ. 10 – 11 ನೇ ಶತಮಾನದಷ್ಟು ಪ್ರಾಚೀನತೆಯನ್ನು ದಾಖಲಿಸಿದ್ದರು (ಜೀರ್ಣೋದ್ಧಾರ ಪೂರ್ವದ ರಚನೆ).12 ನೇ ಶತಮಾನವೆಂದು ಮತ್ತೊಂದು ಅಭಿಪ್ರಾಯವೂ ಇದೆ. ಗ್ರೀವದಲ್ಲಿ ಇದ್ದ ಪುರಾತನ ರಚನೆ – ಸ್ತ್ರೀಯ ಮುಖಗಳು ನವರಸಗಳ ಅಭಿವ್ಯಕ್ತಿ ಎಂದು ಇತಿಹಾಸಕಾರರ ಅಭಿಪ್ರಾಯ .

ಬಲಿಮೂರ್ತಿಯು 15 ನೇ ಶತಮಾನದ ನಿರ್ಮಿತಿ ಎಂದು ಪ್ರತಿಮಾ ಲಕ್ಷಣದಿಂದ ಗುರುತಿಸಲಾಗಿದೆ. ಮುಖಮಂಟಪದ ಬಲಭಾಗದಲ್ಲಿ ಪಶ್ಚಿಮಾಭಿಮುಖವಾಗಿರುವ ಗಣಪತಿ, ತೀರ್ಥಮಂಟಪ,  ಸುತ್ತುಪೌಳಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ನರಸಿಂಹ ದೇವರು, ಹೊರಸುತ್ತಿನಲ್ಲಿ ನೈಋತ್ಯದಲ್ಲಿ ಕ್ಷೇತ್ರಪಾಲ ಮುಂತಾದ ಸ್ಥಾನಗಳನ್ನು ಉಪಸ್ಥಾನ ಸನ್ನಿಧಿ ಗಳೆಂದು ಪರಿಗ್ರಹಿಸಬಹುದು.
ಜೀರ್ಣೋದ್ದಾರ ಪೂರ್ವದ ಪ್ರವೇಶದ್ವಾರದ ರಚನೆ,  ಗರ್ಭಗುಡಿಯ ಅಧಿಷ್ಠಾನದಲ್ಲಿದ್ದ ‘ನಾಗ – ಜಲಕನ್ನಿಕೆ’ಯ ಉಬ್ಬು ಶಿಲ್ಪ, ಧ್ಜಜಸ್ತಂಭದ ದಂಬೆಕಲ್ಲು ಹಾಗೂ ಇದಕ್ಕಿರುವ ಅಗೋಳಿ ಮಂಜಣನೆಂಬ ಐತಿಹಾಸಿಕ ವ್ಯಕ್ತಿಯ ನಂಟು.  ಈ ಕಲ್ಲಿನಲ್ಲಿ ಗುರುತಿಸಲಾದ ಚಿತ್ರಗಳು ದೇವಸ್ಥಾನದ ಪ್ರಾಚೀನತೆಯನ್ನು ನಿರ್ಣಯಿಸಲು ಒದಗುವ ಪೂರಕ ಅಂಶಗಳು.
ಜೀರ್ಣೋದ್ಧಾರ ಪೂರ್ವದ ದೇವಾಲಯ ರಚನೆಯನ್ನು ಹಾಗೂ ದೊರೆತ ಶಿಲ್ಪ ಶೈಲಿಗಳನ್ನು ಆಧರಿಸಿ ನಿರ್ಣಯಿಸಿದಂತೆ ಅಷ್ಟೇ ಪ್ರಾಚೀನತೆ ಮೂಲಸ್ಥಾನ ಸಾನ್ನಿಧ್ಯಕ್ಕೆ ಹೇಳಲಾಗದು. ಏಕೆಂದರೆ ಉದ್ಭವ ಸನ್ನಿಧಾನವಾಗಿರುವುದರಿಂದ ಶ್ರದ್ಧೆ, ಭಕ್ತಿಯ ಕಾರಣಕ್ಕೆ ದೇವರ ಪ್ರತೀಕವಾಗಿ ಮಾರ್ಪಾಡುಗೊಂಡು ಸಾಮೂಹಿಕ ಶ್ರದ್ಧೆಯ ಸ್ಥಾನವಾಗಿ ಮುಂದೆ ಕಾಲಾಂತರ ದಲ್ಲಿ ವಿವಿಧ ಪರಿಷ್ಕಾರಕ್ಕೆ ಒಳಗಾಗಿ ಬಹುಶಃ 10-12 ನೇ ಶತಮಾನದ ಸಂದರ್ಭದಲ್ಲಿ ಆಲಯ ನಿರ್ಮಾಣದ ಹಂತ ವನ್ನು ತಲುಪಿರ ಬೇಕೆಂದು ಗ್ರಹಿಸಲಡ್ಡಿ ಇಲ್ಲ
 ಬಪ್ಪನಾಡಿನ ದೋಲು: ಪ್ರಸಿದ್ಧ ಬಪ್ಪನಾಡಿನ ದೋಲು‌ – ಬಪ್ಪನಾಡಿಗೆ ಪ್ರಾಚೀನತೆಯನ್ನು ಮತ್ತು ಜನಪದ ಹಿನ್ನೆಯನ್ನು ಕೊಡುತ್ತದೆ, ಬೇರೆ ಬೇರೆ ಸಮಾಜದ ಮಂದಿಗೆ ಇರುವ ಅವಿನಾಭಾವ ಸಂಬಂಧ. ಬಪ್ಪಬ್ಯಾರಿಯ ಜನಪ್ರಿಯವಾದ ಕತೆ. ವಿದೇಶಿ ಪ್ರವಾಸಿಗಳ ವಿವರಣೆ. ಬಪ್ಪನಾಯ್ಕನೆಂಬ ಇತಿಹಾಸ ಉಲ್ಲೇಖಿತ ವ್ಯಕ್ತಿಯ ಕುರಿತಾದ ದಾಖಲೆ. ಶಾಸನಗಳು – ಅದರಲ್ಲಿರುವ ನಮೂದುಗಳು. ಅಗೋಳಿ ಮಂಜಣ ಹಾಗೂ ಕಾಂತಾಬಾರೆ – ಬುದಾಬಾರೆಯರೆಂಬ ಅವಳಿ ವೀರರ ಕತೆ. ಮೂಲ್ಕಿ ಸಾವಂತರ ( ಒಂಬತ್ತು ಮಾಗಣೆಯ ಅರಸರು ) ಅಧಿಕಾರ ವ್ಯಾಪ್ತಿಯ ವಿವರಗಳು ಮುಂತಾದ ಹಲವು ಸಂಗತಿ ಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದರೆ ಯವುದೋ ಒಂದು ಕಾಲ – ಸಂದರ್ಭ – ಮನೋಧರ್ಮ ನಮ್ಮ ಮುಂದೆ ನಿಚ್ಚಳವಾಗಬಹುದು.
ಲಿಂಗರೂಪದಲ್ಲಿ ಸನ್ನಿಧಾನದ ಗುರುತಿಸುವಿಕೆ, ಮುಂದೆ ನೀರಿನ ನಡುವೆ (ಶಾಂಭವಿ ನದಿಯ ಸಾಗರ ಸಂಗಮದ ಸಮೀಪ )  ಸಹಜವಾಗಿ ಭೌಗೋಳಿಕ ಸ್ವರೂಪ ಪರಿವರ್ತನೆ ಕಾರಣವಾಗಿ ನಡುಗಡ್ಡೆ (ಸಣ್ಣ ದ್ವೀಪ) ನಿರ್ಮಾಣ, ಸಾಂಕೇತಿಕ‌ ಶ್ರದ್ಧಾ ನೆಲೆ – ಪೂಜೆ, ಮುಂದೆ ಸಣ್ಣಗುಡಿ,  ದೇವಾಲಯ ನಿರ್ಮಾಣದವರೆಗಿನ ವಿದ್ಯಮಾನಗಳು‌ ನಡೆದಿರುವುದನ್ನು ಗುರುತಿಸಿದಾಗ ಭಾರತೀಯ ದೇವಾಲಯಗಳಿಗಿರುವ ಜಾನಪದ ಹಿನ್ನೆಲೆ ಎಂಬ ಸಂಶೋಧಕರ ಅಭಿಪ್ರಾಯಕ್ಕೆ ಬಪ್ಪ ನಾಡಿನಲ್ಲಿ ಪುಷ್ಟಿದೊರೆಯುತ್ತದೆ .
ಸಪ್ತ ದುರ್ಗೆಯರು: ಪೌರಾಣಿಕ ಕಥೆಯ ಆಧಾರದಲ್ಲಿ ಸಪ್ತದುರ್ಗೆಯರಲ್ಲಿ ಒಬ್ಬಳು ಚಿತ್ರಾಪುರದಲ್ಲಿ‌ ನೆಲೆ ನಿಲ್ಲುತ್ತಾಳೆ. ಸಸಿ ಹಿತ್ಲು ಭಗವತಿಯು ಈ    ದುರ್ಗೆಯರ ಗುಂಪಿನಿಂದ ಬೇರ್ಪಡುವುದು. ಉಳಿದ ಐವರು ಬಪ್ಪನಾಡಿನಲ್ಲಿ ನೆಲೆಯಾದರು ( ಹಲವು ಪಾಠಾಂತರದ ಕತೆಗಳಿವೆ) ಎಂಬ ವಿವರಣೆಯಲ್ಲೂ ಸಾಂಸ್ಕೃತಿಕ ವಿಕಾಸವನ್ನು ಗುರುತಿಸ ಲಾಗುತ್ತದೆ. ಪುರಾತನ (ಆದಿಮ ಸಂಸ್ಕೃತಿ)  ಸನ್ನಿಧಾನವೊಂದು ಅಥವಾ ಪೂಜಾಸ್ಥಾನವೊಂದು ದೇವಾಲಯ ಪರಿಕಲ್ಪನೆಯಂತಹ ವೈದಿಕದ ವಿಧಾನವನ್ನು ಸ್ವೀಕರಿಸಿ ಇಂದಿಗೂ ಆದಿಮ – ವೈದಿಕ ಸಂಸ್ಕೃತಿಗಳ ಕೊಂಡಿಯಾಗಿ ಉಳಿದಿರುವುದು ಬಪ್ಪನಾಡಿನ ವಿಶೇಷ .
ನವರಾತ್ರಿ: ಒಂದು ಕಾಲಕ್ಕೆ ಒಂಬತ್ತು ದಿನ ವಿಧಿವತ್ತಾದ  ತ್ರಿಕಾಲ ಪೂಜೆ.ರಾತ್ರಿ ನಡು ರಂಗಪೂಜೆ( ಇಲ್ಲಿ ಮೂರುವಿಧದ ರಂಗಪೂಜೆ ನೆರವೇರುತ್ತದೆ ಸಣ್ಣದು ,ನಡು ಮತ್ತು ದೊಡ್ಡದು. ನಿತ್ಯಬಲಿ ಹೊರಡದ ಕಾರಣ ದೊಡ್ಡ ರಂಗಪೂಜೆ ದೀಪಾ ವಳಿಯ ಬಳಿಕವೇ ನಡೆಸಲಾಗುವುದು) ನವಮಿಯಂದು ಚಂಡಿಕಾಹೋಮ – ಅನ್ನಸಂತರ್ಪಣೆ ನಡೆಯು ತ್ತಿತ್ತು .ಆದರೆ ಈಗ ನವರಾತ್ರಿ ಕಾಲದಲ್ಲಿ ಸಂಪ್ರದಾಯದಂತೆ ತ್ರಿಕಾಲದ ಪೂಜೆ ವೈಭವದಿಂದ ನಡೆಯುತ್ತದೆ, ಒಂಬತ್ತು ದಿನ ಚಂಡಿ ಕಾಯಾಗ ,ಮಧ್ಯಾಹ್ನ ಅನ್ನ ಸಂತರ್ಪಣೆ ಭಕ್ತರ ಸೇವೆಯಾಗಿ ನಡೆಸಲ್ಪಡುತ್ತದೆ. ದಶಮಿಯಂದು ಸಾರ್ವಜನಿಕ ಚಂಡಿಕಾ ಹೋಮ ಮತ್ತು ಅನ್ನಸಂತರ್ಪಣೆ ವಿಸ್ತಾರವಾಗಿ ನಡೆಯುತ್ತದೆ .ಆದರೆ ಈ ವರ್ಷ ಕೊರೊನಾ ಕಾರಣವಾಗಿ ಸರಕಾರದ ಸೂಚನೆಯಂತೆ ಎಲ್ಲವೂ ಸಂಕುಚಿತ ವಿಧಾನದಲ್ಲಿ ನಡೆಯುತ್ತಿದೆ,  ಅನ್ನಸಂತರ್ಪಣೆ ಇರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಯಲ್ಲಿ ಉಡುಪಿ – ಮಂಗಳೂರು ನಡುವೆ ಮೂಲ್ಕಿಯಲ್ಲಿದೆ ಬಪ್ಪನಾಡು.

 
 
 
 
 
 
 
 
 
 
 

Leave a Reply