ಯಶಸ್ ಪಿ.ಸುವರ್ಣ ಕಟಪಾಡಿಗೆ ಚಾಣಕ್ಯ ಚಿಲ್ಡ್ರೆನ್ಸ್ ಅವಾರ್ಡ್-2021

ಉಡುಪಿ ಜಿಲ್ಲೆಯ ಕಟಪಾಡಿಯ ಬಾಲಪ್ರತಿಭೆ ಕೊಳಲುವಾದಕ, ಗಾಯಕ ಉಡುಪಿ
ಕನ್ನರಪಾಡಿ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ ೮ನೇ ತರಗತಿ
ವಿದ್ಯಾರ್ಥಿ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಮಕ್ಕಳ ದಿನಾಚರಣೆಯಂಗವಾಗಿ
ಹೆಬ್ರಿಯ ಚಾಣಕ್ಯ ಎಜ್ಯುಕೇಷನ್ & ಕಲ್ಚರಲ್ ಅಕಾಡೆಮಿ ವತಿಯಿಂದ
ಪ್ರತಿಭಾವ೦ತ ಮಕ್ಕಳಿಗೆ ನೀಡಲಾಗುವ ಪ್ರತಿಷ್ಠಿತ ಚಾಣಕ್ಯ ಚಿಲ್ಡ್ರೆನ್ಸ್ ಅವಾರ್ಡ್-
2021 ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ
ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ಪ್ರೀತಿ ಪಿ.ಸುವರ್ಣ ದಂಪತಿಯ
ಪುತ್ರನಾಗಿರುವ ಯಶಸ್ ಪಿ.ಸುವರ್ಣ ಶಾಲೆಯಲ್ಲಿ ಸಂಗೀತದೊ೦ದಿಗೆ
ಛದ್ಮವೇಷ, ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾನೆ. ಪುಟ್ಬಾಲ್,
ವಾಲಿಬಾಲ್, ಸ್ಕೇಟಿಂಗ್ ಕ್ರೀಡೆಯಲ್ಲೂ ಆಸಕ್ತಿ ತಳೆದು ಬಹುಮುಖ
ಪ್ರತಿಭೆಯಾಗಿ ಮಿಂಚಿದ್ದಾನೆ.

ಬಾಲಪ್ರತಿಭೆ ಯಶಸ್ ಪಿ.ಸುವರ್ಣ. ಕೊಳಲು ವಾದನ ಮತ್ತು
ಸಂಗೀತವನ್ನು ಎಳೆಯ ವಯಸ್ಸಿನಲ್ಲೇ ಆಸಕ್ತಿಯಿಂದ ಕಲಿತು ಸಾಮಾಜಿಕ
ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಈ ಪೋರ ಕೊಳಲ
ನಿನಾದದೊಂದಿಗೆ ಸಂಗೀತದ ಅಲೆ ಹೊಮ್ಮಿಸಿದ್ದಾನೆ. ಉಡುಪಿ ಜಿಲ್ಲೆಯಾದ್ಯಂತ
ವಿವಿಧ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದಿರುವ
ಯಶಸ್ ಪಿ.ಸುವರ್ಣ ಯೂಟ್ಯೂಬ್ ಚಾನೆಲ್ ಮೂಲಕ ಸಂಗೀತದ ಜ್ಞಾನವನ್ನು
ವೃದ್ಧಿಸುವತ್ತ ಗಮನ ಹರಿಸುತ್ತಿದ್ದಾನೆ. ಬಾಲ ಕಲಾವಿದನಾಗಿ ಮಿಂಚುತ್ತಿರುವ
ಯಶಸ್ ಗಾನ ಪ್ರತಿಭೆಯಾಗಿ ಕೂಡಾ ಗುರುತಿಸಿಕೊಂಡು ಜಾನಪದ,
ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆಗಳನ್ನು ಅಭ್ಯಸಿಸಿ ಸಾಮಾಜಿಕ
ಜಾಲತಾಣಗಳಲ್ಲಿ ಹರಿಯಬಿಟ್ಟು ಜನಮನ ಗೆದ್ದಿದ್ದಾನೆ.

ಮಾಸ್ಟರ್ ಯಶಸ್ ಪಿ ಸುವರ್ಣ ಅವರು ಸಂಗೀತಾಭ್ಯಾಸವನ್ನು ಕಟಪಾಡಿಯ
ಹಿರಿಯ ಸಂಗೀತ ಗುರು ತುಳಸೀದಾಸ್ ಹಾಗೂ ಉಡುಪಿಯ ಹಿರಿಯ ಸಂಗೀತ
ನಿರ್ದೇಶಕ ನಾದವೈಭವಂ ವಾಸುದೇವ ಭಟ್ ಅವರಲ್ಲಿ ಅಭ್ಯಸಿರುತ್ತಾನೆ.
ಹಿಂದೂಸ್ತಾನಿ ಕೊಳಲುವಾದನ ಪ್ರಾರಂಭಿಕ ತರಬೇತಿಯನ್ನು ಉಡುಪಿಯ
ಮುಕುಂದ ಕೃಪಾ ಸಂಗೀತ ಶಾಲೆಯಲ್ಲಿ ಬಾಲಕೃಷ್ಣ ಅವರಲ್ಲಿ ಪಡೆದಿದ್ದು,
ಪ್ರಸ್ತುತ ಮಂಗಳೂರಿನ ಖ್ಯಾತ ಕೊಳಲುವಾದಕ ಮಣೀಸ್‌ದಾಸ್ ಅವರಿಂದ
ಶಾಸ್ತ್ರೀಯ ಯ ಕೊಳಲು ವಾದನವನ್ನು ಅಭ್ಯಸಿಸುತ್ತಿದ್ದಾನೆ. ಮಾತ್ರವಲ್ಲದೆ
ಸ್ವತ: ಹಾಡುಗಾರರಾದ ತಂದೆ ಅವರಿಂದ ಹಾಗೂ ಯೂಟ್ಯೂಬ್ ಮೂಲಕವೂ
ಸಂಗೀತಾಭ್ಯಾಸ ನಡೆಸುತ್ತಿದ್ದಾನೆ.

ಸಿನೆಮಾ ಸಂಗೀತ, ಕೊಳಲು ವಾದನ, ಹಾಡುಗಾರಿಕೆಯಲ್ಲಿ ಮಿಂಚಿರುವ ಯಶಸ್ ಅವರು, ಉಡುಪಿ ರಥಬೀದಿ ಸಾರ್ವಜನಿಕ ಗಣೇಶೋತ್ಸವ, ಉಡುಪಿ ಪವರ್ ಪರ್ಬ, ಮಕ್ಕಳ ದಿನಾಚರಣೆ ಪ್ರಯುಕ್ತ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಕಾರ್ಯಕ್ರಮ, ಮಾರ್ಕೆಟ್ ಫ್ರೆಂಡ್ಸ್ ವೇದಿಕೆ ಪರ್ಯಾಯ ಉತ್ಸವ, ಬಾಲಭವನ ಬಾಲಪ್ರತಿಭಾ ಪ್ರದರ್ಶನ, ಕನಕದಾಸ ಜಯಂತಿ ಕಾರ್ಯಕ್ರಮ, ಸ್ವಾತಂತ್ರೋತ್ಸವ ಕಾರ್ಯಕ್ರಮ, ಉಡುಪಿ ಶಾಮಿಲಿ ಸಭಾಂಗಣದಲ್ಲಿ ನಡೆದ ಮೀನುಗಾರ ಮಹಿಳಾ ಸಮಾವೇಶ, ದಶಮಾನೋತ್ಸವ ಕಾರ್ಯಕ್ರಮ, ಉಡುಪಿ ತುಳುಕೂಟ, ರೋಟರಿ ಕ್ಲಬ್, ಸೈಂಟ್ ಮೇರಿಸ್ ಶಾಲಾ ಸಂಸ್ಕೃತಿ ಹಬ್ಬ, ಕಾಪು ಪ್ರೆಸ್ ಕ್ಲಬ್, ಸಾಯಿಬಾಬ ಮಂದಿರ ಮೂಡಬೆಟ್ಟು, ಸಿದ್ದಿವಿನಾಯಕ ದೇವಸ್ಥಾನ ಶಿರ್ವ, ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ, ಕನ್ನರಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ನೀಡಿ ಜನಮೆಚ್ಚುಗೆ ಗಳಿಸಿದ್ದಾನೆ.

ಕಳತ್ತೂರು ಸಮಾಜಸೇವಾ ವೇದಿಕೆ, ಜನಸಂಪರ್ಕ ವೇದಿಕೆ, ಕುಶಲ
ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಸ್, ಅಜೆಕಾರು ಆದಿಗ್ರಾಮೋತ್ಸವ ಬಾಲಸಿರಿ ಪ್ರಶಸ್ತಿ,
ಶಿರ್ವ ರೋಟರಿ ಕ್ಲಬ್, ಕೋಟೆ, ಕಟಪಾಡಿ ಅಂಗನವಾಡಿ ಕೇಂದ್ರ, ಕಟಪಾಡಿ ಪಂಚಾಯಿತಿ
ಮಕ್ಕಳ ಗ್ರಾಮ ಸಭೆ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು,
ಕಟಪಾಡಿ ಸಿಎ ಬ್ಯಾಂಕ್ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದ್ದಾನೆ. ಸ್ಥಳೀಯ ಖಾಸಗಿ
ಚಾನೆಲ್‌ಗಳಲ್ಲಿ ಕೂಡಾ ಸಂದರ್ಶನ, ಕೊಳಲುವಾದನ ನಡೆಸಿ ಪ್ರೇಕ್ಷಕರ
ಮೆಚ್ಚುಗೆ ಗಳಿಸಿದ್ದಾನೆ. ಕರಾವಳಿಯ ಅರಳುಪ್ರತಿಭೆ ಮಾಸ್ಟರ್ ಯಶಸ್
ಪಿ.ಸುವರ್ಣ ಕಟಪಾಡಿ ಅವರಿಗೆ ಇನ್ನಷ್ಟು ಅವಕಾಶಗಳು, ಬಿರುದು
ಸನ್ಮಾನಗಳು ಒಲಿದು ಬಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ
ಮಿಂಚುವ೦ತಾಗಲಿ ಎಂಬುದು ನಮ್ಮೆಲ್ಲಾ ಕಲಾಭಿಮಾನಿಗಳ ಸದಾಶಯವಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply