ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

ಮಣಿಪಾಲ: 21 ವರ್ಷದ ಶ್ರೀ ಉಲ್ಲಾಸ್ ಆರ್ ಇವರಿಗೆ ಭದ್ರಾವತಿ ತಾಲೂಕಿನ ಚೆನ್ನಗಿರಿ ರಸ್ತೆಯಲ್ಲಿ 22. 04.2023ರಂದು ಮದ್ಯಾಹ್ನ 3. 00 ಗಂಟೆಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ 23.04.2023ರಂದು ಬೆಳಿಗ್ಗೆ 10. 47 ಕ್ಕೆ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು . ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ಗ್ರಾಮ, ನೀರಗುಂಡಿ ಅಂಚೆಯ ಶ್ರೀ ರಾಜಪ್ಪ ಇವರ ಮಗನಾದ ಶ್ರೀ ಉಲ್ಲಾಸ್ ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು.

ನಮ್ಮ ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ . ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಶ್ರೀ ಉಲ್ಲಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ಮೊದಲನೆಯದು 24.04.2023 ರಂದು ರಾತ್ರಿ 8.30ಕ್ಕೆ ಮತ್ತು ಎರಡನೆಯದು 25.04.2023ರಂದು ಮುಂಜಾನೆ 3.23ಕ್ಕೆ.

ತರುವಾಯ, ಶ್ರೀ ಉಲ್ಲಾಸ್ ಅವರ ತಂದೆ ಶ್ರೀ ರಾಜಪ್ಪ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ದಾನ ಮಾಡಿದ ಹೃದಯ , ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು, ಮತ್ತು ಎರಡು ಕಾರ್ನಿಯಾಗಳು 7 ಜನರ ಜೀವ ಉಳಿಸಲು ಸಹಾಯವಾಗಿದೆ.

ಜೀವನಸಾರ್ಥಕತೆ ಪ್ರೋಟೋಕಾಲ್ ಗಳು ಮತ್ತು ನಿರ್ಧಾರಗಳ ಪ್ರಕಾರ, ಶ್ವಾಸಕೋಶಗಳನ್ನು ಅಪೊಲೊ ಆಸ್ಪತ್ರೆ ಚೆನ್ನೈ, ಯಕೃತ್ ಅನ್ನು ಅಸ್ಟರ್ ಸಿ ಎಂ ಐ ಆಸ್ಪತ್ರೆ ,ಬೆಂಗಳೂರು, ಒಂದು ಮೂತ್ರಪಿಂಡವನ್ನು ಎ ಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.

ಶ್ರೀ ರಾಜಪ್ಪ ಅವರು “ಅಂಗದಾನ ಒಂದು ಪುಣ್ಯದ ಕೆಲಸ. ತನ್ನ ಮಗ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ” ಎಂದು ತಿಳಿಸಿದ್ದಾರೆ.

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು “ಶ್ರೀ ಉಲ್ಲಾಸ್ ಆರ್ ಕುಟುಂಬದ ಈ ಉದಾತ್ತ ನಿರ್ಧಾರವು ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ, ಇನ್ನಷ್ಟು ಜನರು ಅನುಕರಿಸುವ ಅಗತ್ಯವಿದೆ” ಎಂದು ಹೇಳಿದರು. ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

 
 
 
 
 
 
 
 
 
 
 

Leave a Reply