ಒಲಿಂಪಿಕ್ಸ್: ಶತಮಾನದ ಚಿನ್ನ ಬೇಟೆಯಾಡಿದ ನೀರಜ್ ಚೋಪ್ರಾ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅತ್ಯುತ್ತಮ ಪ್ರದರ್ಶನದೊಂದಿಗೆ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಮೊದಲ ಸುತ್ತಿನಲ್ಲಿ 87.03ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಅಗ್ರ ಸ್ಥಾನವನ್ನು ಚೋಪ್ರಾ ಕಾಯ್ದುಕೊಂಡರು. ಎರಡನೇ ಸುತ್ತಿನಲ್ಲಿ ತನ್ನ ಸಾಧನೆಯನ್ನೇ ಉತ್ತಮಪಡಿಸಿದ ಚೋಪ್ರಾ 87.58 ಮಿ ದೂರ ಎಸೆದರು.

ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿರುವ 23ರ ಹರೆಯದ ಸುಬೇ ದಾರ್ ನೀರಜ್ ಚೋಪ್ರಾ ಭಾರತಕ್ಕೆ ಸ್ವರ್ಣದ ಬಾಗಿಲನ್ನು ತೆರೆದಿದ್ದಾರೆ. ಐತಿಹಾಸಿಕ ಸ್ವರ್ಣ ಪದಕದೊಂದಿಗೆ ನೀರಜ್ ಚೋಪ್ರಾ ಒಲಿಂಪಿಕ್ಸ್ ಇತಿಹಾಸದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊತ್ತಮೊದಲ ಪದಕವನ್ನು ನೀಡಿ ಇತಿಹಾಸ ನಿರ್ಮಿಸಿದ್ದಾರೆ.

ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ ನೀರಜ್ ಚೋಪ್ರಾರವರ ಇಂದಿನ ಸಾಧನೆ ಯಿಂದಾಗಿ ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 66ನೇ ಸ್ಥಾನದಿಂದ ಭಾರತ 47ನೇ ಸ್ಥಾನಕ್ಕೆ ಏರಿದೆ.

ಚೋಪ್ರಾರವರ ಕೋಚ್ ಕರ್ನಾಟಕದ ಶೀನಾಥ್ ನಾಯಕ್ ಎಂಬುದು ಸಂತಸದ ಸುದ್ಧಿ.

ಪ್ರಧಾನಿ ಮೋದಿ ಅಭಿನಂದನೆ: ನೀರಜ್ ಚೋಪ್ರಾ ಇತಿಹಾಸವನ್ನು ನಿರ್ಮಿಸಿದ್ದಾರೆ! ಇಂದು ನೀರಜ್ ಚೋಪ್ರಾ ಸಾಧಿಸಿದ್ದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ನೀರಜ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಅದಮ್ಯ ಉತ್ಸಾಹದಿಂದ ಈ ಸಾಧನೆಯನ್ನು ಮಾಡಿದರು. ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ನೀರಜ್ ರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply