ನೀಲಾವರ ಸುರೇಂದ್ರ ಅಡಿಗರ ತೆಕ್ಕೆಗೆ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ- 2023

ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ- 2023,  ಸಂಸ್ಕೃತಿ ವಿಶ್ವ ಪ್ರತಿಷ್ಠಾನ  (ರಿ) ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ

ಪುರಸ್ಕೃತರು : ನೀಲಾವರ ಸುರೇಂದ್ರ ಅಡಿಗ
( ಸಮಗ್ರ  ಸಾಹಿತ್ಯ)

ಶ್ರೀಯುತ ನೀಲಾವರ ಸುರೇಂದ್ರ ಅಡಿಗ: ಉಡುಪಿ ತಾಲೂಕಿನ ನೀಲಾವರದಲ್ಲಿ ಎನ್ ಅನಂತ ಅಡಿಗ ಹಾಗು ಯಶೋದಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿ ಎಂ ಎ ( ಕನ್ನಡ) ,ಕನ್ನಡ ರತ್ನ, ಕನ್ನಡ ಹಾಗು ಆಂಗ್ಲ ಭಾಷೆ ಟೈಪಿಂಗ್, ಗಮಕ‌ ಜೂನಿಯರ್ ಗ್ರೇಡ್ ಪದವಿ, ಪಡೆದಿರುವ ಶ್ರೀಯುತ ನೀಲಾವರ ಸುರೇಂದ್ರ ಅಡಿಗರು ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರು. ಕನ್ನಡವನ್ನು ಎದೆಗಪ್ಪಿಕೊಂಡು, ಕನ್ನಡವನ್ನೇ ಉಸಿರಾಗಿಸಿಕೊಂಡು,ಕನ್ನಡವನ್ನೇ ಬಾಳ ದೀಕ್ಷೆಯಾಗಿಸಿಕೊಂಡವರು ಇವರು.

ಉಡುಪಿ ಜಿಲ್ಲೆ ಕುಂದಾಪುರ ವಲಯದ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ಇದೀಗ ಮನಮೆಚ್ಚಿದ ಮಡದಿ ಶ್ರೀಮತಿ ಸುನಂದ ಹಾಗು ಅಕ್ಕರೆಯ ಮಕ್ಕಳಾದ ಸೃಜನಾ ಮತ್ತು ಸುವೃತಾ ರೊಂದಿಗೆ ನಿವೃತ್ತ ಜೀವನದುದ್ದಕ್ಕೂ ಸಾಹಿತ್ಯ ಸೇವೆಯಲ್ಲಿ ತೊಡಗಿಸಿ ಕೊಂಡವರು.

ಸತತ ಮೂರನೇ ಬಾರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಭಾಷೆ,ನಾಡು ನುಡಿ ಸಂಸ್ಕೃತಿಗೆ ಇವರು‌ನೀಡಿದ ಕೊಡುಗೆ ಅನನ್ಯ ಅನುಪಮ,ಅನುಕರಣೀಯ. ಜೀವನ ರಥದ ಸಾಹಿತ್ಯ ಪಥ 1986 ರಲ್ಲಿ ಕನಸು ನನಸು ಎಂಬ ಕವನ ಸಂಕಲನದೊಂದಿಗೆ ಆರಂಭವಾಗಿ,ಆಸೆ ನಿರಾಸೆ( ನಗೆ ನಾಟಕ),ಭಾವ ಪರಿಚಯ( 102 ಕವಿಗಳ‌ ಕವನಗಳು) ಸಂಪಾದಿತ ಕೃತಿ, ಆಲೂರು ವೆಂಕಟರಾಯ( ರೂಪಕ) ,ಕಥಾ ಸಂಕಲನ ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ( ಐಸಿವಿಸಿ ಶಾಲಾ ಪಠ್ಯ ಪುಸ್ತಕದಲ್ಲಿ ಸೇರ್ಪಡೆ), ವಚನ ಸಾಹಿತ್ಯ ಪುರಸ್ಕಾರ ಪಡೆದ ವಚನ ದೀಪಿಕಾ( ಆಧುನಿಕ ವಚನಗಳು).

ಭಾವ ಬಿಂದು ಹನಿಗವನಗಳು ,ಜೀವನ ಸಂಘರ್ಷ ಕಾದಂಬರಿಯೊಂದಿಗೆ  ಸಾಗಿ ಉಡುಗೊರೆ( ಮಕ್ಕಳ ಕಥೆಗಳು) ಶಿವಲಿಂಗ ಶಿವಯೋಗಿ ಸ್ವಾಮಿ,ಮಾನವೀಯ ಮೌಲ್ಯಗಳು ಮತ್ತು ಇತರ ಲೇಖನಗಳು, ಅನುಭವ ಮಂಟಪ, ಕಾವ್ಯ ಸಿಂಚನ,ಅಕ್ಷರ ಯಾತ್ರೆಯ ಅನುಭವಗಳು, ನೆನಪಿನಾಳದಿಂದ,ಕನ್ನಡ ಕಟ್ಟಾಳು ಹುಲಿಯಪ್ಪ ಮೇಷ್ಟ್ರು, ಭೂತ ಜಾಲ, ಹರ್ಷದ ಹೊನಲು,ಸಮಗ್ರ ಕಾವ್ಯ, ಕಾವ್ಯ ಲೋಕ ಹೀಗೆ ಸುಮಾರು ಎಪ್ಪತ್ತಕ್ಕೂ ಅಧಿಕ ಹೊತ್ತಗೆಗಳ ಕರ್ತೃನಾಗಿ ಸಾಹಿತ್ಯ ಲೋಕದ ಶಕ್ತಿಯಾಗಿ, ಅದಮ್ಯ ಸಾಹಿತ್ಯಾಸಕ್ತ ವ್ಯಕ್ತಿಯಾಗಿ ಸಾಹಿತ್ಯ ಲೋಕದಲ್ಲಿ ಬೆಳಗಿದವರು, ಸಾಹಿತ್ಯ ಲೋಕವನ್ನು ಬೆಳಗಿಸಿದವರು.

ಪಠ್ಯ ಪುಸ್ತಕ ಹಾಗು ಕೈಪಿಡಿಗಳ ರಚನಾ ಸಮಿತಿ ಸದಸ್ಯನಾಗಿ ಮಕ್ಕಳ ಸಾಹಿತ್ಯಾಸಕ್ತಿಯನ್ನು ಗುರುತಿಸಿ ನೀರೆರೆದು‌ ಪೋಷಿಸಿದವರು. ಉತ್ತಮ ಶಿಕ್ಷಕ ಪ್ರಶಸ್ತಿ, ,ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿ.ಪಿ. ರಾಜರತ್ನಂ ದತ್ತಿ ಪ್ರಶಸ್ತಿ, ಗುರು ಭೂಷಣ ಪ್ರಶಸ್ತಿ, ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ, ಡಾ.ರಾಧಾಕೃಷ್ಣನ್ ಪ್ರಶಸ್ತಿ,2007 ರ ಅತ್ಯುತ್ತಮ ಲೇಖಕ ಪ್ರಶಸ್ತಿ, ಅತ್ಯುತ್ತಮ ಕ್ಷೇತ್ರ ಸಂಪನ್ಮೂಲ ವ್ಯಕ್ತಿ,ಉಪಾಧ್ಯಾಯ ಸನ್ಮಾನ್, ಕನ್ನಡದ ಕಟ್ಟಾಳು, ಕರ್ನಾಟಕ ಸಂಘಟನಾ ರತ್ನ ಪ್ರಶಸ್ತಿ, ವಿಪ್ರ ಸಾಧಕ ಶ್ರೀ ಹೀಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರ ಗಳ ಸರದಾರ ಇವರು.

ವಿವಿಧ‌ ಪ್ರತಿಷ್ಟಿತ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದೇ ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಗಳಲ್ಲಿ ಗುರುತರ ಜವಾಬ್ದಾರಿ ಹೊತ್ತು ಸಮ್ಮೇಳನಗಳ ಯಶಸ್ಸಿಗೆ ಕಾರಣರಾಗಿ  ಧನ್ಯತೆಯ ಭಾವ ಹೊಂದಿದವರು.

ಎದೆಯ ಬಗೆದರೂ ಇರಲಿ‌ ಕನ್ನಡ .. ಹೃದಯ ಬಡಿದರೂ ಬರಲಿ ಕನ್ನಡ, ಗರ್ವದಿಂದ ಹೇಳು‌ ನನ್ನ ಭಾಷೆ ಕನ್ನಡ.. ಹೆಮ್ಮೆಯಿಂದ ಹೇಳು ನಾನು ಕನ್ನಡಿಗ ಎಂದೆನ್ನುತ್ತಾ  ಕನ್ನಡ ಭಾಷೆಯನ್ನು ತನ್ನ ತೆಕ್ಕೆಯಲ್ಲಿ ಅಪ್ಪಿಕೊಂಡು ಕನ್ನಡ ಪುಸ್ತಕಗಳನ್ನು ತನ್ನ ಜೋಳಿಗೆಯಲ್ಲಿ ತುಂಬಿಸಿಕೊಂಡು ಕನ್ನಡಿಗರನ್ನು ಕಾಯಾ ವಾಚಾ ಮನಸಾ ಒಪ್ಪಿಕೊಂಡು ಕನ್ನಡ ಸಂತನಾಗಿ  ಸಾಹಿತ್ಯಾರಾಧಕನಾಗಿ ಸತತ ಮೂರು ಬಾರಿ  ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾಗಿ ಜನಮನ‌ ಗೆದ್ದ  ಶ್ರೀಯುತ ನೀಲಾವರ ಸುರೇಂದ್ರ ಅಡಿಗರಿಗೆ ನವೆಂಬರ್ ಒಂದರಂದು ಮಲಬಾರ್  ವಿಶ್ವ ಸಾಹಿತ್ಯ ಪುರಸ್ಕಾರ -2023 ನೀಡಿ ಅಭಿನಂದಿಸಲಿದ್ದಾರೆ.

~ಪೂರ್ಣಿಮಾ ಜನಾರ್ದನ್ ಕೊಡವೂರು
ಸಂಚಾಲಕರು, ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಸಮಿತಿ 

 
 
 
 
 
 
 
 
 
 
 

Leave a Reply