ಶ್ರೀ ಸತ್ಯಧರ್ಮ ವಿದ್ಯಾಪೀಠಕ್ಕೆ `ಕೀರ್ತಿ’ ತಂದ ತರುಣ

ರಾಷ್ಟ್ರಮಟ್ಟದ  ಸ್ಪರ್ಧೆಯಲ್ಲಿ  ಶ್ರುತಕೀರ್ತಿಗೆ ಸ್ವರ್ಣ ಪದಕ, – ಬನಾರಸ್ ಹಿಂದು ವಿವಿಯಲ್ಲಿ ಸ್ಪರ್ಧೆ, – ಉತ್ತರಾದಿಮಠದ ವಿದ್ಯಾರ್ಥಿಗೆ ದೊರೆತ ಅತ್ಯುನ್ನತ ಬಹುಮಾನ, – ಪ್ರಣವ, ಶ್ರೀರಂಗನಿಗೆ ವಿಶಿಷ್ಠ ಶ್ರೇಣಿ ಹೆಗ್ಗಳಿಕೆ.

| ಕೌಸಲ್ಯಾ ರಾಮ. ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತ ವಿವಿಗಳ ರಾಷ್ಟ್ರಮಟ್ಟದ 60ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದ ಶ್ರುತಕೀರ್ತಿಗೆ ಪ್ರಥಮ ಬಹುಮಾನ ಸಹಿತ ಸ್ವರ್ಣ ಪದಕ ಲಭಿಸಿದೆ.
ಹೊಳೆನರಸೀಪುರದ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಧರ್ಮ ವಿದ್ಯಾಪೀಠದ ವಿದ್ಯಾರ್ಥಿಯಾದ ಎನ್.ಆರ್. ಶ್ರುತಕೀರ್ತಿ `ದರ್ಶನ’ ಭಾಷಣ ಸ್ಪರ್ಧೆಯಲ್ಲಿ ಅತ್ಯಮೋಘವಾಗಿ ವಿಷಯ ಮಂಡಿಸಿ ಬಂಗಾರದ ಪದಕ ಗಳಿಸುವುದರೊಂದಿಗೆ ವಿದ್ಯಾಪೀಠಕ್ಕೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ. ರಾಷ್ಟ್ರಮಟ್ಟದಲ್ಲಿ 15 ರಾಜ್ಯಗಳ ಸ್ಪರ್ಧಿಗ ಳಾದ ಪ್ರಣವ ಜಿ. ಮತ್ತು ಶ್ರೀರಂಗ ಎಸ್. ಕುಲಕರ್ಣಿ `ಶಾಸ್ತ್ರಾರ್ಥ  ಪಾಠ ಸ್ಪರ್ಧೆ’ಯಲ್ಲಿ ವಿಶಿಷ್ಠ ಶ್ರೇಣಿ ಪಡೆದಿರುವುದು ಇನ್ನೊಂದು ಹೆಗ್ಗಳಿಕೆ.
ಶ್ರೀ ಸತ್ಯಧರ್ಮ ವಿದ್ಯಾಪೀಠದ ಗುರುಗಳಾದ ಪಂಡಿತ ವಿಜಯ ವಿಠಲಾಚಾರ್ಯರಲ್ಲಿ ನ್ಯಾಯ, ಮೀಮಾಂಸಾ, ವ್ಯಾಕರಣ, ವೇದಾಂತಾದಿ ಶಾಸ್ತ್ರ ಪಾಠ ಕಲಿಯುತ್ತಿರುವ ಈ ಮೂವರು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸಂಸ್ಕೃತ ವಿವಿ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವಾರಾಣಸಿಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂಬುದು ವಿಶೇಷ.ಈ ವಿದ್ಯಾರ್ಥಿಗಳಿಗೆ  ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ. ಶ್ರೀನಿವಾಸ ವರಖೇಡಿ, ಬನಾರಸ್ ಹಿಂದು ವಿವಿ ಕುಲಪತಿ ವಿಜಯಕುಮಾರ ಶುಕ್ಲಾ, ಉತ್ತರಾಖಂಡ ಸಂಸ್ಕೃತ ವಿವಿ ಕುಲಪತಿ ದಿನೇಶ ಚಂದ್ರ ಶಾಸ್ತ್ರೀ  ಸೋಮನಾಥ ವಿವಿ ಕುಲಪತಿ ಲಲಿತ್ ಕುಮಾರ್ ಪಟೇಲ್, ಪಾಣಿನಿ ವೈದಿಕ ವಿವಿ ಕುಲಪತಿ ವಿಜಯ್ ಕುಮಾರ್,ಕಾಶಿ ವಿಶ್ವನಾಥಮಂದಿರ ನ್ಯಾಸ್ ಸದಸ್ಯ ವ್ರಜಭೂಷಣ ಓಝಾ ಇತರರು ಗೌರವಿಸಿದ್ದು ರಾಜ್ಯಕ್ಕೆ ಕೀರ್ತಿ ತಂದಿದೆ.

ವೇದ-ಶಾಸ್ತ್ರ ಪಾಠ ಕಲಿಕೆಯೇ ನಿಜವಾದ ಶಿಕ್ಷಣ: ಈ ಸಂದರ್ಭ ಸಂತೋಷ, ಸಂಭ್ರಮ ಹಂಚಿಕೊoಡ 18ರ ತರುಣ ವಿದ್ಯಾರ್ಥಿ ಶ್ರುತಕೀರ್ತಿ, ಸಂಸ್ಕೃತ- ವೇದ- ಶಾಸ್ತ್ರ ಪಾಠ ಕಲಿಕೆಯೇ ಜೀವನದಲ್ಲಿ ನಿಜವಾದ ಜ್ಞಾನಾರ್ಜನೆ ಎನ್ನುತ್ತಾನೆ. ಬೆಂಗಳೂರಿನಲ್ಲಿ ಕರ್ನಾಟಕ ಸಂಸ್ಕೃತ ವಿವಿ ಮತ್ತು ರಾಷ್ಟç ಮಟ್ಟದಲ್ಲಿ ವಾರಾಣಸಿಯ ಬನಾರಸ್ ಹಿಂದು ವಿವಿ ಹಮ್ಮಿಕೊಂಡಿದ್ದ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಹಿತ ಚಿನ್ನದ ಪದಕ ತಂದಿದ್ದಾನೆ ಖುಷಿ ತಂದಿದೆ. ಇದರ ಸಂಪೂರ್ಣ ಕೀರ್ತಿ ನನ್ನ ತಂದೆ ರಘುನಾಥಾಚಾರ್ಯ, ತಾಯಿ ಮಲ್ಲಿಕಾಬಾಯಿ ಹಾಗೂ ವಿದ್ಯಾ ಗುರು ಪಂಡಿತ ವಿಜಯ ವಿಠಲಾಚಾರ್ಯರಿಗೆ ಸಲ್ಲಬೇಕು ಎಂದು ವಿನಮ್ರವಾಗಿ ಹೇಳುತ್ತಾನೆ.

ನಮ್ಮ ದೇಶದ ವಿವಿಧ 15 ರಾಜ್ಯದ ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ನಾನು ಅಗ್ರಗಣ್ಯನಾದೆ ಎಂದರೆ ಅದು ಗುರುಗಳ ಮಹಾಕೃಪೆಯೇ ಸರಿ. ಅಲ್ಲಿ ಶಾಸ್ತ್ರಾರ್ಥ  ವಿಚಾರವಾದ `ದರ್ಶನ’ದ ಬಗ್ಗೆ ಮಾತನಾಡಿದೆ. ಅವರು ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದೆ. ಇದು ಸ್ಪರ್ಧೆ ವಿಷಯಕ್ಕೆ ಮಾತ್ರ. ಆದರೆ ಜೀವನ ಸಾಧನೆಗೆ ಸಂಬoಧಿಸಿದoತೆ ನಾನು ತಿಳಿಯಬೇಕಾದದ್ದು, ಕಲಿಯಬೇಕಾದದ್ದು ಇನ್ನೂ ಬಹಳ ಇದೆ ಎಂದು ವಿನೀತನಾಗಿ ಹೇಳುತ್ತಾನೆ ಶ್ರುತಕೀರ್ತಿ.

ನನ್ನ ಜತೆ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಪ್ರಣವ ಜಿ. ಮತ್ತು ಶ್ರೀರಂಗ ಎಸ್. ಕುಲಕರ್ಣಿ `ಶಾಸ್ತ್ರಾರ್ಥ  ಪಾಠ ಸ್ಪರ್ಧೆ’ಯಲ್ಲಿ ತೀವ್ರ ಸ್ಪರ್ಧೆ ಒಡ್ಡಿದರು. ತೀರ್ಪುಗಾರರಿಂದ ಮೆಚ್ಚುಗೆಯನ್ನೂ ಪಡೆದರು. ಅವರ ಸಾಧನೆಯೂ ಸಾಕಷ್ಟು ಇದೆ.  ವಿಶಿಷ್ಠ ಶ್ರೇಣಿಗೆ ಅವರ ಬಹುಮಾನ ನಿಗದಿಯಾಯಿತು. ಮುಂದಿನ ಬಾರಿ ಅವರಿಗೂ ಚಿನ್ನದ ಪದಕ ಬರಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದ್ದು ಶ್ರುತಕೀರ್ತಿಯ ಮಿತ್ರಪ್ರೇಮಕ್ಕೆ ಸಾಕ್ಷಿಯಾಗಿದೆ.

ಗುರುಕೃಪೆಯೇ ಬೆಳೆಸಿತು: ಈವರೆಗೆ ನಾನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದೇನೆ. ಕಂಚಿ ಸಂಸ್ಥಾನವು ತೆನಾಲಿಯಲ್ಲಿ ನಡೆಸಿದ ಕೆಲವು ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿ ಪಡೆದಿದ್ದೇನೆ. ನಾನು, ನನ್ನ ಸಹಪಾಠಿಗಳು ನಮ್ಮ ವಿದ್ಯಾಪೀಠದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ನಡೆಸಿದ ಚಿಂತನೆ, ಚರ್ಚೆ ಮತ್ತು ಸಂವಾದದ ಫಲವೇ ನನ್ನನ್ನು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಬಹುಮಾನ ಗಳಿಸುವ ತನಕ ಬೆಳೆಸಿದೆ ಎಂಬುದು ಅವನ ಅಭಿಮತ.

ನನ್ನ ವಯೋಮಾನದ ಎಲ್ಲ ಮಕ್ಕಳೂ ಶಾಲೆಗೆ (ಸ್ಕೂಲ್) ಹೋಗುತ್ತಾರೆ. ನಾನೂ ಮೈಸೂರಿನಲ್ಲಿ ೨ನೇ ತರಗತಿವರೆಗೆ ಶಾಲೆಗೆ ಹೋಗಿ ಕಲಿತೆ. ಆದರೆ ನಮ್ಮ ಭಾರತೀಯ ಸನಾತನ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ ವೇದ ವಿದ್ಯೆಯೇ ಎಲ್ಲಕ್ಕಿಂತ ಮೇಲು ಎನಿಸಿತು. ಹಾಗಾಗಿ ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಸೇರಿದೆ. ಅಲ್ಲಿ 4ವರ್ಷ ಅಮರಕೋಶ, ಮಣಿ ಮಂಜರಿ ಇತ್ಯಾದಿ ಕಲಿತೆ. ಕರ್ನಾಟಕ ರಾಜ್ಯ ಸಂಸ್ಕೃತ ವಿವಿ ನಡೆಸುವ ಕಾವ್ಯ, ಪ್ರಥಮ ಪರೀಕ್ಷೆಗಳಲ್ಲೂ ಉತ್ತೀರ್ಣನಾದೆ. ಜತೆಗೆ ಕಂಪ್ಯೂಟರ್ ತರಬೇತಿಯನ್ನೂ ಪಡೆದು ಪ್ರಾಥಮಿಕ ಜ್ಞಾನ ಗಳಿಸಿದೆ. ಇವೆಲ್ಲವೂ ಆದ ನಂತರ ನನಗೆ ಹೊಳೆನರಸೀಪುರದ ಶ್ರೀ ಸತ್ಯಧರ್ಮ ವಿದ್ಯಾಪೀಠ ಸೆಳೆಯಿತು. ಇಲ್ಲಿ ಈಗv2 ವರ್ಷದಿಂದ ಮೀಮಾಂಸ ಮತ್ತು ವೇದಾಂತ ಶಿಕ್ಷಣ ಪಡೆಯುತ್ತಿದ್ದೇನೆ. ಇದರಲ್ಲಿ ನನಗೆ ಹೆಮ್ಮೆ ಮತ್ತು ಸಂತೃಪ್ತಿ ಇದೆ ಎನ್ನುತ್ತಾನೆ ಈತ.

ಮುಂದಿನ ಗುರಿ ಏನು?: ಮೀಮಾಂಸ ಶಾಸ್ತ್ರ ಪರೀಕ್ಷೆ ತೆಗೆದುಕೊಳ್ಳಬೇಕು. ವ್ಯಾಸತ್ರಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. `ಸಮಗ್ರ ಸುಧಾ’ ಪರೀಕ್ಷೆ ಎದುರಿಸಬೇಕು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥರಲ್ಲಿ ಶಿಷ್ಯತ್ವ ಸ್ವೀಕರಿಸಿ ಇವುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಬೇಕು. ನಮ್ಮ ಸಂಪ್ರದಾಯ, ಶಾಸ್ತç ಮತ್ತು ಸಂಸ್ಕೃತಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಇಲ್ಲಿ ಇರುವ ವಿಶೇಷ ಸ್ವಾರಸ್ಯವನ್ನು ನಮ್ಮದನ್ನಾಗಿಸಿಕೊಳ್ಳಬೇಕು ಎನ್ನುತ್ತಾನೆ ಶ್ರುತಕೀರ್ತಿ.

ನಮ್ಮ ಅಧ್ಯಯನವನ್ನು ಕೇವಲ ಒಂದು ಪರೀಕ್ಷೆಗೆ ನಿಲ್ಲಿಸಬಾರದು. ಉಪನಿಷತ್ತುಗಳನ್ನು ಆಳವಾಗಿ ಓದಬೇಕು. ಜೀವನ ಪೂರ್ಣ ಕಲಿಕೆಯಾಗಿಯೇ ಮೀಸಲಿಡಬೇಕು. ಇದರೊಂದಿಗೆ ನನಗಿಂತ ಕಿರಿಯರಿಗೆ ನಾನು ಕಲಿತದ್ದನ್ನು ಪಾಠ ಮಾಡಬೇಕು. ನನ್ನಂತೆ ಅವರನ್ನೂ ಸಂಸ್ಕೃತ, ವೇದ ವಿದ್ವಾಂಸರನ್ನಾಗಿ ರೂಪಿಸಬೇಕು ಎಂಬುದೇ ನನ್ನ ಜೀವನದ ಗುರಿ ಎಂದು ಹೇಳುತ್ತಾನೆ ಈ ಉತ್ಸಾಹಿ.

ಮೊಬೈಲ್ ಬಳಕೆಯಿಂದ ದೂರ: ವಿದ್ಯಾಪೀಠದಲ್ಲಿ ನಾನು ಮತ್ತು ನನ್ನ ಸಹಪಾಠಿಗಳ್ಯಾರೂ ಸ್ಮಾರ್ಟ್ ಫೋನ್ ಬಳಸುವುದಿಲ್ಲ. ನಮ್ಮ ತಂದೆ-ತಾಯಿಗೆ ಕರೆ ಮಾಡಲು ಕೇವಲ ಬೇಸಿಕ್ ಮೊಬೈಲ್ ಸೆಟ್ ಬಳಸುತ್ತೇವೆ. ಈ ಸಂದರ್ಭ ನಮ್ಮ ಗುರುಗಳ ಅನುಮತಿ ಪಡೆಯುವುದನ್ನು ಮರೆಯುವುದಿಲ್ಲ. ಅತಿಯಾಗಿ ಮೊಬೈಲ್ ಫೋನ್ ಬಳಸುವುದು ನಮ್ಮ ಅಧ್ಯಯನಕ್ಕೆ ತೊಂದರೆ ಕೊಡುತ್ತದೆ. ಮನಸ್ಸು ಜಗತ್ತಿನ ರಂಗು ರಂಗುಗಳಿಗೆ ಬಲಿಯಾಗುತ್ತದೆ. ವಿದ್ಯಾರ್ಥಿಯಾದವನಿಗೆ ಏಕಾಗ್ರತೆ ಬಹಳ ಮುಖ್ಯ. ಕಲಿಕೆಯೇ ನಮ್ಮ ಗುರಿಯಾಗಿರುವ ಕಾರಣ, ಓದುವುದು, ಓದಿಸುವುದು ನನ್ನ ಜವಾಬ್ದಾರಿಯಾಗಿರುವುದರಿಂದ  ಮೊಬೈಲ್ ಬಳಕೆಯಿಂದ ದೂರ ಇದ್ದೇವೆ ಎನ್ನುತ್ತಾನೆ ಶ್ರುತಕೀರ್ತಿ. ಇದು ಕೇವಲ ವಿದ್ಯಾಪೀಠದ ಮಕ್ಕಳಿಗೆ ಮಾತ್ರವಲ್ಲ, ನಮ್ಮ ನಮ್ಮ ಮನೆಯ ಮಕ್ಕಳಿಗೂ, ಈತನ ಸಮಕಾಲೀನರಿಗೂ ದೊಡ್ಡ ಸಂದೇಶವಾಗಿದೆ.

 
 
 
 
 
 
 
 
 
 
 

Leave a Reply