ಕೆಂಗಲ್ ಹನುಮಂತಯ್ಯನವರು ಮೆಚ್ಚಿಕೊಂಡ ಭಾರತ ವಾಚನ~  • ಡಾ.ಶ್ರೀಕಾಂತ್ ಸಿದ್ದಾಪುರ

ನಮ್ಮ ಬಾಲ್ಯದಲ್ಲಿ ಕನ್ನಡಕಾವ್ಯಗಳಲ್ಲಿ ಅಭಿರುಚಿಯನ್ನು ಬೆಳೆಸುವಲ್ಲಿ ಎರಡು ಅಂಶಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಒಂದು ತರಗತಿಯಲ್ಲಿನ ಕನ್ನಡ ಕಾವ್ಯಬೋಧನೆ. ಇನ್ನೊಂದು ಯಕ್ಷಗಾನ ಕಲಾವಿದರು ಮಳೆಗಾಲದಲ್ಲಿ ನಡೆಸಿಕೊಡುತ್ತಿದ್ದ ಕಾವ್ಯಗಳ ವಾಚನ ಮತ್ತು ವ್ಯಾಖ್ಯಾನ. ಕನ್ನಡ ಬೋಧಿಸುವ ಅಧ್ಯಾಪಕರನ್ನು ಕನ್ನಡ ಪಂಡಿತರೆ೦ದು ಗೌರವಿಸುತ್ತಿದ್ದರು.
ಪ್ರೌಢಶಾಲಾ ಹಂತದ ಕನ್ನಡ ಪಠ್ಯಗಳಲ್ಲಿ ಕೆಲವು ಹಳಗನ್ನಡ ಹಾಗೂ ನಡುಗನ್ನಡ ಕಾವ್ಯ ಭಾಗಗಳಿರುತ್ತಿದ್ದವು. ಈ ಕಾವ್ಯಗಳ ಭಾಷೆ ಸುಲಭಗ್ರಾಹ್ಯವಲ್ಲ. ಅವುಗಳನ್ನು ಓದುವುದು, ಅರ್ಥಮಾಡಿಕೊಳ್ಳುವುದು ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಸವಾಲಿನ ಸಂಗತಿ.  ಕನ್ನಡ ಅಧ್ಯಾಪಕರು ಈ ಸವಾಲುಗಳನ್ನು ನಿಭಾಯಿಸಲು ಬಳಸುತ್ತಿದ್ದ ಕೌಶಲ ಕಾವ್ಯಗಳ ವಾಚನ. ಕವಿಯ ಅರ್ಥಕ್ಕನುಗುಣವಾದ ಪದವಿಂಗಡನೆ, ಭಾವಕ್ಕನುಗುಣವಾದ ಸೂಕ್ತ ರಾಗಸಂಯೋಜನೆ ಕನ್ನಡ ತರಗತಿಗಳಲ್ಲಿ ವಿಶಿಷ್ಟ ವಾತಾವರಣವನ್ನು ನಿರ್ಮಿಸುತ್ತಿದ್ದವು.
ಈ ಕಲೆಯನ್ನು ಗಮಕ ಎಂದು ಅಂದು ಅಧ್ಯಾಪಕರು ಪಾಠದ ನಡುವೆ ಪರಿಚಯಿಸುತ್ತಿದ್ದರು. ಮಳೆಗಾಲದಲ್ಲಿ ಊರ ದೇವಾಲಯದಲ್ಲಿ ಯಕ್ಷಗಾನ ಕಲಾವಿದರಿಂದ ಕನ್ನಡ ಭಾರತ ಹಾಗೂ ರಾಮಾಯಣ ಕಾವ್ಯಗಳ ವಾಚನ ಹಾಗೂ ವ್ಯಾಖ್ಯಾನ ನಡೆಯುತ್ತಿತ್ತು. ಯಕ್ಷಗಾನ ಕಲಾವಿದರಿಗೆ ಮೇಳದ ತಿರುಗಾಟ ಮುಗಿದು ಬಿಡುವಿನ ಸಮಯ. ಜನರಿಗೆ ಕನ್ನಡ ಕಾವ್ಯಗಳನ್ನು ಪರಿಚಯಿಸುವುದರೊಂದಿಗೆ ಕಲಾವಿದರಿಗೂ ಈ ನೆಪದಲ್ಲಿ ಕಾವ್ಯಜ್ಞಾನ ಲಭಿಸುತ್ತಿತ್ತು. ಅವರ ಕಲಾಜೀವನದ ಪ್ರಗತಿಗೂ ಇದು ಸಹಕಾರಿಯಾಗುತ್ತಿತ್ತು.
ಮುಂದಿನ ದಿನಗಳಲ್ಲಿ ಗಮಕ ಕಲೆಯು ಕನ್ನಡ ಅಧ್ಯಾಪಕ ಹುದ್ದೆಗೆ ಒಂದು ವಿಶೇಷ ಅರ್ಹತೆಯಾಗಿಯೂ ಪರಿಗಣಿಸಲ್ಪಟ್ಟಿತು. ಶ್ರೀ ಕೃಷ್ಣಮೂರ್ತಿ ಹನೂರರು ತಿಳಿಸುವಂತೆ ಮುಳಿಯ ತಿಮ್ಮಪ್ಪಯ್ಯನವರ ಕಾವ್ಯವಾಚನವನ್ನು ಒಮ್ಮೆ ಕೇಳಿದ ಅಮ್ಮೆಂಬಳ ಶ್ರೀನಿವಾಸ ಪೈಗಳು ಇವರನ್ನು ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕ ಹುದ್ದೆಗೆ ಆಯ್ಕೆ ಮಾಡಿದರಂತೆ. ಹಾಗಾಗಿ ಗಮಕ ವಾಚನವೇ ಮುಳಿಯ ತಿಮ್ಮಪ್ಪಯ್ಯನವರಿಗೆ ಉದ್ಯೋಗ ಕೊಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿತು. ಈ ಘಟನೆ ನಡೆದುದು ೧೯೧೧ ರ ಸುಮಾರಿನಲ್ಲಿ.
ಭಾರತ ಬಿಂದೂರಾಯರು: ೧೯೩೫-೧೯೩೭ ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಮಕ ತರಗತಿಯು ನಡೆಯಿತು. ಇದು ಪರಿಷತ್ತಿನಲ್ಲಿ ನಡೆದ ಪ್ರಪ್ರಥಮ ಗಮಕ ತರಗತಿ ಎಂದೇ ಪರಿಗಣಿಸಲಾಗಿದೆ. ಈ ಕಾರ್ಯಕ್ರಮವನ್ನು ಅಂದು ನಡೆಸಿ ಕೊಟ್ಟವರು ಬಿಂದೂರಾಯರು. ಇವರನ್ನು ಭಾರತ ಬಿಂದೂ ರಾಯರು ಎಂದೇ ಕರೆಯುತ್ತಿದ್ದರು. ಕುಮಾರವ್ಯಾಸ ಭಾರತ ಇವರ ಪ್ರಿಯವಾದ ಕಾವ್ಯ.
ಇದನ್ನು ಬಿಂದೂ ರಾಯರಷ್ಟು ನಿರರ್ಗಳವಾಗಿ ವಾಚಿಸುವವರು ಅಂದು ವಿರಳ. ಇವರ ವಾಚನನದಲ್ಲಿ ದುಂಬಿಯ ಝೇಂಕಾರ ಇತ್ತಂತೆ. ಹಾಗಾಗಿ ಅಭಿಮಾನಿಗಳ ಪಾಲಿಗೆ ಬಿಂದೂರಾಯರು ದುಂಬೀರಾಯರು. ಇವರ ಕುಮಾರವ್ಯಾಸ ಭಾರತದ ಗಮಕವನ್ನು ಕೇಳಿ ಪ್ರಭಾವಿತರಾದವರು ಕೃಷ್ಣಗಿರಿ ಕೃಷ್ಣರಾಯರು.
ಕೃಷ್ಣರಾಯರ ಗಮಕವನ್ನು ಮೆಚ್ಚಿ ಹಾಡಿದ ಕುವೆಂಪು: ಕೃಷ್ಣರಾಯರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಗ್ರಂಥಪಾಲಕರು. ಜಿ. ವೆಂಕಟಸುಬ್ಬಯ್ಯನವರು ನೆನಪಿಸಿಕೊಳ್ಳುವಂತೆ ಕೃಷ್ಣರಾಯರಲ್ಲಿ ವೆಂಕಟಸುಬ್ಬಯ್ಯನವರೂ ಕೆಲವು ಕಾಲ ಗಮಕವನ್ನು ಅಭ್ಯಾಸ ಮಾಡಿದ್ದರಂತೆ. ಕೃಷ್ಣರಾಯರಿಗೆ ಪಿಟೀಲು ವಾದನದಲ್ಲಿಯೂ ಪರಿಶ್ರಮವಿತ್ತು. ಭಾರತದ ಕೃಷ್ಣರಾಯ ಎಂದು ಕರೆಸಿಕೊಂಡ ಕೃಷ್ಣರಾಯರು ೧೯೫೬ ರಲ್ಲಿ ಗಮಕ ಕಲೆಯನ್ನು ಬೆಳೆಸುವ ದೃಷ್ಟಿಯಿಂದ ಮೈಸೂರಿನಲ್ಲಿ ಕುಮಾರವ್ಯಾಸ ಗುರುಕುಲವನ್ನೂ ಆರಂಭಿಸಿದ್ದರು.
ಕೃಷ್ಣರಾಯರ ಗಮಕಕ್ಕೆ ಕುವೆಂಪುರವರೂ ತಲೆದೂಗಿದ್ದರು. ಕುವೆಂಪುರವರು ಮೈಸೂರಿನಲ್ಲಿದ್ದ ದಿನಗಳು. ಆಗಾಗ ತಮ್ಮ ಹುಟ್ಟೂರಾದ ಕುಪ್ಪಳ್ಳಿಗೆ ಬರುತ್ತಿದ್ದರು. ಹೀಗೆ ಬರುವಾಗ ಕೃಷ್ಣರಾಯರನ್ನೂ ಕರೆದುಕೊಂಡು ಬರುತ್ತಿದ್ದರು. ಕುವೆಂಪುರವರು ತಮ್ಮ ಆತ್ಮಕಥೆ ನೆನಪಿನ ದೋಣಿಯಲ್ಲಿ ಇದನ್ನು ಮೆಲುಕು ಹಾಕಿದ್ದಾರೆ. ೧೯೩೪ ರ ಕಾಲ. ದೇವಂಗಿಯಲ್ಲಿ ಮಲೆನಾಡು ಯುವಕ ಸಂಘದ ವಾರ್ಷಿಕೋತ್ಸವ. ಕುವೆಂಪುರವರು ಅಧ್ಯಕ್ಷರು. ಅಂದು ಕುವೆಂಪುರವರ ಅಪೇಕ್ಷೆಯಂತೆ ಕೃಷ್ಣರಾಯರು ಭಾರತ ವಾಚನ ನಡೆಸಿಕೊಟ್ಟರು. ಇವರ ವಾಚನಕ್ಕೆ ಮನಸೋತ ಕುವೆಂಪುರವರು “ಹಾಡಿದನು ಗಮಕಿ, ನಾಡು ನಲಿದುದು ರಸದ ಕಡಲಲಿ ಮುಳುಗಿ” ಎಂದು ಹಾಡಿದರಂತೆ.
ಹಾ.ಮಾ. ನಾಯಕರು ತಿಳಿಸುವಂತೆ ಕೃಷ್ಣರಾಯರಿಗೆ ಆಸ್ಥಾನ ವಿದ್ವಾಂಸರಾಗುವ೦ತೆ ಮೈಸೂರು ಅರಸರಿಂದ ಕರೆ ಬಂದಿತು. ಇದನ್ನು ಸೌಮ್ಯವಾಗಿ ತಿರಸ್ಕರಿಸಿದ ಕೃಷ್ಣರಾಯರು ಮಹಾರಾಜರು ಯಾವಾಗ ಕರೆದರೂ ಬಂದು ವಾಚನ ನಡೆಸುತ್ತೇನೆ. ಆದರೆ ಈ ಪದವಿ ಬೇಡ ಎಂದಿದ್ದರು. ಲಕ್ಷ್ಮೀಶನ  ಜೈಮಿನಿ ಭಾರತವು ಜನಪ್ರಿಯವಾಗಿದ್ದ ಕಾಲ. ಮದುವೆಗೆ ವರನನ್ನು ಆರಿಸಲು ಈ ಕಾವ್ಯವೇ ಪ್ರಧಾನ ಮಾನದಂಡ. ಜೈಮಿನಿ ಭಾರತವನ್ನು ಯಾರು ಸುಲಲಿತವಾಗಿ ವಾಚನ ಮಾಡುತ್ತಾರೋ ಅವರು ವಧು ಪರೀಕ್ಷೆಯಲ್ಲಿ ಉತ್ತೀರ್ಣರು. ತುಳುಕಿನ ವೆಂಕಣ್ಣಯ್ಯ, ಬಿಎಂಶ್ರೀ, ಅನಕೃ ಮೊದಲಾದವರಿಗೂ ಗಮಕದಲ್ಲಿ ವಿಶೇಷ ಆಸಕ್ತಿ.
ಭಾರತ ವಾಚನಕ್ಕೆ ಮನಸೋತ ಕೆಂಗಲ್: ೧೯೫೪ ಗಮಕದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಮೈಸೂರಿಗೆ ಬಂದಾಗಲೆಲ್ಲ ಅಂದಿನ ಖ್ಯಾತ ಗಮಕಿ ತಲಕಾಡು ಮಾಯಿಗೌಡರನ್ನು ಅತಿಥಿಗೃಹಕ್ಕೆ ಕರೆಸಿ ಅವರಿಂದ ಭಾರತ ವಾಚನವನ್ನು ಕೇಳಿಸಿಕೊಂಡು ಹೋಗುತ್ತಿದ್ದ ಸಂಗತಿಯನ್ನು ಗಮಕ ಚೇತನರು ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೃಷಿಕುಟುಂಬದಿ೦ದ ಬಂದ ಇವರಿಗೆ ನಾಟಕ, ಸಂಗೀತ, ಯಕ್ಷಗಾನಗಳಲ್ಲಿ ವಿಶೇಷ ಆಸಕ್ತಿ. ಕುಮಾರವ್ಯಾಸ ಭಾರತ ಅವರ ಪ್ರೀತಿಯ ಕಾವ್ಯ.
 ಮಾಯಿಗೌಡರ ಗಮಕದಿಂದ ಪ್ರಭಾವಿತರಾದ ಹನುಮಂತಯ್ಯನವರು ಕುಮಾರವ್ಯಾಸ ಭಾರತದ ಜನಪ್ರಿಯ ಪ್ರತಿಯನ್ನು ಸುಲಭ ದರದಲ್ಲಿ ಪ್ರಕಟಿಸುವ ಹಂಬಲವನ್ನು ವ್ಯಕ್ತಪಡಿಸಿದ್ದರಂತೆ. ಕನ್ನಡದ ಹಿರಿಯ ಸಾಹಿತಿಗಳನ್ನು ಮೆಚ್ಚಿಸಿದ ಹಾಗೂ ಜನಸಾಮಾನ್ಯರಿಗೆ ಕನ್ನಡ ಕಾವ್ಯಗಳನ್ನು ಪರಿಚಯಿಸಿದ ಗಮಕ ಕಲೆಯನ್ನು ಉಳಿಸಿ ಬೆಳೆಸುವತ್ತ ನಮ್ಮ ಚಿಂತನೆ ಸಾಗಲಿ.
• ಡಾ.ಶ್ರೀಕಾಂತ್ ಸಿದ್ದಾಪುರ
 
 
 
 
 
 
 
 
 
 
 

Leave a Reply