ಶ್ರೀಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಜೊತೆಗಿನ ಬಾಲ್ಯದ ದಿನಗಳು~ಪಿ.ಲಾತವ್ಯ ಆಚಾರ್ಯ

ಆತ್ಮೀಯರೇ.. ನಾನು ಲಾತವ್ಯಆಚಾರ್ಯ.
ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ. ಶ್ರೀಪಾದರು ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ. ಆದರೆ ಈ ಬರಹದಲ್ಲಿ ಅವರ ಜೊತೆಗಿನ ಬಾಲ್ಯದ ಕೆಲ ಒಡನಾಟದ ನೆನಪುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಹಂಬಲ. ಶ್ರೀಪಾದರು ಆಗಿನ್ನೂ ಎರಡನೇ(1971) ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಒಂದು ಘಟನೆ.
ಶ್ರೀಲಕ್ಷ್ಮೀವರತೀರ್ಥ: ಶ್ರೀಪಾದರ ಪೂರ್ವಾಶ್ರಮದ ಹೆಸರು ಹರೀಶ ಆಚಾರ್ಯ. ನಾವಿಬ್ಬರೂ ಶ್ರೀಶಿರೂರು ಮಠದ ಹಿಂಭಾಗದಲ್ಲಿದ್ದ ನಾಗದೇವರ ಗುಡಿಯ ಸಮ್ಮುಖದ ಜಗಲಿಯಲ್ಲಿ ಕುಳಿತಿದ್ದೆವು. ಅವರು ಸ್ಲೇಟಿನಲ್ಲಿ ಏನೋ ಬರೆಯುತ್ತಿದ್ದರು. ನಾನು ಅವರ ಪಕ್ಕದಲ್ಲೇ ಕುಳಿತು ಅವರು ಬರೆಯುತಿದ್ದದ್ದನ್ನು ನೋಡುತ್ತಿದ್ದೆ.
ಅದೇ ಸಂದರ್ಭದಲ್ಲಿ ನಾವು ಕುಳಿತಿದ್ದ ಮೇಲ್ಭಾಗದ ಜಂತಿಯ ಎಡೆಯಿಂದ ದೊಡ್ಡ ನಾಗರ ಹಾವೊಂದು ನಮ್ಮಿಬ್ಬರ ನಡುವೆ ದಪ್ ಎಂದು ಬಿದ್ದಿತು.ಅದನ್ನು ನೋಡುತ್ತಿದ್ದಂತೆಯೇ ಕಂಗಾಲಾದ ನಾನು ಮರಗಟ್ಟಿ ಕುಳಿತಿದ್ದೆ. ಅವರು(ಹರೀಶ ಆಚಾರ್ಯ)ಪಕ್ಕಕ್ಕೆ ಜಿಗಿದು ದೂರ ಸಾಗಿದ್ದರು.
ನಾಲ್ಕೈದು ಅಡಿ ದೂರದಲ್ಲಿ ನಾಗರಹಾವು ಹೆಡೆ ಅರಳಿಸಿ ಕುಳಿತ್ತಿತ್ತು. ನಾನು ಬೆಚ್ಚಿಬಿದ್ದದ್ದನ್ನು ಕಂಡ ಶ್ರೀಯವರು(ಹರೀಶ ಆಚಾರ್ಯ)ತಕ್ಷಣ ನನ್ನ ಬಳಿ ಬಂದು ನನ್ನನ್ನು ಜಗಲಿಯ ಇನ್ನೊಂದು ಬದಿಗೆ ಎಳೆದುಕೊಂಡು ಸಾಗಿದ್ದರು. ಕೂಡಲೇ ಮಠದ ಮಂದಿಯೆಲ್ಲಾ ಸೇರಿದರು. ನಾಗರ ಹಾವು ಮೆಲ್ಲನೆ ತೆವಳುತ್ತಾ ಮಠದ ಹಿಂಭಾಗದಲ್ಲಿದ್ದ ಕಟ್ಟಿಗೆ ರಾಶಿಯೊಳಗೆ ಸೇರಿತು.
ಈ ಘಟನೆ ಜರಗಿ ಒಂದು ತಿಂಗಳಲ್ಲೇ ಹರೀಶ್ ಆಚಾರ್ಯ ಶ್ರೀಸೋದೆವಾದಿರಾಜ ಮಠದ
ಶ್ರೀವಿಶ್ವೋತ್ತಮತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ಶ್ರೀಲಕ್ಷ್ಮೀವರತೀರ್ಥರೆಂದು ನಾಮಾಂಕಿ ತರಾಗಿ ಶ್ರೀ ಶಿರೂರು ಮಠದ ಮೂವತ್ತನೇ ಯತಿಗಳಾಗಿ ನೇಮಿತರಾದರು.
ಆಗಿನ್ನೂ ಅವರಿಗೆ ಎಂಟರ ಹರೆಯ. ಸನ್ಯಾಸಾಶ್ರಮದಮೊದಲ ಚಾತುರ್ಮಾಸ್ಯ ಮುಗಿಯುತ್ತಿದ್ದಂತೆ ಪಟ್ಟದ ದೇವರು ಹಾಗೂ ಕೃಷ್ಣ ಪೂಜೆಗೆ ಅವಶ್ಯವಿರುವ ಸಮಸ್ತ ವೇದ ಮಂತ್ರಗಳನ್ನು ವೈದಿಕ ಆಚರಣೆಗಳನ್ನು ಕಲಿತು ಗುರುಗಳಾದ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರಿಗೆ ಒಪ್ಪಿಸಿದರು.
ಅದರಲ್ಲೂ ಶ್ರೀಹರಿವಾಯುಸ್ತುತಿಯನ್ನು ಕೇವಲ ಒಂದೂವರೆ ದಿನದಲ್ಲಿ ಬಾಯ್ ಪಠ  ಮಾಡಿದ್ದರು. ಎಳೆಯ ಹರೆಯದಲ್ಲೇ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ಣಸಿದ್ಧತೆ ಹಾಗೂ ಕಲಿಕೆಯ ಹಸಿವು ಕಂಡು ಶ್ರೀವಿಶ್ವೊತ್ತಮತೀರ್ಥ ಶ್ರೀಪಾದರು ಬೆರಗಾದರು. ಸಂತಸಪಟ್ಟರು.
ಶ್ರೀಶಿರೂರುಶ್ರೀಪಾದರಿಗೆ ಶ್ರೀಶಿರೂರು ಮಠದ ಪಟ್ಟದ ದೇವರಾದ ರುಕ್ಮಿಣೀ ಸತ್ಯಭಾಮಾ ಸಹಿತ ಅನ್ನವಿಠಲ ಹಾಗೂ ಕೃಷ್ಣಪೂಜೆಯ ಅಪೂರ್ವ ಯೋಗ ಪ್ರಾಪ್ತಿಯಾಯಿತು. ಇಷ್ಟೊಂದು ಎಳೆಯ ಪ್ರಾಯದಲ್ಲಿ ಕೃಷ್ಣ ಪೂಜೆಯ ಭಾಗ್ಯ ಪ್ರಾಪ್ತಿಯಾದ್ದದ್ದು ಉಡುಪಿಯ ಮಧ್ವ ಪೀಠದ ಇತಿಹಾಸದಲ್ಲಿ ಒಂದು ಅತೀ ವಿರಳವಾದ ದಾಖಲೆ ಎಂದರೆ ತಪ್ಪಾಗಲಾರದು.
ಇನ್ನೂ ನೆನಪಿದೆ.. ಮೊದಲ ದಿನದ ಕೃಷ್ಣ ಪೂಜೆ ಪೂರೈಸಿದ ಶ್ರೀಪಾದರು ನಮ್ಮ ತಂದೆಯವರಲ್ಲಿ ಹೇಳುತ್ತಿದ್ದರು.. ಕೃಷ್ಣ ಮಠದ ಗಂಟಾಮಣಿ ತುಂಬಾ ಭಾರವಿದೆ. ನಮಗೆ ಹಗುರದ ಪ್ರತ್ಯೇಕ
ಗಂಟಾಮಣಿ ತಯಾರಿಸಿ ಕೊಡುವಂತೆ ಕೇಳಿಕೊಳ್ಳುತ್ತಿದ್ದರು. ಹಲವು ದಿನಗಳ ತನಕ ಅವರು ಹೇಳುತ್ತಲೇ ಇದ್ದರು. ಕ್ರಮೇಣ ಅಲ್ಲಿನ ಎಲ್ಲಾ ವ್ಯವಸ್ಥೆಗೂ ಎಳೆಯ ಶ್ರೀಲಕ್ಷ್ಮೀವರತೀರ್ಥರು ಹೊಂದಿಕೊಂಡರು.
ಪ್ರತೀ ಏಕಾದಶಿ ಉಪವಾಸ ಮರುದಿನ ದ್ವಾದಶಿಯಂದು ಬೆಳ್ಳಂಬೆಳಿಗ್ಗೆ ಎರಡು ಗಂಟೆಗೆ ಎದ್ದು ಪೂಜಾ ಸಿದ್ಧತೆ ಮಾಡಿಕೊಳ್ಳಬೇಕು. ಜಗತ್ತನ್ನು ಅರಿಯುವ ಮೊದಲೇ ಕಠಿಣ ವೃತಾನುಷ್ಠಾನ ಸಹಿತ ಶ್ರೀ ಶ್ರೀಮಧ್ವಾಚಾರ್ಯ ಕರಾರ್ಚಿತ ಕೃಷ್ಣಪೂಜೆಯ ಎಲ್ಲಾ ವಿಧಿವಿಧಾನಗಳನ್ನು ಸಂಭ್ರಮದಿಂದ ಕರಗತ ಮಾಡಿಕೊಂಡರು.
ಉಡುಪಿಯ ಪುಟ್ಟಕೃಷ್ಣನು ಶಿರೂರು ಮಠದ ಪುಟ್ಟ ಶ್ರೀಪಾದರಿಂದ ನಿರಂತರ ಸೇವೆಯನ್ನು ವೈಭವ ದಿಂದ ಸ್ವೀಕರಿಸುತ್ತಿದ್ದ. ಅದರಲ್ಲೂ ಶ್ರೀಕೃಷ್ಣ ಅಲಂಕಾರ ಸೇವೆಗೆ ಶಿರೂರು ಶ್ರೀ ಕುಳಿತರೆಂದರೆ ಸಮಯ ಸಾಗಿದ್ದೇ ಅರಿವಾಗುತ್ತಿರಲಿಲ್ಲ.ಪುಟ್ಟ ಯತಿಯು ಕೃಷ್ಣನಿಗೆ ಸಲ್ಲಿಸುತ್ತಿದ್ದ ವೈವಿಧ್ಯಮಯ ಅಲಂಕಾರಗಳ ಅಂದ ನಿಖರತೆ ಕಂಡು ಹಿರಿಯ ಯತಿಗಳು ಬೆರಗಾಗುತ್ತಿದ್ದರು.
ಕೆಲವೊಮ್ಮೆ ಹಿರಿಯ ಯತಿಗಳಾದ ಶ್ರೀಸೋದೆಮಠದ ಕೀರ್ತಿಶೇಷ ಶ್ರೀವಿಶ್ವೋತ್ತಮತೀರ್ಥರು, ಶ್ರೀಕಾಣಿಯೂರು ಮಠದ ಕೀರ್ತಿಶೇಷ ಶ್ರೀವಿದ್ಯಾವಾರಿನಿಧಿತೀರ್ಥರು, ಶ್ರೀಅದಮಾರು ಮಠದ ಕೀರ್ತಿಶೇಷ ಶ್ರೀವಿಭುದೇಶತೀರ್ಥ ಶ್ರೀಪಾದರು ಪರ್ವಕಾಲದಲ್ಲಿ ತಮಗೆ ಇಷ್ಟವಾದ ಕೃಷ್ಣಾಲಂಕಾರ ಗಳನ್ನು ಶಿರೂರು ಶ್ರೀಪಾದರ ಮುಖಾಂತರ ನಡೆಸಿದ್ದೂ ಇದೆ.
ಕೃಷ್ಣನಿಗೆ ಸಲ್ಲಿಸುವ ಅಲಂಕಾರ ಪೂಜೆಯಲ್ಲಿ ಶ್ರೀಪಾದರಿಗಿರುವ ಆಸಕ್ತಿ ತನ್ಮಯತೆ ಅವರೆಲ್ಲರಿಗೂ ಅಷ್ಟೊಂದು ಮೆಚ್ಚಿಗೆಯಾಗಿತ್ತು. ನಾನು ಶಾಲೆಗೆ ಹೋಗಲು ಆರಂಭಿಸಿದ ನಂತರ ಶಾಲೆಯಿಂದ ಸಂಜೆ ಮತ್ತೆ ಹಿಂತಿರುಗಿ ಬರುವವರೆಗೆ ಕಾತರದಿಂದ ಶ್ರೀಯವರು ಕಾಯುತ್ತಿದ್ದರು.
ನಾನು ಬರುತ್ತಿದ್ದಂತೆ ಓಡಿ ಬಂದು ನನ್ನ ಚೀಲದಿಂದ ಪುಸ್ತಕಗಳನ್ನು ತೆಗೆದು ಆಸಕ್ತಿಯಿಂದ ಓದುತ್ತಿದ್ದರು. ಕೆಲವೊಮ್ಮೆ ಸಂಜೆ ನಮ್ಮೊಡನೆ ಆಟವಾಡುವ ಹುಮ್ಮಸ್ಸು. ಆದರೆ ಆಟದ ನಡುವಿನಲ್ಲಿ ಯಾರಾದರೂ ಬಂದು “ಬನ್ನಿ ಸ್ವಾಮಿ! ಆಟ ಸಾಕು”ಎಂದು ಅವರನ್ನು ಕರೆದೊಯ್ಯುತ್ತಿದ್ದಾಗ ನನಗೆ ಮತ್ತು ನನ್ನ ಸ್ನೇಹಿತರಿಗೆ ಬಹಳ ದುಃಖವಾಗುತ್ತಿತ್ತು.
ಉಡುಪಿಯಲ್ಲಿ ಜರಗುತ್ತಿದ್ದ ಉತ್ಸವದ ಸಂದರ್ಭಗಳಲ್ಲಿ ರಥಬೀದಿ ತುಂಬಾ ಬಣ್ಣ ಬಣ್ಣದಬಲೂನುಗಳು, ಗಿರಿಗಿಟ್ಟಿಗಳು ಆಕರ್ಷಕಆಟಿಕೆಗಳು ಮಠಗಳ ಮುಂಭಾಗದಲ್ಲೇ ಎಲ್ಲರ ಕಣ್ಸೆಳೆಯುತ್ತಿದ್ದವು. ಶ್ರೀಪಾದರು ಮಠದ ಕಿಟಕಿಯಿಂದ ಇವನ್ನೆಲ್ಲಾ ಕಣ್ಣರಳಿಸಿ ನೋಡಿ ತುಂಬಾ ಖುಷಿ ಪಡುತ್ತಿದ್ದರು. ಅನೇಕ ಭಾರಿ ಆಟಿಕೆಗಳನ್ನು ಬುಗರಿಗಳನ್ನು ನನಗೆ ತರಿಸಿಕೊಟ್ಟಿದ್ದರು.
ನನ್ನೊಡನೆ ಅವರೂ ಕೂಡಾ ಕೆಲ ಕಾಲ ಆ ಆಟದಲ್ಲಿ ಸೇರಿಕೊಳ್ಳುತ್ತಿದ್ದರು. ಆದರೆ ಎಂದೂ ಕೂಡಾ ಅದಕ್ಕೇ ಅಂಟಿಕೊಳ್ಳುತ್ತಿರಲಿಲ್ಲ. ಫಿಸಿಕ್ಸ್ ಅಂದರೆ ಶ್ರೀಪಾದರಿಗೆ ತುಂಬಾ ಇಷ್ಟದ ವಿಷಯ.ನನ್ನ ಅಣ್ಣನ ವಿಜ್ಞಾನ ಪುಸ್ತಕದಲ್ಲಿದ್ದ ಬಲ್ಬು ಮತ್ತು ಬೆಳಕು ಈ ಪಾಠದ ಎರಡೂ ಪುಟವನ್ನು ಓದಿ ಬಾಯ್ಪಟ (ಬೈಹಾರ್ಟ್) ಮಾಡಿಕೊಂಡಿದ್ದರು.
ವಿದ್ಯುಶ್ಚಕ್ತಿ ಬಗ್ಗೆ ಅದೇನೋ ಆಕರ್ಷಣೆ. ಅದರಲ್ಲೂ ಪರ್ಯಾಯದ ಸಂದರ್ಭದಲ್ಲಿ ಮಠದ ಮುಂಭಾಗ  ದಲ್ಲಿ ಮಿನುಗುವ ರನ್ನಿಂಗ್ ಮಿನಿಚರ್ ದೀಪಗಳ ಬಗ್ಗೆಯಂತೂ ತೀರದ ಕುತೂಹಲ. ಇದನ್ನು ತಿಳಿಯುವ ಕುತೂಹಲದಲ್ಲಿ ಒಂದೆರಡು ಭಾರಿ ಕರೆಂಟ್ ಶಾಕ್ ಕೂಡಾ ಹೊಡೆಸಿಕೊಂಡಿದ್ದರು.
ಒಮ್ಮೆ ದೀಪಾವಳಿ ಸಂದರ್ಭದಲ್ಲಿ ವಿಶಿಷ್ಟ ರೀತಿಯ ವಿಮಾನದ ಬೃಹತ್ ಗೂಡುದೀಪವನ್ನು ತಾವೇ ನಿರ್ಮಿಸಿದ್ದರು.
ನೈಟ್ರೋಜನ್ ಗ್ಯಾಸ್ ಮೂಲಕ ಗಾಳಿಯಲ್ಲಿ ತೇಲುವಂತೆ ಈ ಗೂಡು ದೀಪದ ರಚನೆಯಾಗಿತ್ತು.
ಸುಮಾರು ಹೊತ್ತಿನವರೆಗೂ ಗಾಳಿಯಲ್ಲಿ ಹಾರಾಡುತ್ತಿದ್ದ ಈ ಗೂಡುದೀಪ ದುರದೃಷ್ಟವಶಾತ್ ತಡರಾತ್ರಿ ಸುರಿದ ಜೋರಾದ ಗುಡುಗು ಸಿಡಿಲಿನ ಮಳೆಗೆ ನೆಲ ಕಚ್ಚಿತು.
ಶ್ರೀಪಾದರ ಭಾರೀ ಆಕಾಂಕ್ಷೆಯ ಯೋಜನೆ ವಿಫಲವಾಗಿತ್ತು. ಆದರೂ ಈ ಗೂಡುದೀಪ ವೀಕ್ಷಣೆಗೆ ರಥಬೀದಿಯಲ್ಲಿ ಸಾವಿರಾರು ಮಂದಿ ಸೇರಿದ್ದರು. ಆಗಿನ್ನೂ ಶ್ರೀಪಾದರಿಗೆ ಹದಿನಾರು ವರ್ಷವೂ ತುಂಬಿರಲಿಲ್ಲ.
ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ನನಗೆ ಒಮ್ಮೆಯಾದರೂ ಶ್ರೀಪಾದರ ಖಾವಿ ಬಟ್ಟೆ ಧರಿಸಿ ಮಠದ ಪಡಸಾಲೆಯಲ್ಲಿ ಶ್ರೀಪಾದರ ಮಣೆಯ ಮೇಲೆ ಕೂರಬೇಕೆಂಬ ಆಸೆ. ಮಧ್ಯಾಹ್ನ ಮೂರು ಗಂಟೆಯ ಸಮಯ ಯಾರೂ ಇರಲ್ಲಿಲ್ಲ. ಖಾವಿ ಧರಿಸಿ ಶ್ರೀಪಾದರು ಕೂಡುವ ಮಣೆಯಲ್ಲಿ ಶ್ರೀಪಾದ ರಂತೆ ರಾಜ ಗಾಂಭೀರ್ಯದಲ್ಲಿ ಕುಳಿತೇಬಿಟ್ಟೆ.
ನನ್ನ ದುರಾದೃಷ್ಟಕ್ಕೆ ಸರಿಯಾಗಿ ಅದೇ ಹೊತ್ತಿಗೆ ನಮ್ಮ ದೂರದ ಸಂಬಂಧಿಕರು ಕುಟುಂಬ ಸಮೇತ ರಾಗಿ ಬಂದವರೇ ನನ್ನನ್ನೇ ಸ್ವಾಮೀಜಿ ಅಂತಾ ಭಾವಿಸಿಕೊಂಡು ಸಾಷ್ಟಾಂಗ ಪ್ರಣಾಮ ಸಲ್ಲಿಸಿದ್ದರು .ನಾನು ಹೆದರಿ ಬಿಳುಚಿಹೋಗಿದ್ದೆ. ಆ ಹೊತ್ತಿಗೆ ಸರಿಯಾಗಿ ನನ್ನ ತಂದೆಯವರು ನನ್ನನ್ನು ಕಂಡು ಸಿಟ್ಟಿನಿಂದ ನನ್ನೆಡೆಗೆ ಬರುತ್ತಿದ್ದರು. ನಾನು ಶರವೇಗದಲ್ಲಿ ಅಲ್ಲಿಂದ ಮಾಯವಾಗಿದ್ದೆ.
ನನ್ನ ಪರಿಸ್ಥಿತಿಯನ್ನು ಬಾಗಿಲ ಎಡೆಯಿಂದ ನೋಡುತ್ತಿದ್ದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಬಾಲ್ಯದಲ್ಲಿ ವೈದಿಕ ಪಾಠವನ್ನು ಶ್ರೀಸೋದೆ ವಾದಿರಾಜ ಮಠದ
ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥಶ್ರೀಪಾದರು ಹಾಗೂ ಅಡ್ಡೆ ವೇದವ್ಯಾಸ ಆಚಾರ್ಯರು, ಅಗ್ರಹಾರ ನಾರಾಯಣ ತಂತ್ರಿಗಳು ನಡೆಸುತ್ತಿದ್ದರು.
ಪಾಠ ಮುಗಿಯುತ್ತಿದ್ದಂತೆ ನನ್ನ ಬಳಿ ಬಂದು ಪುರಾಣದ ಕೆಲವು ಅಪೂರ್ವ ಕಥೆಗಳನ್ನು ಪಾಠದ ಸಂದರ್ಭದಲ್ಲಿ ಜರಗುತ್ತಿದ್ದ ಸ್ವಾರಸ್ಯಕರ ವಿಚಾರಗಳನ್ನು ಹೆಚ್ಚಾಗಿ ಹೇಳುತ್ತಿದ್ದರು. ಮುಂದೆ ಶ್ರೀಉತ್ತರಾದಿ ಮಠದ ಶ್ರೀಸತ್ಯಪ್ರಮೋದತೀರ್ಥರಲ್ಲಿ ಬೆಂಗಳೂರು, ರಾಣಿಬೆನ್ನೂರು, ಹೊಸಪೇಟೆ, ಶ್ರೀರಂಗಂ ಮುಂತಾದ ಕ್ಷೇತ್ರಗಳಲ್ಲಿ ತಂಗಿ ವ್ಯಾಸಂಗ ನಡೆಸಿ ಶ್ರೀಮನ್ಯಾಯಸುಧಾಧಿ ಗ್ರಂಥಗಳ ಅಧ್ಯಯನವನ್ನು ಕನಿಷ್ಟ ಅವಧಿಯಲ್ಲಿ ಪೂರೈಸಿದರು.
ತದನಂತರವೂ ಅನೇಕ ವರ್ಷಗಳ ಕಾಲ ಶ್ರೀಸತ್ಯಪ್ರಮೋದತೀರ್ಥ ಶ್ರೀಪಾದರ ಜೊತೆಯಲ್ಲಿ ವೇದ,ವೇದಾಂತಗಳ ಅಧ್ಯಯನವನ್ನು ಮುಂದುವರಿಸಿದ್ದರು. ಇನ್ನೊಂದುವಿಶೇಷವೆಂದರೆ ಶ್ರೀಶಿರೂರು ಶ್ರೀಪಾದರ ಪರಮ ಗುರುಗಳಾದ ಶ್ರೀಲಕ್ಷ್ಮೀ0ದ್ರತೀರ್ಥಶ್ರೀಪಾದರೂ ಕೂಡಾ ಶ್ರೀಸತ್ಯಪ್ರಮೋದರ
ಗುರುಗಳಾದ ಶ್ರೀಸತ್ಯಧ್ಯಾನತೀರ್ಥರಲ್ಲಿ ಶ್ರೀಮನ್ಯಾಯಸುಧಾಧಿ ಗ್ರಂಥಗಳನ್ನು ಅಧ್ಯಯನ ನಡೆಸಿದ್ದರು.
ಪೂಜ್ಯ ಗುರುಗಳಾದ ಶ್ರೀವಿಶ್ವೋತ್ತಮ ತೀರ್ಥರ ಸೂಚನೆಯಂತೆ ಮೂವತ್ತೈದನೇ ವಯಸ್ಸಿನವರೆಗೆ ಅಧ್ಯಾತ್ಮ ಶಿಕ್ಷಣದಲ್ಲೇ ಮುಂದುವರಿದ ಶ್ರೀಪಾದರು ತದನಂತರ ಸಮಾಜಮುಖೀ ಸೇವೆಗೆ ವಿಶೇಷ ಒತ್ತುಕೊಟ್ಟರು.
70 ಮತ್ತು 80 ರ ದಶಕದಲ್ಲಿ ಶ್ರೀಮಂತ್ರಾಲಯ ಪೀಠಾಧಿಪತಿಗಳು ಶ್ರೀ ಸುಜಯೀಂದ್ರ ತೀರ್ಥರು, ಶ್ರೀಉತ್ತರಾದಿ ಮಠದ ಪೀಠಾಧಿಪತಿಗಳು ಅಲ್ಲದೇ ಬಹುತೇಕ ಮಾಧ್ವ ಪೀಠಾಧಿಪತಿಗಳು ಉಡುಪಿಗೆ ಬಂದರೆ ಶ್ರೀಶಿರೂರು ಮಠದಲ್ಲೇ ವಾಸ್ತವ್ಯ.
ನಮ್ಮತಂದೆ ಶ್ರೀವಿಠಲಾಚಾರ್ಯರಿಗೆ ಪೀಠಾಧಿಪತಿಗಳು ಮಠಕ್ಕೆ ಬಂದರೆ ಖುಷಿಯೋ ಖುಷಿ.
ಶ್ರೀಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದರು ಹಾಗೂ (ಅವರ ಪೂರ್ವಾಶ್ರಮದ ಸಮಯದಿಂದಲೂ) ಶ್ರೀಲಕ್ಷ್ಮೀವರತೀರ್ಥ ಶ್ರೀಪಾದ ರಿಬ್ಬರೂ ಬಾಲ್ಯ ಸ್ನೇಹಿತರು.
ಉಡುಪಿಗೆ ಇವರು ಬಂದರೆ ಶಿರೂರು ಶ್ರೀಪಾದರಿಗೆ ವಿಶೇಷ ಸಂಭ್ರಮ. ಶಿರೂರು ಶ್ರೀಪಾದರ ಪೂರ್ವಾಶ್ರಮದ ತಾಯಿ ಕುಸುಮಕ್ಕನಿಗೂ ಶ್ರೀಪವಮಾನ ಆಚಾರ್ಯರೆಂದರೆ (ಪ್ರಸ್ತುತ ಶ್ರೀಮಂತ್ರಾಲಯ ಶ್ರೀರಾಘವೇಂದ್ರಮಠದ ಪೀಠಾಧಿಪತಿಗಳು) ತುಂಬಾ ಗೌರವ, ಪ್ರೀತಿ.
ಮಧ್ವಸರೋವರದಲ್ಲಿ ಗಂಟೆಗಟ್ಟಲೆ ಜೊತೆಯಾಗಿ ಶಿರೂರು ಶ್ರೀಪಾದರ ಹಾಗೂ ಪವಮಾನ ಆಚಾರ್ಯರ ಈಜು ಸಾಗುತ್ತಿತ್ತು.
ಬೆಳಗ್ಗಿನ ಮತ್ತು ರಾತ್ರಿಯ ಉಪಹಾರವನ್ನು ಕುಸುಮಕ್ಕನೇ ಸ್ವತಃ ಕೈಯಾರೆ ನಮಗಿಬ್ಬರಿಗೂ ಉಣಿಸುತ್ತಿದ್ದರು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀಸುಭುದೆಂದ್ರತೀರ್ಥ ಶ್ರೀಪಾದ ರು ಉಡುಪಿಯಲ್ಲಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಜೊತೆಗೆ ಕಳೆದ ಬಾಲ್ಯದ ದಿನಗಳನ್ನು ಭಾವುಕ ರಾಗಿ ನೆನಪಿಸಿಕೊಳ್ಳುತ್ತಿದ್ದರು.
ಶ್ರೀಶಿರೂರು ಶ್ರೀಪಾದರು 1978-80ರ ತಮ್ಮ ಮೊದಲ ಪರ್ಯಾಯದಲ್ಲಿ ನನಗೊಂದು HMT ಕೈಗಡಿಯಾರ ಕೊಡಿಸಿದ್ದರು.ಪ್ರತಿದಿನ ಅವರ ಜೊತೆ ಮಠದಲ್ಲಿ ಇರುವಾಗ ತಾನು ನೀಡಿದ ಕೈಗಡಿ ಯಾರ ಹಾಕಿಕೊಂಡಿದ್ದರೆ ಅವರಿಗೆ ಏನೋ ಸಮಾಧಾನ. 
ಬಾಲ್ಯದಿಂದಲೂ ಮಠದ ಸಿಬ್ಬಂದಿಗಳು ಶಿಷ್ಯರು ಆಗಮಿಸುವ ಭಕ್ತರು ಹಾಗೂ ಸಂಕಷ್ಟದಲ್ಲಿರುವ ಬಡವರ ಮೇಲೆ ಕರುಣೆ ಹಾಗೂ ಏನಾದರೊಂದು ಸಹಾಯ ಮಾಡಲೇಬೇಕೆಂಬ ಹಂಬಲ.ಸಹಾಯ ನೀಡುವ ತನಕ ವಿರಮಿಸದ ಮನಸ್ಸು.
ಬಡವಬಲ್ಲಿದನೆಂಬ ಭೇದವಿಲ್ಲದೆ ಸಮಾನತೆಯಲ್ಲೇ ಸಂತಸ ಕಾಣುವ ಸಹೃದಯ ಚೇತನ ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು. ಜುಲೈ19 ಶ್ರೀಪಾದರು ಹರಿಪಾದ ಸೇರಿದ ದಿನ. ಮೂರುವರ್ಷಗಳು ಸಂದವು.
48 ವರ್ಷಗಳ ಕಾಲ ಕೃಷ್ಣ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ ಮೂರು ವೈಭವದ ಪರ್ಯಾಯ ಗಳನ್ನು ನಡೆಸಿ ಅನೇಕ ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಮಾಜಮುಖೀ ಯೋಜನೆಗಳನ್ನು ಪರಮಾತ್ಮನ ಪಾದಕಮಲಗಳಿಗೆ ಸಲ್ಲಿಸಿದ ಶ್ರೀಪಾದರು ನಮ್ಮ ಜೊತೆಯಲ್ಲಿ ಈಗ ಇಲ್ಲವಾದರೂ ಅವರ ಅಧ್ಯಾತ್ಮ ಚಿಂತನೆಗಳು ಸೇವೆಗಳು, ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಲಿ.
ಶ್ರೀಪಾದರ ಅನುಗ್ರಹ ಮಂತ್ರಾಕ್ಷತೆ ಸದಾ ನಮ್ಮ ಶಿರದ ಮೇಲಿರಲಿ ಎಂದು ಹೃತ್ಪೂರ್ವಕ ಪ್ರಾರ್ಥನೆ..
 
 
 
 
 
 
 
 
 
 
 

Leave a Reply