Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ನಿಸರ್ಗಾಂತರ್ಗತ “ಚೈತನ್ಯ” ಸಂಭ್ರಮಿಸುವ ಸನ್ನಿಧಾನ: |ಪಡುಬಿದ್ರಿಯ ಬ್ರಹ್ಮಸ್ಥಾನ|

|ಪಡುಬಿದ್ರಿಯ ಬ್ರಹ್ಮಸ್ಥಾನ|

ಸಹಜ ನಿಸರ್ಗ ಮತ್ತು ‌ಅಲಂಕೃತ ನಿಸರ್ಗದ ಸನ್ನಿಧಿಗಳಲ್ಲಿ “ನಡುವಣಲೋಕ” ನಿರ್ಮಾಣವಾಗಬಲ್ಲುದು. “ಪ್ರಕೃತಿ”, ನಿಜವಾಗಿ ಸಂಭ್ರಮಿಸುವುದು ಅಲಂಕಾರದಲ್ಲಿ ಮತ್ತು ಅಲಂಕಾರ ರಹಿತ ಸ್ಥಿತಿಯಲ್ಲಿ . ಇಂತಹ ಒಂದು ಅಪೂರ್ವ ನೆಲೆಯಾಗಿ ಪಡುಬಿದ್ರಿಯ ಬ್ರಹ್ಮಸ್ಥಾನ ಪ್ರಕಟಗೊಳ್ಳುತ್ತದೆ .

[ಆದರೆ ಇಲ್ಲಿಯ ನೈಜ ಸೊಬಗನ್ನಾಗಲಿ‌, ಅಲಂಕೃತ ಚಿತ್ರಣವನ್ನಾಗಲಿ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿ ಕೊಂಡೊಯ್ಯು ವಂತಿಲ್ಲ, ಆ ಭವ್ಯವನ್ನು ಪ್ರತ್ಯಕ್ಷ ಕಂಡೇ ಅನುಭವಿಸಬೇಕು . ಕಲಾವಿದರು ಬಿಡಿಸಿದ ಚಿತ್ರಗಳು ಇವೆ , ಅವುಗಳಷ್ಟೆ ಇಲ್ಲಿ ಸಿಗುವ ಅಭಿವ್ಯಕ್ತಿಗಳು. ಇದು ಇಲ್ಲಿಯ ಶಿಸ್ತು]

ನಿಸರ್ಗವು ನೈಜ ಸ್ಥಿತಿಯಲ್ಲಿ ಅಂದರೆ “ಇದ್ದಹಾಗೆ” (ಅಲಂಕಾರ ರಹಿತ). ಅಲಂಕೃತ ಸ್ವರೂಪ ಎಂದರೆ ಮಾನವ ನಿರ್ಮಿತ ಅಲಂಕರಣದಲ್ಲಿ‌ ಎಂದು ಅರ್ಥೈಸಿಕೊಂಡರೆ ಈ ಎರಡೂ ಸ್ಥಿತಿಯಲ್ಲಿ‌ ತೆರೆದುಕೊಳ್ಳಬಲ್ಲುದು.ಈ ಸನ್ನಿಧಿಯಲ್ಲಿ ಸಾಧಕನು ತಾದಾತ್ಮ್ಯ ಸಾಧಿಸಬಲ್ಲ.

ಇಲ್ಲಿಯ ಅಲಂಕರಣಗಳಿಲ್ಲದ ಸ್ಥಿತಿ, ಹಕ್ಕಿಗಳ ಇಂಚರದಲ್ಲಿಯೂ ಸೃಷ್ಟಿಯಾಗುವ ಮೌನ , ಪ್ರಕೃತಿಯ ರಮ್ಯಮನೋಹರ ನೋಟ ನಡುವಣ ಲೋಕಕ್ಕೆ ನಮ್ಮನ್ನು ಸುಲಭವಾಗಿ ಒಯ್ಯುವಂತಿರುತ್ತದೆ . ಅದೇ ನಿಸರ್ಗ ಹೂ ,ಹಣ್ಣು , ಫಲವಸ್ತುಗಳಿಂದ ಶೃಂಗಾರಗೊಂಡಾಗ ಮಂದ ಬೆಳಕಿನಲ್ಲಿ ಅಂದರೆ ಆರಾಧನೆ ಅಥವಾ ವಿಧಿಯಾಚರಣೆಗೆ ಅಣಿಯಾದಾಗ ಒಂದು ಅಲೌಕಿಕ ಲೋಕ ನಿರ್ಮಾಣವಾಗುತ್ತದೆ ಇದೇ ನಡುವಣಲೋಕ.

ಇದು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಸಾಧ್ಯವಾಗುವ ಅಥವಾ ಸಿದ್ಧಿಯಾಗುವ “ದಿವ್ಯ”ದ ಸಾಕ್ಷಾತ್ಕಾರ .
ಎರಡು ವರ್ಷಗಳಿಗೊಮ್ಮೆ “ಡಕ್ಕೆಬಲಿ” ಎಂಬ ಸೇವೆ ನಡೆಯುವ ಶ್ರಾಯದಲ್ಲಿ ಒಂದಷ್ಟು ದಿನ ಪ್ರಕೃತಿ ಶೃಂಗಾರಗೊಳ್ಳುತ್ತದೆ . ಉಳಿದ ದೀರ್ಘ ಅವಧಿಯಲ್ಲಿ ಸಹಜ ಸ್ಥಿತಿ ಇರುತ್ತದೆ.ಇದು ಏಕಾಂತದಲ್ಲಿ ನಮ್ಮನ್ನು‌ ನಾವೇ ಮರೆಯುವಂತಹ ಸ್ಥಿತಿ ತಲುಪಲು ಸಾಧ್ಯವಾಗುವ ಪ್ರಕೃತಿಯ ತಾಣ.

ಗಿಡ , ಮರ ,ಬಳ್ಳಿ ,ಕಲ್ಲು ,ಬಂಡೆ , ಮಣ್ಣು ಮುಂತಾದ ನಿಸರ್ಗದ ಅವಿಭಾಜ್ಯ ಅಂಗಗಳಲ್ಲಿ‌ ಅಗೋಚರವಾದ ಶಕ್ತಿ ಇದೆ ಎಂಬ ಅನುಭವ ಸಿದ್ಧವಾದ ಪ್ರಾಚೀನರ‌ ನಂಬಿಕೆ ಮತ್ತು ಪದ್ಧತಿಗಳು ಚೈತನ್ಯವಾದವನ್ನವಲಂಬಿಸಿತ್ತು . ಇಂತಹ ಚೈತನ್ಯವನ್ನು ತನಗೆ ಬೇಕೆಂದಲ್ಲಿ ಒದಗಿಬರುವಂತೆ ಮಾಡಲು ಅವರು ಪೂಜಾವಿಧಾನವನ್ನು ಅನುಸರಿಸಿದರು. ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ ಪೂಜೆಯಾಗುತ್ತಿರುವಂತೆ ಸಾನ್ಮಿಧ್ಯ ಒದಗಿಬರುವ ನಿಸರ್ಗಾಂತರ್ಗತವಾದ ಶಕ್ತಿಯನ್ನು ಒಪ್ಪಿದ ,ಸ್ವೀಕರಿಸಿದ ನಮ್ಮ ಪೂರ್ವಸೂರಿಗಳು ಪ್ರಕೃತಿಯ ಮಡಿಲಲ್ಲಿ ಇಂತಹ ಪೂಜಾಸ್ಥಾನಗಳನ್ನು ಕಲ್ಪಿಸಿದರು.

ಈ ಪರಿಕಲ್ಪನೆಯಲ್ಲಿ ರೂಢಿಗೆ ಬಂದಿರುವ ಪ್ರಾಚೀನ ಆರಾಧನಾ ಸ್ಥಾನವೇ “ಪಡುಬಿದ್ರಿಯ ಬ್ರಹ್ಮಸ್ಥಾನ,ಅಥವಾ
‘ಬೆರ್ಮಸ್ಥಾನ’. ಇಲ್ಲಿ ಎಲ್ಲವೂ ಬಟ್ಟಂಬಯಲು . ಆದರೆ ಏನೂ ಅರ್ಥವಾಗದ ಸಂಕೀರ್ಣ ಶ್ರದ್ಧಾಸ್ಥಾನ. ಇಲ್ಲಿ ಯಾವುದೇ ಕಟ್ಟಡಗಳಿಲ್ಲ ಆದರೆ “ಕಟ್ಟು ಕಟ್ಟಳೆ”ಯಂತೆ ಪೂಜಾ ವಿಧಿಗಳು ನಡೆಯುತ್ತಿರುವಂತೆ ನಂಬಿಕೆ ಒದಗಿ ಬರುತ್ತದೆ ಅಥವಾ ಇಚ್ಛಿತ ಸಂಕಲ್ಪ ಸನ್ನಿಹಿತವಾಗುತ್ತದೆ. ಅಂದರೆ ಇಲ್ಲಿ ‘ಕಟ್ಟುಕಟ್ಟಳೆಗಳೇ’ ಪ್ರಧಾನವಾಗುತ್ತಾ ಸಮಗ್ರ ವಿಧಿಗಳು ನಿರ್ವಹಿಸಲ್ಪಡುತ್ತವೆ.

ಈ ಎಲ್ಲಾ ವಿಧಿವಿಧಾನಗಳು ತಂತ್ರ ರೂಪದವುಗಳು, ಮಂತ್ರ ಮುಖ್ಯವಾದವುಗಳಲ್ಲ. ಏಕೆಂದರೆ ಇದು ಪ್ರಾಚೀನವಾದುದು. ವೈದಿಕ ಪೂರ್ವದ ಸರಳ, ಮುಗ್ಧ , ವಿಮರ್ಶೆಗಳಿಲ್ಲದ ಉಪಾಸನಾ ಕ್ರಮಗಳಿರುವ ನೆಲೆ . ಇದು ಪಡುಬಿದ್ರಿಯ ಬ್ರಹ್ಮಸ್ಥಾನ – ಬೆರ್ಮಸ್ಥಾನ.

ಎರಡು ವರ್ಷಕ್ಕೊಮ್ಮೆ ನಡೆಯುವ ಡಕ್ಕೆಬಲಿ ಎಂಬ ಸೇವೆಯಿಂದ ಗುರುತಿಸಲ್ಪಡುವ ಒಂದು ನಿಸರ್ಗದ ಮಡಿಲು . ಈ ಡಕ್ಕೆಬಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಏಳು ಉತ್ಸವಗಳಲ್ಲಿ ಒಂದು. ಏಕೆಂದರೆ ಇಲ್ಲಿ ಯಾವುದೇ ವಿಕೃತಿಗಳಿಲ್ಲದ ಸೊಬಗಿನ ಪ್ರಕೃತಿ ಇದೆ. ಸಂಜೆಯಾಗುತ್ತಿರುವಂತೆ ಅಲಂಕಾರ ಆರಂಭವಾಗುತ್ತದೆ, ನಡು ಇರುಳಲ್ಲಿ ನಿಸರ್ಗ ಪೂರ್ಣ ಸೊಬಗಿನಿಂದ ವಿಜೃಂಭಿಸುತ್ತದೆ. ಆಗ ‘ಕಟ್ಟು ಕಟ್ಟಳೆ’ಗಳು ನೆರವೇರುತ್ತವೆ,‌ ಬೆಳಗಾಗುತ್ತಿರುವಂತೆ ಆರಾಧನೆ ಮುಗಿಯುತ್ತದೆ.

ಪ್ರಕೃತಿ ಮತ್ತೆ ಅಲಂಕರಣಗಳನ್ನು ಕಳಚಿಕೊಂಡು ನೈಜ ಸ್ಥಿತಿಗೆ ಬರುತ್ತದೆ. ಇಂತಹ ರೂಪಾಂತರವು ಆರಾಧನಾ ಪರ್ವದಲ್ಲಿ ಮಾತ್ರ ಕಾಣಬಹುದಾದ ಇಲ್ಲಿಯ ವೈಶಿಷ್ಟ್ಯ. ಜಗದಗಲ ಹಬ್ಬಿರುವ ಚೈತನ್ಯವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ವಿಜೃಂಭಿಸುತ್ತದೆ . ಆ ಸ್ಥಳಗಳೇ ನಿಸರ್ಗದ ಅಚಿಂತ್ಯಾದ್ಭುತವಾದ ಸಾಮರ್ಥ್ಯಕ್ಕೆ ಒದಗಿದ ಸನ್ನಿಧಾನ .ಆದುದರಿಂದಲೇ ಇಲ್ಲಿ ಏಕಾಗ್ರತೆ ಸುಲಭ .ಮೌನದಲ್ಲಿ ಹೇಗೆ ಅನುಸಂಧಾನ ಲೀಲಾಜಾಲವಾಗಿ ಸಾಧಿಸಲ್ಪ

ಡುತ್ತದೋ ಅಂತೆಯೇ ಗದ್ದಲಗಳಿದ್ದರೂ ಅವ್ಯಕ್ತ ಚೈತನ್ಯದೊಂದಿಗೆ ತಾದಾತ್ಮ್ಯ ಸಾಧ್ಯವಾಗುವುದು . ಈ ಸಿದ್ಧಿ ಪಡೆದವರು ಬಹುಮಂದಿ , ಆದರೆ ಈಗ ಬೆರಳೆಣಿಕೆಯಷ್ಟು ಮಾತ್ರ. ವೈಭವೀಕರಣಗೊಂಡ ನಂಬಿಕೆ , ಶ್ರದ್ಧೆ , ಸನ್ನಿಧಾನದ ದರ್ಶನ , ಸೇವಾ ಸಮರ್ಪಣೆ ಮುಂತಾದುವುಗಳು ಯಾವ ತಾದಾತ್ಮ್ಯವನ್ನೂ ಬಯಸುವುದಿಲ್ಲ ,‌ ಬದಲಿಗೆ ನಡವಳಿಕೆಗಳನ್ನು ಮಾತ್ರ ವ್ಯಕ್ತ ಪಡಿಸುತ್ತದೆ .ಆದುದರಿಂದ ನಿಸರ್ಗದೊಂದಿಗೆ ಒಳಗೊಳ್ಳುವ ಉಪಾಸನಾ ವಿಧಾನವೇ ಮರೆತಂತೆ . ಆದರೆ ಇದು ಪಡುಬಿದ್ರಿಯ ಬಟ್ಟಂಬಯಲಿನ, ಆದರೆ ಸಾಮರ್ಥ್ಯ( ಚೈತನ್ಯ) ಸಂಭ್ರಮಿಸುತ್ತಿರುವ ಬ್ರಹ್ಮಸ್ಥಾನದಲ್ಲಿ ಮಾತ್ರ ಜಾಗೃತವಾಗಿದೆ. ಎಷ್ಟು ಮಂದಿಗೆ ಸಾಕ್ಷಾತ್ಕಾರವಾಗಿದೆ ಗೊತ್ತಿಲ್ಲ . ಇಂತಹ ಧ್ಯಾನಾಸಕ್ತರು ಇಂದಿಗೂ ಇದ್ದಾರೆ .

“ಬ್ರಹ್ಮಸ್ಥಾನ” ಎಂದರೇನು‌ ? ಬೆಮ್ಮೆರ್ , ಬೆರ್ಮೆರ್ , ಬ್ರಹ್ಮೆರ್ ಎಂದು ತುಳುವರು ಸ್ವೀಕರಿಸಿರುವ , ಪ್ರಕೃತಿಯಲ್ಲಿ ಅಂತರ್ಗತವಾಗಿರುವ ಒಂದು ಶಕ್ತಿ .ಇದನ್ನು ರಕ್ಷಾ ಶಕ್ತಿಎಂದು ಪರಿಗ್ರಹಿಸಿದ ನಮ್ಮ ಪೂರ್ವ ಸೂರಿಗಳು ಕಾಲಾಂತರದಲ್ಲಿ ಬೆರ್ಮೆರ್ ಅಥವಾ ಬ್ರಮ್ಮೆರ್ ಪ್ರಧಾನವಾಗಿ ತಮ್ಮ ಆರಾಧನೆಗಳನ್ನು ನೇರ್ಪುಗೊಳಿಸಿದರು , ಅದರಂತೆ ರೂಢಿಗೆಬಂತು.

‘ಬ್ರಹ್ಮೆರ್’ ಅಥವಾ ‘ಬೆಮ್ಮೆರ್’ ಪ್ರಧಾನವಾಗಿರುವ ನೆಲೆಗಳನ್ನು ಬ್ರಹ್ಮಸ್ಥಾನವೆಂದು ಗುರುತಿಸಲು ಆರಂಭಿಸಿದ್ದು ಬಹುಶಃ ವೈದಿಕರ ಆಗಮನದ ಬಳಿಕ ಇರಬೇಕು. ಅದಕ್ಕೂ ಪೂರ್ವದಲ್ಲಿದ್ದ ಸಮೂಹ ಪೂಜಾ ಸ್ಥಾನಗಳೇ ಬೆರ್ಮಸ್ಥಾನ ಅಥವಾ ಬ್ರಹ್ಮಸ್ಥಾನಗಳು. ಸಮೂಹ ಪೂಜೆ ಎಂದರೆ ಆದಿಮ ಸಂಸ್ಕೃತಿಯಲ್ಲಿ ಆರಾಧಿಸಬೇಕೆಂದು ಬಯಸಿದ ಎಲ್ಲಾ ಶಕ್ತಿಗಳಿಗೆ ಒಂದು ವ್ಯವಸ್ಥೆಯ ಅಡಿಯಲ್ಲಿ ಸ್ಥಾನ ಕಲ್ಪಿಸಿದ್ದು, ವೈದಿಕದ ಆಗಮನದ ಬಳಿಕ ನಿಯಮ – ನಿಬಂಧನೆಗಳಿಗೆ‌ ಒಳಪಟ್ಟು ನಾವು ಈಗ ಕಾಣುವ ಬ್ರಹ್ಮಸ್ಥಾನಗಳು ಕಲ್ಪಿಸಲ್ಪಟ್ಟುವು.

ಒಂದು ಒಪ್ಪಿಗೆಯಂತೆ ಬ್ರಹ್ಮಸ್ಥಾನ ಎಂದರೆ ಪಂಚ ದೈವಸ್ಥಾನಗಳು. ಆದರೆ ಅದು ಐದಕ್ಕೆ ಸೀಮಿತಗೊಳ್ಳುವ ಶಕ್ತಿಗಳ ನೆಲೆಯಲ್ಲ .ಬದಲಿಗೆ ಒಂದಷ್ಟು ದೈವಗಳು ಇಲ್ಲಿ ಸ್ಥಾನ ಪಡೆಯುತ್ತವೆ. ಬ್ರಹ್ಮ ಅಥವಾ ಬೆರ್ಮೆರ್ ಪ್ರಧಾನವಾಗಿ ಇಲ್ಲಿ ಎಲ್ಲಾ ಸನ್ನಿಧಾನಗಳು ಸನ್ನಿಹಿತವಾಗಿರುತ್ತವೆ. ಆದುದರಿಂದಲೇ ಇಂತಹ ಆರಾಧನಾ ಸ್ಥಾನಗಳು ‘ಬ್ರಹ್ಮಸ್ಥಾನ’ಗಳು ಎಂದು ಗುರುತಿಸಲ್ಪಡುತ್ತವೆ. ಇತ್ತೀಚೆಗೆ ಜಿಲ್ಲೆಯ ಹಲವೆಡೆ ಇಂತಹ ಬ್ರಹ್ಮ ಸ್ಥಾನಗಳು ‘ನಾಗಬ್ರಹ್ಮಸ್ಥಾನ’ಗಳಾಗಿ ಬದಲಾಗುತ್ತಿವೆ.

ಬ್ರಹ್ಮ ಅಥವಾ ಬೆರ್ಮೆರ್ ಕುರಿತಂತೆ ಸ್ಪಷ್ಟವಾದ ಕಲ್ಪನೆ ದೊರೆಯದ ಕಾರಣ ಇಂತಹ ಬದಲಾವಣೆಗಳು ನಡೆಯುತ್ತವೆ ಎಂದನಿಸುತ್ತದೆ . ಅಂತೆಯೇ ಪಡುಬಿದ್ರಿಯಲ್ಲಿ ಇಂತಹ ಒಂದು ಸ್ಥಿತ್ಯಂತರ ಸಂಭವಿಸಿದ್ದು , “ಖಡ್ಗೇಶ್ವರೀ ಬ್ರಹ್ಮಸ್ಥಾನ”ವೆಂದು ಹೇಳಲಾಗುತ್ತಿದೆ, ಆದರೆ “ಬ್ರಹ್ಮಸ್ಥಾನ” ಎಂಬ ಮೂಲದ‌ ಹೆಸರು ಬದಲಾಗಲೇ ಇಲ್ಲ, ಇದು ಇಲ್ಲಿಯ ಶ್ರದ್ಧೆ, ಸಂಪ್ರದಾಯ ಬದ್ಧತೆ.

ಒಂದು ಕಾಲದಲ್ಲಿ ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲೂ ಒಂಬತ್ತು ಮಂದಿ ಸ್ಥಾನಿಗಳು ( ಪಾತ್ರಿಗಳು ) ಬೇರೆಬೇರೆ ಹೆಸರಿನಲ್ಲಿ ಸನ್ನಿಧಾನದ ಮುಂದೆ ಪ್ರಕಟಗೊಳ್ಳುತ್ತಿದ್ದುದನ್ನು ಸ್ಥಳೀಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಯಾವುದೇ ರೀತಿಯಲ್ಲಿ ಸನ್ನಿಧಾನದ ಆಂತರ್ಯವನ್ನು ನಿರೂಪಿಸಲಾಗದೇ ಇರುತ್ತದೊ ಅದೇ ಆ ಸನ್ನಿಧಾನದ ಮಹತ್ವ. ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದಂತೆ ಹಲವು ಅವಶೇಷಗಳು ಏಳು – ಎಂಟು ಕಿ .ಮೀ . ವ್ಯಾಪ್ತಿಯಲ್ಲಿ ದೊರೆಯುತ್ತವೆ.

ಪ್ರತಿ ವರ್ಷ ಆಟಿ ತಿಂಗಳಲ್ಲಿ ಒಂದು ದಿನ (ಹದಿನಾರನೇ ದಿ) ಹೊಸ ಮರಳನ್ನು ಸಮುದ್ರತೀರದಿಂದ ತಂದು ಹಾಕುವ ಸಂಪ್ರದಾಯವಿದೆ. ಇಲ್ಲಿ ನಡೆಯುವ ವಿಧಿಯಾಚರಣೆಗಳೆಲ್ಲ “ಅವೈದಿಕ”ಗಳಾದರೂ ನಿರ್ವಹಿಸುವವರು ಮಾತ್ರ ವೈದಿಕರು ಮೂಲ ದ್ರಾವಿಡ ಭಾಷೆಯ ಒಂದಷ್ಟು ಶಬ್ದಗಳು ವೈದಿಕರಿಂದ ಬ್ರಹ್ಮಸ್ಥಾನದಲ್ಲಿ ಮಾತ್ರ ಉಚ್ಚರಿಸಲ್ಪಡುತ್ತವ. ಇಂತಹ ಹತ್ತಾರು ನಿರ್ವಹಣೆಗಳನ್ನು, ಸಂಪ್ರದಾಯಗಳನ್ನು ಗಮನಿಸಿದಾಗ ಪಡುಬಿದ್ರಿಯ ಬ್ರಹ್ಮಸ್ಥಾನದ ಪ್ರಾಚೀನತೆ ಇತಿಹಾಸಕಾಲಕ್ಕಿಂತಲೂ ಹಿಂದೆ ಹೋಗುತ್ತದೆ. ಹಾಗಾಗಿ ಆ ಸನ್ನಿಧಾನಕ್ಕೆ ಏನೆಂದು ಹೆಸರಿಸಿದರೂ ಸೂಕ್ತವಾಗದು.ಇದೇ ಇಲ್ಲಿಯ ಅಭೇದ್ಯವಾದ ಸನ್ನಿಧಾನ ವಿಶೇಷ. ಕಲ್ಪನೆಗೆ ನಿಲುಕದ ಸಂಕಲ್ಪ ಗಳಿರುವ ಪೂಜಾಸ್ಥಾನ. ಈ ಕುರಿತು ಸತ್ಯ ಶೋಧನೆ ಅನಗತ್ಯ. ಇದು ಕೇವಲ ಒಂದು ಗ್ರಹಿಕೆ ಮಾತ್ರ.

|ಡಕ್ಕೆಬಲಿ – ಬ್ರಹ್ಮಮಂಡಲ| : ಡಕ್ಕೆಬಲಿ ಎಂದರೆ ‘ಬೂತನಾಗರಿಗೆ ಮಂಡಲ ಬರೆದು ನಡೆಸುವ ಒಂದು ಬಗೆಯ ನೃತ್ಯರೂಪದ ಆರಾಧನೆ’ ಎನ್ನುತ್ತದೆ ತುಳು ನಿಘಂಟು . ಇದನ್ನೇ ಬ್ರಹ್ಮಮಂಡಲ ಎನ್ನಲಾಗುತ್ತದೆ .
ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಒಂದು ಡಕ್ಕೆಬಲಿಯ ವಿಧಿವಿಧಾನವು ಎರಡು ವಿಭಾಗವಾಗಿ ನೆರವೇರುತ್ತದೆ . ರಾತ್ರಿ ಸುಮಾರು ಹತ್ತು – ಹನ್ನೊಂದು ಗಂಟೆಯಿಂದ ನಡೆಯುವುದು “ತಂಬಿಲ”, ಇದು ಮೊದಲ ಭಾಗ . ತಡ ರಾತ್ರಿಯ ಬಳಿಕ ಎರಡನೇ ಭಾಗವಾಗಿ ಡಕ್ಕೆಬಲಿ ಸಂಪನ್ನಗೊಳ್ಳುತ್ತದೆ.

ರಾತ್ರಿ ತಂಬಿಲ ನವರಾತ್ರಿ ಹಾಗೂ ಮಾಮೂಲು ದಿನಗಳಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಹರಕೆಯಂತೆ ನಡೆಯುತ್ತಿರುತ್ತವೆ. ಆದರೆ ಅದಕ್ಕೆ ಡಕ್ಕೆಯವರು ಇರುವುದಿಲ್ಲ, ಆದರೆ ದ್ವೈವಾರ್ಷಿಕ ಡಕ್ಕೆಬಲಿ ಸಂದರ್ಭದಲ್ಲಿ ಮಾಮೂಲಿನ ತಂಬಿಲವು ಡಕ್ಕೆಯವರ ಸಹಭಾಗಿತ್ವದಲ್ಲಿ ನೆರವೇರುತ್ತದೆ.

ತಂಬಿಲ ಮುಗಿದ ಬಳಿಕ ಮಧ್ಯೆ ವಿಶ್ರಾಂತಿ ಇರುತ್ತದೆ . ಆವೇಳೆಯಲ್ಲಿ ಗುರಿಕಾರರು, ಅರ್ಚಕರು, ಪಾತ್ರಿಗಳು ,ಡಕ್ಕೆಯವರು, ಇತರ ಕಾರ್ಯನಿರ್ವಹಿಸುವವರು ಉಪಾಹಾರ ಸ್ವೀಕರಿಸುತ್ತಾರೆ. ಬಳಿಕ ಡಕ್ಕೆಯವರು ಮಂಡಲ ಬರೆಯುವ ಚಿಟ್ಟೆಯಲ್ಲಿ ಡಕ್ಕೆ ಬಲಿ ಮಂಡಲ ರಚಿಸಿ ಅಲಂಕರಿಸುತ್ತಾರೆ. ಈ ಮಂಡಲವು ಬ್ರಹ್ಮ ಪ್ರಧಾನವಾಗಿಯೇ ಇರುತ್ತದೆ.

ಡಕ್ಕೆ ಬಲಿ ಆರಂಭವಾಗುವಾಗ ಡಕ್ಕೆಯವರ ಹಾಡು , ಅರ್ಧನಾರಿ ವೇಷ ಧರಿಸಿದ ವೈದ್ಯರು ಮಂಡಲ ಚಿಟ್ಟೆ – ಬ್ರಹ್ಮಸನ್ನಿಧಾನದ ನಡುವೆ ಕುಣಿಯುತ್ತಾರೆ. ಮತ್ತೆ ಪಾತ್ರಿಗಳ ಆವೇಶ , ಒಬ್ಬೊಬ್ಬರನ್ನಾಗಿ ಮಂಡಲದತ್ತ ಕರೆದೊಯ್ಯುವುದು, ಮಂಡಲ ಪ್ರದಕ್ಷಿಣೆ , ಅಲ್ಲಿ ಬೇರೆ ಬೇರೆ ವಿಧಿಗಳು ನಡೆದ ಬಳಿಕ ,ಮರಳಿ ಮೂಲ ಸನ್ನಿಧಾನದ ಎದುರಿಗೆ ಬಂದು ಪ್ರಸಾದ ವಿತರಣೆ ನಡೆಯುತ್ತದೆ .ಇದು ಸ್ಥೂಲವಾದ ವಿಧಿಯಾಚರಣೆಯ ವಿಧಾನ ಇನ್ನೂ ವಿಸ್ತಾರವಾಗಿ ನಡೆಯುತ್ತವೆ , ಅವುಗಳನ್ನು ನೋಡಿಯೇ ಗ್ರಹಿಸಬೇಕು.

ಆಗಲೂ ಪೂರ್ಣವಾಗಿ ಅರ್ಥವಾಗದು, ಅದೇ ಪಡುಬಿದ್ರಿ ಬ್ರಹ್ಮಸ್ಥಾನದ ಸಾನ್ನಿಧ್ಯ ವಿಶೇಷ .ಇದಕ್ಕಿಂತ ಹೆಚ್ಚಿನ ವಿವರಣೆ ನೀಡಲಾಗದು. ನೀಡಲೂಬಾರದು. ಏಕೆಂದರೆ ಇದು “ನಿಸರ್ಗಾಂತರ್ಗತ ಬ್ರಹ್ಮಶಕ್ತಿ” ಸನ್ನಿಹಿತವಾದ ನೆಲೆ . ಡಕ್ಕೆಬಲಿ ಸಂದರ್ಭದಲ್ಲಿ ಮಾತ್ರ ನಿಸರ್ಗ ಒಂದು ರಾತ್ರಿಯ ಅವಧಿಗೆ ಅಲಂಕರಿಸಲ್ಪಡುತ್ತದೆ, ಬೆಳಗಾಗುವ ವೇಳೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತದೆ .ಇಂತಹ “ದರ್ಶನ” ಇಲ್ಲಿ ಮಾತ್ರ ಸಾಧ್ಯ.

ವೀಳ್ಯೆದೆಲೆಯಲ್ಲಿ ಗಂಧ, ಮರಳು ಇಲ್ಲಿ ಪ್ರಸಾದ: ಆರಾಧನೆಯ ಸಂದರ್ಭಗಳಲ್ಲಿ‌ವೀಳ್ಯೆದೆಲೆಯಲ್ಲಿ ಗಂಧ ನೀಡುವುದು, (ಉಳಿದ ದಿನಗಳಲ್ಲಿ ಸನ್ನಿಧಾನಕ್ಕೆ ನಮಸ್ಕರಿಸುವಾಗ ಮೈಗೆ ಅಂಟಿಕೊಳ್ಳುವ ಮರಳು ಇಲ್ಲಿ ಪ್ರಸಾದ). ಅಡಿಕೆ ಮರದ ಹಾಳೆ ವೀಳ್ಯೆದೆಲೆಯ ಹರಿವಾಣವಾಗುವುದು, ತಾರತಮ್ಯಗಳಿಲ್ಲದ ಸಭಾ ವ್ಯವಸ್ಥೆ – ಎಂದರೆ ಆಸನಗಳಿಲ್ಲದೆ ನೆಲದಲ್ಲೆ ಕುಳಿತುಕೊಳ್ಳುವುದು, ದೊಂದಿ ಬೆಳಕಿಗೆ ಪ್ರಾಧಾನ್ಯ, ವೈಭವದ ವಾದ್ಯಗಳಿಗೆ ಅವಕಾಶವಿಲ್ಲದಿರುವುದು, ಯಾವುದೇ ವಿಧಿ ನಿರ್ವಹಣೆಯಲ್ಲಿ ರಾಜಿ ಸೂತ್ರವಿಲ್ಲ, ನಿಯಮದಂತೆ ನಡೆಯತಕ್ಕದ್ದು, ಕರ್ತವ್ಯಲೋಪದಲ್ಲಿ ಕ್ಷಮೆ ಇಲ್ಲದಿರುವುದು ಇವು ಇಲ್ಲಿಯ ವಿಶೇಷಗಳು.

ಪಡುಬಿದ್ರಿಯ ಬ್ರಹ್ಮಸ್ಥಾನ ಅಂದರೆ ಖಡ್ಗೇಶ್ವರೀ ಬ್ರಹ್ಮಸ್ಥಾನ ಮತ್ತು ಅಲ್ಲಿ ನೆರವೇರುವ ಎಲ್ಲಾ ಸೇವಾದಿಗಳು ಪಡು ಬಿದ್ರಿಯ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಜವಾಬ್ದಾರಿ ಮತ್ತು ನೇತೃತ್ವದಲ್ಲಿ ನೆರವೇರುತ್ತದೆ ಸುಗಮ ನಿರ್ವಹಣೆಗೆ ವನದುರ್ಗಾ ಟ್ರಸ್ಟ್ ಇದೆ.  ಕೆ.ಎಲ್.ಕುಂಡಂತಾಯ
ಚಿತ್ರ ರಚನೆ :ಪಡುಬಿದ್ರಿಯ ದಾಮೋದರ ರಾಯರು 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!