ನಾಗರಪಂಚಮಿ :ಕರೆನಾಡಿನಲ್ಲಿ ನಾಗ ಆರಾಧನಾ ಪರ್ವ ದಿನವೇ?~ ಕೆ.ಎಲ್.ಕುಂಡಂತಾಯ

ನಾಗಬನಗಳ ಪುನಾರಚನೆ ಅನಿವಾರ್ಯ
ನಾಗರಪಂಚಮಿ‌ ತುಳವರ “ನಾಗ ಆರಾಧನಾ” ಪರ್ವ ದಿನವೇ ? ಏನು ಪ್ರಶ್ನೆ ; ಶತಮಾನಗಳಿಂದ , ತಲೆಮಾರುಗಳಿಂದ , ಲಾಗಾಯ್ತಿನಿಂದ ನಡೆದು ಬರುತ್ತಿರುವ ಒಂದು ಆರಾಧನಾ ದಿನದ ಬಗ್ಗೆ ಇಂತಹ ಸಂಶಯ ಏಕೆ ?

ಹೌದು….. ಕರೆನಾಡಿನ ಉಭಯ ಜಿಲ್ಲೆಗಳಲ್ಲಿ ರೂಢಿಯಲ್ಲಿರುವ ವೈವಿಧ್ಯಮಯ ನಾಗ ಉಪಾಸನಾ ಕ್ರಮಗಳ ಮಾಹಿತಿ ಸಂಗ್ರಹಿಸಿ ಕ್ಷೇತ್ರಕಾರ್ಯದ ಮೂಲಕ ದಾಖಲಿಸಿಕೊಂಡಾಗ ಈ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಮೇಲ್ನೋಟಕ್ಕೆ ಈ ಆರಾಧನಾ ಪ್ರಕಾರಗಳು ನಮ್ಮ ನಡುವೆ ಇದೆಯಾದರೂ ನಾವು ಗಮನಿಸಿಲ್ಲ ಅಷ್ಟೆ . ಏಕೆಂದರೆ ನಮಗೆ ನಮ್ಮದೇ ಶ್ರೇಷ್ಠ .ಬೇರೆ ಏನಿದ್ದರೂ ಅದು ನಮ್ಮ ಕ್ರಮದಷ್ಟು ಶಾಸ್ತ್ರೀಯವಾಗಿರಲಾರದು ಎಂಬ ಅಹಂ.

ವರ್ಷದ ಸಂಭ್ರಮಗಳೆಲ್ಲ ತೆರೆದುಕೊಳ್ಳುವ ಪ್ರಾರಂಭದ ಹಬ್ಬ ನಾಗರಪಂಚಮಿ . ಆದುದರಿಂದ ತುಳುನಾಡಿನಲ್ಲೂ ಆಚರಣೆ ಪ್ರಶಸ್ತವೇ. ಆಗಮಿಸಿದವುಗಳಲ್ಲಿ ಹಲವು ವಿಚಾರಧಾರೆಗಳು ಒಪ್ಪಿತವಾಗಿವೆ , ಕೆಲವು ತಿರಸ್ಕರಿಸಲ್ಪಟ್ಟಿವೆ .ಅದರಲ್ಲಿ ನಾಗರಪಂಚಮಿ ಒಪ್ಪಿತವಾದುದು. ಏಕೆಂದರೆ ನಾಗ ಲೋಕಪ್ರಿಯ, ಮಾನವನಿಂದ ಮೊತ್ತಮೊದಲು ದೈವತ್ವಕ್ಕೆ ಏರಿದವ. ತನು – ತಂಬಿಲದಂತಹ ಪುರಾತನ ಕ್ರಮವನ್ನು ನಾವು ಬಿಟ್ಟವರಲ್ಲ. ನಾಗರಪಂಚಮಿಗೂ ನಮ್ಮ ಆರಾಧನೆ ತನು – ತಂಬಿಲವೇ. ಇಷ್ಟಕ್ಕೆ ನಮ್ಮ ಶ್ರದ್ಧೆ. ನಮ್ಮ ಭರವಸೆ ಮತ್ತು ವಿಶ್ವಾಸಗಳ ಮೂರ್ತ ಸ್ವರೂಪವಾದ ನಂಬಿಕೆಯೇ ನಾಗ ಉಪಾಸನೆಯ ಮೂಲ.

ನಾಗ ಸಂತಾ, ಸಂಪತ್ತು, ಕೃಷಿಸಮೃದ್ಧಿ ಅನುಗ್ರಹಿಸುವ ದೇದರು. ಹಾಗೆಯೇ ಚರ್ಮವ್ಯಾಧಿಗಳನ್ನು ನಿವಾರಿಸುವ ದೈವ. ಆದುದರಿಂದ ನಾಗ ನಂಬಿಕೆ ಗಾಢವಾಗಿದೆ. ಕರೆನಾಡಿನ ಮೂರು ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ವಿಫುಲವಾದ ಆಧಾರಗಳು, ನಾಗರ ಪಂಚಮಿ ಆಚರಿಸದ ಬನಗಳಿರುವುದು ಗಮನಕ್ಕೆ ಬಂದಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೆಲವೊಂದು ಬನಗಳು ಪೂರಕವಾಗಿ ಒದಗುತ್ತವೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೆರಡು ಬನಗಳಲ್ಲಿ ನಾಗರಪಂಚಮಿ ಆಚರಣೆ ಇರುವುದಿಲ್ಲ (ಲೇಖಕನಿಗೆ ದೊರೆತುದು ಎರಡು ಮಾತ್ರ, ತುಂಬಾ ಇವೆ ಎಂದು ಹೇಳಲಾಗುತ್ತದೆ). ಈ ಬನಗಳೆಲ್ಲ ಪರಿಶಿಷ್ಟ ವರ್ಗ ದವರಿಂದ ಆರಾಧನೆಗೊಳ್ಳುವ ಬನಗಳು. ಇಂತಹ ಬನಗಳಲ್ಲಿ ನಡೆಯುವ ಪೂಜೆಗಳೆಲ್ಲ ಸರಳ – ಮುಗ್ಧ – ವಿಮರ್ಶೆಗಳಿಲ್ಲದ ಜನಪದರ ಪರಿಕಲ್ಪನೆಯವುಗಳು. ಇವು ವಿಕಾಸದಲ್ಲಿ‌ ಅಳಿದುಳಿದ ಆರಾಧನಾ ಕ್ರಮಗಳು.
ಈ ಬನಗಳಲ್ಲಿ ಪೂಜಾಕ್ರಮವು ನಿರ್ದಿಷ್ಟ ಹಾಡಿನ ರೂಪದ ಪಠ್ಯವನ್ನು ಆಧರಿಸಿ ನೆರವೇರುತ್ತವೆ.

ಅವುಗಳೆಲ್ಲ ಸಮೂಹ ಪೂಜಾಸ್ಥಾನಗಳು ಎಂಬುದು ಮಾತ್ರ ಗಮನಸೆಳೆಯುವ ಅಂಶ. ಈ ಸಂಗತಿಯು ಮಾನವ ತಾನು ಬಯಸಿದುದನ್ನೆಲ್ಲ ಒಂದೇ ವ್ಯವಸ್ಥೆಯ ಅಡಿಯಲ್ಲಿ ನೆಲೆಗೊಳಿಸಿ ನಿರಾಳವಾಗಿ ಬದುಕು ಕಟ್ಟಿದ ಕೃಷಿ ಸಂಸ್ಕೃತಿಯ ಆರಂಭದ ಕಾಲದವರೆಗೆ ಹಿಂದಕ್ಕೆ ಒಯ್ಯುತ್ತದೆ. ಇವು ಭಯದಿಂದ ಮತ್ತು ಉಪಕೃತನಾಗುವ ವೇಳೆ ಮಾನವನ ನಂಬಿಕೆಯಾಗಿ ಆರಂಭವಾದ ಆರಾಧನೆಗಳು .

|ಮೇಷ ಸಂಕ್ರಮಣ| ಉಡುಪಿ ಜಿಲ್ಲೆಯಲ್ಲಿ ಈ ಲೇಖಕ ಗುರುತಿಸಿದ ಸುಮಾರು ಹತ್ತು ನಾಗಸ್ಥಾನಗಳಲ್ಲಿ ಯಾವುದೇ ನಿರ್ದಿಷ್ಟವಾದ ಪಠ್ಯಗಳಿಲ್ಲದೆ ನೆರವೇರುವ ನಾಗ ಪೂಜೆಗಳು ಮೇಲೆ ವಿವರಿಸಿದ ಪೂಜಾ ವಿಧಾನ ಗಳಿಂದಲೂ ಪ್ರಾಚೀನವೆನ್ನ ಬಹುದಾದುವುಗಳು. ಇವು ನಿಜವಾಗಿಯೂ ಮುಗ್ಧ ಆಚರಣೆಗಳೇ ಆಗಿವೆ. ಬನದಲ್ಲಿ ಅಥವಾ ಮೂಲಸ್ಥಾನಗಳಲ್ಲಿ ಸೇರುವ ಮಂದಿ ಒಂದೇ ಕುಟುಂಬದವರೆಂದು ವಿಶ್ವಾಸವಿರುತ್ತದೆ.

ಈ ನಾಗಾರಾಧನೆ ನಡೆಯುವುದು ವರ್ಷಕ್ಕೆ ಒಂದು ದಿನ ಒಮ್ಮೆ ಮಾತ್ರ. ಆ ದಿನ ನಾಗರಪಂಚಮಿಯಲ್ಲ .ಮೇಷ ಸಂಕ್ರಮಣದ ದಿನ. ಅಂದರೆ ತುಳುನಾಡಿನ ಪಗ್ಗು ತಿಂಗಳು ಬರುವ ಸಂಕ್ರಮಣ. ಇವುಗಳಲ್ಲಿ ಒಂದು ಬನದಲ್ಲಿ ಮಾತ್ರ ಬೇಷ ತಿಂಗಳ ಮೊದಲ ಗುರುವಾರ ನೆರವೇರುತ್ತವೆ. ಆದರೆ ನಾಗರ ಪಂಚಮಿ ಆಚರಣೆ ಇಲ್ಲ.

ಮೂಲವನ್ನು ಅಥವಾ ಪ್ರಾಚೀನತೆಯನ್ನು ಆಚರಣೆಗಳ ನಿರ್ವಹಣಾ ವಿಧಾನದಿಂದಲೂ ಗ್ತಹಿಸಬಹುದಾದರೆ ಇವು ಈ ವರೆಗೆ ನಡೆದ ಸಂಶೋಧನೆಗಳಲ್ಲಿ ಪುರಾತನ ಕ್ರಮದ ಆಚರಣೆಗಳೆಂದು ಪರಿಗ್ರಹಿಸಬಹುದಾಗಿವೆ. ಇನ್ನು ಮುಂದೆ ಸಂಶೋಧನೆಗಳಲ್ಲಿ ಇದಕ್ಕೂ ಪೂರ್ವದ ಆಚರಣಾ ಪದ್ಧತಿಗಳು ದೊರೆಯಬಹುದು. ಇದು
ವಿವರಣೆಗೆ ಬೇಕಾಗಿ ಮಾತ್ರ ಮಾಡಿದ ವಿಂಗಡನೆ. 

ಕರೆನಾಡಿನ ಉಭಯ ಜಿಲ್ಲೆಗಳಲ್ಲಿ ನಾಗರಪಂಚಮಿ ವರ್ಷದ ಪ್ರಾರಂಭದ ಪರ್ವದಿನವಾಗಿರಲಾರದು , ಕೃಷಿ ಆಧರಿತ ಜೀವನ ಕ್ರಮವಾಗಿರುವುದರಿಂದ ಯುಗಾದಿ ಮೊದಲ ಹಬ್ಬವಾಗಿದ್ದಿರ ಬಹುದು .ಯುಗಾದಿಯ ಆಚರಣೆಯಲ್ಲಿ ಕೃಷಿ ಚಟುವಟಿಕೆಯ ಪ್ರಾರಂಭದ ವಿಧಿಗಳು ನೆರವೇರುತ್ತವೆ.

ವೈದಿಕ ಆಗಮನ: ವೈದಿಕದ ಆಗಮನದ ಬಳಿಕ ನಮ್ಮ ಸಮೂಹ ಪೂಜಾಸ್ಥಾನಗಳು ಅಥವಾ ಬ್ರಹ್ಮ ಪ್ರಧಾನ ವಾಗಿದ್ದ ಪೂಜಾಸ್ಥಾನಗಳಿಗೆ ವೈದಿಕರಿಗೆ ಪ್ರವೇಶ ಒದಗಿಸಲಾಯಿತು. ಈ ಪ್ರವೇಶಾವಕಾಶ ನಾವೇ ಕೊಟ್ಟಿದುದು ಹೊರತು ಅವರಾಗಿ ಪ್ರವೇಶಿಸಿದುದು ಅಲ್ಲ.

ಕೃಷಿ ಪ್ರಧಾನವಾಗಿದ್ದ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಆಚರಣೆಗಳು ನೇರ್ಪುಗೊಂಡಿದ್ದು ಅದು ಮಳೆಗಾಲಕ್ಕೆ ಮೊದಲು, ಬೇಷತಿಂಗಳಲ್ಲಿ ಮೂಲಸ್ಥಾನಗಳಿಗೆ ಹೋಗಿ ನಾಗನಿಗೆ “ತನು ಹೊಯ್ಯಿಸಿ ತಂಬಿಲ ಕಟ್ಟಿಸಿ” ಬರುವ ಪದ್ದತಿಯೇ ಆಚರಣೆಯಾಗಿದ್ದಿರಬೇಕು ಎಂದು ಊಹಿಸಲಡ್ಡಿಯಿಲ್ಲ. ಕರೆನಾಡಿಗೆ ವಲಸೆ ಬಂದ ಮಂದಿಯಲ್ಲೂ ಪಂಚಮಿಯ ಗುರುತು ಇದ್ದು ನಮ್ಮ ನಾಗ ಪೂಜಾ ಉಪಕ್ರಮಕ್ಕೆ ನಾಗರಪಂಚಮಿ ಸೇರ್ಪಡೆ ಯಾಗಿರಬೇಕು.

ಮಂಗಳೂರಿನಿಂದ ದಕ್ಷಿಣಕ್ಕೆ ತಲಪಾಡಿಯಿಂದ ಇಚ್ಲಾಡಿಯವರೆಗಿನ ಹದಿನೆಂಟು ಕೇಂದ್ರಗಳಲ್ಲಿ ಸರ್ಪಕೋಲ ನಡೆಯುತ್ತದೆ. ಈ ಯಾವ ಬನಗಳಲ್ಲೂ ನಾಗರಪಂಚಮಿ ಪ್ರಧಾನವಾದ ಆರಾಧನಾ ಪರ್ವದಿನವಾಗಿರಲಿಲ್ಲ.
ಉಭಯ ಜಿಲ್ಲೆಗಳಲ್ಲಿ ಗುರುತಿಸಲಾದವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ಬೇರೆ ಬೇರೆ ಕಾರಣದಿಂದ ವೈದಿಕವನ್ನು ಆಮಂತ್ರಿಸಲಾಗುತ್ತಿದೆ. ವೈದಿಕೀಕರಣವಾಗುತ್ತಿವೆ.

ಬನಗಳನ್ನು ಕಡಿದು ನಾಗ ಗುಡಿ, ನಾಗವೇದಿಕೆ, ನಾಗ ಮಂದಿರಗಳನ್ನು ಕಟ್ಟುತ್ತಿರುವ ಮೂಲಕ ಬನಗಳು ನಾಶವಾಗುತ್ತಿವೆ ಪುನಾರಚನೆಯ ಅಗತ್ಯವಿದೆ. ಪುನಾರಚನೆಗೆ ನಾಗರಪಂಚಮಿ ದಿನ ನಾಗಬನಕ್ಕೆ ಅಥವಾ‌ ಮೂಲಕ್ಕೆ ಹೋಗುವಾಗ ಒಂದು ಗಿಡ ಕೊಂಡೊಯ್ಯಿರಿ ಬನದಲ್ಲಿ ನೆಟ್ಟು ಬನ ನಾಶವಾಗಿದ್ದರೆ ಪುನಾರಚಿಸಿರಿ .ನಾಗ ಮತ್ತು ವೃಕ್ಷ ಅವಳಿ ಚೇತನಗಳು. ಇದೊಂದು ಪುರಾತನ ನಂಬಿಕೆ. ಅಂತರ್ಜಲ ವೃದ್ಧಿಗೆ, ಪರಿಶುದ್ಧ ಪರಿಸರಕ್ಕೆ ನಾಗಬನಗಳು ವನಗಳಾಗಿಯೇ ಉಳಿಯಬೇಕು.

• 

 
 
 
 
 
 
 
 
 
 
 

Leave a Reply