ಶಾಸಕ ಕೆ.ರಘುಪತಿ ಭಟ್ ರವರ ನೇತೃತ್ವದಲ್ಲಿ ಮಲ್ಪೆಯಲ್ಲಿ ಆಚಾರ್ಯ ಮಧ್ವರು ನೆಲೆಸಿಯಾರೇ…? ~ಜನಾರ್ದನ್ ಕೊಡವೂರು.

ಉಡುಪಿ: ಈ ಹಿಂದೆ ಜಗತ್ ಪ್ರಸಿದ್ದ ಮಲ್ಪೆ ಬೀಚ್ ಬಳಿ ಶ್ರೀ ಮಧ್ವಾಚಾರ್ಯರ ಬೃಹತ್ ಶಿಲಾಮೂರ್ತಿ ಸ್ಥಾಪನೆಗೆ ಸ್ವತ: (ಮಾಜಿ) ಮುಖ್ಯಮಂತ್ರಿ ಸದಾನಂದ ಗೌಡರು ಶಂಕುಸ್ಥಾಪನೆ ನೆರವೇರಿಸಿದ್ದರು. ಆಗಿನ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹಸಿರು ನಿಶಾನೆ ತೋರಿಸಿ 2ಕೋಟಿ ಬಿಡುಗಡೆ ಗೊಳಿಸಿದ್ದರು.15ಅಡಿ ಆಕರ್ಷಕ ಕುಸುರಿಯ ಪೀಠ ಹಾಗು 35ಅಡಿ ಮೂರ್ತಿ ಒಟ್ಟು 50 ಅಡಿ ಎತ್ತರದ ಶಿಲಾಮೂರ್ತಿಯ ಕೆತ್ತನೆ ಕೆಲಸವನ್ನು ಶಿಲ್ಪಿ ಸೂರಾಲು ವೆಂಕಟರಮಣ ಭಟ್ ತಂಡ ವಹಿಸಿಕೊಂಡು ಇದಕ್ಕೆ ಪೂರಕವಾದ ಶಿಲೆಯನ್ನು ದೊಡ್ಡಬಳ್ಳಾಪುರದಲ್ಲಿ ನಿಗದಿಗೊಳಿಸಿತ್ತು.

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬಳಿ ಈ ಮೂರ್ತಿಯ ಪ್ರಮಾಣ, ಲಕ್ಷಣ, ಆಧಾರದ ಬಗ್ಗೆ ಮಾತುಕತೆ ನಡೆಸಿ, ದೇಶಿ ಶ್ಯೆಲಿಯ ಏಕ ಶಿಲೆಯಿಂದ ಕಲಾತ್ಮಕವಾಗಿ ಕೆತ್ತನೆಯ ಮೂಲಕ ನಿರ್ಮಿಸುವುದೆಂದು ನಿಶ್ಚಯಿಸಿ ಎಂಟು ವರುಷಗಳು ಸಂದಿದೆ.

ಪ್ರಪಂಚದಾದ್ಯಂತ ಆಚಾರ್ಯ ಮಧ್ವರ  ಸಂದೇಶವನ್ನು ಪ್ರಚುರ ಪಡಿಸುತ್ತಿರುವ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯಾವಧಿಯ  ಪರ್ವ ಕಾಲದಲ್ಲಾದರೂ ಶ್ರೀ ಮಧ್ವಾಚಾರ್ಯ ಮೂರ್ತಿಗೆ ಮಲ್ಪೆಯಲ್ಲಿ ಒಂದು ನೆಲೆ ಸಿಕ್ಕರೆ ಉಡುಪಿ ಪ್ರವಾಸಿಗರಿಗೆ ಹಾಗು ಮಾಧ್ವರಿಗೆ ಇನ್ನೂ ಹೆಚ್ಚು ಆಕರ್ಷಣೆಯ ತಾಣವಾಗಬಹುದು.
                         

ಪ್ರತಿಮೆ ಮಾಡುವ ಪ್ರದೇಶ ಸಿಆರ್‌ಜೆಡ್‌ನ ವ್ಯಾಪ್ತಿ ಆಗಿರುವುದರಿಂದ ಕೊನೆಯ ಹಂತದಲ್ಲಿ ಈ ಯೋಜನೆಗೆ ಅನುಮತಿ ಇರಲಿಲ್ಲ. ಮಲ್ಪೆ ವಡಭಾಂಡೇಶ್ವರ ದೇವಸ್ಥಾನದ ಎದುರು ಇರುವ ಖಾಲಿ ಜಾಗಕ್ಕೆ ಸ್ಥಳಾಂತರಿಸುವ ಯೋಜನೆ ಒಂದು ಹಂತದಲ್ಲಿ ಸುದ್ದಿ ಮಾಡಿತ್ತು. ಬಳಿಕ ಈ ಪ್ರಸ್ತಾವನೆ ಕೂಡಾ  ಹಳ್ಳ ಹಿಡಿದಿತ್ತು.  

ಈಗ ಸ್ವತಃ ರಘುಪತಿ ಭಟ್ಟರೇ ಬಹಳ ಉತ್ಸಾಹದಿಂದ ಪ್ರತಿಮೆ ಸ್ಥಾಪಿಸುವ ನಿರ್ಧಾರದಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ. ಮೊನ್ನೆ ಕೊಡವೂರು ದೇವಳದ ಕಾರ್ಯಕ್ರಮವೊಂದರಲ್ಲಿ ಈ ವಿಷಯ ಮಾತನಾಡಿ, ಶೀಘ್ರದಲ್ಲಿ ಮಧ್ವಾಚಾರ್ಯರ ಪ್ರತಿಮೆ ಮಲ್ಪೆ ಬೀಚ್ ಪಕ್ಕದಲ್ಲಿ ನಿರ್ಮಾಣಗೊಳ್ಳಲಿದೆ.

ಉದ್ಯಮಿ ಸಾಧು ಸಾಲಿಯಾನ್ ಈ ಯೋಜನೆಗೆ ಸ್ಥಳ ನೀಡಲು ನಮ್ಮಬಜೆಟ್ ನಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಶ್ರೀ ಶ್ರೀ ಪಲಿಮಾರು ಶ್ರೀಗಳ ನೇತೃತ್ವದಲ್ಲಿ, ಅಷ್ಟಮಠಾದೀಶರನ್ನು ಸೇರಿಸಿಕೊಂಡು ಈ ಬ್ರಹತ್ ಮೂರ್ತಿಯ ಸ್ಥಾಪನೆಗೆ ಕ್ಷಣಗಣನೆ ನಡೆಯುತ್ತಿದೆ ಎಂದಿದ್ದರು.

ಮಲ್ಪೆಯಿಂದ ಉಡುಪಿಗೆ ಕಡಗೋಲು ಶ್ರೀಕೃಷ್ಣ ಉಡುಪಿಗೆ ಮಧ್ವಾಚಾರ್ಯರ ಮೂಲಕ ಬಂದಿದ್ದ ಎಂಬುದು ದಾಖಲೆ. ಈ ಬಗ್ಗೆ ಮಲ್ಪೆಯಲ್ಲಿ ಮೂರ್ತಿ ಸ್ಥಾಪನೆಯ ಮೂಲಕ ಒಂದು ಕುರುಹು ಕಾಣುವಂತೆ ಮಾಡುವುದು ಶಾಸಕರ ಕರ್ತವ್ಯವೂ ಹೌದು.  ಜನರ ಬಹುದಿನಗಳ ಬೇಡಿಕೆಯನ್ನು ಜನಪ್ರತಿನಿಧಿ ನೆಲೆಯಲ್ಲಿ ರಘುಪತಿ ಭಟ್ಟರು ಈಡೇರಿಸಿಯಾರೇ ಎಂಬುದು ಈಗ ಕುತೂಹಲದ ವಿಷಯ.

 
 
 
 
 
 
 
 
 
 
 

Leave a Reply