ರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಪೇಜಾವರ ಶ್ರೀ

ಉಡುಪಿ: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಭಾನುವಾರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮ ಲಲ್ಲಾನ ದರ್ಶನ ಪಡೆದಿದ್ದಾರೆ. ನಂತರ ಮಂದಿರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ್ದಾರೆ. ಪೇಜಾವರ ಶ್ರೀಗಳು ಚಾತುರ್ಮಾಸ್ಯ ವ್ರತದಲ್ಲಿದ್ದರಿಂದ ಆಗಸ್ಟ್ 5ರಂದು ಪ್ರಧಾನಿ ಮೋದಿ ನಡೆಸಿದ್ದ ಅಯೋಧ್ಯಾ ರಾಮ ಜನ್ಮಭೂಮಿಯ ಭೂಮಿ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿರಲಿಲ್ಲ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಶ್ರೀ ಗಳು ಇದೀಗ ಅಯೋಧ್ಯೆಗೆ ತೆರಳಿದ್ದಾರೆ. ಭಾನುವಾರ ಟ್ರಸ್ಟ್ ನ ಸಭೆಯಲ್ಲಿ ಭಾಗವಹಿಸಿದ ನಂತರ ಭಗವಾನ್ ಶ್ರೀರಾಮ ನ ಜನ್ಮಭೂಮಿಗೆ ಭೇಟಿ ಕೊಟ್ಟರು. ಭೂಮಿ ಪೂಜೆ ನಡೆಸಿದ, ಶ್ರೀರಾಮನ ಮೂಲ ವಿಗ್ರಹವಿದ್ದ ಜಾಗಕ್ಕೆ ಪೇಜಾವರ ಶ್ರೀಗಳು ನಮಸ್ಕರಿಸಿದರು.

ನಂತರ ರಾಮ ದೇವರ ದರ್ಶನ ಮಾಡಿದರು.ಬಳಿಕ ಉತ್ಖನನದ ವೇಳೆ ಸಿಕ್ಕಿದ ಹಳೆಯ ಮಂದಿರದ ಶಿಲೆ, ಶಿಲಾಸ್ತಂಭಗಳನ್ನು ನೋಡಿ, ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸಿದರು. ಅಲ್ಲಿನ ಕನಕ ಭವನ ಹಾಗೂ ಹನುಮಾನ್ ಗಡಿ ದರ್ಶನವನ್ನೂ ಪಡೆದ ಪೇಜಾವರ ಶ್ರೀಗಳು, ರಾಮ ದೇವರ ಮಂಗಳಾರತಿ ನೋಡಿ, ದೇವರ ಶಯನೋತ್ಸವ ಮುಗಿಸಿ, ಪೇಜಾವರ ಮಠದ ಮಧ್ವಾಶ್ರಮಕ್ಕೆ ಹಿಂತಿರುಗಿದರು.

ಈ ಕುರಿತು ಮಾತನಾಡಿದ ಶ್ರೀಗಳು, ಶ್ರೀರಾಮಚಂದ್ರನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಾವು ವೀಕ್ಷಿಸಿದ್ದೇವೆ. ಭೂಮಿ ಸಮತಟ್ಟು ಮಾಡುವ ಕಾರ್ಯ ಆರಂಭಗೊಂಡಿದೆ. ಅಕ್ಕಪಕ್ಕದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವು ನಡೆಯುತ್ತಿದೆ. ರಾಮಜನ್ಮಭೂಮಿಯಲ್ಲಿ ಬೃಹತ್ ಮಂದಿರ ನಿರ್ಮಾಣವಾಗಲಿರುವುದು ಆದ್ದರಿಂದ ಭೂಮಿಯ ಧಾರಣಾ ಸಾಮರ್ಥ್ಯ ವೇನು, ಮಣ್ಣಿನ ಗುಣವೇನು, ಎಂಬುದನ್ನು ಪರೀಕ್ಷಿಸುವ ಕಾರ್ಯ ನಡೆಯುತ್ತಲೇ ಇದೆ.

ಈಗಾಗಲೇ ಕೆತ್ತನೆ ಕಾರ್ಯ ಪೂರ್ಣಗೊಂಡ ಶಿಲಾಸ್ತಂಭಗಳನ್ನು ಸ್ಥಳಾಂತರಿಸುವ ಕೆಲಸವೂ ಪ್ರಾರಂಭವಾಗಿದೆ ಎಂಬ ಮಾಹಿತಿ ತಿಳಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ರಾಯ್, ದಿನೇಶ್‌ಚಂದ್ರ, ಅನೂಪ್ ಮಿಶ್ರಾ ಅವರು ಪೇಜಾವರ ಶ್ರೀಗಳಿಗೆ ಕಾಮಗಾರಿ ಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ಶ್ರೀಗಳ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಭಟ್, ಕೃಷ್ಣ ಭಟ್ ಶ್ರೀಗಳೊಂದಿಗೆ ಇದ್ದರು.

 
 
 
 
 
 
 
 
 
 
 

Leave a Reply