ಯಕ್ಷಗಾನ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ : ಡಾ.ಜಿ.ಎಲ್.ಹೆಗಡೆ

ಉಡುಪಿ, ಜನವರಿ 31 :ಯಕ್ಷಗಾನ ವಿದ್ವಾಂಸ ಹಾಗೂ ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 11 ಮತ್ತು 12 ರಂದು ಉಡುಪಿಯ ಎಂ.ಜಿ.ಎ೦ ಕ್ರೀಡಾಂಗಣದಲ್ಲಿ ನಡೆಯುವ ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.

ಅವರು ಸೋಮವಾರ ನಗರದ ಎಂ.ಜಿ.ಎ೦. ಕಾಲೇಜಿನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಸಮ್ಮೇಳನದ ಪೂರ್ವಭಾವಿ ತಯಾರಿಯ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಯಕ್ಷಗಾನ ಸಮ್ಮೇಳನವು ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಅದ್ಧೂರಿ ಮೆರವಣಿಗೆ ಯೊಂದಿಗೆ ಪ್ರಾರಂಭವಾಗಲಿದ್ದು, ಮಾನ್ಯ ಮುಖ್ಯಮಂತ್ರ‍್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವರು, ಶಾಸಕರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.

ಸಮ್ಮೇಳನದಲ್ಲಿ ಎರಡು ದಿನ ಗೋಷ್ಠಿ, ಸನ್ಮಾನ, ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿ ಯೊಬ್ಬರಿಗೂ ಎರಡು ದಿನ ಊಟ, ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಯಕ್ಷಗಾನ ಸಂಬ೦ಧಿಸಿದ ಕರಕುಶಲ ವಸ್ತುಗಳು, ವೇಷಭೂಷಣ, ವಾದ್ಯ ಪರಿಕರ ಹಾಗೂ ಪುಸ್ತಕಗಳ ಮಳಿಗೆಗಳು ಸಮ್ಮೇಳನದ ಪ್ರಧಾನ ಆಕರ್ಷಣೆಯಾಗಲಿದೆ.
ಯಕ್ಷಗಾನ ಕಲಾಸಕ್ತರಿಗೆ ಅಪರೂಪದ ಮತ್ತು ಐತಿಹಾಸಿಕ ಸಮ್ಮೇಳನವಾಗಿ ಸಂಭ್ರಮಿಸುವ ಅಭೂತಪೂರ್ವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘಟನಾ ಸಮಿತಿಯ ಸದಸ್ಯರು ಶ್ರಮವಹಿಸಿ ಸಹಕರಿಸುವಂತೆ ತಿಳಿಸಿದರು. ಸಭೆಯಲ್ಲಿ ಶಾಸಕ ರಘುಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ರಾದ ಅಶೋಕ ಛಲವಾದಿ ಹಾಗೂ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಅಕಾಡೆಮಿಯ ರಿಜಿಸ್ಟಾರ್  ಶಿವರುದ್ರಪ್ಪ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಸಮ್ಮೇಳನದ ಪ್ರಧಾನ ಸಂಚಾಲಕ ಕಿಶನ ಕುಮಾರ್ ಹೆಗಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕ ಮುರಳಿ ಕಡೆಕಾರ್ ಸಮ್ಮೇಳನದ ರೂಪುರೇಷೆಗಳನ್ನು ಮಂಡಿಸಿದರೆ, ನಾರಾಯಣ ಎಂ.ಹೆಗಡೆ ವಂದಿಸಿದರು.
 
 
 
 
 
 
 
 
 
 
 

Leave a Reply