ಸುಮನಸಾ ರಾಷ್ಟ್ರೀಯ ರಂಗಹಬ್ಬ ‘ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ

ಉಡುಪಿ: ಕಟ್ಟಡಗಳನ್ನು ಕಟ್ಟುವವರು ಎಲ್ಲೆಡೆ ಇದ್ದಾರೆ. ಆದರೆ ಮನಸ್ಸುಗಳನ್ನು ಕಟ್ಟುವವರ ಸಂಖ್ಯೆ ಕಡಿಮೆ ಇದೆ. ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಕೆಲಸವನ್ನು ರಂಗಭೂಮಿ ಮಾಡುತ್ತದೆ ಎಂದು ಸಾಹಿತಿ, ನಾಟಕಕಾರ ಡಾ. ರಾಜಪ್ಪ ದಳವಾಯಿ ಹೇಳಿದರು.

ಇಲ್ಲಿನ ಅಜ್ಜರಕಾಡು ಬಯಲು ಮಂದಿರದಲ್ಲಿ ಭಾನುವಾರ ಆರಂಭಗೊAಡಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಾಷ್ಟ್ರೀಯ ರಂಗಹಬ್ಬ ‘ಬಹುಭಾಷಾ ನಾಟಕೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿಗೆ ಬರುವವರು ಕೆಲಸ ಇಲ್ಲದವರು ಎಂಬ ಅನಿಸಿಕೆ ಜನರಲ್ಲಿ ಇದೆ. ರಂಗಭೂಮಿಗೆ ಬರುವವರಿಗೆ ಕಲಾ ಬದ್ಧತೆ ಇರುತ್ತದೆ. ಅವರಲ್ಲೊಬ್ಬ ಕಲಾವಿದ, ಗಾಯಕ, ನಾಯಕ, ಸಂಘಟಕ ಇರುತ್ತಾರೆ. ನಾಟಕಗಳ ಮೂಲಕ ಸಮಾಜವನ್ನು ಕಟ್ಟುತ್ತಾರೆ ಎಂದು ತಿಳಿಸಿದರು.

ರಂಗಭೂಮಿಯು ಭಾವನಾ ಜಗತ್ತನ್ನು ಕಟ್ಟಿ ಕೊಡುತ್ತದೆ. ನಗುವ, ಅಳುವ, ವಿಷಾದಿಸುವ, ಎದೆ ಕರಗಿಸುವ ಕೆಲಸವನ್ನು ನಾಟಕ ಮಾಡುತ್ತಿದೆ. ರಂಗಭೂಮಿಯ ಇನ್ನೊಂದು ರೂಪವಾದ ಟಿವಿ ನಮ್ಮನ್ನು ಅಧೋಗತಿಗೆ ಒಯ್ಯುತ್ತಿದೆ ಎಂದು ವಿಷಾದಿಸಿದರು.

ಸುಮನಸಾ ಎಂಬ ಹೆಸರೇ ಒಳ್ಳೆಯ ಮನಸ್ಸುಗಳು ಎಂಬರ್ಥವನ್ನು ನೀಡುತ್ತದೆ. ಈ ಸಂಸ್ಥೆ ೨೦ ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದೆ. ಅದು ಸುಲಭದ ಕೆಲಸವಲ್ಲ. ಒಂದು ನಾಟಕ ಕಂಪನಿಯ ತಾರಾ ನಟರು ಅದನ್ನು ಬಿಟ್ಟು ಇನ್ನೊಂದು ಕಂಪನಿಗೆ ಹೋದರೆ ಮೊದಲ ಕಂಪನಿ ಮುಳುಗುತ್ತದೆ. ಅಂಥದರಲ್ಲಿ ಈ ಸಂಸ್ಥೆ ಸುದೀರ್ಘವಾಗಿ ನಡೆದುಕೊಂಡು ಬಂದಿರುವುದು ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.

ರಂಗ ಸಂಘಟನೆ ತುಂಬಾ ಸವಾಲಿನ ಕೆಲಸ. ರಂಗ ತಂಡವನ್ನು ಕರೆಸಬೇಕು. ಅವರನ್ನು ಬರಮಾಡಿಕೊಂಡು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ತೊಂದರೆಯಾಗದAತೆ ನೋಡಬೇಕು. ಮತ್ತೆ ಕಳುಹಿಸಿಕೊಡಬೇಕು. ಇವೆಲ್ಲವನ್ನು ನಿಭಾಯಿಸಿಕೊಂಡು ರಂಗಹಬ್ಬವನ್ನು ೧೦ ವರ್ಷದಿಂದ ಸುಮನಸಾ ಮಾಡುತ್ತಿರುವುದು ದೊಡ್ಡ ಸಾಧನೆ ಎಂದು ಹೇಳಿದರು.

ರಂಗಾಯಣ ಪ್ರತಿ ಜಿಲ್ಲೆಗೆ ಬರಬೇಕು ಎಂಬ ಬಿ.ವಿ. ಕಾರಂತರ ಕನಸಿತ್ತು. ಉಡುಪಿಗೂ ರಂಗಾಯಣ ಬರಲಿ. ಸರ್ಕಾರ, ಸಚಿವರು ಈ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಬಿ.ವಿ. ಕಾರಂತರ ಶಿಷ್ಯ ರತನ್ ತಿಯಾಮ್ ಎಂಬವರು ಕಟ್ಟಿರುವ ರೆಪಾರ್ಟರಿ ಅದ್ಭುತವಾಗಿದೆ. ರಂಗದ ಸದಸ್ಯರ ಮಗುವಿಗೆ ಕೂಡ ವಿಮೆ ವ್ಯವಸ್ಥೆ ಕೂಡ ಮಾಡಿದ್ದಾರೆ. ದೇಶದ ಅತ್ಯಂತ ಶ್ರೀಮಂತ ರೆಪಾರ್ಟರಿ ಅದಾಗಿದೆ. ಅಂಥ ರೆಪಾರ್ಟರಿ ಸುಮನಸಾ ಕೂಡ ಆಗಲಿ ಎಂದು ಹಾರೈಸಿದರು.

ರಾಜ್‌ಗೋಪಾಲ್ ಶೇಟ್ ಅವರಿಗೆ ರಂಗಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ರಥಬೀದಿ ಗೆಳೆಯರು ಅಧ್ಯಕ್ಷ ಮುರಳೀಧರ ಉಪಾಧ್ಯ ಹಿರಿಯಡ್ಕ, ಕೊಡವೂರು ಶಂಕರ ನಾರಾಯಣ ದೇವಸ್ಥಾನದ ಅಧ್ಯಕ್ಷ ಸಾಧು ಸಾಲ್ಯಾನ್, ಉದ್ಯಮಿ ಅಮೃತ್ ಶೆಣೈ, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಸುಮನಸಾ ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಉಪಸ್ಥಿತರಿದ್ದರು.

ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಜೀವನ್‌ಕುಮಾರ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ರಂಗಭೂಮಿ ಉಡುಪಿಯವರು ವಿಶಾಂಕೇ ನಾಟಕ ಪ್ರಸ್ತುತಿಪಡಿಸಿದರು.

 
 
 
 
 
 
 
 
 
 
 

Leave a Reply