ನಮ್ಮ ದೇಶ ಎತ್ತ ಸಾಗುತ್ತಿದೆ, ನಮ್ಮ ಜನರ ಮನೋಸ್ಥಿತಿ ಯಾಕೆ ಹೀಗಾಗುತ್ತಿದೆ – ವೆರೋನಿಕಾ ಕರ್ನೆಲಿಯೋ

ಉಡುಪಿ: ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವ ಬಗೆಗಿನ ವಿವಾದ ಕಂಡಾಗ ನಮ್ಮ ದೇಶ ಎತ್ತ ಸಾಗುತ್ತಿದೆ, ನಮ್ಮ ಜನರ ಮನೋಸ್ಥಿತಿ ಯಾಕೆ ಹೀಗಾಗುತ್ತಿದೆ ಎಂಬ ಚಿಂತೆ ಮೂಡುತ್ತಿದೆ.

ಯಾರಿಗೂ ಏನೂ ಸಮಸ್ಯೆ ಇಲ್ಲದ ಈ ವಿಚಾರಕ್ಕೆ ಯಾಕೆ ಇಷ್ಟು ಮಹತ್ವ ಸಿಗುತ್ತಿದೆ,ಅದೆಷ್ಟೋ ವರ್ಷಗಳಿಂದ ಬಂದ ಪದ್ದತಿಗೆ ಈಗ ಯಾಕೆ ಇಲ್ಲ ಸಲ್ಲದ ಮಹತ್ವ? ಎಂದು ಕೆಪಿಸಿಸಿ ಪ್ಯಾನಲಿಷ್ಟ್ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.

ಮುಸ್ಲಿಂ ಧರ್ಮದಲ್ಲಿ ಅವರದ್ದೇ ಆದ ಧರಿಸು ಇದೆ. ಈ ಬಟ್ಟೆಯಿಂದ ಬೇರೆ ಯಾರಿಗಾದರೂ ಸಮಸ್ಯೆಯಾದರೆ ಅಥವಾ ಅವರ ಮುಖ ನೋಡಲಿಕ್ಕೆ ಸಿಗುತ್ತಿಲ್ಲ ಎಂದರೆ ನಾವು ಮಾತನಾಡಬಹುದು. ಶಾಲಾ ಯೂನಿಫಾರ್ಮ್ ಧರಿಸಿ ಒಂದು ಸ್ಕಾರ್ಫ್ ನಿಂದ ತಲೆ ಕುತ್ತಿಗೆ ಮುಚ್ಚಿದರೆ ಏನು ಸಮಸ್ಯೆಯಿದೆ? ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಕೂತು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎನಿಸುತ್ತದೆ.

ಇಂದು ನಮ್ಮ ಮುಂದೆ ಇತರ ಹಲವಾರು ಸಮಸ್ಯೆಗಳು ಇರುವಾಗ ಹಿಜಾಬ್‌ ವಿಚಾರವನ್ನು ಮುಂದಿಟ್ಟುಕೊಂಡು ತಿಂಗಳುಗಟ್ಟಲೆ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಸೂಕ್ತ ರೀತಿಯಲ್ಲಿ ಪಡೆಯುವ ಬದಲು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ ಎಲ್ಲರೂ ಒಳ್ಳೆಯ ಮನಸ್ಸಿನಿಂದ ಕೂತು ಎಚ್ಚರಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ.

ಈ ಮೂಲಕ ಕಾಲೇಜಿನಲ್ಲಿ ಕಲಿಯುತ್ತಿರುವ ಇತರ ವಿದ್ಯಾರ್ಥಿಗಳು ಸಹ ಶಾಂತಿಯುತ ಹಾಗೂ ಯಾವುದೇ ಕಿರಿಕಿರಿ ಇಲ್ಲದೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply