ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೋಲಾರ್ ಅಳವಡಿಕೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಘಟಕ ಅಳವಡಿಸಲಾಗುತ್ತಿದೆ. ಇದರಿಂದ ವಾರ್ಷಿಕವಾಗಿ ಸುಮಾರು 14 ಲಕ್ಷ ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.

ಈ ಯೋಜನೆಯ ಕುರಿತು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಅವರು, ಪ್ರಧಾನಿ ಮೋದಿ ಆಶಯದ ಆತ್ಮನಿರ್ಭರ ಯೋಜನೆಯನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕಾರ್ಯಗತಗೊಳಿಸಲು ಸಂಕಲ್ಪಿಸಿದ್ದು, ಏ. 10ರೊಳಗೆ ಯೋಜನೆ ಪೂರ್ಣಗೊಳ್ಳಲಿದೆ. ರಾಜಾಂಗಣದ ಮೇಲ್ಛಾವಣಿಯ ಸುಮಾರು 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದ್ದು, 135 ಕಿ. ವ್ಯಾ. ವಿದ್ಯುತ್ ಉತ್ಪಾದಿಸಲು ಯೋಚಿಸಲಾಗಿದೆ. ಸುಮಾರು 25 ವರ್ಷಗಳ ದೀರ್ಘಕಾಲೀನ ಪರಿಸರಸ್ನೇಹಿ ಯೋಜನೆ ಇದಾಗಿದ್ದು, ಅಳವಡಿಕೆ, ನಿರ್ವಹಣೆ ಇತ್ಯಾದಿಗಳ ಕುರಿತಂತೆ ಯು.ಆರ್.ಬಿ (ಅರ್ಬ್) ಎನರ್ಜಿ ಸೋಲಾರ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕರ್ಣಾಟಕ ಬ್ಯಾಂಕ್ 20 ಲಕ್ಷ ರೂ. ಕೊಡುಗೆ ನೀಡಲಿದೆ ಎಂದರು.

ಶ್ರೀಕೃಷ್ಣ ಮಠದ ವಿದ್ಯುತ್ ಬಿಲ್ ಮಾಸಿಕ ಸುಮಾರು 2 ಲಕ್ಷ ರೂ. ಬರುತ್ತಿದ್ದು ಈ ಯೋಜನೆಯಿಂದಾಗಿ ವಿದ್ಯುತ್ ನಲ್ಲಿ ಸ್ವಾವಲಂಬನೆ ಜೊತೆಗೆ ಹೆಚ್ಚುವರಿ ಉತ್ಪಾದಿತ ವಿದ್ಯುತ್ ನ್ನು ಮೆಸ್ಕಾಂ ಗೆ ವಿಕ್ರಯಿಸಬಹುದಾಗಿದೆ ಎಂದು ಗೋವಿಂದರಾಜ್ ಮಾಹಿತಿ ನೀಡಿದರು.

 ಇಂಜಿನಿಯರ್ ಯು. ಕೆ. ರಾಘವೇಂದ್ರ ರಾವ್, ವೈ. ಎನ್. ರಾಮಚಂದ್ರ ರಾವ್, ಶ್ರೀನಿವಾಸ ಪೆಜತ್ತಾಯ, ಪ್ರದೀಪ್ ರಾವ್, ಪುರುಷೋತ್ತಮ ಅಡ್ವೆ, ರೋಹಿತ ತಂತ್ರಿ, ಶ್ರೀಶ ಭಟ್ ಕಡೆಕಾರ್ ಮತ್ತು ಅರ್ಬ್ ಎನರ್ಜಿ ಸೋಲಾರ್ ಸಂಸ್ಥೆಯ ಬಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply