ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಬಜೆಟ್ ಮಂಡನೆ 

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಶನಿವಾರ 4.67 ಕೋಟಿ ರೂ. ಮಿಗತೆ ಬಜೆಟ್  ಮಂಡಿಸಿ ದ್ದಾರೆ. 

ಬಜೆಟ್ ನಲ್ಲಿ ಆರಂಭಿಕ ಶುಲ್ಕ 83.57 ಕೋಟಿ ರೂ. ಸೇರಿ ಆಯ-ವ್ಯಯ ಪತ್ರದ ಗಾತ್ರ ಒಟ್ಟು 146.91 ಕೋಟಿ ರೂ. ಆಗಿದ್ದು, ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗದ ಅನುದಾನ, ಸ್ವಚ್ಛ ಭಾರತ್ ಯೋಜನೆ ಅನುದಾನ, ಎಸ್.ಎಫ್.ಸಿ. ಅನುದಾನ ಸೇರಿದಂತೆ ಒಟ್ಟು 63.33 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ 142.24 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪರ್ಕಳದಲ್ಲಿ ಸುಸಜ್ಜಿತ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ 3.50 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧ ಪಡಿಸಲಾಗಿದೆ.

ಸಂತಕಟ್ಟೆಯಲ್ಲಿ ವಾರದ ಸಂತಯೆ ನಡೆಯುತ್ತಿದ್ದ 68 ಸೆಂಟ್ಸ್ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹಾಗೂ ಮಣಿಪಾಲದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸುಮಿತ್ರಾ ನಾಯಕ್ ಹೇಳಿದರು. 

ಪೌರಕಾರ್ಮಿಕರಿಗೆ ವಸತಿನಿಲಯ ಪೌರಕಾರ್ಮಿಕರ ಅನುಕೂಲಕ್ಕಾಗಿ ಬೀಡಿನಗುಡ್ಡೆ ಪ್ರದೇಶದಲ್ಲಿ ಹಾಗೂ ಮಣಿಪಾಲದಲ್ಲಿ ತಲಾ 2 ಕೋಟಿ ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ ಮಲೇರಿಯಾ, ಡೆಂಗ್ಯೂ ಮತ್ತು ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆಗೆ 42 ಲಕ್ಷ ರೂ. ಅನುದಾನ ನೀಡಲಾಗುವುದು.ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ನಿಗಾ ವಹಿಸಲು ಸಿಸಿ ಕೆಮರಾ ಅಳವಡಿಸಲಾಗುವುದು ಎಂದರು. 

ಸಿಟಿ ಬಸ್‌ನಿಲ್ದಾಣ ಅಭಿವೃದ್ಧಿ ಸಿಟಿ ಬಸ್ ನಿಲ್ದಾಣವನ್ನು ಡಲ್ಟ್ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದರಲ್ಲಿ ಬಸ್ ನಿಲ್ದಾಣ ಹಾಗೂ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಲ್ಪೆ, ಉಡುಪಿ, ಮಣಿಪಾಲ ಪ್ರದೇಶದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಡಿಸೈನ್ ಬಿಲ್ಡ್ ಮೆಂಟೆನೈಸ್ ಆ್ಯಂಡ್ ಫೈನಾಸ್ಸ್ ಮಾದರಿಯಲ್ಲಿ ಅಂದಾಜು 130 ಕೋಟಿ ರೂ. ವೆಚ್ಚದಲ್ಲಿ ಉಡುಪಿ ಅರ್ಬನ್ ಡಿಜಿಟಲ್ ಇನ್‌ಫ್ರಾಸ್ಟ್ರಕ್ಚರ್ ಪ್ರೋಜೆಕ್ಟ್ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ಲಾಸ್ಟಿಕ್ ಬ್ಯಾನರ್ ಸಂಪೂರ್ಣ ನಿಷೇಧಿಸಿ, ಬಟ್ಟೆ ಬ್ಯಾನರ್ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಕಾಂಚನ್, ಸದಸ್ಯರಾದ ಪ್ರಭಾಕರ ಪೂಜಾರಿ, ಮಂಜುನಾಥ ಮಣಿಪಾಲ, ಕೃಷ್ಣ ರಾವ್ ಕೊಡಂಚ, ವಿಜಯ ಕೊಡವೂರು, ವಿರೋಧಪಕ್ಷದ ಸದಸ್ಯರಾದ ಅಮೃತಾ ಕೃಷ್ಣ ಮೂರ್ತಿ, ರಮೇಶ್ ಕಾಂಚನ್ ಮೊದಲಾದವರು ಬಜೆಟ್ ಚರ್ಚೆಯಲ್ಲಿ ಭಾಗಿಯಾದರು.

 
 
 
 
 
 
 
 
 
 
 

Leave a Reply