ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟಕ್ಕೆ ಶಿಲಾನ್ಯಾಸ

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮಹತ್ವದ ಹೆಜ್ಜೆ : ಸೋದೆ ಶ್ರೀ

ಶ್ರೀ ವಾದಿರಾಜ ಗುರುಸಾರ್ವಭೌಮರು ತಮ್ಮ *ತೀರ್ಥಪ್ರಬಂಧ* ಪ್ರವಾಸಕಥನದಲ್ಲಿ ಉಲ್ಲೇಖಿಸಿದ ಉಡುಪಿಯ ಜೀವನದಿ ಸ್ವರ್ಣೆ ಯ ತೀರದಲ್ಲಿರುವ ಪುರಾಣ ಪ್ರಸಿದ್ಧ ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಸುಸಜ್ಜಿತ ಸ್ನಾನಘಟ್ಟಕ್ಕೆ ಚಾಲನೆ ದೊರೆತಿರುವುದು ಉಡುಪಿಯ ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿಗೆ ಒಂದು ಮಹತ್ವದ ಹೆಜ್ಜೆ ಎಂದು ಶ್ರೀ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದ್ದಾರೆ .ಪೆರಂಪಳ್ಳಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನ ದ ಸಮೀಪ ಸ್ವರ್ಣಾನದೀ ತೀರದಲ್ಲಿ ನೂತನ ಕೃಷ್ಣಾಂಗಾರಕ ಸ್ನಾನಘಟ್ಟ ನಿರ್ಮಾಣಕ್ಕೆ ಶನಿವಾರ ಬೆಳಿಗ್ಗೆ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು .

ಪವಿತ್ರವಾದ ಈ ಸ್ಥಳಕ್ಕೆ ವರ್ಷಂಪ್ರತಿ ತೀರ್ಥ ಸ್ನಾನಕ್ಕೆ ನಾಡಿನ ಅನೇಕ ಭಾಗಗಳಿಂದ ಸಾವಿರಾರು ಭಾವುಕ ಜನ ಆಗಮಿಸುತ್ತಾರೆ . ಆದರೆ ಇಲ್ಲಿ ಸುಸಜ್ಜಿತ ಸ್ನಾನಘಟ್ಟದ ಕೊರತೆ ಇತ್ತು . ಅನೇಕ ವರ್ಷಗಳ ಪ್ರಯತ್ನದ ಬಳಿಕ ರಾಜ್ಯ ಸರಕಾರವು ಸಣ್ಣ ನೀರಾವರಿ ಇಲಾಖೆಯ ಒಂದು ಕೋಟಿ ರೂ ಅನುದಾನದ ಮೂಲಕ ಅದರ ಅನುಷ್ಠಾನಕ್ಕೆ ಮುಂದಾಗಿರುವುದು ಸುವಿಚಾರವಾಗಿದೆ .

ಅದಕ್ಕಾಗಿ ಮುಖ್ಯಮಂತ್ರಿಗಳು , ಸಣ್ಣ ನೀರಾವರಿ ಮಂತ್ರಿ ಮಾಧುಸ್ವಾಮಿ , ಹಾಗೂ ಶಾಸಕ ಕೆ ರಘುಪತಿ ಭಟ್ ಅಭಿನಂದನೀಯರು ಎಂದ ಶ್ರೀಗಳು ಈ ಸ್ನಾನಘಟ್ಟ ನಿರ್ಮಾಣಕ್ಕೆ ಕನಸು ಕಂಡ ಡಾ ವಿ ಎಸ್ ಆಚಾರ್ಯರನ್ನು ಸ್ಮರಿಸಿಕೊಂಡರು .

ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಯವರು ಧಾರ್ಮಿಕ ವಿಧಿ ನೆರವೇರಿಸಿದರು

ನಗರಸಭಾಧ್ಯಕ್ಷೆ ಸುಮಿತ್ರಾನಾಯಕ್ , ಸದಸ್ಯರುಗಳಾದ ಅರುಣಾ ಸುಧಾಮ , ಬಾಲಕೃಷ್ಣ ಶೆಟ್ಟಿ‌, ಗಿರಿಧರ ಆಚಾರ್ಯ , ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ , ಮಾಜಿ ನಗರಸಭಾಧ್ಯಕ್ಷ ಹೆರ್ಗ ದಿನಕರ ಶೆಟ್ಟಿ , ಸಣ್ಣ ನೀರಾವರಿ ಇಲಾಖೆಯ‌ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಶೇಷಕೃಷ್ಣ , ಜೂನಿಯರ್ ಇಂಜಿನಿಯರ್ ಹರೀಶ್ , ಗುತ್ತಿಗೆದಾರರಾದ ರಾಜೇಶ್ ಕಾರಂತ್ , ಶಿವಪ್ರಸಾದ್ ಹೆಗ್ಡೆ ಆತ್ರಾಡಿ , ಎಸ್ ರತ್ನಕುಮಾರ್ , ಇಂಜಿನಿಯರ್ ಭಗವಾನ್ ದಾಸ್ ಕೆ . ಕೃಷ್ಣಮೂರ್ತಿ ಶಿವತ್ತಾಯ ಮಧ್ವೇಶ ತಂತ್ರಿ , ಮಧುಸೂದನ ಶಿವತ್ತಾಯ ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತ ರಿದ್ದರು. ಶಂಕರ್ ಕುಲಾಲ್ , ಪ್ರಶಾಂತ್ ಭಟ್ ಸಹಕರಿಸಿದರು .

 
 
 
 
 
 
 
 
 

Leave a Reply