ಮಹಿಳೆಯರಿಂದ ಉತ್ತಮ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ—–ಸಾಧ್ವಿ ಶ್ರೀ ಮಾತಾನಂದ ಮಯೀ

ಶಿರ್ವ-ಮಹಿಳೆಯರು ಉತ್ತಮ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ತಮ್ಮೊಳಗೆ ಬೆಳೆಸಿಕೊಂಡು,ತಮ್ಮ ಮಕ್ಕಳನ್ನು ಆ ಸಂಸ್ಕಾರದ ಮೂಲಕ ಬೆಳೆಸಿದಲ್ಲಿ ಉತ್ತಮ ಸಮಾಜದ ನಿರ್ಮಾಣ ಕಷ್ಟವಲ್ಲ.ತಾನು, ತನಗಾಗಿ ಬಾಳುವುದಕ್ಕಿಂತ ಇತರರಿಗಾಗಿ,ಸಮಾಜಕ್ಕಾಗಿ ಬಾಳಿದರೆ ಆ ಬದುಕು ಸಾರ್ಥಕವಾಗುತ್ತದೆ.ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಗೌರವಾನ್ವಿತ ಸಾಧ್ವಿಯವರಾದ ಶ್ರೀ ಶ್ರೀ ಮಾತಾನಂದ ಮಯೀ ಅವರು ಹೇಳಿದರು.ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಮಹಿಳಾ ಮಂಡಲಗಳಲ್ಲೊಂದಾಗಿರುವ,ಈ ವರ್ಷ ವಜ್ರಮಹೋತ್ಸವ ವನ್ನು ಆಚರಿಸುತ್ತಿರುವ ಶಿರ್ವ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಹಿಳೆಯರು ಯಾವಾಗಲೂ ಮೂರು ಫ್ಯಾಕ್ಟರಿಗಳನ್ನು ತೆರೆಯಬೇಕು.ಐಸ್ ಫ್ಯಾಕ್ಟರಿ,ಶುಗರ್ ಫ್ಯಾಕ್ಟರಿ ಹಾಗೂ ಲವ್ ಫ್ಯಾಕ್ಟರಿ,ಐಸ್ ಫ್ಯಾಕ್ಟರಿ ಯಿಂದ ತಮ್ಮ ಮೆದುಳನ್ನು ಯಾವಾಗಲೂ ತಂಪಾಗಿಸಿಕೊಳ್ಳಬೇಕು,ಅರ್ಥಾತ್ ಶಾಂತವಾಗಿರಿಸಿಕೊಳ್ಳಬೇಕು.ಶುಗರ್ ಫ್ಯಾಕ್ಟರಿಯಿಂದ ಯಾವಾಗಲೂ ಸಿಹಿ ಸಿಹಿ ಮಾತುಗಳನ್ನಾಡಬೇಕು.ಲವ್ ಫ್ಯಾಕ್ಟರಿ ಯಿಂದ ಯಾವಾಗಲೂ ಪ್ರತೀಯೊಬ್ಬರನ್ನೂ ಪ್ರೀತಿಸಬೇಕು.ಈ ಮೂರೂ ಫ್ಯಾಕ್ಟರಿ ಗಳನ್ನು ತೆರೆದಾಗ ಮಾತ್ರ ಸ್ಯಾಟಿಸ್ಫ್ಯಾಕ್ಟರಿ ಹುಟ್ಟಿಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕುಲಕಸುಬುಗಳನ್ನು ಮಾಡುತ್ತಿರುವ ಶ್ರೀಮತಿ ಗೌರಿ ಬೆಳಂಜಾಲೆ (ಬುಟ್ಟಿ ಹೆಣೆಯುವುದು)ಕಮಲಾ (ಮೀನುಗಾರಿಕೆ) ರತ್ನಾವತಿ ಆಚಾರ್ಯ (ಅಕ್ಕಸಾಲಿಗ))ವಿಜಯಾ (ಸಮಗಾರ ವೃತ್ತಿ) ಲೀಲಾವತಿ ಜೋಗಿ (ಬಳೆಗಾರ)ಹಾಗೂ ಪುರುಷ ಕ್ಷೇತ್ರಕ್ಕೆ ಲಗ್ಗೆ ಇಟ್ಟು ಸಾಧನೆ ಮಾಡಿದ ಶ್ರೀಮತಿ ಪ್ರಮೀಳಾ ಲಸ್ರಾದೋ ಹೇರೂರು ಬಂಟಕಲ್ಲು (ಅಂಚೆ ಪೇದೆ) ಶ್ರೀಮತಿ ಲಕ್ಷ್ಮೀ ಪೂಜಾರಿ (ಹೋಟೆಲ್ ಉದ್ಯಮ) ಇವರನ್ನು ಗೌರವಿಸಲಾಯಿತು.

ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲತಾ ಆಚಾರ್ಯ ಮತ್ತು ಕೊಂಕಣಿ ಭಾಷೆಯಲ್ಲಿಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪದವಿ ಪಡೆದು ವಿಶೇಷ ಸಾಧನೆ ಮಾಡಿದ ಶ್ರೀಮತಿ ಮರಿಯಾ ಜೆಸಿಂತಾ ಫುರ್ಟಾಡೋ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಗ್ರಾಮದ ಹಿರಿಯ ಮಹಿಳೆಯರಲ್ಲಿ ಓರ್ವರಾದಶ್ರೀಮತಿ ಸಮಿತಿ ಶೆಟ್ಟಿ,ಕೋಡು ಮನೆ, ಶಿರ್ವ ಹಾಗೂ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿಠಲ ಆಂಚನ್ ಅವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಈ ಸ್ಪರ್ಧೆಗಳನ್ನು ಡಾ.ರಶ್ಮೀ. ಪಿ. ಶೆಟ್ಟಿ ಅವರು ನಡೆಸಿಕೊಟ್ಟರು.ಬಹುಮಾನ ವಿಜೇತರ ಪಟ್ಟಿಯನ್ನುಐರಿನ್ ಲುಸ್ರಾದೋ ಅವರು ವಾಚಿಸಿದರು.ಆರಂಭದಲ್ಲಿ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಶ್ರೀಮತಿ ಬಬಿತಾ ಜಗದೀಶ್ ಅರಸ ಸರ್ವರನ್ನೂ ಸ್ವಾಗತಿಸಿದರು.ಹಿರಿಯರಾದ ಶ್ರೀಮತಿ ಪ್ರಭಾವತಿ ಮತ್ತು ವೈ.ಭಾಸ್ಕರ್ ಶೆಟ್ಟಿ ದಂಪತಿಗಳು ಸಾಧ್ವಿಯವರನ್ನು ಭಕ್ತಿಪೂರ್ವಕವಾಗಿ ಗೌರವಿಸಿ,ಸ್ವಾಗತಿಸಿದರು.ಕಾರ್ಯದರ್ಶಿ ಡಾ.ಸ್ಪೂರ್ತಿ.ಪಿ.ಶೆಟ್ಟಿಯವರು ವರದಿ ಓದಿದರು.ವನಿತಾ ನಾಯಕ್, ಜಯಶ್ರೀ ಜಯಪಾಲ್ ಶೆಟ್ಟಿ,ಸುಮಾ ಬಾಮನ್, ಶ್ವೇತಾ ಗಿರೀಶ್, ಸುನೀತಾ.ಎನ್.ಪೂಜಾರಿ,ಮಾಲತಿ ಮುಡಿತ್ತಾಯ,ದೀಪಾ ಶೆಟ್ಟಿ, ಮುಂತಾದವರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು.ಉಪಾಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ರಕಾಶ್ ಸುವರ್ಣ ಅವರ ಸುಂದರ ನಿರೂಪಣೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಖಜಾಂಚಿ ಶ್ರೀಮತಿ ಮರಿಯಾ ಜೆಸಿಂತಾ ಅವರು ವಂದನಾರ್ಪಣೆ ಮಾಡಿದರು.ಶಿರ್ವದ ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ಸೇವಾ ಸಮಿತಿಯ ಸದಸ್ಯರ ಪೂರ್ಣ ಕುಂಭ ಸ್ವಾಗತ ಹಾಗೂ ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದ ಅದ್ದೂರಿಯ ಚೆಂಡೆ ವಾದನ ದೊಂದಿಗೆ ಸಾಧ್ವಿಯವರನ್ನು ಶ್ರೀ ಕುಟ್ಟಿ ಶೆಟ್ಟಿ ವೃತ್ತದಿಂದ ಮಹಿಳಾ ಸೌಧದ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ಈ ಸಂದರ್ಭದಲ್ಲಿ ಹಲ್ಲು,ಕೈ ಹಾಗೂ ಕಾಲಿನ ಉಗುರುಗಳಿಂದ ತೆಂಗಿನಕಾಯಿ ಸುಲಿಯುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿರುವ ಶ್ರೀ ರಾಜೇಶ್ ಪ್ರಭು ಪೆರ್ನಾಲ್ ಅವರಿಂದ ತೆಂಗಿನ ಕಾಯಿ ಸುಲಿಯುವ ಪ್ರಾತ್ಯಕ್ಷಿಕೆ ನಡೆಯಿತು.ಮತ್ತು ಮಿಮಿಕ್ರಿ ಕಲಾವಿದೆ ಶ್ರೀಮತಿ ಕುಸುಮಾ ಕಾಮತ್ ಕರ್ವಾಲು ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.ಗಣೇಶೋತ್ಸವ ಸಮಿತಿಯ ಖಜಾಂಚಿ ಶ್ರೀ ಅನಂತ ಮುಡಿತ್ತಾಯ, ಮಹಿಳಾ ಮಂಡಲದ ಜೊತೆ ಕಾರ್ಯದರ್ಶಿ ಶ್ರೀಮತಿ ಗೀತಾ ಮೂಲ್ಯ,ಕಾಪು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಾಂತಲತಾ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಜಾತ ಹಾಗೂ ನೇತ್ರಾಕ್ಷಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply