ಶಂಕರ ನೇತ್ರಾಲಯದ ಅಮೆರಿಕೆಯ ಅಂಗಸಂಸ್ಥೆಗೆ ಡಾ. ಗೋವಿಂದ ವಿಶ್ವೇಶ್ವರ ಇವರಿಂದ 1.1 ಕೋಟಿ ರೂಪಾಯಿ ದೇಣಿಗೆ. 

ಅಮೆರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ ನೇತ್ರಾಲಯ ಅಮೆರಿಕಾ, ಇಡೀ ಜಗತ್ತಿನಲ್ಲಿಯೇ ಶಂಕರ ನೇತ್ರಾಲಯದ ವತಿಯಿಂದ ದೇಣಿಗೆ ಸಂಗ್ರಹಿಸಲು ನಿಯುಕ್ತಿಗೊಂಡಿರುವ ಏಕಮಾತ್ರ ಅಂಗ ಸಂಸ್ಥೆ. ಅಮೆರಿಕಾದ CDC (Center for Disease Control and Prevention) ಇದರಲ್ಲಿ ಉನ್ನತ ಜವಾಬ್ದಾರಿಯನ್ನು ಹೊಂದಿರುವ ಕನ್ನಡಿಗರಾದ ವಿಜ್ಞಾನಿ ಡಾ ಗೋವಿಂದ ವಿಶ್ವೇಶ್ವರ ಇವರು 1.1 ಕೋಟಿ ರೂಪಾಯಿ ($150, ೦೦೦) ದೇಣಿಗೆಯನ್ನು ನೀಡಿದರು. 
ಈ ದೇಣಿಗೆ ಭಾರತದಲ್ಲಿ ಜನಮಾದರಿ ಸೇವೆಯನ್ನು ನಡೆಸುತ್ತಿರುವ ಡಾ. ಬದ್ರೀನಾಥ್ ನೇತೃತ್ವದ ಶಂಕರ ನೇತ್ರಾಲಯಕ್ಕೆ ಸುಮಾರು 2300ಕ್ಕೂ ಹೆಚ್ಚು ಕ್ಯಾಟರಾಕ್ಟ್ ಶಸ್ತ್ರಕ್ರಿಯೆಯನ್ನು ಉಚಿತವಾಗಿ ನಡೆಸಲು ಅನುಕೂಲ ವಾಗಲಿದೆ. 1972ರಲ್ಲಿ ಅಮೆರಿಕೆಗೆ ವಲಸೆ ಬಂದು, CDC (Center for Disease Control and Prevention) ಇದರ ವಿಜ್ಞಾನಿಯಾಗಿ ಡಾ ಗೋವಿಂದ ವಿಶ್ವೇಶ್ವರ ಇದುವರೆಗೆ ಸುಮಾರು 350ಕ್ಕೂ ಮೀರಿ ವೈಜ್ಞಾನಿಕ ಪ್ರಕಟಣೆಗಳನ್ನು ಹೊರತಂದಿದ್ದಾರೆ.
ಜಗತ್ತಿನಾದ್ಯಂತ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ನಿರ್ಮೂಲನೆಯ ವಿಷಯದಲ್ಲಿ ಆಳವಾದ ಸಂಶೋ ಧನೆ ನಡೆಸಿರುವ ಡಾ ಗೋವಿಂದ ವಿಶ್ವೇಶ್ವರ ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಡಾಕ್ಟರೇಟ್ ಪದವಿಯ ನಂತರವೂ ನಡೆಸುವ ಅತ್ಯುನ್ನತ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತಾದ ಸಾಧನೆಯನ್ನೇ ನಡೆಸಿದ್ದಾರೆ.
ತನ್ನ ಗೌರವಾನ್ವಿತ ಮಾತಾಪಿತೃಗಳಾದ ಶ್ರೀಮತಿ ರಾಜಮ್ಮ ಮತ್ತು ಶ್ರೀ ಗೋವಿಂದ ಶರ್ಮ ಇವರ ಸವಿ ನೆನಪಿನಲ್ಲಿ ಕೊಟ್ಟಿರುವ ಈ ಅಭೂತಪೂರ್ವ ವೈಯಕ್ತಿಕ ದೇಣಿಗೆ ಆನೇಕ ದೃಷ್ಟಿಮಂದ ಜನರ ಬಾಳಿಗೆ ಬೆಳಕಾ ಗಲಿದೆ. ಡಾ. ಗೋವಿಂದ ವಿಶ್ವೇಶ್ವರ ಇವರ ತಂದೆ, ದಿವಂಗತ ಗೋವಿಂದ ಶರ್ಮ ಹಿಂದಿನ ಮೈಸೂರು ರಾಜ್ಯ ದಲ್ಲಿ ಅಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ವಿದ್ಯಾರ್ಥಿಯಾಗಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿದವರು.
ಅಧ್ಯಾತ್ಮದ ಬಗ್ಗೆ ತೀವ್ರ ಒಲವಿದ್ದ ದಿವಂಗತ ಗೋವಿಂದ ಶರ್ಮ ಪೌರಾತ್ಯ ಮತ್ತು ಪಾಶ್ಚಿಮಾತ್ಯ ಆಧ್ಯಾತ್ಮ ಗಳೆರಡನ್ನೂ ಆಳವಾಗಿ ಓದಿದವರು, ಅಭ್ಯಾಸ ಮಾಡಿದವರು. ಬೆಂಗಳೂರಿನಲ್ಲಿ ಮುಂದೆ ಜಿಲ್ಲಾ ಮಾತ್ತು ಸೆಷನ್ಸ್ ಇದರ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದವರು. ಪದ್ಮಭೂಷಣ ಡಾ ಬದ್ರೀನಾಥ್ ಇವರ ದೂರದೃಷ್ಟಿತ್ವದ ಫಲ ಮತ್ತು ಸಾಧನೆಯೇ , 1978ರಲ್ಲಿ ಸ್ಥಾಪನೆಗೊಂಡ ಶಂಕರ ನೇತ್ರಾಲಯ.
ಇಂದು ಚೆನ್ನೈಯಲ್ಲಿ ಅತ್ಯುನ್ನತ ವ್ಯವಸ್ಥೆಯ ನೇತ್ರಚಿಕಿತ್ಸೆ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಂಕರ ನೇತ್ರಾಲಯ ಅನೇಕ ಜನರ ಬಾಳಿಗೆ ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ನೀಡಲು ನೆರವಾಗುತ್ತಾ, ನೇತ್ರ ಚಿಕಿತ್ಸೆಗೆ ಸಂಬಂಧ ಪಟ್ಟ ಶಿಕ್ಷಣ ಮತ್ತು ಮೂಲಭೂತವಾಗಿ ಭಾರತದ ಜನತೆಗೆ ಸಂಬಂಧಿಸಿದಂತಹ ದೃಷ್ಟಿದೋಶದ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದೆ. 
ಪ್ರತೀ ದಿನವೂ ಸುಮಾರು 3೦೦೦ಕ್ಕೂ ಹೆಚ್ಚು ಜನರಿಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಿ 3೦೦ಕ್ಕೂ ಹೆಚ್ಚು ದೃಷ್ಟಿದೋಶಕ್ಕೆ ಸಂಬಂಧಿಸಿದಂತೆ ಶಸ್ತ್ರಶಿಕಿತ್ಸೆಯನ್ನು ಶಂಕರ ನೇತ್ರಾಲಯ ನೆರವೇರಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. ತಮ್ಮ ನಿಸ್ವಾರ್ಥ ಮತ್ತು ಅತ್ಯುನ್ನತ ಗುಣಮಟ್ಟದ ಸೇವೆಯಿಂದ ಜಗತ್ತಿನ ಮೊದಲ 1೦೦ ಆಸ್ಪತ್ರೆಗಳಲ್ಲಿ ಶಂಕರ ನೇತ್ರಾಲಯವೂ ಒಂದು ಎಂಬುದಾಗಿ Newsweek ಎನ್ನುವ ನಿಯತಕಾಲಿಕೆಯು ಸುದ್ದಿಯನ್ನು ಹೊರತಂದಿದೆ. 
ತನ್ನ ವಿಶಿಷ್ಟವಾದ ಮೊಬೈಲ್ ನೇತ್ರ ಶಸ್ತ್ರಚಿಕಿತ್ಸೆಯ ವಾಹನಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ನೇತ್ರಾಲಯ ತೀರಾ ಹಿಂದುಳಿದ ಮತ್ತು ಸಂಪರ್ಕ ಸಾಧಿಸಲು ಸುಲಭವಲ್ಲದ ಜಾಗಗಳಿಗೂ ವಾಹನಗಳ ಮೂಲಕ ತೆರಳಿ, ಅಲ್ಲಿನ ಬಡ, ಹಿಂದುಳಿದ ಜನರಿಗೆ ಧರ್ಮಾರ್ಥ ಶಸ್ತ್ರಚಿಕಿತ್ಸೆ ನೀಡಿ ಚೆನ್ನೈಯಲ್ಲಿರುವ ಮುಖ್ಯ ಆಸ್ಪತ್ರೆಗೆ ಹಿಂದಿರುಗುತ್ತಾರೆ. ಹೀಗೆ ಎರಡು ವಾರಕ್ಕೊಮ್ಮೆ ಸುಮಾರು 15೦ರಿಂದ 2೦೦ಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆ ನೀಡುವ ಹಿರಿಮೆ ಶಂಕರ ನೇತ್ರಾಲಯದ್ದು.
ಶಂಕರ ನೇತ್ರಾಲಯ ಅಮೆರಿಕಾ ತನ್ನ ದೇಣಿಗೆ ಸಂಗ್ರಹದ ಪ್ರಯತ್ನದಿಂದ ಕಳೆದ ಅನೇಕ ವರುಷಗಳಿಂದಲೂ ಪ್ರತೀ ವರ್ಷ ಸುಮಾರು ಒಂದು ದಶಲಕ್ಷ ಡಾಲರಿನಷ್ಟು ದೇಣಿಗೆಯನ್ನು ಸಂಗ್ರಹಿಸುತ್ತಾ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ಬಲವಾದ ಸಹಾಯವನ್ನು ನೀಡುತ್ತಾ ಬಂದಿದೆ.
ಶಂಕರ ನೇತ್ರಾಲಯ ಮತ್ತು ಅದರ ಅಮೆರಿಕಾದ ಅಂಗ ಸಂಸ್ಥೆಯ ಸಂಸ್ಥಾಪಕರು, ನಿರ್ದೇಶಕರು, ಆಡಳಿತ ಮಂಡಳಿ ಮತ್ತು ಬೋರ್ಡಿನ ಸದಸ್ಯರು ಇವರೆಲ್ಲ ಡಾ ಗೋವಿಂದ ವಿಶ್ವೇಶ್ವರ ಇವರ ಕೊಡುಗೈ ದಾನಕ್ಕೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ವೈಯಕ್ತಿಕ ದೇಣಿಗೆ ನೂರಾರು ಆರ್ಥಿಕವಾಗಿ ಅಸಮರ್ಥ ಮತ್ತು ಸಾಮಾಜಿಕವಾಗಿ ಹಿಂದುಳಿರುವ ದೃಷ್ಟಿಮಂದರ ಬಾಳಿಗೆ ಬೆಳಕಾಗಲಿದೆ ಎನ್ನುವ ಭರವಸೆಯನ್ನು ಹೊಂದಿದ್ದಾರೆ.
 
 
 
 
 
 
 
 
 
 
 

Leave a Reply