ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ‌ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಮತ್ತು ಉಡುಪಿ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಮತ್ತು ಉಡುಪಿ‌ ತಾಲೂಕು-ವಲಯ ನೇತೃತ್ವದಲ್ಲಿ ವಿಶ್ವ ಮಾಧಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವು ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಹಾಗೂ ಉಡುಪಿ ವಲಯಾಧ್ಯಕ್ಷ‌ ಶಿವಕುಮಾರ್ ಅಂಬಲಪಾಡಿ ಇವರ ಅಧ್ಯಕ್ಷತೆಯಲ್ಲಿ ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಜ್ಯೋತಿ ಬೆಳಗಿಸಿ‌ ಕಾರ್ಯಕ್ರಮವನ್ನು ಉದ್ಘಾಟಿಸಿ,‌ ದುಶ್ಚಟಮುಕ್ತ ಸಮಾಜ ನಿರ್ಮಾಣದತ್ತ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಪರಿಚಯವನ್ನು ನೀಡಿ ಶುಭ ಹಾರೈಸಿದರು.

‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವಿಸ್ತ್ರತ ಮಾಹಿತಿ ನೀಡಿದ ಉಡುಪಿ ಡಾ! ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಪ್ತ ಸಮಾಲೋಚಕಿ ಡಾ! ದೀಪಶ್ರೀ ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ದುಶ್ಚಟಗಳಿಂದ ದೂರವಿದ್ದು,‌ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಶ್ಯಾಮಿಲಿ‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜ್‌ ಮೋಹನ್‌ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಲಭ್ಯವಿರುವ ಸ್ವಾಸ್ಥ್ಯ ಸಂಕಲ್ಪದಂತಹ ಉಪಯುಕ್ತ ಮಾಹಿತಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡು ಮಾಧಕ ವಸ್ತುಗಳ ವಿರುದ್ಧ ಸ್ವಯಂ ಜಾಗೃತರಾಗುವ ಜೊತೆಗೆ ಸಾಮಾಜಿಕ‌ ಜಾಗೃತಿಯನ್ನೂ‌ ಮೂಡಿಸಬೇಕು ಎಂದರು.

ಶ್ರೀ‌‌ ಕ್ಷೇತ್ರ ಧರ್ಮಸ್ಥಳ‌ ಗ್ರಾಮಾಭಿವೃದ್ಧಿ ಯೋಜನೆಯ‌ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹಾಗೂ ಜನಜಾಗೃತಿ ವೇದಿಕೆಯ ಸಮಾಜಮುಖಿ ಸೇವಾ ಕಾರ್ಯಗಳನ್ನು ವಿವರಿಸಿದರು. ಯೋಜನೆಯ ಪ್ರಾದೇಶಿಕ‌ ಕಛೇರಿಯ ಆಡಳಿತ ವಿಭಾಗದ ಯೋಜನಾಧಿಕಾರಿ ಪುರಂದರ್ ಸ್ವಾಸ್ಥ್ಯ ಸಂಕಲ್ಪದ ಪ್ರಮಾಣ ವಚನವನ್ನು ಭೋಧಿಸಿದರು.

ಮಾಧಕ ವಸ್ತುಗಳ‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ‌ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಸೇವಾ ಪ್ರತಿನಿಧಿಗಳಾದ ಉಷಾ, ಆಶಾ ಮತ್ತು ಶರ್ಮಿಳಾ ಉಪಸ್ಥಿತರಿದ್ದರು.

ಸೇವಾ‌ ಪ್ರತಿನಿಧಿ‌ ಗೀತಾ ಪಾಲನ್ ಸ್ವಾಗತಿಸಿದರು. ಉಡುಪಿ ವಲಯ ಮೇಲ್ವಿಚಾರಕಿ ಪ್ರೇಮಾ‌ ಕಾರ್ಯಕ್ರಮ ನಿರೂಪಿಸಿ, ತಾಲೂಕು ಕೃಷಿ ಅಧಿಕಾರಿ ರಾಘವೇಂದ್ರ ವಂದಿಸಿದರು.

 
 
 
 
 
 
 
 
 
 
 

Leave a Reply