ಪ್ರತಿ ಮಹಿಳೆಯೂ ಸಾಧಕಿ- ರಮಿತಾ ಶೈಲೇಂದ್ರ

ಅಜೆಕಾರು: ಪ್ರತಿ ಮಹಿಳೆಯೂ ಸಾಧಕಿಯೇ ಆಗಿದ್ದಾರೆ. ಆದರೆ ಕೆಲವರಿಗೆ ಅವಕಾಶಗಳು ದೊರಕಿ ಅವರ ಸಾಧನೆಗಳು ಬೆಳಕಿಗೆ ಬರುತ್ತವೆ. ಕೆಲವರ ಸಾಧನೆಗೆ ಪ್ರಚಾರ ಸಿಗುವುದಿಲ್ಲ ಎಂದು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ರಮಿತಾ ಶೈಲೇಂದ್ರ ರಾವ್ ಹೇಳಿದರು.ಅವರು ಅಜೆಕಾರಿನ ಕುರ್ಪಾಡಿ ಬೊಬ್ಬರ್ಯಸ್ಥಾನದ  ಗ್ರಾಮೋತ್ಸವ ಕಾನನ ಮಂಟಪದಲ್ಲಿ ಭಾನುವಾರ ನಡೆದ ಕಾನನ ಮಹಿಳಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಆದಿಗ್ರಾಮೋತ್ಸವ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿ ಸಿದ್ದ ಕಾರ್ಯಕ್ರಮವನ್ನು ಅತಿಥಿಗಳು ಸಾಧಕ, ಸಮಾಜ ಸೇವಾಸಕ್ತ ಮಹಿಳೆ ರಮಿತಾ ಅವರನ್ನು ಗೌರವಿಸುವ ಮೂಲಕ ಉದ್ಘಾಟಿಸಿದರು.

ಮಹಿಳೆಯರು ಸಾಧನೆ ಮಾಡುವಾಗ ಮನೆಯವರು ಪ್ರೋತ್ಸಾಹ ನೀಡಿದರೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ಹರಿದು ಬರುವುದೆಕ್ಕೆ ಸಾಧ್ಯವಿದೆ. ಮಹಿಳೆಯರ ಸಾಧನೆಯನ್ನು ಗೌರವಿಸುವ ಮೂಲಕ ಮತ್ತು ಅವರಿಗೆ ಪ್ರತ್ಯೇಕ ಕಾರ್ಯ ಕ್ರಮವನ್ನು ಆಯೋಜಿಸುವ ಮೂಲಕ ಕಾನನ ಮಂಟಪ ಹೊಸ ಭಾಷ್ಯ ಬರೆದಿದೆ. ನನ್ನ ಸಾಧನೆಯಲ್ಲಿ ಶೈಲೇಂದ್ರ ಮತ್ತು ಅತ್ತೆ-ಮಾವನವರ ತುಂಬು ಪ್ರೋತ್ಸಾಹ ಇದೆ ಎಂದು ನೆನಪಿಸಿಕೊಂಡರು.

ಆರನೇ ತರಗತಿಯಲ್ಲಿ ಇರುವಾಗ ಸೈಕಲ್ ಏರಿ ಹೋದಾಗ ಜನ ಸರ್ಕಸ್‌ನವರನ್ನು ನೋಡಿದ ಹಾಗೆ ನೋಡು ತ್ತಿದ್ದರು. ಕಡುಬಡತನದಿಂದ ಸತತ ಶ್ರಮದಿಂದ ಉಳಿತಾಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸಾಧ್ಯವಾಗಿದೆ ಎಂದು ಕ.ಪಿ.ಪದ್ಯಾವತಿ ಹೇಳಿದರು. 

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಯಶೋದ ಶೆಟ್ಟಿ, ಅಜೆಕಾರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಯಶೋದ ಶೇಖರ್ ಶೆಟ್ಟಿ, ಸಣ್ಣ ಉಳಿತಾಯ ಕ್ಷೇತ್ರದ ಸಾಧಕಿ ಪದ್ಮಾವತಿ ಕೆ.ಪಿ, ಬಂಡಸಾಲೆ ಮಹಮ್ಮಾಯಿ ಭಜನಾ ಮಂಡಳಿ ಅಧ್ಯಕ್ಷೆ ವಿಮಲಾ ನಾಯ್ಕ್, ಕಾರ್ಯದರ್ಶಿ ಶಶಿಕಲಾ ಹೆಗ್ಡೆ, ಜಲನಯನ ಸ್ವ ಸಹಾಯ ಸಂಘದ ಶಾಲಿನಿ ಶೆಟ್ಟಿ, ದೀಕ್ಷಾ ಸ್ವ ಸಹಾಯ ಗುಂಪಿನ ಸುಖಲತಾ ಶೆಟ್ಟಿ, ಮರ್ಣೆ ಗ್ರಾಮ ಪಂಚಾಯತ್ ಸದಸ್ಯೆ ಪ್ರಮೋದಾ ದಾಮೋದರ್, ಸ್ವಚ್ಚ ಕಾರ್ಕಳದ ಸುನೀತಾ ಅಂಡಾರ್ ಮೊದಲಾದವರು ಅತಿಥಿಗಳಾಗಿದ್ದರು.

ನಿವೃತ್ತ ಮೂಖ್ಯೋಪಾಧ್ಯಾಯರಾದ ಮೌರೀಸ್ ತಾವ್ರೋ ಶುಭ ಹಾರೈಸಿದರು. ಯುವ ಗಾಯಕ ದಿನಕರ್ ಸಾಬರಕಟ್ಟೆ ಅವರ ಗಾನ ಸವಿಗಾನ ಸಂಗೀತ ಕಾರ್ಯಕ್ರಮ, 3 ವರ್ಷದ ಬಾಲಕಿ ಸಾನಿಧ್ಯ ಕವತ್ತಾರು, ಆದ್ಯ ಕಾರ್ಕಳ, ಸುನಿಜ ಅಜೆಕಾರು, ಸಿಂಚನಾ ಕಾಬೆಟ್ಟು, ಪ್ರಕೃತಿ ಕೈಕಂಬ ವಿಶೇಷ ಅಕರ್ಷಣೆಯಾಗಿತ್ತು. ಬಾಲಕೃಷ್ಣ ಹೆಗ್ಡೆ ಅಜೆಕಾರು, ಕಾವ್ಯ ಕಣಜಾರು, ಚಂದ್ರಮೌಳಿ ಪುತ್ತೂರು ಅವರು ಕವಿತೆಗಳ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದರು.

ಕುರ್ಸುಕಟ್ಟೆ ಅಂಗನವಾಡಿ ಶಿಕ್ಷಕಿ ಶಕುಂತಳಾ ಸ್ವಾಗತಿಸಿದರು. ಕವಯತ್ರಿ ಕಾವ್ಯ ಕಣಜಾರು ಕಾರ್ಯಕ್ರಮ ನಿರೂಪಿಸಿದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ವಂದಿಸಿದರು. ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು, ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಅಜೆಕಾರು ಕಾರ್ಯಕ್ರಮ ಸಂಯೋಜಿಸಿದ್ದರು. 

 
 
 
 
 
 
 
 
 
 
 

Leave a Reply