‘ರಾಮಾಯಣ ಮಹಾಕಾವ್ಯವು ಭಾರತೀಯ ಆತ್ಮದ ಕನ್ನಡಿ ಇದ್ದಂತೆ’- ನಿರುಪಮಾ ರಾವ್

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್ ಪ್ರಸಾರಾಂಗ ವಿಭಾಗವಾಗಿರುವ ಮಣಿಪಾಲ್‌ ಯೂನಿರ‍್ಸಲ್‌ ಪ್ರೆಸ್‌, ಡಿಎಸ್‌ಎ ಹಿಸ್ಟರ್‌ ಎಂಡೋಮೆಂಟ್‌ನ ಸಹಭಾಗಿತ್ವದಲ್ಲಿ ಪ್ರಕಟಿಸಿದ ದೆಹಲಿ ವಿ. ವಿ. ಯ ಪ್ರಾಧ್ಯಾಪಕಿ ಪಾರುಲ್‌ ಪಾಂಡ್ಯ ಧರ್‌ ಅವರು ಸಂಪಾದಿಸಿದ ದಿ ಮಲ್ಟಿವೆಲೆನ್ಸ್‌ ಆಫ್‌ ಆ್ಯನ್‌ ಎಪಿಕ್‌- ರೀಟೆಲ್ಲಿಂಗ್‌ ದಿ ರಾಮಾಯಣ ಇನ್‌ ಸೌತ್‌ ಇಂಡಿಯ ಆಂಡ್‌ ಸೌತ್‌ ಈಸ್ಟ್‌ ಏಷ್ಯಾ ಕೃತಿಯು ಸೆಪ್ಟೆಂಬರ್‌ 24,2021ರಂದು ಬೆಂಗಳೂರು ಇಂಟರ್‌ನ್ಯಾಶನಲ್‌ ಸೆಂಟರ್‌ನಲ್ಲಿ ಲೋಕಾರ್ಪಣೆಗೊಂಡಿತು.
ಕೃತಿಯನ್ನು ಬಿಡುಗಡೆಗೊಳಿಸಿದ ವಿದೇಶಾಂಗ ಕಾರ್ಯದರ್ಶಿ, ರಾಯಭಾರಿ ನಿರುಪಮಾ ರಾವ್‌ ಅವರು ಮಾತನಾಡಿ, ಪ್ರಸ್ತುತ ಕೃತಿಯು ಮಹಾಕಾವ್ಯ ಪರಂಪರೆಯನ್ನು ಕುರಿತ ಸಂಶೋಧನಾ  ಕ್ಷೇತ್ರದಲ್ಲಿ ಮಹತ್ತ್ವದ ಕೃತಿಯಾಗಿದೆ ಎಂದರು. ರಾಮಾಯಣದ ಮಹಾಕಥನ ಮತ್ತು ಅದರ ವಿವಿಧ ಮರು ಕಥನಗಳನ್ನು ಒಂದು ಮಹಾಯಾನವೆಂದು ಬಣ್ಣಿಸಿದ ಅವರು ಈ ಪಯಣ ನಿರಂತರವಾಗಿರುತ್ತದೆ ಎಂದರು.
ಪ್ರಸ್ತುತ ಸಂಪುಟದ ಲೇಖನಗಳು, ಭಾರತ ಉಪ ಖಂಡದ ದಕ್ಷಿಣ ಭಾಗದಲ್ಲಿ ಮತ್ತು ಆಗ್ನೇಯ ಏಷ್ಯಾದ ಮ್ಯಾನ್ಮಾರ್‌, ಮಲೇಶ್ಯಾ, ಥೈಲ್ಯಾಂಡ್‌ ಮತ್ತಿತರ ದೇಶಗಳಲ್ಲಿ ರಾಮಾಯಣ ಮಹಾಯಾನದ ಮಾರ್ಗವನ್ನು ಈ ಕೃತಿಯ ಸಂಶೋಧನ ಲೇಖನಗಳು ದಾಖಲಿಸುತ್ತವೆ ಎಂದರು.
ಬಹುಮುಖತೆ, ವಿವಿಧತೆ, ಬಹುರೂಪತೆಗಳನ್ನು ಅಂತಸ್ಥವಾಗಿರಿಸಿ ಕೊಂಡಿರುವ ರಾಮಾಯಣ ಮಹಾಕಾವ್ಯವು ಪರಿವರ್ತನಾಶೀಲ  ಸಾಮಾಜಿಕ ಸನ್ನಿವೇಶ ಮತ್ತು ಜೀವನ ದೃಷ್ಟಿ, ಅಭಿರುಚಿ, ಸಂಪ್ರದಾಯ, ತಾತ್ವಿಕತೆಗಳಿ ಗನುಗುಣವಾಗಿ ವಿವಿಧ ಕಾಲಗಳಲ್ಲಿ ಹಲವು ಧಾರೆಗಳಲ್ಲಿ ಹರಿದು ಬಂದಿದೆ.  
ಶಾಸ್ತ್ರೀಯ-ಜಾನಪದ, ದೇವಾಲಯ-ಅರಮನೆ, ಆಧುನಿಕ ರಂಗಮಂದಿರ ಮತ್ತು ಹಳ್ಳಿ-ನಗರಗಳ ಓಣಿ-ಬೀದಿಗಳು ಹೀಗೆ ವೈರುಧ್ಯವನ್ನು ಮೀರಿ ವಿಸ್ತಾರವಾಗಿ ಹರಡಿಕೊಳ್ಳುತ್ತ, ರಾಮಾಯಣ ಮಹಾಕಥನವು ಜನಜೀವನದ ನುಡಿಗಟ್ಟುಗಳಲ್ಲಿ ಹಾಸು ಹೊಕ್ಕಾಗಿರುವ ಬಗೆಯನ್ನು ದಿ ಮಲ್ಟಿವೆಲೆನ್ಸ್‌ ಆಫ್‌ ಆ್ಯನ್‌ ಎಪಿಕ್ ಕೃತಿಯ ಬರಹಗಳು ವಿಶದವಾಗಿ ವಿಶ್ಲೇಷಿಸುತ್ತವೆ. 
1980ರಲ್ಲಿ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಕಟವಾದ ದಿನಗಳನ್ನು ನೆನಪಿಸಿಕೊಂಡ ನಿರುಪಮಾ ರಾವ್‌ ಅವರು, ರಾಮಾಯಣವು ಸಾಮುದಾಯಿಕ ವೈಶಿಷ್ಟ್ಯ ಮತ್ತು ಜೀವನ ವೈವಿಧ್ಯಗಳ ಭಿನ್ನತೆಯ ನಡುವೆಯೇ ಭಾರತದ ಜನರನ್ನು ಪರಸ್ಪರ ಹತ್ತಿರ ತಂದಿದೆ, ಅನೇಕತೆಯನ್ನು ಏಕ ಸೂತ್ರದಲ್ಲಿ ಬಂಧಿಸಲು ಪ್ರಯತ್ನಿಸಿದೆ, ಅಲ್ಲದೆ, ಮಹಾಕಾವ್ಯದ ಮರುಕಥನಗಳು ಭಾರತೀಯ ಡಯಸ್ಪೋರಾಗಳ ಸಮುದಾಯಗಳ ಜೀವನದ ಭಾಗವಾಗಿ ಸಾಗರೋತ್ತರದ ದೇಶಗಳಲ್ಲಿ ಜನಪ್ರಿಯವಾಗಿರುವ ಅಂಶಗಳ ಬಗ್ಗೆ ಈ ಕೃತಿಯು ಬೆಳಕು ಚೆಲ್ಲುತ್ತದೆ ಎಂದರು.

ರಾಮಾಯಣವನ್ನು ಭಾರತೀಯ ಅತ್ಮದ ಕನ್ನಡಿ ಎಂದು ಬಣ್ಣಿಸಿದ ನಿರುಪಮಾ ರಾವ್‌ ರಾಮಾಯಣ ಮಹಾ ಕಾವ್ಯದ ಮರುಕಥನಗಳು ಮತ್ತೆ ಮತ್ತೆ ರೂಪುಗೊಳ್ಳುತ್ತಿರುತ್ತವೆ ಮತ್ತು ನಾಗರೀಕತೆ ಇರುವವರೆಗೆ ರಾಮಾಯಣ ಜೀವಂತವಾಗಿ ಇರುತ್ತದೆ. ಇದಕ್ಕೆ ಪ್ಸಸ್ತುತ ಕೃತಿಯ ಲೇಖನಗಳು ದೃಷ್ಟಾಂತವಾಗಿವೆ ಎಂದರು.

ಬೃಹತ್ಸಂಪುಟದ ಸಂಪಾದಕರಾದ ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪಾರುಲ್‌ ಪಾಂಡ್ಯ ಧರ್‌ ಅವರು ಧೀರ್ಘ ಅವಧಿಯ  ಕೃತಿ ಸಂಪಾದನ ಪ್ರಕ್ರಿಯೆಯ ಅನುಭವವನ್ನು ಹಂಚಿಕೊಳ್ಳುತ್ತ, ಪ್ರಸ್ತುತ ಕೃತಿಯಲ್ಲಿ ರಾಮಾಯಣವನ್ನು ಬಹುಮುಖಿ ನೆಲೆಯಲ್ಲಿ ಪರಿಶೀಲಿಸಲಾಗಿದೆ.

ಇತಿಹಾಸ, ಸಾಹಿತ್ಯ, ಕಲೆ, ಪ್ರದರ್ಶನ ಕಲೆ, ಶಿಲ್ಪ ಕಲೆಗಳೂ ಸೇರಿದಂತೆ ಹಲವು ಪ್ರಕಾರಗಳಲ್ಲಿ ಆದಿಮ ಕಾಲದಿಂದ ತೊಡಗಿ ಆಧುನಿಕತೆಯವರೆಗೆ ರಾಮಾಯಣ ಸಾಗಿಬಂದ ಹೆಜ್ಜೆ ಗುರುತುಗಳನ್ನು ದಾಖಲಿಸಲಾಗಿದೆ ಎಂದರು.

ಈ ಸಂಪುಟವನ್ನು ದೃಶ್ಯ, ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳೆಂದು ಮೂರು ವಿಭಾಗಗಳನ್ನಾಗಿ ಮಾಡಿದ್ದು, ಭಾರತ ಮಾತ್ರವಲ್ಲದೆ, ಕಾಂಬೋಡಿಯಾ, ಇಂಡೋನೇಶಿಯಾ, ಥೈಲ್ಯಾಂಡ್‌, ಇಂಗ್ಲೆಂಡ್‌, ಅಮೆರಿಕ, ಸಿಂಗಾಪುರ, ಫ್ರಾನ್ಸ್‌, ಕೆನಡ ದೇಶಗಳ ಸುಮಾರು ಹತ್ತೊಂಬತ್ತು ಮಂದಿ ವಿದ್ವಾಂಸರು ಲೇಖನಗಳನ್ನು ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೆಎನ್‌ಯುನ ಪ್ರಾಧ್ಯಾಪಕ ಎಚ್‌. ಎಸ್‌. ಶಿವಪ್ರಕಾಶ್‌ ಮಾತನಾಡಿ ಬೃಹತ್‌ ಗ್ರಂಥವು ಮಹಾಕಥನವೊಂದರ ಮೂಲಕ ದಕ್ಷಿಣ ಏಷ್ಯಾ ಮತ್ತು ಅಗ್ನೇಯ ಏಷ್ಯಾ ಸಂಬಂಧವನ್ನು ಬೆಸೆಯುವ ಪ್ರಯತ್ನ ಮಾಡುತ್ತದೆ ಎಂದ ಅವರು ‘ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ’ ಎಂಬ ಪುರಂದರದಾಸರ ಕೀರ್ತನವನ್ನು  ಉಲ್ಲೇಖಿಸಿ ರಾಮನ ಸರ್ವವ್ಯಾಪಕತೆಯನ್ನು ಈ ಕೃತಿಯು ಪ್ರತಿಬಿಂಬಿಸುತ್ತದೆ.

ರಾಮಾಯಣ ಕಾವ್ಯವು ಗತ ಕಾಲದ ಕಥನವಲ್ಲ, ಅದು ಭವಿಷ್ಯದಲ್ಲಿ ನಿರ್ಮಾಣಗೊಂಡ ಮಹಾಕಥನ ಎಂದು ಮಾರ್ಮಿಕವಾಗಿ ನುಡಿದ ಅವರು ಯಾವುದೇ ಕೃತಿಯ ಮೂಲ ಎಂಬುದು ಭೂತಕಾಲದಲ್ಲಿ ಇರುವುದಿಲ್ಲ, ಭವಿಷ್ಯದಲ್ಲಿ ಅದರ ಅನ್ವೇಷಣೆ ನಡೆಯುತ್ತಿರುತ್ತದೆ ಎಂಬುದಕ್ಕೆ ದಿ ಮಲ್ಟಿವೆಲೆನ್ಸ್‌ ಆಫ್‌ ಆ್ಯನ್‌ ಎಪಿಕ್ ಕೃತಿಯು ಸಾಕ್ಷಿಯಾಗಿದೆ ಎಂದರು.  

ಮತ್ತೋರ್ವ ಮುಖ್ಯ ಅತಿಥಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕಿ ಸುಚಂದ್ರಾ ಘೋಷ್‌ ಅವರು ಮಾತನಾಡಿ ದಕ್ಷಿಣ ಭಾರತ ಮತ್ತು ಆಗ್ನೇಯ ಏಷ್ಯಾದ ಭಾಗಗಳನ್ನು ಪೌರಾಣಿಕ ಕಾಲದಲ್ಲಿ ಸುವರ್ಣ ಭೂಮಿ’, ಸುವರ್ಣ ದ್ವೀಪ‘ಗಳೆಂದು ಬಣ್ಣಿಸಲಾಗುತ್ತಿದ್ದು ಆ ಭಾಗಗಳ ಐತಿಹಾಸಿಕ ಸಂಬಂಧವನ್ನು ರಾಮಾಯಣ ಮಹಾಕಾವ್ಯವು ಎತ್ತಿ ಹಿಡಿಯುತ್ತದೆ.

ರಾಮಾಯಣ ಕಾವ್ಯದ ಅಮರ‍್ತ ಸಂಗತಿಗಳು ಮುಂದಿನ ದಿನಗಳಲ್ಲಿ ಶಿಲ್ಪ, ದೃಶ್ಯ, ಸಾಹಿತ್ಯ, ಪ್ರದರ್ಶನ  ಕಲೆಗಳ ಮೂಲಕ ಅಮೂರ್ತ ರೂಪವನ್ನು ಪಡೆಯುತ್ತಿರುವ ಪ್ರಕ್ರಿಯೆಯನ್ನು ದಿ ಮಲ್ಟಿವೆಲೆನ್ಸ್‌ ಆಫ್‌ ಆ್ಯನ್‌ ಎಪಿಕ್  ಕೃತಿಯು ದಾಖಲಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಎಸ್‌ಎ ಹಿಸ್ಟರಿ ಎಂಡೋಮೆಂಟ್‌ನ ಸಂಚಾಲಕ ಡಿ. ಎ. ಪ್ರಸನ್ನ ಅವರು, ಡಿಎಸ್‌ಎ ಇತಿಹಾಸ ಸರಣಿಯ ಪ್ರಕಟಣೆಗಳಲ್ಲಿ ರಾಮಾಯಣದ ಕೃತಿಯು ಏಳನೆಯ ಕೃತಿಯಾಗಿದೆ.  ಡಿ. ಎಸ್. ಅಚ್ಚುತ ರಾವ್‌ ದೇಶ ಕಂಡ ಶ್ರೇಷ್ಠ ಇತಿಹಾಸ ತಜ್ಞರಲ್ಲಿ ಒಬ್ಬರಾಗಿದ್ದು ಅವರ ನೆನಪಿನಲ್ಲಿ ಈ ಕೃತಿ ಸರಣಿಯನ್ನು ಪ್ರಕಟಿಸಲಾಗುತ್ತಿದೆ. 

ಇತಿಹಾಸವನ್ನು ಕುರಿತ ಅಧ್ಯಯನ, ಸಂಶೋಧನಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಸ್ತುತ ಸಂಸ್ಥೆಯು ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಮಣಿಪಾಲ ಯೂನಿರ‍್ಸಲ್‌ ಪ್ರೆಸ್‌ನ ಜೊತೆಗೆ ಸೌಹಾರ್ದ  ಸಂಬಂಧವನ್ನು ಹೊಂದಿದ್ದು, ಸಂಯುಕ್ತವಾಗಿ ಅನೇಕ ಅರ್ಥಪೂರ್ಣ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ಅತಿಥಿಗಳನ್ನು ಸ್ವಾಗತಿಸಿದ ಮಣಿಪಾಲ್‌ ಯೂನಿರ‍್ಸಲ್‌ ಪ್ರೆಸ್‌ನ ಪ್ರಧಾನ ಸಂಪಾದಕಿ ನೀತಾ ಇನಾಂದಾರ್‌ ಅವರು, ಮಣಿಪಾಲ್‌ ಯೂನಿರ‍್ಸಲ್‌ ಪ್ರೆಸ್‌ ಈಗಾಗಲೇ ಇನ್ನೂರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದೆ. ಸ್ಥಳೀಯ, ರಾಷ್ಟ್ರ ಮತ್ತು ವಿಶ್ವಮಟ್ಟದ ಲೇಖಕರಿಗೆ ಅವಕಾಶವನ್ನು ಒದಗಿಸಿದೆ.

ಹೊಸ ಬರಹಗಾರರಿಗೆ ವೇದಿಕೆಯನ್ನು ಒದಗಿಸಿದೆ. ಈ ವರ್ಷ ದಶಮಾನೋತ್ಸವದ ಸಂಭ್ರಮದಲ್ಲಿರುವಾಗಲೇ ರಾಮಾಯಣ ಕುರಿತ ಸಂಪುಟವನ್ನು ಪ್ರಕಟಿಸುತ್ತಿದೆ. ಇದು ಮಣಿಪಾಲ ವಿಶ್ವವಿದ್ಯಾನಿಲಯದ 203ನೆಯ ಕೃತಿ ಎಂದು ಅಭಿಮಾನದಿಂದ ಹೇಳಿ ಕೊಳ್ಳುತ್ತೇನೆ’ ಎಂದರು.

ಸಭಾ ಕಾರ್ಯಕ್ರಮವು ದಿ ಮಲ್ಟಿವೆಲೆನ್ಸ್‌ ಆಫ್‌ ಆ್ಯನ್‌ ಎಪಿಕ್ ಕೃತಿಯ ಕುರಿತ ಸಂವಾದ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಎಚ್‌. ಎಸ್‌. ಶಿವಪ್ರಕಾಶ್‌, ಸುಚಂದ್ರಾ ಘೋಷ್‌ ಮತ್ತು ಕೃತಿಯ ಸಂಪಾದಕಿ ಪಾರುಲ್‌ ಪಾಂಡ್ಯ ಧರ್‌ ಅವರೊಂದಿಗಿನ ಸಂವಾದವನ್ನು ಮಣಿಪಾಲ್‌ ಸೆಂಟರ್‌ ಫಾರ್‌ ಯುರೋಪಿಯನ್‌ ಸ್ಟಡೀಸ್‌ನ ಮುಖ್ಯಸ್ಥೆ ನೀತಾ ಇನಾಂದಾರ್‌ ನಡೆಸಿಕೊಟ್ಟರು. 

ಕಾರ್ಯಕ್ರಮದ ಕೊನೆಗೆ ಕೊರಿಯೋಗ್ರಾಫರ್‌, ನೃತ್ಯ ವಿದುಷಿ ಮಧು ನಟರಾಜ್‌ ಅವರಿಂದ ಪ್ರದರ್ಶನ  ಕಲೆಗಳಲ್ಲಿ ರಾಮಾಯಣದ ಪ್ರಸ್ತುತಿಯ ಕುರಿತ ಚಿತ್ರ ಪ್ರದರ್ಶನ ನಡೆಯಿತು.
 
 
 
 
 
 
 
 
 
 
 

Leave a Reply