ಬ್ಯಾನರ್ ಹಾಕಿದ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ; ಗಂಭೀರ ಗಾಯಗೊಂಡ ಯುವಕನ ಕಿವಿ ತಮಟೆಗೆ ತೀವ್ರ ಹಾನಿ!

ಪುತ್ತೂರು : ಆರೋಪಿಗಳ ವಿಚಾರಣೆಯ ನೆಪದಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಸಂದರ್ಭ ಸಂತ್ರಸ್ತ ಯುವಕನ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವೈದಕೀಯ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯುವಕನ ಕಿವಿಯದ್ದು ಎಂದು ಹೇಳಲಾದ ಸ್ಕ್ಯಾನಿಂಗ್ ಪೋಟೋಗಳು ವೈರಲ್ ಆಗುತ್ತಿವೆ. ವರದಿಗಳು ವೈರಲ್‌ ಆಗುತ್ತಿದ್ದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ದ.ಕ ಜಿಲ್ಲಾ ಎಸ್ಪಿಯವರನ್ನು ಭೇಟಿಯಾಗಿದ್ದಾರೆ.

ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪ್ರಕರಣ ಪುತ್ತೂರು ಬಸ್ಸು ನಿಲ್ದಾಣದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಜನರನ್ನು ಬಂಧಿಸಿ ಪೊಲೀಸರು ದೌರ್ಜನ್ಯ ನಡೆಸಿದರು ಎಂದು ವ್ಯಾಪಕ ಪ್ರಚಾರ ಪಡೆದುಕೊಂಡ ಪ್ರಕರಣ, ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.

ಡಿವೈಎಸ್ಪಿ ಗೆ ಒತ್ತಡ ಹಾಕಿಸಿ ಬಿಜೆಪಿಯ ಕಾರ್ಯಕರ್ತರ ಮೇಲೆಯೇ ಡಿವೈಎಸ್ಪಿ ಕಚೇರಿಯಲ್ಲೇ ತೀವ್ರ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತು. ಮೇ.15 ರ ಮಧ್ಯರಾತ್ರಿ ಅರುಣ್ ಪುತ್ತಿಲ ಡಿವೈಎಸ್ಪಿ ಕಚೇರಿಗೆ ತೆರಳಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಯುವಕರನ್ನು ಬಿಡುಗಡೆಗೊಳಿಸಿಕೊಂಡು ಬಂದಿದ್ದರು. ಯುವಕರ ಬಳಿ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಮಧ್ಯರಾತ್ರಿ ಬಿಟ್ಟು ಕಳುಹಿಸಿದ್ದರು. ಎರಡು ದಿನಗಳ ಬಳಿಕ ಯುವಕರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮತ್ತೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಪೊಲೀಸ್‌ ಇಲಾಖೆಯು , ಪುತ್ತೂರಿನ ಡಿವೈಎಸ್ಪಿ, ಸಂಪ್ಯ ಎಸ್ಐ , ಪುತ್ತೂರಿನ ಪೊಲೀಸ್ ಕಾನ್ಸ್ಟೆಬಲ್ ರ ಮೇಲೆ ಪ್ರಕರಣ ದಾಖಲು ನಡೆಸಿ, ಎಸ್ಐ ಮತ್ತು ಪಿಸಿಯನ್ನು ಅಮಾನತು ಮಾಡಿ, ಡಿವೈಎಸ್ಪಿಯನ್ನು ರಜೆಯಲ್ಲಿ ಕಳುಹಿಸಿದ್ದರು.

ತೀವ್ರ ಗಾಯಗೊಂಡ ಅವಿನಾಶ್ ರ ಕಿವಿ ನೋವು ಕಡಿಮೆಯಾಗದ ಕಾರಣ ಕಿವಿಯ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ಈ ವೇಳೆ ಕಿವಿ ತಮಟೆ ಹರಿದ ಬಗ್ಗೆ ವೈದ್ಯಕೀಯ ವರದಿ ಬಂದಿತ್ತು ಎನ್ನಲಾಗಿದೆ. ಕೂಡಲೇ ದಕ್ಷಿಣ ಕನ್ನಡ ಎಸ್ಪಿ ವಿಕ್ರಂ ಅಮಾಟೆಯನ್ನು ಭೇಟಿಯಾದ ಅರುಣ್ ಕುಮಾರ್ ಪುತ್ತಿಲ ಎರಡು ದಿನದಲ್ಲಿ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಮತ್ತು ಸಂತ್ರಸ್ತರಿಗೆ 5 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಕಾರತ್ಮಕ ಸ್ಪಂದನೆ ಸಿಗದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

 
 
 
 
 
 
 
 
 
 
 

Leave a Reply