ಸಂವಿಧಾನ ಲೋಕಾರ್ಪಣೆಯಾಗಬೇಕು– ಪ್ರೊ. ಕೆ. ಸುರೇಂದ್ರನಾಥ ಶೆಟ್ಟಿ

“ಭಾರತದ ಸಂವಿಧಾನದ ಪ್ರಧಾನವಾದ ಆಶಯ ನಿರ್ದಿಷ್ಟ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿರದೆ ಲೋಕಾರ್ಪಣೆಯಾಗಬೇಕು. ಭಾರತೀಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ವಿವಿಧತೆಯ ನೆಲೆಯಲ್ಲಿ ರೂಪುಗೊಂಡ ಸಂವಿಧಾನವಾಗಿದೆ. ಇದನ್ನು ಸ್ವಂತಕ್ಕೆ ಸೀಮಿತಗೊಳಿಸಿ ರಚಿಸಲ್ಪಟ್ಟಿಲ್ಲ” ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಸುರೇಂದ್ರನಾಥ ಶೆಟ್ಟಿ ಯವರು ಹೇಳಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಯ ಮಾತುಗಳನ್ನಾಡುತ್ತಾ,“ರಾಜಕೀಯ ವಿನ್ಯಾಸ ಸಂವಿಧಾನದ ಪ್ರಮುಖ ಧೋರಣೆಯಾಗಿದ್ದು ಒಕ್ಕೂಟ ವ್ಯವಸ್ಥೆಯನ್ನು ಸ್ಫುಟವಾಗಿ ನಿರೂಪಿಸುತ್ತದೆ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಪರಮ ಅಧಿಕಾರ ಇದೆ. 
ಅಧ್ಯಕ್ಷೀಯ ವ್ಯವಸ್ಥೆಯ ಪರೋಕ್ಷ ಪ್ರಭುತ್ವಕ್ಕಿಂತ ಸಂಸದೀಯ ವ್ಯವಸ್ಥೆ ನೆಲೆಯಲ್ಲಿ ರೂಪಿತವಾದ ಆಡಳಿತ ಭಾರತದ ಸಂವಿಧಾನಿಕ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆ. ನಾಗರಿಕ ಹಕ್ಕುಗಳ ಬಗ್ಗೆ ತಿಳಿಸಿದ ಭಾರತದ ಸಂವಿಧಾನ, 26 ವರ್ಷಗಳ ನಂತರ ಕರ್ತವ್ಯಗಳ ವಿಧಿಯನ್ನು ಸೇರಿಸಲಾಯಿತು. 1929 ರಲ್ಲಿ ‘ಜಾತ್ಯತೀತ’ ಎಂಬ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಬಳಸಿ ಭಾರತದ ಸಂವಿಧಾನದಲ್ಲಿ ತಿದ್ದುಪಡಿ ಮಾಡಲಾಯಿತು. ಸರ್ಕಾರ ಮತ್ತು ಜನರ ನಡುವಿನ ಸಂಬ೦ಧಗಳು ಹೇಗಿರಬೇಕು, ಜನರ ಆಶೋತ್ತರಗಳಿಗೆ ಸ್ಪಂದಿಸುವ ಅಂಶಗಳು ಸಂವಿಧಾನದಲ್ಲಿ ಇದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಜೆ. ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆಯನ್ನು ಸ್ವೀಕರಿಸಿ ‘ಪ್ರತಿಯೊಬ್ಬ  ನಾಗರಿಕನು  ದೇಶದ ಸಂವಿಧಾನದ ಬಗ್ಗೆ ತಿಳಿದಿರಬೇಕು. ಭಾರತದ ಸಂವಿಧಾನ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಹೇಳಿದರು.
ಎನ್. ಎಸ್. ಎಸ್.ಯೋಜನಾಧಿಕಾರಿ ರಮಾನಂದ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸ್ವಯಂಸೇವಕಿ ಕುಮಾರಿ ಪ್ರೀತಿ ಸೋಮಯಾಜಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.
 
 
 
 
 
 
 
 
 
 
 

Leave a Reply