ಉಡುಪಿ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಉದ್ಘಾಟನೆ

ಉಡುಪಿ, ನ.18: ಕರ್ನಾಟಕ ರಾಜ್ಯವು ಅಂಚೆಚೀಟಿ ಸಂಗ್ರಹಕ್ಕೆ ಅಪಾರ ಕೊಡುಗೆಗಳನ್ನು ನೀಡಿದೆ ಎಂದು ದಕ್ಷಿಣ ಕರ್ನಾಟಕ ಪ್ರದೇಶದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಸ್ ಹೇಳಿದ್ದಾರೆ. ಅಂಚೆ ಉಡುಪಿ ವಿಭಾಗದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ ಅಂಚೆಚೀಟಿ ಪ್ರದರ್ಶನ ‘ಕೃಷ್ಣಾಪೆಕ್ಸ್-2023’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಂದು ಅಂಚೆಚೀಟಿಯು ಇತಿಹಾಸವನ್ನು ತಿಳಿಸುತ್ತದೆ. ಅಂಚೆಚೀಟಿ ಗಳು ಆಯಾ ಪ್ರದೇಶದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಅಂಚೆಚೀಟಿ ಸಂಗ್ರಹಿಸುವ ಹವ್ಯಾಸವನ್ನು ಪ್ರೋತ್ಸಾಹಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ. ಇದೊಂದು ಅನನ್ಯ ಹವ್ಯಾಸವಾಗಿದೆ ಎಂದರು.

ಅಂಚೆಚೀಟಿಗಳು ಅದ್ಭುತ ಮತ್ತು ನಂಬಲಾಗದ ಜಗತ್ತನ್ನೇ ತೆರೆದಿಡುತ್ತದೆ. ವಿವಿಧ ವಿಚಾರಗಳ ವ್ಯಾಪಕ ಶ್ರೇಣಿ ಮತ್ತು ಯಾರಿಗೂ ತಿಳಿದಿಲ್ಲದ ಬಹಳಷ್ಟು ಸಂದೇಶಗಳನ್ನು ನೀಡುತ್ತವೆ. ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಕೃಷಿಯೊಂದಿಗೆ ಅಪಾರ ಜ್ಞಾನವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆಯ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್, ಬೆಂಗಳೂರು ದಕ್ಷಿಣ ಕರ್ನಾಟಕ ಪ್ರದೇಶದ ಅಂಚೆ ನಿರ್ದೇಶಕ ಟಿ.ಎಸ್.ಅಶ್ವಥನಾರಾಯಣ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಣಿಪಾಲ ಕೆಎಂಸಿಯ ಹಿರಿಯ ವೈದ್ಯ ಡಾ.ಕಿರಣ್ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ, ಮತ್ಸ್ಯೋದ್ಯಮಿ ದಿ.ಮಲ್ಪೆ ಮಧ್ವರಾಜ್, ಕರ್ನಾಟಕ ಕ್ಯಾಶ್ಯೂ ಮ್ಯಾನ್ಯೂಫಾಕ್ಚರ್ಸ್ ಅಸೋಸಿಯೇಷನ್ ನ ವಿಶೇಷ ಅಂಚೆ ಲಕೋಟೆ ಎಂಬ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸ ಲಾಯಿತು. ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಸ್ವಾಗತಿಸಿದರು. ದಯಾನಂದ ವಂದಿಸಿದರು. ಪೂರ್ಣಿಮಾ ಜರ್ನಾದನ ಕಾರ್ಯಕ್ರಮ ನಿರೂಪಿಸಿದರು.

Leave a Reply