ನಾಳೆ(ಏ.20)ಯಶ್ ಪಾಲ್ ಸುವರ್ಣ ಉಮೇದುವಾರಿಕೆ ಸಲ್ಲಿಕೆ

ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಹಾಗೂ ಶಾಸಕ ರಘುಪತಿ ಭಟ್ ಅವಧಿಯಲ್ಲಿ ಕ್ಷೇತ್ರದಲ್ಲಾದ ಪ್ರಗತಿ ಈ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ತೆರಳಿ ಮತ ಯಾಚಿಸುವುದಾಗಿ ಉಡುಪಿ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಲಭಿಸುತ್ತಿದ್ದು ಜನತೆ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಸೂಚನೆ ಇದೆ ಎಂದರು. ಈ ಹಿಂದೆ ಕಾಪು ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿತವಾಗಿದ್ದು, ಇದೀಗ ಉಡುಪಿ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ ಕೈಗೊಂಡ ಸಿದ್ಧತೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಶಪಾಲ್, ನಾನು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತನಾಗಿಲ್ಲ. ಪಕ್ಷ ಕಾರ್ಯ ಕರ್ತರೇ ನನ್ನ ಹಿಂದಿನ ಶಕ್ತಿ ಎಂದರು.

ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸುವುದಾಗಿ ಯಶಪಾಲ್ ತಿಳಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಸಭೆ ಸೇರಿ, ಅಲ್ಲಿಂದ ಪಾದಯಾತ್ರೆ ಮೂಲಕ ಕಲ್ಸಂಕ, ಬನ್ನಂಜೆ ಮಾರ್ಗವಾಗಿ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸ ಲಾಗುವುದು. ಸುಮಾರು 15 ಸಾವಿರ ಕಾರ್ಯಕರ್ತರು ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು ಭಾಗವಹಿಸುವರು ಎಂದು ಯಶಪಾಲ್ ತಿಳಿಸಿದರು.

ಪ್ರಣಾಳಿಕೆ : ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮಾತನಾಡಿ, ಈಗಾಗಲೇ ಪ್ರಣಾಳಿಕೆ ರಚನೆ ಹಿನ್ನೆಲೆಯಲ್ಲಿ ಪಕ್ಷ ಕಾರ್ಯಕರ್ತರು ಮತ್ತು ಸಾರ್ವಜನಿಕರ ಅಭಿಪ್ರಾಯ ಕೇಳಲಾಗಿದೆ. ಅದನ್ನು ಕ್ರೋಢೀಕರಿಸಿ, ಸಾಧನೆ ಮತ್ತು ಸಾಧಿಸ ಬೇಕಾದ ವಿಚಾರಗಳನ್ನಿಟ್ಟುಕೊಂಡು ಅಭಿವೃದ್ಧಿ ಆಧರಿತ ಪ್ರಣಾಳಿಕೆಯನ್ನು ಕ್ಷೇತ್ರವಾರು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು.

ಪಕ್ಷದ ಕೆಲವು ನಾಯಕರು ಪಕ್ಷಾಂತರ ಮಾಡಿರುವುದರಿಂದ ಪಕ್ಷಕ್ಕೆ ಹಾನಿಯಾಗದು. ನಮ್ಮದು ವ್ಯಕ್ತಿ ಆಧರಿತ ಪಕ್ಷವಲ್ಲ, ಸಿದ್ಧಾಂತ ಆಧರಿತ ಪಕ್ಷ ಎಂದರು. ದೀರ್ಘ ಕಾಲ ಪಕ್ಷದಿಂದ ಸವಲತ್ತು ಪಡೆದ ಶೆಟ್ಟರ್, ಸವದಿ ಮೊದಲಾದವರು ಅಧಿಕಾರದ ಲಾಲಸೆ ಯಿಂದ ಕಾಂಗ್ರೆಸ್ ಗೆ ಹೋಗಿದ್ದಾರೆ ಎಂದರು. ಸಿದ್ಧರಾಮಯ್ಯ, ವಿನಯ ಕುಮಾರ್ ಸೊರಕೆ, ರಮಾನಾಥ ರೈ, ಗೋಪಾಲ ಪೂಜಾರಿ ಮೊದಲಾದವರು ಈ ಬಾರಿಯ ಚುನಾವಣೆ ನಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡು ಮತ ಯಾಚನೆಯಲ್ಲಿ ತೊಡಗಿದ್ದಾರೆ. ಒಂದರ್ಥದಲ್ಲಿ ಕಾಂಗ್ರೆಸ್ ಗೇ ಇದು ಕೊನೆಯ ಚುನಾವಣೆ ಎಂಬ ವಾತಾವರಣ ಇದೆ. ಜಿಲ್ಲೆಯ ಐದೂ ಕ್ಷೇತ್ರಗಳನ್ನು ಈ ಹಿಂದಿನ ದಾಖಲೆ ಮೀರಿ ಗೆಲ್ಲುವ ವಿಶ್ವಾಸ ಇದೆ ಎಂದು ಕುಯಿಲಾಡಿ ತಿಳಿಸಿದರು.

ಈ ಬಾರಿಯ ಚುನಾವಣೆ ಬಿಜೆಪಿ- ಕಾಂಗ್ರೆಸ್ ವಿರುದ್ಧದ ಚುನಾವಣೆಗಿಂತ ದೇಶಭಕ್ತರು ಮತ್ತು ಭಯೋತ್ಪಾದಕರ ನಡುವಿನ ಚುನಾವಣೆ ಎಂಬ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯನ್ನು ಸಮರ್ಥಿಸಿದರು. ಕಾಂಗ್ರೆಸ್ ಗೆ ಬಿಜೆಪಿ ವಿರುದ್ಧ ಹೇಳಿಕೊಳ್ಳಲು ಏನೂ ವಿಷಯ ಇಲ್ಲ. ಆ ಕಾರಣದಿಂದಾಗಿ ಶೇ. 40 ಕಮಿಷನ್ ಇತ್ಯಾದಿ ಅಪಪ್ರಚಾರ ಮಾಡಲಾಗುತ್ತಿದೆ. ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಕಮಿಷನ್ ಆರೋಪ ನಿರಾಕರಿಸಿದ್ದಾರೆ. ಅವರನ್ನು ನಂಬದ ಕಾಂಗ್ರೆಸ್ ಕೆಂಪಣ್ಣನನ್ನು ನಂಬುತ್ತದೆ ಎಂದು ಲೇವಡಿ ಮಾಡಿದರು.

ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ಹಣ ಸಾಗಿಸಲಾಗಿದೆ ಎಂದು ಸುಳ್ಳು ಹೇಳಿರುವ ಸೊರಕೆ, ಟಿಕೆಟ್ ಗಾಗಿ ಡಿಕೆಶಿ ಅವರಿಗೆ 2 ಕೋಟಿ ರೂ ನೀಡಿದ್ದಾರೆ ಎಂದು ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ. ಅವರಿಗೆ ಉತ್ತರ ಕೊಡಲಿ ಎಂದು ಸವಾಲೆಸೆದರು. ಶಾಸಕ ರಘುಪತಿ ಭಟ್, ಪಕ್ಷ ಪ್ರಮುಖರಾದ ರಾಘವೇಂದ್ರ ಕಿಣಿ, ಶಿವಕುಮಾರ್, ಶ್ಯಾಮಲಾ ಕುಂದರ್, ಕುತ್ಯಾರು ನವೀನ ಶೆಟ್ಟಿ, ದಿನಕರಬಾಬು, ಮಹೇಶ ಠಾಕೂರ್, ಪ್ರತಾಪ ಹೆಗ್ಡೆ ಮಾರಾಳಿ, ಕಿರಣ್ ಕುಮಾರ್, ವೀಣಾ ನಾಯ್ಕ, ವೀಣಾ ಶೆಟ್ಟಿ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply