ಹೆಣದ ಮೇಲೆ ಜಾತಿ ರಾಜಕಾರಣ ಮಾಡುತ್ತಿದ್ದ ಶೋಭಾ ಕರಂದ್ಲಾಜೆಯ ಈ ಮೌನ ಸರಿಯಲ್ಲ – ವೆರೋನಿಕಾ ಕರ್ನೆಲಿಯೋ

ಉಡುಪಿ : ಯಾವಾಗಲೂ ಹೆಣದ ಮೇಲೆ ಜಾತಿ ರಾಜಕಾರಣ ಮಾಡುತ್ತಿದ್ದ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿಯ ಇತರ ಮಹಿಳಾ ರಾಜಕಾರಣಿಗಳು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಮೌನ ವಹಿಸಿರುವುದರ ಹಿಂದಿನ ಗುಟ್ಟೇನು ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಕೊಲೆ ನಡೆದರೆ ಕೂಡಲೇ ಒಡೋಡಿ ಬರುವ ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ ಜಿಲ್ಲೆಯಲ್ಲಿ ಒರ್ವ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಒರ್ವ ಮಹಿಳೆಯಾಗಿ ಇನ್ನೋರ್ವ ಹೆಣ್ಣು ಮಗಳ ನೋವನ್ನು ಅರ್ಥೈಸಿಕೊಳ್ಳೂವಲ್ಲಿ ಸಚಿವೆ ವಿಫಲರಾಗಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಮಾತೆತ್ತಿದರೆ ಮಹಿಳೆಯರನ್ನು ಮಾತೆ ತಾಯಿ ಎಂದು ಕರೆದು ಗೌರವಿಸುತ್ತೇವೆ ಎನ್ನುತ್ತಾರೆ ಆದರೆ ಅವರದ್ದೇ ಅಧಿಕಾರ ಇರುವ ರಾಜ್ಯದಲ್ಲಿ ಇಡೀ ದೇಶವೇ ತಲೆತಗ್ಗಿಸುವಂತ ಘಟನೆ ನಡೆದಿದ್ದರೂ ಅಪರಾಧಿಗಳನ್ನು ಬಂಧಿಸುವಲ್ಲಿ ಸರಕಾರ ಮೀನ ಮೇಷ ಎಣಿಸುತ್ತಿದೆ.

ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅಪರಾಧಗಳ‌ ಸಂಖ್ಯೆ‌ ಹೆಚ್ಚಾಗುತ್ತಿದ್ದರೆ ರಾಜ್ಯದ ಗೃಹ ಸಚಿವರು ಬೇಜಾವಬ್ದಾರಿ ಹೇಳಿಕೆ ನೀಡಿ ಕೈತೊಳೆದು ಕೊಳ್ಳೂವ ಕೆಲಸ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಅಲ್ಲಿಗೆ ಹೋಗಬಾರದಿತ್ತು ಅಂತಾ ಹೇಳಿಕೆ ನೀಡಿರುವ ಗೃಹ ಸಚಿವರ ಪ್ರಬುದ್ಧತೆ ಏನು ಎನ್ನುವುದು ಇಲ್ಲಿ ತಿಳಿಯುತ್ತಿದೆ. 

ಒಮ್ಮೆ ಹೇಳಿಕೆ ನೀಡಿ ಬಳಿಕ ಅದನ್ನು ವಾಪಾಸು ತೆಗೆದುಕೊಳ್ಳುವ ಬಿಜೆಪಿಗರ ಸಂಸ್ಕೃತಿ ದಿನೇ ದಿನೇ ಹೆಚ್ಚಾಗುತ್ತದೆ. ಸಾಂಸ್ಕೃತಿಕ ನಗರಿ ಎನಿಸಿಕೊಂಡ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣವು ಬಿಜೆಪಿ ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿಯಾಗಿದೆ. ಬಿಜೆಪಿ ನಾಯಕರು ಅಸಂಬದ್ಧ ಮಾತುಗಳೇ ಬಿಜೆಪಿಯ ಮಹಿಳಾ ವಿರೋಧಿ ಧೋರಣೆ ಹಾಗೂ ಮಹಿಳಾ ರಕ್ಷಣೆಯ ಬಗೆಗೆ ಇರುವ ಉದಾಸೀನತೆ ತೋರುತ್ತದೆ. ಇನ್ನಾದರೂ ಕೂಡಲೇ ಸರಕಾರ ಆರೋಪಿಗಳನ್ನು ಬಂಧಿಸಿ ನೊಂದ ಯುವತಿಗೆ ನ್ಯಾಯ ಕೊಡುವಲ್ಲಿ ಮುಂದಾಗಲಿ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply