ಕಾಂಗ್ರೆಸ್ ಮುಖಂಡರು ಕಾಶ್ಮೀರಿ ಪಂಡಿತರ ಬಲಿದಾನವನ್ನು ಮರೆತಿದ್ದಾರೆ: ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕ್ಲಬ್ ಹೌಸ್ ಆಪ್ ಮೂಲಕ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದಾರೆ.

ಇದು ಕಾಂಗ್ರೆಸ್ ಪಕ್ಷದ ದೇಶವಿರೋಧಿ ಮನಸ್ಥಿತಿಯ ನಿದರ್ಶನವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರತಿಷ್ಠೆ ಮಣ್ಣು ಪಾಲು ಮಾಡುವುದು, ವಿಶ್ವವಂದ್ಯ ಪ್ರಧಾನಿಯವರ ಘನತೆಗೆ ಧಕ್ಕೆ ತರುವ ದುರುದ್ದೇಶ ಇದರ ಹಿಂದಿದೆ. ಟೂಲ್‍ಕಿಟ್ ವಿಷಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ಸಿಗರ ದುರುದ್ದೇಶವನ್ನು ಜನರ ಗಮನಕ್ಕೆ ತಂದಿದೆ. ಇದು ಟೂಲ್‍ಕಿಟ್‍ನ ಮುಂದುವರಿದ ಭಾಗವಷ್ಟೇ. ಇದು ಸರ್ವಥಾ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ವಿಶ್ವದಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ದುರುದ್ದೇಶದಿಂದ ಸಮಾಜದ ಕೆಲವು ವರ್ಗಗಳನ್ನು ಓಲೈಸಲು ಈ ರೀತಿಯ ಹೇಳಿಕೆಗಳನ್ನು ಕಾಂಗ್ರೆಸ್ ಮುಖಂಡರು ಹಿಂದೆಯೂ ನೀಡಿದ್ದಾರೆ. ಆದರೆ ಈ ಕುಕೃತ್ಯದಿಂದ ಕಾಂಗ್ರೆಸ್ ಗೆ ಏನೇನೂ ಪ್ರಯೋಜನವಾಗದು ಎಂದು ಕುಯಿಲಾಡಿ ಹೇಳಿದ್ದಾರೆ.

ಇದೇ ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಪುಲ್ವಾಮಾ ದಾಳಿ ಇದೇನೂ ಗಂಭೀರ ವಿಚಾರವಲ್ಲ ಎಂದು ಹೇಳಿ ಪಾಕಿಸ್ತಾನದ ಕ್ರಮವನ್ನೇ ಸಮರ್ಥಿಸಲು ಮುಂದಾಗಿದ್ದರು. ಇದು ಭಯೋತ್ಪಾದಕರ ದಾಳಿ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ, ದೇಶದ ಬಗ್ಗೆ ಗೌರವ ಇದ್ದಲ್ಲಿ ಇಂತಹ ಕಪಟ ನಾಯಕರನ್ನು ಪಕ್ಷದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ಕುಯಿಲಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply