ರೈತ ಹೋರಾಟಗಾರರು ದಲ್ಲಾಳಿಗಳು ಎಂದ ಶೋಭಾ ಕರಂದ್ಲಾಜೆ ಹೇಳಿಕೆ ಅಧಿಕಪ್ರಸಂಗತನ – ವೆರೋನಿಕಾ ಕರ್ನೆಲಿಯೊ

ಉಡುಪಿ : ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆಯಾಗಿ ರೈತರಿಗೆ ಅಭಿವೃದ್ಧಿಯ ನಿಟ್ಟಿನಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲಿ ಅದನ್ನು ಬಿಟ್ಟು ರೈತ ಹೋರಾಟಗಾರರು ದಲ್ಲಾಳಿಗಳು, ಮಧ್ಯವರ್ತಿಗಳು ಎಂದು ಅಧಿಕಪ್ರಸಂಗತನದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೊ ಆಗ್ರಹಿಸಿದ್ದಾರೆ.

`ಕೇಂದ್ರದ ಬಿಜೆಪಿ ಸರಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು `ದಲ್ಲಾಳಿಗಳು’, `ಮಧ್ಯವರ್ತಿಗಳು’ ಎಂದು ಅವಮಾನಿಸಿರುವ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ. ಅವರು ತಕ್ಷಣ ತಮ್ಮ ಹೇಳಿಕೆಯನ್ನು ವಾಪಸು ಪಡೆದು ರೈತರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ಬಡ ರೈತರನ್ನು ಗುರಿಯಾಗಿಸಿಕೊಂಡು ಕರಾಳವಾದ ಕೃಷಿ ಕಾಯಿದೆಗಳನ್ನು ತಂದಿದ್ದು ಅದರ ವಿರುದ್ದ ಕಳೆದ ಹಲವಾರು ತಿಂಗಳುಗಳಿಂದ ಹೋರಾಟ ಮಾಡುತ್ತಾ ಬಂದರೂ ಸಹ ಕಣ್ಣಿದ್ದು ಕುರುಡಾದ ಮೋದಿ ಸರಕಾರದ ವರ್ತನೆಯನ್ನು ಬದಲಿಸುವ ಬದಲು ರೈತರನ್ನು ಅವಹೇಳನ ಮಾಡುವ ಕೆಲಸಕ್ಕೆ ನೂತನ ಸಚಿವ ಕರಂದ್ಲಾಜೆ ಕೈ ಹಾಕಿದ್ದಾರೆ. 

ಕೇಂದ್ರ ಸರ್ಕಾರ ಜಾರಿಗೆ ತಂದ ಎಲ್ಲಾ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಒರ್ವ ಜವಾಬ್ದಾರಿಯುತ ಸಚಿವೆಯಾಗಿ ತನ್ನ ಸ್ಥಾನದ ಮಹತ್ವವನ್ನು ಅರಿಯದೆ ರೈತರ ಕುರಿತು ಇಷ್ಟೊಂದು ಕೀಳಾಗಿ ಮಾತನಾಡುವ ಮೂಲಕ ರೈತರ ಬಗೆಗಿನ ಕಾಳಜಿ ಏನು ಎನ್ನುವುದುನ್ನು ತೋರಿಸಿಕೊಟ್ಟಿದ್ದಾರೆ.  

ಕೇವಲ ಬಾಯಲ್ಲಿ ಮಾತ್ರ ರೈತರು ದೇಶದ ಬೆನ್ನೆಲೆಬು ಎಂದು ಬೊಗಳೆ ಬಿಡುವ ಕೇಂದ್ರ ಸರಕಾರ ರೈತರಿಗೆ ಅನ್ಯಾಯವಾಗುವ ಕರಾಳ ಕಾಯಿದೆಗಳನ್ನು ತಂದಿರುವುದು ಸರಿಯಲ್ಲ. ಇದಕ್ಕಾಗಿ ಪ್ರಾಮಾಣಿಕವಾಗಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು `ದಲ್ಲಾಳಿಗಳು’, `ಮಧ್ಯವರ್ತಿಗಳು’ ಎಂದು ಅವಮಾನಿಸಿರುವ ಸಚಿವರನ್ನು ಮೋದಿ ಕೂಡಲೇ ತಮ್ಮ ಸಂಪುಟದಿಂದ ಕೈಬಿಡಬೇಕು ಅಲ್ಲದೆ ಕರಾಳ ಕೃಷಿ ಕಾಯಿದೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ. 

 
 
 
 
 
 
 
 
 
 
 

Leave a Reply