ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಪುತ್ತೂರಿನಲ್ಲಿ ಎಸ್ಡಿಪಿಐ ಟಿಕೆಟ್!

ಉತ್ತರ ಪ್ರದೇಶ, ಬಿಹಾರದಲ್ಲಿ ಜೈಲಿನಲ್ಲಿದ್ದರೂ, ಚುನಾವಣೆಗೆ ಸ್ಪರ್ಧಿಸುವುದನ್ನು ಕೇಳಿದ್ದೇವೆ. ಅಂತಹ ಪರಿಪಾಠ ದಕ್ಷಿಣದ ಅದರಲ್ಲೂ ಕರ್ನಾಟಕದಲ್ಲಿ ನಾವು ಕಂಡು ಕೇಳಿದ್ದಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷ ಪುತ್ತೂರು ಕ್ಷೇತ್ರಕ್ಕೆ ಜೈಲಿನಿರುವ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ದೇಶದ್ರೋಹಿ ಚಟುವಟಿಕೆಯೆಂದು ಎನ್ಐಎ ಅಧಿಕಾರಿಗಳು ಬಂಧಿಸಿ ಜೈಲಿಗೆ ತಳ್ಳಿರುವ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಎಷ್ಟರ ಮಟ್ಟಿಗೆ ಸಂಚಲನ ಎಬ್ಬಿಸಿತ್ತೆಂದರೆ, ಹಲವಾರು ಕೊಲೆ ಕೃತ್ಯಗಳ ಕಾರಣಕ್ಕಾಗಿ ಪಿಎಫ್ಐ ಸಂಘಟನೆಯನ್ನೇ ನಿಷೇಧ ಮಾಡಲಾಗಿತ್ತು. ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಯಲ್ಲಿ ಪ್ರಮುಖರಾಗಿದ್ದವರನ್ನು ಎನ್ಐಎ ಅಧಿಕಾರಿಗಳು ಪ್ರಕರಣದಲ್ಲಿ ಬಂಧಿಸಿದ್ದರು. ಇದೀಗ ಎಸ್ಡಿಪಿಐ ಪುತ್ತೂರಿನಲ್ಲಿ ಪ್ರವೀಣ್ ಕೊಲೆ ಪ್ರಕರಣಕ್ಕೆ ಸ್ಕೆಚ್ ಹಾಕಿದ್ದ ಆರೋಪಿಯನ್ನೇ ಕಣಕ್ಕಿಳಿಸಿ ಸಂಚಲನ ಎಬ್ಬಿಸಿದೆ. ಎಸ್ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾಫಿ ಬೆಳ್ಳಾರೆಯೇ ನಮ್ಮ ಅಭ್ಯರ್ಥಿಯೆಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಘೋಷಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಅಬ್ದುಲ್ ಮಜೀದ್ ಈ ಘೋಷಣೆ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ.

ಇಷ್ಟಕ್ಕೂ ಶಾಫಿ ಬೆಳ್ಳಾರೆ ಈ ಹಿಂದೆ ಎಸ್ಡಿಪಿಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಆಗಿದ್ದ ವ್ಯಕ್ತಿ. ಕಳೆದ ಬಾರಿ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ನಡೆದಾಗ ಇದೇ ವ್ಯಕ್ತಿಯನ್ನು ಎಸ್ಡಿಪಿಐ ಕಣಕ್ಕೆ ಇಳಿಸಿತ್ತು. ಆದರೆ ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಈತನೇ ಕೊಲೆಕೆ ಸ್ಕೆಚ್ ಹಾಕಿದ್ದು ಕಂಡುಬಂದಿದ್ದರಿಂದ ಬಂಧನ ಮಾಡಲಾಗಿತ್ತು. ಸದ್ಯಕ್ಕೆ ಎನ್ಐಎ ಬಂಧನದಲ್ಲಿರುವ ಶಾಫಿ ಬೆಳ್ಳಾರೆಯನ್ನು ಜೈಲಿನಿಂದಲೇ ಚುನಾವಣಾ ಕಣಕ್ಕಿಳಿಸಲು ಪಕ್ಷದ ನಾಯಕರು ಮುಂದಾಗಿದ್ದಾರೆ. ಆಮೂಲಕ ಸರಕಾರ ಮತ್ತು ಕಾನೂನು ವ್ಯವಸ್ಥೆಗೇ ಸವಾಲೊಡ್ಡಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಹಿಂದುಗಳನ್ನು ಹೆದರಿಸುವ, ಸಮಾಜದಲ್ಲಿ ಭೀತಿ ಮೂಡಿಸುವ ಕೃತ್ಯ ಎಂದು ಎನ್ಐಎ ದೇಶದ್ರೋಹ ಕಾಯ್ದೆಯಡಿ ಕೇಸು ದಾಖಲಿಸಿತ್ತು. ಹಾಗಾಗಿ, ಆರೋಪಿಗಳೆಲ್ಲ ಕಾನೂನಿನ ಮುಂದೆ ದೇಶದ್ರೋಹಿಗಳೇ ಆಗಿರುತ್ತಾರೆ. ಹೀಗಿದ್ದರೂ, ಸಮಾಜ, ಪೊಲೀಸ್ ವ್ಯವಸ್ಥೆ, ಸರಕಾರದ ಯಾವುದೇ ಭೀತಿಯಿಲ್ಲದೆ ಎಸ್ಡಿಪಿಐ ಪಕ್ಷವು ಆರೋಪಿಯನ್ನೇ ಚುನಾವಣಾ ಕಣಕ್ಕಳಿಸಿರುವುದು ಹಿಂದು ಸಮಾಜದ ತೀವ್ರ ಆಕ್ರೋಶಕ್ಕೂ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್, ಈ ರೀತಿಯ ವರ್ತನೆಗೆ ಧಿಕ್ಕಾರ ಎಂದಿದ್ದಾರೆ. ರಾಜಕೀಯ ಶಕ್ತಿ ಮೂಲಕ ಹಿಂದುಗಳನ್ನು ನಾಶಪಡಿಸುವುದನ್ನೇ ಉದ್ದೇಶ ಇರಿಸಿಕೊಂಡಿರುವುದು ಸ್ಪಷ್ಟವಾಗಿದೆ. ಈ ಅಭ್ಯರ್ಥಿಯನ್ನು ಚುನಾವಣಾ ಆಯೋಗವೇ ಅನರ್ಹವಾಗಿಸಬೇಕು ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply